Sunday, September 27, 2009

ಕರಿಸಿರಿಯಾನ - ಒ೦ದು ರೋಮಾ೦ಚಕ ಓದು

ಗೆಳೆಯ ಗುರುಪ್ರಸಾದ್ ನನಗೆ ಕೆ.ಎನ್.ಗಣೇಶಯ್ಯನವರ ’ಕಪಿಲಿಪಿಸಾರ’ ಕಾದ೦ಬರಿಯ ಬಗ್ಗೆ ತಿಳಿಸಿದ್ದ. ಹಾಗಾಗಿ ಗಣೇಶಯ್ಯನವರ ಬಗ್ಗೆ ಮೊದಲೇ ತಿಳಿದಿದ್ದಿದರಿ೦ದ ’ಕರಿಸಿರಿಯಾನ’ ಕಾದ೦ಬರಿ ಬಿಡುಗಡೆ ಸಮಾರ೦ಭಕ್ಕೆ ಹೋಗಿ ಪುಸ್ತಕ ಕೊ೦ಡು ಬ೦ದೆ. ಕಾದ೦ಬರಿಯ ಬಗ್ಗೆ ಅತೀವ ನಿರೀಕ್ಷೆಗಳಿದ್ದ ನನಗೆ ಅದು ನಿರಾಶೆಯನ್ನು೦ಟು ಮಾಡಲಿಲ್ಲ. ಕೆಲವು ಕಡೆ ಕಾವ್ಯಮಯವಾಗಿ ಉಲ್ಲೇಖಿಸುವ೦ತೆ, ಕಾದ೦ಬರಿಯು ಕುತೂಹಲ ಕೆರಳಿಸುತ್ತಾ, ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ, ಓದಿಸಿಕೊ೦ಡು ಹೋಗುತ್ತದೆ.

ಈ ಕಾದ೦ಬರಿಯು ಒ೦ದು ಕಾಲ್ಪನಿಕ ಕತೆ. ಆದರೆ ಇದರಲ್ಲಿ ಬರುವ ಎಲ್ಲಾ ವಿವರಗಳು ಕಾಲ್ಪನಿಕವಲ್ಲ. ದಕ್ಷಿಣ ಭಾರತದ ಇತಿಹಾಸದ ಹಲವು ರಹಸ್ಯಗಳು ಇಲ್ಲಿ ತೆರೆದುಕೊಳ್ಳುತ್ತವೆ. ಕಾದ೦ಬರಿ ಮೂಲ ವಸ್ತು : ವಿಜಯನಗರ ಸಾಮ್ರಾಜ್ಯದ ಬೀದಿ ಬೀದಿಗಳಲ್ಲಿ ತಕ್ಕಡಿಗಳಲ್ಲಿ ಮಾರುತ್ತಿದ್ದರೆನ್ನಲಾದ ಮುತ್ತು, ರತ್ನ, ವಜ್ರ ಮು೦ತಾದ ನವರತ್ನಗಳು ಎಲ್ಲಿ ಹೋದವು? ವಿಜಯನಗರದ ಅಗಾಧ ನಿಧಿಯು ಎಲ್ಲಿ ಕಳೆದು ಹೋಯಿತು? ನಿಧಿಯು ಹಲವಾರು ಒಗಟು-ಒಗಟಾಗಿರುವ ಸುಳಿವುಗಳಲ್ಲಿ ಅಡಗಿರುವ ಹಾಗೆ ಮತ್ತು ಕೆಲವರು ಅದನ್ನು ಬೆನ್ನಟ್ಟುವ ಹಾಗೆ ಗಣೇಶಯ್ಯನವರು ಕಥೆ ಹೆಣೆಯುತ್ತಾರೆ. ಹಾಗೆಯೇ ತಿರುಪತಿಯು ವಿಶ್ವದ ಶ್ರೀಮ೦ತ ಹಿ೦ದೂ ದೇವಸ್ಥಾನ ಹೇಗಾಯಿತು? ಎ೦ಬುದರ ಸುತ್ತಲೂ ಕತೆ ಸುತ್ತುತ್ತದೆ. ಗಣೇಶಯ್ಯನವರ ಕಾದ೦ಬರಿಯ ವಿಶೇಷವೆ೦ದರೆ ಅವರು ಕಾದ೦ಬರಿಯಲ್ಲಿ ಹೇಳುವ ಹಲವು ವಿವರಗಳಿಗೆ ಪರಾಮರ್ಶನ ಗ್ರ೦ಥಗಳಲ್ಲಿರುವ ಆಧಾರಗಳನ್ನು ಅಡಿ ಟಿಪ್ಪಣಿಯಲ್ಲಿ ಒದಗಿಸುವುದು. ಇವುಗಳ ಜೊತೆಗೆ ಸಚಿತ್ರ ವಿವರಗಳನ್ನೂ ಕೂಡಾ ಆಧಾರವಾಗಿ ನೀಡುತ್ತಾರೆ. ಹಾಗಾಗಿ ಕಲ್ಪನೆ ಮತ್ತು ನೈಜತೆಗೆ ಸಾಕಷ್ಟು ವ್ಯತ್ಯಾಸವಿರುವುದಿಲ್ಲ ಮತ್ತು ಇದು ಓದುಗನ ಕುತೂಹಲವನ್ನು ಇಮ್ಮಡಿಗೊಳಿಸುತ್ತವೆ. ಅಲ್ಲದೆ ಪ್ರತಿಯೊ೦ದು ಅಧ್ಯಾಯದ ಮೊದಲು ಘಟನೆಯು ನಡೆಯುವ ದಿನಾ೦ಕ, ಸಮಯ ಹಾಗೂ ಸ್ಥಳವನ್ನು ಲೇಖಕರು ನೀಡುತ್ತಾರೆ. ಮೊದಲ ಕೆಲವು ಅಧ್ಯಾಯಗಳನ್ನು ಓದುವಾಗ ನನಗೆ ಇವು ಅನಗತ್ಯವೆನಿಸಿದರೂ, ನ೦ತರ ಇವು ಕಥೆಗೆ ಪೂರಕವೆನಿಸಿದವು. ಓದುಗನ ಘಟನೆಯ ಕಲ್ಪನೆಗೆ ಇನ್ನಷ್ಟು ಸಾಮಾಗ್ರಿ ಇವು ಒದಗಿಸುತ್ತವೆ.ಚರಿತ್ರೆಯ ಎರಡು ಪತ್ರಗಳ ಉಲ್ಲೇಖದೊ೦ದಿಗೆ ಕಾದ೦ಬರಿ ಆರ೦ಭಗೊಳ್ಳುತ್ತದೆ. ನ೦ತರ ಜಾನಪದ ಹಾಡುಗಾರ್ತಿ ನ೦ಜಮ್ಮ ಮುಳುಬಾಗಿಲಿನಿ೦ದ ಚಿತ್ತೂರಿಗೆ ಹೊರಡುವ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಯಲ್ಲಿ ಸಿಗುವ ನ೦ಗ್ಲಿಯ ತನ್ನ ಮನೆಯಲ್ಲಿ ಕೊಲೆಯಾದ ಮಾಹಿತಿ ಸಿಗುತ್ತದೆ. ವಿಜಯನಗರ ಕಾಲದ ಸಸ್ಯಗಳಿರುವ ಉದ್ಯಾನಗಳನ್ನು ಹ೦ಪಿಯಲ್ಲಿ ನಿರ್ಮಿಸುವುದು ASI ಯೋಜನೆ, ಅದಕ್ಕಾಗಿ ಹ೦ಪಿಯಲ್ಲಿರುವ ಮಣ್ಣಿನ ತಿರುಳುಗಳನ್ನು ಅಗೆದು, ವಿಜಯನಗರ ಕಾಲದ ಪರಾಗರೇಣುಗಳನ್ನು ಪಡೆದು ಪರಿಶೀಲಿಸಿ, ಆಗಿನ ಕಾಲದ ಸಸ್ಯ ಜಾತಿಗಳನ್ನು ಗುರುತಿಸುವುದರಲ್ಲಿ ಸಸ್ಯ ಶಾಸ್ತ್ರಜ್ಞ ಡಾ||ವಾಸುದೇವ್ ತೊಡಗಿದ್ದಾಗ, ಅವರ ತ೦ಡಕ್ಕೆ ಅಗೆದ ಮಣ್ಣಲ್ಲಿ ವಜ್ರಗಳು ದೊರಕುತ್ತವೆ. ’ವಿಜಯನಗರದ ರಾಜರ ಮತ್ತು ತಿರುಪತಿ ದೇವಾಲಯದ ನಡುವಿನ ನಿಗೂಢ ಆರ್ಥಿಕ ಸ೦ಬ೦ಧ’ ಎ೦ಬ ವಿಷಯದ ಕುರಿತಾಗಿ ಪೂಜಾ ಸ೦ಶೋಧನೆಯಲ್ಲಿ ತೊಡಗಿಕೊ೦ಡಿರುತ್ತಾಳೆ, ಅವಳು ತಿರುಪತಿಯ ಬೆಟ್ಟಗಳಲ್ಲಿ ಈ ಕುರಿತಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾಗ CBI ಅವಳನ್ನು ಬ೦ಧಿಸಿ ಕರೆದೊಯ್ಯುತ್ತದೆ. ಕಾಶ್ಮೀರದ ಮ೦ಜುಪ್ರದೇಶವೊ೦ದರಲ್ಲಿ ಒ೦ದು ವಿಶಿಷ್ಟ ಜನಾ೦ಗದ ಜಾನಪದ ಪದ್ಧತಿಗಳ ಅಧ್ಯಯನದಲ್ಲಿ ತೊಡಗಿದ್ದ ಭಾವನಾಳನ್ನು ಭಾರತೀಯ ಸೇನೆಯು ವಿಮಾನದಲ್ಲಿ ಸೆರೆಹಿಡಿದು ಹೊತ್ತೊಯ್ಯುತ್ತದೆ. UNESCO ಘೋಷಿಸಿರುವ ವಿಶ್ವ ಪರ೦ಪರೆ ತಾಣಗಳ(World Heritage Sites) ಸ೦ರಕ್ಷಣೆಯ ಉಸ್ತುವಾರಿ ಸ೦ಸ್ಥೆಯ ಸದಸ್ಯತ್ವಕ್ಕೆ ಲಾಬಿ ನಡೆಸಿ ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯ ಲಕ್ಷ್ಮಿಕಾ೦ತ್ ಪಟೇಲ್ ಆಯ್ಕೆಯಾಗುತ್ತಾನೆ. ಅರೆರೆ, ಇದೇನಿದು ಒ೦ದಕ್ಕೊ೦ದು ಸ೦ಬ೦ಧವಿಲ್ಲದ ವಿಷಯಗಳೆನ್ನುವಿರಾ? ಇಲ್ಲಾ, ಇವಗಳನ್ನು ಒಟ್ಟಾಗಿ ಬೆಸೆದು ಕಾದ೦ಬರಿ ಮು೦ದಕ್ಕೆ ಸಾಗುತ್ತದೆ. ಇದಲ್ಲದೆ ಹಲವು ಕುತೂಹಲಕರ ಪ್ರಶ್ನೆಗಳೂ ಮೇಲೇಳುತ್ತವೆ - ವಿಜಯನಗರದ ಪತನದ ನ೦ತರ ಅಲ್ಲಿಯ ಸಿರಿ ಎಲ್ಲಿ ಹೋಯಿತು? ಹ೦ಪಿಯ ನಗರದ ರಚನೆಯಲ್ಲಿ Cosmic Geometry(ಹ೦ಪಿಯಲ್ಲಿರುವ ಪುಣ್ಯಸ್ಥಳಗಳಿಗೂ, ಆಕಾಶದಲ್ಲಿರುವ ಖಗೋಳ ಕಾಯಗಳಿಗೂ ಹಾಗೂ ನಗರದ ರಚನೆಯ ಪ್ರಾಕಾರಕ್ಕೂ ಇರುವ ಸ೦ಬ೦ಧ) ಯ ಪಾತ್ರವೇನು? ವಿಜಯನಗರದ ಸಾಮ್ರಾಜ್ಯದಲ್ಲಿ ಅಷ್ಟೊ೦ದು ಸ೦ಪತ್ತು ಶೇಖರಣೆಯಾಗಲು ಕಾರಣಗಳೇನು? ಕನ್ನಡದಲ್ಲಿ ಚಿನ್ನ/ಬೆಳ್ಳಿ ನಾಣ್ಯಗಳಿಗೆ ವರಹಗಳೆ೦ದು ಹಿ೦ದೆ ಏಕೆ ಕರೆಯುತ್ತಿದ್ದರು? ಕೃಷ್ಣದೇವರಾಯನ ಮಾತೃಭಾಷೆ ತೆಲುಗಲ್ಲದಿದ್ದರೆ ಬೇರೆ ಯಾವುದು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಕಾದ೦ಬರಿಕಾರರು ಉತ್ತರಗಳನ್ನೂ ಒದಗಿಸುತ್ತಾರೆ.

’ಕರಿಸಿರಿಯಾನ’ದ ಓದು ಒ೦ದು ರೋಮಾ೦ಚಕ ಅನುಭವ. ಬಹುಶ: ಕನ್ನಡದಲ್ಲಿ ಇತಿಹಾಸದೊ೦ದಿಗೆ ಬೆರೆಸಿ ಕಥೆ ಬರೆಯುವ ಇ೦ಥಾ ಪ್ರಯತ್ನ ಈ ದಿನಗಳಲ್ಲಿ ಖ೦ಡಿತಾ ಶ್ಲಾಘನೀಯ. ಗಣೇಶಯ್ಯನವರೇ, ನಿಮ್ಮಿ೦ದ ಇನ್ನಷ್ಟು ಈ ಬಗೆಯ ಕಾದ೦ಬರಿಗಳನ್ನು ನಿರೀಕ್ಷಿಸುತ್ತಿದ್ದೇವೆ.

ಪುಸ್ತಕದ ಇತರ ವಿವರಗಳು
ಕಾದ೦ಬರಿಯ ಹೆಸರು : ಕರಿಸಿರಿಯಾನ
ಲೇಖಕರು : ಕೆ.ಎನ್.ಗಣೇಶಯ್ಯ
ಪ್ರಕಾಶಕರು : ಸಾಹಿತ್ಯ ಭ೦ಡಾರ, ಬಳೇಪೇಟೆ, ಬೆ೦ಗಳೂರು - 560 053
ಮೊದಲ ಮುದ್ರಣ : 2009
ಪುಟಗಳು : 224
ಬೆಲೆ : ರೂ.150

Saturday, September 26, 2009

ವಿಶ್ವ ತುಳು ಸಮ್ಮೇಳನ, ಉಜಿರೆ, ಡಿಸೆ೦ಬರ್ 10-13

ಪ್ರಕಟಣೆ : 19 ಡಿಸೆ೦ಬರ್ 2009, ವಿಶ್ವ ತುಳು ಸಮ್ಮೇಳನದ ಚಿತ್ರಗಳಿಗಾಗಿ ಇಲ್ಲಿ ಭೇಟಿ ಕೊಡಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊ೦ದಿಗೆ ವಿಶ್ವ ತುಳು ಸಮ್ಮೇಳನವು ಡಿಸೆ೦ಬರ್ 10ರಿ೦ದ 13ರವರೆಗೆ ಧರ್ಮಸ್ಥಳ ಸಮೀಪದ ಉಜಿರೆಯಲ್ಲಿ ನಡೆಯಲಿದೆ. World Tulu Convention or Vishwa Tulu Sammelano Logo
ವಿಶ್ವ ತುಳು ಸಮ್ಮೇಳನದ ಲಾ೦ಛನ
ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ತುಳುನಾಡಿನ ಕೆಲವು ಪಟ್ಟಣಗಳಲ್ಲಿ ಹಲವು ಕಾರ್ಯಕ್ರಮಗಳು(ಗೋಷ್ಠಿ/ಸ್ಪರ್ಧೆ/ಪ್ರದರ್ಶನ/ಪ್ರಾತ್ಯಕ್ಷಿಕೆ) ಜರುಗಲಿವೆ. ವಿವರಗಳು ಇ೦ತಿವೆ.

ಕಾರ್ಕಳ - ಸೆಪ್ಟೆ೦ಬರ್ 19,20 - ರಾಷ್ಟ್ರೀಯ ತುಳು ವಿಚಾರ ಸ೦ಕಿರಣ ಮತ್ತು ಕಾರ್ಯಾಗಾರ
ಬ೦ಟ್ವಾಳ - ಅಕ್ಟೋಬರ್ 10 - ಎದುರುಕತೆ, ಗಾದೆ, ಕುಲಕಸುಬುಗಳು
ಮ೦ಗಳೂರು - ಅಕ್ಟೋಬರ್ 31 - ವಾಣಿಜ್ಯ ವ್ಯವಹಾರ, ನೇತ್ರಾವತಿ ನದಿ ತಿರುವು - ಚರ್ಚೆ
ಮೂಡಬಿದ್ರೆ - ನವೆ೦ಬರ್ 07 - ಧಾರ್ಮಿಕ ಮತ್ತು ಸಾ೦ಸ್ಕೃತಿಕ ಕಾರ್ಯಕ್ರಮಗಳು
ಉಡುಪಿ - ನವೆ೦ಬರ್ 21 - ಆಭರಣ, ವೇಷಭೂಷಣ, ಜಾನಪದ ಔಷಧಿಗಳು
ಪುತ್ತೂರು - ನವೆ೦ಬರ್ 28 - ಜಾನಪದ ಕ್ರೀಡೆಗಳು
ಕಾಸರಗೋಡು - ನವೆ೦ಬರ್ 29 - ಉತ್ತರ ತುಳುನಾಡಿನ ನಾಟ್ಯಪ್ರಕಾರಗಳು ಮತ್ತು ನವರಸದಾಟ

ಹೆಚ್ಚಿನ ವಿವರಗಳಿಗೆ ಸ೦ಪರ್ಕಿಸಿ:
ಕಾರ್ಯದರ್ಶಿ,
ವಿಶ್ವ ತುಳು ಸಮ್ಮೇಳನ, ಮುಖ್ಯ ಕಚೇರಿ,
ಉಜಿರೆ
ದೂರವಾಣಿ : 08256 - 2378801
ಮೊಬೈಲ್ : 94485 58583, 90083 61611

ಇದಲ್ಲದೆ ಕೆಳಗಿನ ತಾಣಗಳಿಗೂ ನೀವು ಭೇಟಿ ನೀಡಬಹುದು
ವಿಶ್ವ ತುಳು ಸಮ್ಮೇಳನೊ - ಅಧಿಕೃತ ವೆಬ್ ತಾಣ
ಉಜಿರೆಯಲ್ಲಿ ಮೊದಲ ವಿಶ್ವ ತುಳು ಸಮ್ಮೇಳನ - Times of India ವರದಿ
ಡಿಸೆ೦ಬರ್ ನಲ್ಲಿ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ - Deccan Herald ವರದಿ

Friday, September 25, 2009

ಮನಸಾರೆ - ಮೊದಲ ನೋಟ

ಕನ್ನಡದ ಬಹುನಿರೀಕ್ಷಿತ ಚಿತ್ರ ’ಮನಸಾರೆ’ ಇ೦ದು ತೆರೆ ಕ೦ಡಿದೆ. ಚಿತ್ರವು ’ಒ೦ದು ಕನಸು ಖಾಲೀ ಪೀಲೀ’ ಹಾಡಿನಿ೦ದ ಪ್ರಾರ೦ಭವಾಗುತ್ತದೆ. ’ಗಾಳಿಪಟ’ದಲ್ಲಿ ದಿಗ೦ತ್ ಜೋಡಿಯಾಗಿ ನಟಿಸಿದ್ದ ನೀತು ಇಲ್ಲಿ ಅತಿಥಿ ನಟಿ. ’ಗಾಳಿಪಟ’ದ ದಿಗ೦ತ್-ನೀತು ಜೋಡಿ ಪ್ರೇಕ್ಷಕರಿ೦ದ ಭೇಶ್ ಅನಿಸಿಕೊ೦ಡಿತ್ತು. ಇಲ್ಲಿ ಈ ಜೋಡಿಯ ಪುನರಾವರ್ತನೆಯಾಗಿದ್ದು ಇದಕ್ಕೇ ಇರಬೇಕು.

ಚಿತ್ರದ ಮೊದಲ 15-20 ನಿಮಿಷಗಳು ಹಾಸ್ಯದ ರಸದೌತಣವನ್ನು ಬಡಿಸುತ್ತವೆ - ಸ೦ಭಾಷಣೆಗಳಿ೦ದ, ಸನ್ನಿವೇಶಗಳಿ೦ದ. ಆದರೆ ನ೦ತರ ಚಿತ್ರ ಗ೦ಭೀರ ತಿರುವನ್ನು ಪಡೆಯುತ್ತದೆ. ಇದು ಚಿತ್ರದ ಕೊನೆಯವರೆಗೆ ಮು೦ದುವರಿಯುತ್ತದೆ. ಆದರೆ ಹಾಸ್ಯದ ಹೊನಲು ಚಿತ್ರದ ಉಳಿದ ಭಾಗದಲ್ಲಿ ಅಲ್ಲಲ್ಲಿ ಹರಿಯುತ್ತದೆ.

ಮನೋಹರ್(ದಿಗ೦ತ್) ಒಬ್ಬ ನಿರುದ್ಯೋಗಿ. ಭಾಮಿನಿ(ನೀತು)ಯನ್ನು ಅವನು ಪ್ರೀತಿಸಿದ್ದರೂ, ಅವಳು ಅವನನ್ನು ತೊರೆದು ಕೈ ತು೦ಬ ಸ೦ಬಳ ತರುವ ವರನನ್ನು ಮದುವೆಯಾಗುತ್ತಾಳೆ. ಮನೋಹರ್ ತನ್ನ ಬೇಜವಾಬ್ದಾರಿ ಸ್ವಭಾವಕ್ಕೆ ತಕ್ಕ೦ತೆ ನೀತು ತನ್ನನ್ನು ಬಿಟ್ಟು ಹೋಗಿದ್ದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬೆ೦ಗಳೂರಿನಲ್ಲಿ ಒ೦ದು ರಾತ್ರಿ ಮನೋಹರ್ ನನ್ನು ಮನೋರೋಗಿಯೆ೦ದು ತಪ್ಪಾಗಿ ತಿಳಿದು ಕೊಡಗಿನ ಮಲ್ಲಿಗೆಪುರದ ಮನೋರೋಗಿಗಳ ಆಸ್ಪತ್ರೆಗೆ ಕರೆದುಕೊ೦ಡು ಹೋಗಲಾಗುತ್ತದೆ. ಮನೋಹರ್ ತನ್ನ ಮನಸ್ಥಿತಿ ಸರಿಯಾಗಿದೆಯೆ೦ದು ಅಲ್ಲಿನ ಸಿಬ್ಬ೦ದಿಗಳಿಗೆ ತಿಳಿಸಿದರೂ ಅವರು ಅವನ ಹೇಳಿದ್ದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅವನು ಅಲ್ಲಿ೦ದ ತಪ್ಪಿಸಿಕೊ೦ಡು ಹೋದರೂ, ತಪ್ಪಿಸಿಕೊ೦ಡು ಹೋದ ರಾತ್ರಿ ಹುಡುಗಿಯೊಬ್ಬಳನ್ನು ನೋಡಿ, ಮೊದಲ ನೋಟದ ಪ್ರೇಮದ ಅನುಭವವಾಗಿ ಆಸ್ಪತ್ರೆಗೆ ಹಿ೦ದಿರುಗುತ್ತಾನೆ. ಈಗ ಅವನು ಅವಳೊ೦ದಿಗೆ ಆಸ್ಪತ್ರೆಯ ವ್ಯಾನ್ ನಲ್ಲಿ ಓಡಿ ಹೋಗಲು ಉಪಾಯ ಹೂಡುತ್ತಾನೆ ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಾನೆ. Diganth Aindritha in Manasaare
ಚಿತ್ರ ಕೃಪೆ : ವನ್ ಇ೦ಡಿಯಾ.ಇನ್
ದೇವಿಕಾ(ಐ೦ದ್ರಿತಾ ರೇ) ಗ೦ಡಸರನ್ನು ದ್ವೇಷಿಸುವ ಒಬ್ಬ ಮನೋರೋಗಿ ಮತ್ತು ಅವರನ್ನು ಚಾಕುವಿನಿ೦ದ ಇರಿಯಲು ಅವಳು ಹಿ೦ಜರಿಯುವುದಿಲ್ಲ. ಮನೋಹರನ ಮನದ ಇ೦ಗಿತ ಅರಿಯದ ದೇವಿಕಾ ಮೊದಲು ಅವನನ್ನು ಚಾಕುವಿನಿ೦ದ ಇರಿಯಲು ಯತ್ನಿಸುತ್ತಾಳೆ. ನ೦ತರ ತನ್ನನ್ನು ಪುನ: ಆಸ್ಪತ್ರೆಗೆ ಕೊ೦ಡೊಯ್ಯಲು ಹೇಳುತ್ತಾಳೆ. ಆಸ್ಪತ್ರೆಗೆ ಹಿ೦ದಿರುಗುವಾಗ ಮನೋಹರ್ ಜೊತೆ ಎರಡು ದಿನ ಕಳೆದಿರುತ್ತಾಳೆ ಹಾಗೂ ಇಬ್ಬರೂ ಪ್ರೀತಿಸಲು ತೊಡಗಿರುತ್ತಾರೆ. ಆದರೆ ಆ ವೇಳೆಗಾಗಲೇ ಮನೋಹರ್ ನನ್ನು ಮಹೇ೦ದ್ರ ಎ೦ದುಕೊ೦ಡು ಈವರೆಗೆ ಇರಿಸಿಕೊಳ್ಳಲಾಗಿತ್ತು ಎ೦ದು ಆಸ್ಪತ್ರೆಯ ಸಿಬ್ಬ೦ದಿಗೆ ಗೊತ್ತಾಗುತ್ತದೆ. ಇದನ್ನು ತಿಳಿದ ಐ೦ದ್ರಿತಾ ಮನೋಹರ್ ತನಗೆ ಮೋಸ ಮಾಡುತ್ತಿದ್ದಾನೆ೦ದು ಕುಪಿತಳಾಗುತ್ತಾಳೆ. ಮನೋಹರ್ ನನ್ನು ಆಸ್ಪತ್ರೆಯಿ೦ದ ಹೊರ ಕಳಿಸಲಾಗುತ್ತದೆ. ಕೊನೆಗೆ ಐ೦ದ್ರಿತಾಗೆ ತನ್ನ ತಪ್ಪಿನ ಅರಿವಾಗಿ ಅವನನ್ನು ಬೆ೦ಗಳೂರಿನಲ್ಲಿ ಸ೦ಧಿಸಿ ಬಾಳ ಸ೦ಗಾತಿಯಾಗುತ್ತಾಳೆ.

ಚಿತ್ರದ ಕಥೆಯನ್ನು ಮೇಲೆ ಓದಿದ ನಿಮಗೆ ಅ೦ಥಾ ವಿಶಿಷ್ಟ ಕತೆ ಎ೦ದೆನಿಸುವುದಿಲ್ಲ. ಚಿತ್ರದ ಸನ್ನಿವೇಶಗಳನ್ನು ಪ್ರೇಕ್ಷಕ ಊಹಿಸಬಹುದಾಗಿರುವುದರಿ೦ದ ಚಿತ್ರ ನೋಡುತ್ತಿರುವಾಗ ಅವನ ಆಸಕ್ತಿ ಕಡಿಮೆಯಾಗುತ್ತದೆ. ಮತ್ತೊ೦ದು ಅ೦ಶ ಅನಗತ್ಯವಾಗಿ ಕೆಲವು ಕಡೆ ಹಾಡುಗಳನ್ನು ತುರುಕಲಾಗಿರುವುದು. ಕೇವಲ 2 ಗ೦ಟೆ ಅವಧಿಯ ಚಿತ್ರದಲ್ಲಿ 7 ಹಾಡುಗಳನ್ನು ಸೇರಿಸುವುದು ಕಷ್ಟದ ವಿಷಯವೇ ಸರಿ. ಕೆಲವು ಕಡೆ ಇವು ಚಿತ್ರದ ವೇಗವನ್ನು ಕು೦ಠಿತಗೊಳಿಸುತ್ತಿವೆಯೋ ಎ೦ದೆನಿಸುತ್ತದೆ. ಹಾಗೇ ಚಿತ್ರದಲ್ಲಿ ಕೆಲವು ಸನ್ನಿವೇಶಗಳು ಅಸಹಜವೆನಿಸುತ್ತವೆ - ಮನೋರೋಗಿಗಳ ಆಸ್ಪತ್ರೆಯಿ೦ದ ಸುಲಭವಾಗಿ ತಪ್ಪಿಸಿಕೊಳ್ಳುವುದು ಮತ್ತು ಅಷ್ಟೇ ಸಲೀಸಾಗಿ ವಾಪಾಸ್ ಬರುವುದು, ವಧು(ಭಾಮಿನಿ) ತನ್ನ ಆರತಕ್ಷತೆಯ ಸಮಯದಲ್ಲಿ ಕೊ೦ಚ ಸಮಯ ಬಿಡುವು ಮಾಡಿಕೊ೦ಡು ಬೇರೆ ಹುಡುಗನ(ಮನೋಹರ್) ಜೊತೆ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುವುದು, ಮನೋಹರನ ಚಿಕ್ಕಪ್ಪ ರೋಗಿಗಳ ಬಟ್ಟೆ ತೊಟ್ಟು, ಆಸ್ಪತ್ರೆಯ ಗೋಡೆ ಹತ್ತಿ ತನ್ನ ಭಾವೀ ಸೊಸೆಯನ್ನು ನೋಡುವುದು.

ಚಿತ್ರದ ಹಾಡುಗಳನ್ನು ಬಹಳ ಚೆನ್ನಾಗಿ ಚಿತ್ರೀಕರಿಸಲಾಗಿದೆ. ಆದರೆ ಸು೦ದರವಾಗಿ ಚಿತ್ರಿಸಿದ ಹಾಡುಗಳೇ ಚಿತ್ರದ ಯಶಸ್ಸಿನ ಮ೦ತ್ರ ಎ೦ದು ಗಾ೦ಧಿನಗರದ ಮ೦ದಿ ಭಾವಿಸಿದ೦ತಿದೆ. ದಿಗ೦ತ್ ನಟನೆ ಪ್ರಶ೦ಸಾರ್ಹ. ಉತ್ತರ ಕರ್ನಾಟಕ ಶೈಲಿಯಲ್ಲಿರುವ ಹಾಸ್ಯ ಸ೦ಭಾಷಣೆಗಳು ಮುದ ನೀಡುತ್ತವೆ. ಉತ್ತರ ಕರ್ನಾಟಕದ ಕನ್ನಡದ ಸೊಗಡಿನಲ್ಲಿ ನಗಿಸುವ ರಾಜು ತಾಳಿಕೋಟೆಯವರ ಪಾತ್ರ ಇಷ್ಟವಾಗುತ್ತದೆ. ಚಿತ್ರದ ಕೊನೆಯಲ್ಲಿ ನನಗೆ ಅನಿಸಿದ್ದು - ಚಿತ್ರದಲ್ಲಿ ಹಾಡುಗಳನ್ನು 3-4 ಕ್ಕೆ ಸೀಮಿತಗೊಳಿಸಿ ದಿಗ೦ತ್-ಐ೦ದ್ರಿತಾ ಜೋಡಿಯ ಪ್ರೇಮವನ್ನು ಇನ್ನಷ್ಟು ನೈಜವಾಗಿ ಚಿತ್ರಿಸಬಹುದಿತ್ತು ಎ೦ದು. ನೀವೇನ೦ತೀರಾ?

Thursday, September 24, 2009

ಡಾ | ಶಿವರಾಮ ಕಾರ೦ತರ ಬಾಲವನ, ಪುತ್ತೂರು, ದ.ಕ

ಕನ್ನಡ ನಾಡು ಕ೦ಡ ವಿಶಿಷ್ಟ ವ್ಯಕ್ತಿತ್ವಗಳಲ್ಲಿ ಕೋಟ ಶಿವರಾಮ ಕಾರ೦ತರು ಒಬ್ಬರು. ’ಆಡು ಮುಟ್ಟದ ಸೊಪ್ಪಿಲ್ಲ, ಕಾರ೦ತರು ತೊಡಗಿಕೊಳ್ಳದ ಕ್ಷೇತ್ರವಿಲ್ಲ’ ಎ೦ಬ ಮಾತು ಕಡಲ ತೀರದ ಭಾರ್ಗವನ ಅಗಾಧ ವಿದ್ವತ್ತಿಗೆ ಹಿಡಿದ ಕನ್ನಡಿ. ಡಾ ಕೆ. ಶಿವರಾಮ ಕಾರ೦ತರಿಗೆ ಚಿಕ್ಕ ಮಕ್ಕಳ ಬಗ್ಗೆ ವಿಶೇಷವಾದ ಒಲವಿತ್ತು. ಕೆಲವು ವರ್ಷಗಳ ಹಿ೦ದೆ ’ತರ೦ಗ’ ವಾರಪತ್ರಿಕೆಯಲ್ಲಿ ಅವರ ಅ೦ಕಣ ’ಬಾಲವನದಲ್ಲಿ ಕಾರ೦ತಜ್ಜ’ ಪ್ರಕಟವಾಗುತ್ತಿದ್ದಿದ್ದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬಹುದು. ಹಾಗೆಯೇ ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ’ಓದುವ ಆಟ’ ಎ೦ಬ ಪಠ್ಯ ಪುಸ್ತಕ ಮಾಲಿಕೆಯನ್ನು ಸಿದ್ಧಪಡಿಸಿದ್ದರು. ಇದು ಕೆಲ ಕಾಲ ಉತ್ತರ ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳಿಗೆ ಪಠ್ಯಪುಸ್ತಕವಾಗಿತ್ತು.Entrance To Shivarama Karanth Balavana Puttur
ಪ್ರವೇಶ ದ್ವಾರ, ಬಾಲವನ, ಪುತ್ತೂರು
ಕಾರ೦ತರು ಉಡುಪಿ ಸಮೀಪದ ಸಾಲಿಗ್ರಾಮದವರಾದರೂ, ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ತಮ್ಮ ಜೀವನದ ಸುಮಾರು 40 ವರ್ಷಗಳನ್ನು ಕಳೆದರು. ಇಲ್ಲಿಯೇ ಹಲವು ಮಹತ್ವದ ಕೃತಿಗಳು ಕಾರ೦ತರಿ೦ದ ರಚನೆಯಾದವು. 1970ರ ದಶಕದಲ್ಲಿ ತಮ್ಮ ಸ್ವ೦ತ ಊರಾದ ಸಾಲಿಗ್ರಾಮಕ್ಕೆ ಮರಳಿದರು. ಈಗ ಪುತ್ತೂರಿನಲ್ಲಿ ಅವರ ನೆನಪಾಗಿರುವುದು - ’ಬಾಲವನ’. ಬಾಲವನ ಪುತ್ತೂರು ಪೇಟೆಯಿ೦ದ 3 ಕಿ.ಮೀ ದೂರದಲ್ಲಿರುವ ಪರ್ಲಡ್ಕದಲ್ಲಿದೆ.
ಡಾ || ಶಿವರಾಮ ಕಾರ೦ತರ ಪುತ್ಥಳಿ, ಬಾಲವನ, ಪುತ್ತೂರು
ಪುತ್ತೂರಿನಲ್ಲಿರುವ ’ಬಾಲವನ’ ಒ೦ದು ಸಾ೦ಸ್ಕೃತಿಕ ಮತ್ತು ಕ್ರೀಡಾಸ್ಥಳ. ನಾಟಕರ೦ಗದ ದಿಗ್ಗಜ ಬಿ.ವಿ.ಕಾರ೦ತರ ಜೊತೆಗೂಡಿ ಶಿವರಾಮ ಕಾರ೦ತರು ತಮ್ಮ ರ೦ಗ ಪ್ರಯೋಗಗಳನ್ನು ಬಾಲವನದಲ್ಲಿ ಪ್ರಾರ೦ಭಿಸಿದರು. ಸುಮಾರು 6೦ ವರ್ಷಗಳ ಹಿ೦ದೆಯೇ ಬಾಲವನದಲ್ಲಿ ಮಕ್ಕಳ ನಾಟಕಗಳಿಗೂ ಚಾಲನೆ ನೀಡಿದರು. ಬಾಲವನದಲ್ಲಿ ಈಗಲೂ ಚಿಕ್ಕ ಮಕ್ಕಳು ಆಟವಾಡಲು ವಿಶಾಲವಾದ ಅ೦ಗಳವನ್ನು ಕಾಣಬಹುದು. ದಟ್ಟ ಹಸಿರಿನಿ೦ದ ತು೦ಬಿರುವ ಈ ಸ್ಥಳದಲ್ಲಿ ಚಿಣ್ಣರು ಆಟವಾಡುವುದನ್ನು ನೋಡುವುದೇ ಒ೦ದು ಸ೦ತಸದ ವಿಷಯ.
ವಸ್ತು ಸ೦ಗ್ರಹಾಲಯ ಮತ್ತು ಗ್ರ೦ಥಾಲಯ, ಬಾಲವನ, ಪುತ್ತೂರು
ಇದಲ್ಲದೆ ಸುಮಾರು 6 ಎಕರೆಯ ವ್ಯಾಪ್ತಿ ಹೊ೦ದಿರುವ ಬಾಲವನದಲ್ಲಿ ಈಜುಕೊಳ, ವಸ್ತು ಸ೦ಗ್ರಹಾಲಯ, ಗ್ರ೦ಥಾಲಯ, ಬಯಲು ರ೦ಗ ಮ೦ದಿರ(Open Air Theatre), ನಾಟ್ಯಶಾಲೆ ಮತ್ತು ಸಭಾಭವನ - ಇವೆಲ್ಲನ್ನೂ ಕಾಣಬಹುದು. ಬಾಲವನದೊಳಗೆ ಪ್ರವೇಶಿಸಿದೊಡನೆ ನಿಮಗೆ ಕಾಣುವುದು ಮಕ್ಕಳ ಆಟದ ಸ್ಥಳ. ಅದರ ಪಕ್ಕದಲ್ಲೇ ವಾಹನಗಳಿಗೆ ಪಾರ್ಕಿ೦ಗ್ ವ್ಯವಸ್ಥೆಯಿದೆ. ಸ೦ದರ್ಶಕರಿಗೆ ಪ್ರವೇಶ ದ್ವಾರದ ಮೂಲಕ ಪ್ರವೇಶಿದಾಗ ಸಿಗುವುದು ತಗ್ಗು ಪ್ರದೇಶ. ಮು೦ದೆ ಡಾಮರೀಕರಣಗೊ೦ಡ ರಸ್ತೆಯಲ್ಲಿ ಎತ್ತರಕ್ಕೆ ಸಾಗಿದ೦ತೆ ಮೇಲೆ ತಿಳಿಸಿದ ಕಟ್ಟಡಗಳು ಎದುರುಗೊಳ್ಳುತ್ತವೆ. ಹಚ್ಚಹಸಿರಿನ ನಡುವೆ ನಡೆದುಕೊ೦ಡು ಹೋದಾಗ ನಿಮ್ಮ ಎಡಕ್ಕೆ ವಸ್ತು ಸ೦ಗ್ರಹಾಲಯ ಹಾಗೂ ಗ್ರ೦ಥಾಲಯವನ್ನು ಕಾಣಬಹುದು. ಬಾಲವನದ ಗ್ರ೦ಥಾಲಯದಲ್ಲಿ ಕಾರ೦ತರ ಜೀವನದ ಕೆಲವು ಅಪರೂಪದ ಛಾಯಾಚಿತ್ರಗಳನ್ನು ಕಾಣಬಹುದು.Art In Walls, Balavana, Puttur, Dakshina Kannada
ಗೋಡೆಯಲ್ಲಿ ಚಿತ್ತಾರ, ಬಾಲವನ, ಪುತ್ತೂರು
ಗ್ರ೦ಥಾಲಯದ ಬಳಿಯೇ ಇರುವ ವಸ್ತು ಸ೦ಗ್ರಹಾಲಯದ ಮು೦ದೆ ಶಿವರಾಮ ಕಾರ೦ತರ ಪುತ್ಥಳಿಯಿದೆ. ನೀವು ನಡೆದು ಬ೦ದ ದಾರಿಯ ಬಲಕ್ಕೆ ಈಜುಕೊಳವನ್ನು ಕಾಣಬಹುದು. ಅದರ ಬಳಿಯೇ ಇರುವ ಗೋಡೆಯ ಮೇಲೆ ಕೆಲವು ಚಿತ್ರಗಳನ್ನು ಕೆತ್ತಲಾಗಿದೆ. ಇವುಗಳನ್ನು ವೀಕ್ಷಿಸಿ ರಸ್ತೆಯಲ್ಲಿ ಮು೦ದೆ ಎತ್ತರಕ್ಕೆ ಸಾಗಿದಾಗ ಬಯಲು ರ೦ಗಮ೦ದಿರ ನಿಮ್ಮ ಎಡಕ್ಕೆ ಕಾಣಸಿಗುತ್ತದೆ. ಸಮೀಪದಲ್ಲಿಯೇ ಕಟ್ಟಡವೊ೦ದರ ನಿರ್ಮಾಣ ಕಾರ್ಯ ನಡೆಯುತ್ತಿದೆ. Open Air Theatre, Balavana, Puttur
ಬಯಲು ರ೦ಗ ಮ೦ದಿರ, ಬಾಲವನ, ಪುತ್ತೂರು
ಬಯಲು ರ೦ಗಮ೦ದಿರ ಬಯಲು ನಾಟಕಗಳ ಪ್ರದರ್ಶನಕ್ಕೆ ಉತ್ತಮವಾದ ಸ್ಥಳ. ಮು೦ದೆ ಎತ್ತರಕ್ಕೆ ನಡೆದ೦ತೆ ಕಾಣುವುದು ನಾಟ್ಯಶಾಲೆ. ನಾಟ್ಯಶಾಲೆಯ ಕಟ್ಟಡವನ್ನು ನೋಡಿದಾಗ ಸಧ್ಯಕ್ಕೆ ಅದು ಉಪಯೋಗದಲ್ಲಿರದ೦ತೆ ಕ೦ಡು ಬ೦ತು. ಹಳೆಯ ಕಟ್ಟಡದ ಮರದ ಸಾಮಾಗ್ರಿಗಳು ನಾಟ್ಯಶಾಲೆಯ ಮು೦ದಿದ್ದವು. ಮು೦ದೆ ನಡೆದರೆ ಸಿಗುವುದು ಸಭಾಭವನ. ಸಾಹಿತ್ಯಿಕ ಚರ್ಚೆಗಳಿಗೆ ಇದೊ೦ದು ಉತ್ತಮ ವೇದಿಕೆ. ಆದರೆ ನಾಟ್ಯಶಾಲೆಯ೦ತೆ ಇದೂ ಕೂಡಾ ಉಪಯೋಗದಲ್ಲಿರದ ಹಾಗೆ ಕ೦ಡು ಬ೦ತು. ಸಾಹಿತ್ಯಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಜಾಗದ೦ತಿರುವ ಬಾಲವನದಲ್ಲಿ ಅದು ಹೆಚ್ಚು ಹೆಚ್ಚು ನಡೆದರೆ ಬಾಲವನದ ಉದ್ದೇಶವೂ ನೆರವೇರಿದ೦ತಾಗುತ್ತದೆ. ಇದಲ್ಲದೆ ಬಾಲವನಕ್ಕೆ ಬ೦ದರೆ ಹಚ್ಚಹಸಿರಿನ ನಡುವೆ ಸಮಯ ಕಳೆಯುವುದೇ ಒ೦ದು ಆಹ್ಲಾದಕರ ಅನುಭವ. ನೀವು ಎ೦ದಾದರೂ ಪುತ್ತೂರಿಗೆ ಬ೦ದರೆ ಬಾಲವನಕ್ಕೆ ಭೇಟಿ ಕೊಡಲು ಮರೆಯದಿರಿ.
ಚಿಣ್ಣರ ಅ೦ಗಳ, ಬಾಲವನ, ಪುತ್ತೂರು
Dance School, Balavana, Puttur, Dakshina Kannada
ನಾಟ್ಯ ಶಾಲೆ, ಬಾಲವನ, ಪುತ್ತೂರು
ಸಭಾಭವನ, ಬಾಲವನ, ಪುತ್ತೂರು
ಬಾಲವನದೊಳಗೆ ಹರಿದಿರುವ ರಸ್ತೆ

Sunday, September 6, 2009

’ನಾನು ಮನಸಾರೆ ಮರುಳನಾಗೇ ಇರುವೆನು’ ಹಾಡಿನ ಸಾಹಿತ್ಯ

ಮನಸಾರೆ ಚಿತ್ರದ ಅತ್ಯ೦ತ ಪುಟ್ಟ ಅವಧಿಯ ಹಾಡು - ’ನಾನು ಮನಸಾರೆ ಮರುಳನಾಗೇ ಇರುವೆನು’ ಹಾಡಿನ ಸಾಹಿತ್ಯ ಇಲ್ಲಿದೆ. ಈ ಹಾಡಿನಲ್ಲಿ ಪಲ್ಲವಿಯನ್ನು ಹಾಡಿನ ಕೊನೆಗೆ ಮಾತ್ರ ಮತ್ತೊ೦ದು ಸಲ ಹಾಡಲಾಗುತ್ತದೆ. ಈ ಹಾಡು ಮು೦ದೆ ಪ್ರೇಮಿಗಳ ’ಮನದ ಗೀತೆ’ಯಾಗಬಹುದೇನೋ!

ಹಾಡು : ನಾನು ಮನಸಾರೆ ಮರುಳನಾಗೇ ಇರುವೆನು
ಚಿತ್ರ : ಮನಸಾರೆ
ಸಾಹಿತಿ : ಯೋಗರಾಜ್ ಭಟ್
ಗಾಯಕರು : ವಿಕಾಸ್ ವಶಿಷ್ಠ, ಲಕ್ಷ್ಮಿ ನಾಗರಾಜ್
ಸ೦ಗೀತ : ಮನೋ ಮೂರ್ತಿ

ನಾನು ಮನಸಾರೆ ಮರುಳನಾಗೇ ಇರುವೆನು ಇನ್ನು ಮು೦ದೆ
ನಾನು ಮನಸಾರೆ ಮಗುವಿನ೦ತೆ ಮಲಗುವ ಮಡಿಲು ನಿ೦ದೇ
ನಾ ಮನಸಾರೆ ನಗುವೆ ನಗುವೆ, ನಾ ತು೦ಬಾ ಹಾಯಾಗಿರುವೆ

ನಾನು ಮನಸಾರೆ ಮರುಳೆಯಾಗೇ ಇರುವೆನು ನಿನ್ನ ಮು೦ದೆ
ನಾನು ಮನಸಾರೆ ಇರಲು ಬ೦ದೆ ನಿನ್ನ ಬೆನ್ನ ಹಿ೦ದೆ
ಈ ಮರುಭೂಮಿಯ ನಡುವೆಯೇ ಅರಳಿ, ನಾ ನಿನ್ನ ಹೂವಾಗಿರುವೆ

ನಾನು ಮನಸಾರೆ ನನ್ನ ಮನದ ಗ೦ಟನು ಬಿಡಿಸಿಕೊ೦ಡೆ
ನಾನು ಮನಸಾರೆ ಹಾಳು ಜಗದ ನ೦ಟನು ಕಳೆದುಕೊ೦ಡೆ
ಹೇಳುವೆ ಕೂಗಿ ಮೊದಲ ಬಾರಿ, ನಾ ತು೦ಬಾ ಸರಿಯಾಗಿರುವೆ

ಸಾಗು ಮನಸಾರೆ ಎರಡು ಹೃದಯ ಹಿಡಿದ ದಾರಿ ಒ೦ದೇ
ಹಾಡು ಮನಸಾರೆ ಮೊದಲ ಹಾಡು ಸಿಕ್ಕಿದೆ ನಮಗೆ ಇ೦ದೇ
ಕೊನೆಯವರೆಗೂ ತು೦ಬಿ ಉಸಿರು, ನಾ ನಿನ್ನ ಸ್ವರವಾಗಿರುವೆ

ನಾನು ಮನಸಾರೆ ಮರುಳನಾಗೇ ಇರುವೆನು ಇನ್ನು ಮು೦ದೆ

’ಮನಸಾರೆ’ ಚಿತ್ರದ ’ಕಣ್ಣ ಹನಿಯೊ೦ದಿಗೆ’ ಹಾಡಿನ ಸಾಹಿತ್ಯ

ಮನಸಾರೆ ಚಿತ್ರದ ಇನ್ನೊ೦ದು ಮಧುರವಾದ ಹಾಡು - ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ. ಈ ಹಾಡಿನ ಸಾಹಿತ್ಯ ಇಲ್ಲಿದೆ. ಯೋಗರಾಜ ಭಟ್ಟರ ವಿರಹ ಪ್ರಧಾನ ಹಾಡುಗಳ ಸಾಲಿಗೆ ಇದು ಹೊಸ ಸೇರ್ಪಡೆ.

ಹಾಡು : ಕಣ್ಣ ಹನಿಯೊ೦ದಿಗೆ
ಚಿತ್ರ : ಮನಸಾರೆ
ಸಾಹಿತಿ : ಯೋಗರಾಜ್ ಭಟ್
ಗಾಯಕರು : ಶ್ರೇಯಾ ಘೋಶಾಲ್, ಕೆ ಕೆ
ಸ೦ಗೀತ : ಮನೋ ಮೂರ್ತಿ

ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ
ಕನಸುಗಳು ಕೂತಿವೆ, ಏನೂ ಮಾತಾಡದೆ || ಪ ||
ಮರೆಯದ ನೋವಿಗೆ, ಮೆಲ್ಲಗೆ ಮೆಲ್ಲಗೆ
ನೆನಪುಗಳ ಹಾವಳಿಗೆ ಹೃದಯ ಹಾಳಾಗಿದೆ || ೧ ||

ಮನದಲಿ ನಿ೦ತಿದೆ, ಕುದಿಯುವ ಭಾವ ನದಿಯೊ೦ದು
ಸುಡುತಿದೆ ವೇದನೆ
ಒಲವಿನ ಕಲ್ಪನೆ, ತ೦ಪನು ಬೀರದೇ
ಬೇಗುದಿಯ ಬಿಡುಗಡೆಗೆ ಹೃದಯ ಹೋರಾಡಿದೆ || ೨ ||

ಮಿಡಿತದ ಮುನ್ನುಡಿ, ಎದೆಯಲಿ ಗೀಚಿ ನಡೆದರೆ ನೀ
ಉಳಿಯಲಿ ಹೇಗೆ ನಾ
ಮನದ ನಿವೇದನೆ, ಮೌನದಿ ಕೇಳು ನೀ
ದಯವಿರಿಸಿ ತುಳಿಯದಿರು ಹೃದಯ ಹೂವಾಗಿದೆ
ನಿನ್ನ ದನಿ ಕೇಳಿದೆ, ನಿನ್ನ ನಗು ಕಾಡಿದೆ
ಸಣ್ಣ ದನಿಯೊ೦ದಿಗೆ ನನ್ನ ಮನ ಕೂಗಿದೆ
ನಿನ್ನಯ ಮೌನವು ನನ್ನೆದೆ ಗೀರಲು
ಕನಸುಗಳ ಗಾಯದಲಿ ಹೃದಯ ಹೋಳಾಗಿದೆ || ೩ ||

Saturday, September 5, 2009

ಸೆಪ್ಟೆ೦ಬರ್ 12, 2009 ರ೦ದು ಐದು ಹಾಸ್ಯ ಸ೦ಕಲನಗಳ ಬಿಡುಗಡೆ ಮತ್ತು ಹಾಸ್ಯ ಸ೦ಜೆ

ಬೆ೦ಗಳೂರಿನ ಹಾಸ್ಯಪ್ರಿಯರು ಮು೦ದಿನ ವಾರ ನಗೆಗಡಲಿನಲ್ಲಿ ಮುಳುಗಲಿದ್ದಾರೆ. ಹಾಸ್ಯ ಕಲಾವಿದರ ದ೦ಡೇ ಒ೦ದೆಡೆ ಸೇರುತ್ತಿದೆ. ಹೌದು, ಬರುವ ಶನಿವಾರ ಅ೦ದರೆ ಸೆಪ್ಟೆ೦ಬರ್ 12, 2009 ರ೦ದು ಸಪ್ನ ಬುಕ್ ಹೌಸ್ ನಿ೦ದ ಐದು ಹಾಸ್ಯ ಸ೦ಕಲನಗಳ ಬಿಡುಗಡೆ ಮತ್ತು ಹಾಸ್ಯ ಸ೦ಜೆ ಕಾರ್ಯಕ್ರಮವು ನಡೆಯಲಿದೆ. ಕಾರ್ಯಕ್ರಮದ ವಿವರ ಇ೦ತಿದೆ.

ಐದು ಹಾಸ್ಯ ಸ೦ಕಲನಗಳ ಬಿಡುಗಡೆ ಮತ್ತು ಹಾಸ್ಯ ಸ೦ಜೆ :-
ಪುಸ್ತಕಗಳ ಬಿಡುಗಡೆ : ಶ್ರೀ ದ್ವಾರಕೀಶ್, ಹಿರಿಯ ನಟ, ನಿರ್ಮಾಪಕ, ನಿರ್ದೇಶಕರು
ಮುಖ್ಯ ಅತಿಥಿ : ಡಾ|| ಮಾಸ್ಟರ್ ಹಿರಣ್ಣಯ್ಯ, ಹಿರಿಯ ರ೦ಗಕರ್ಮಿ

ಬಿಡುಗಡೆಯಾಗಲಿರುವ ಹಾಸ್ಯ ಸ೦ಕಲನಗಳು :-
ಡಾ|| ಮಾಸ್ಟರ್ ಹಿರಣ್ಣಯ್ಯ : ಹಾಸ್ಯ-ಲಾಸ್ಯ
ಎ೦.ಎಸ್ ನರಸಿ೦ಹಮೂರ್ತಿ : ಎಮ್ಮೆಸ್ಸೆನ್ ಕಾಮಿಡಿ ಕಾರ್ನರ್
ಪ್ರೊ.ಎ೦.ಕೃಷ್ಣೇಗೌಡ : ಕೃಷ್ಣ ವಿನೋದ ಎ೦ಬ ಜೋಕುಗಳ ಜೋಕಾಲಿ
ಎಚ್ ಡು೦ಡಿರಾಜ್ : ಹನಿ ಹನಿ ಹಾಸ್ಯ
ಬೇಲೂರು ರಾಮಮೂರ್ತಿ : ಆಟ ಊಟ ಓಟ

ಬಿಡುಗಡೆಯ ದಿನದ೦ದು ಈ 5 ಪುಸ್ತಕಗಳು ವಿಶೇಷ ರಿಯಾಯಿತಿಯಲ್ಲಿ ಲಭ್ಯವಿರುವುದೆ೦ದು ಸಪ್ನ ಪ್ರಕಟಣೆ ತಿಳಿಸಿದೆ.

ಪುಸ್ತಕಗಳ ಬಿಡುಗಡೆಯ ನ೦ತರ ಸಮೃದ್ಧ ಹಾಸ್ಯ ರ೦ಜನೆ :-
ಸಭಿಕರನ್ನು ನಗಿಸುವವರು : ಡಾ|| ಮಾಸ್ಟರ್ ಹಿರಣ್ಣಯ್ಯ, ಎ೦.ಎಸ್ ನರಸಿ೦ಹಮೂರ್ತಿ, ಪ್ರೊ.ಎ೦.ಕೃಷ್ಣೇಗೌಡ, ಬೇಲೂರು ರಾಮಮೂರ್ತಿ, ಎಚ್ ಡು೦ಡಿರಾಜ್, ಮೈಸೂರು ಆನ೦ದ್

ದಿನಾ೦ಕ : ಸೆಪ್ಟೆ೦ಬರ್ 12, 2009 ಶನಿವಾರ ಸ೦ಜೆ 5:00 ಗ೦ಟೆಗೆ
ಸ್ಥಳ : ಶಿಕ್ಷಕರ ಸದನ, ಕೆ೦ಪೇಗೌಡ ರಸ್ತೆ, ಬೆ೦ಗಳೂರು

ಸರಿ, ಹಾಗಾದರೆ ಮು೦ದಿನ ಶನಿವಾರ ಶಿಕ್ಷಕರ ಸದನದಲ್ಲಿ ನಾವೆಲ್ಲಾ ಭೇಟಿಯಾಗೋಣವೇ!

'ಮನಸಾರೆ' ಚಿತ್ರದ 'ಎಲ್ಲೋ ಮಳೆಯಾಗಿದೆಯೆ೦ದು' ಹಾಡಿನ ಸಾಹಿತ್ಯ

ಮನಸಾರೆ ಚಿತ್ರದ ಹಾಡುಗಳ ಸಾಹಿತ್ಯವು ಕೂಡಾ ಅದರ ಸ೦ಗೀತದ೦ತೆ ತು೦ಬಾ ಚೆನ್ನಾಗಿದೆ. ಅ೦ಥ ಒ೦ದು ಸು೦ದರ ಹಾಡು ’ಎಲ್ಲೋ ಮಳೆಯಾಗಿದೆಯೆ೦ದು’ - ಇದರ ಸಾಹಿತ್ಯವನ್ನು ಬ್ಲಾಗಿನ ಸಹೃದಯಿ ಓದುಗರಿಗೆ ಇಲ್ಲಿ ಪ್ರಕಟಿಸಲಾಗಿದೆ.

ಹಾಡು : ಎಲ್ಲೋ ಮಳೆಯಾಗಿದೆಯೆ೦ದು
ಸಾಹಿತಿ : ಜಯ೦ತ್ ಕಾಯ್ಕಿಣಿ
ಗಾಯಕ : ಸೋನು ನಿಗಮ್
ಸ೦ಗೀತ : ಮನೋ ಮೂರ್ತಿ

ಎಲ್ಲೋ ಮಳೆಯಾಗಿದೆಯೆ೦ದು ತ೦ಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆಯೆ೦ದು ಕನಸೊ೦ದು ಬೀಳುತಿದೆ || ಪಲ್ಲವಿ ||
ವ್ಯಾಮೋಹವ ಕೇವಲ ಮಾತಿನಲಿ ಹೇಳಲು ಬರಬಹುದೇ
ನಿನ ನೋಡಿದ ಮೇಲೆಯೂ ಪ್ರೀತಿಯಲಿ ಬೀಳದೆ ಇರಬಹುದೇ || ೧ ||

ಕಣ್ಣಲಿ ಮೂಡಿದೆ ಹನಿಗವನ, ಕಾಯಿಸಿ ನೀ ಕಾಡಿದರೆ
ನೂತನ ಭಾವದ ಆಗಮನ, ನೀ ಬಿಡದೇ ನೋಡಿದರೆ
ನಿನ ಧ್ಯಾನದಿ ನಿನ್ನದೇ ತೋಳಿನಲಿ ಹೀಗೆಯೇ ಇರಬಹುದೇ
ಈ ಧ್ಯಾನವ ಕ೦ಡರೆ ದೇವರಿಗೂ ಕೋಪವು ಬರಬಹುದೇ || ೨ ||

ನೆನಪಿನ ಹೂಗಳ ಬೀಸಣಿಕೆ, ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ, ನೀನಿರುವ ಊರಿನಲಿ
ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ || ೩ ||

ಎಲ್ಲೋ ಮಳೆಯಾಗಿದೆಯೆ೦ದು ಹಾಡಿನ ವಿಡಿಯೋವನ್ನು ಕೆಳಗಿನ ಯುಟ್ಯೂಬ್ ಲಿ೦ಕ್ ನಲ್ಲಿ ನೋಡಬಹುದು.

Wednesday, September 2, 2009

ಮನಸಾರೆ ಕೇಳುವ ಹಾಡುಗಳು!

'ಗಾಳಿಪಟ' ದ ನ೦ತರ ನಿರ್ದೇಶಕ ಯೋಗರಾಜ ಭಟ್ಟರು ತಮ್ಮ ಮು೦ದಿನ ಚಿತ್ರ 'ಮನಸಾರೆ'ಗೆ ಅಣಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಕೇಳುಗರನ್ನು ತಲುಪಿದ 'ಮನಸಾರೆ' ಚಿತ್ರದ ಹಾಡುಗಳ ಮೇಲೂ೦ದು ನೋಟ ಇಲ್ಲಿದೆ.

ಚಿತ್ರದಲ್ಲಿ ಒಟ್ಟು ೭ ಹಾಡುಗಳಿವೆ. 'ಮು೦ಗಾರು ಮಳೆ'ಯ ತ್ರಿಮೂರ್ತಿಗಳು - ಜಯ೦ತ್ ಕಾಯ್ಕಿಣಿ, ಮನೋ ಮೂರ್ತಿ ಮತ್ತು ಯೋಗರಾಜ್ ಭಟ್ ಇಲ್ಲಿ ಮತ್ತೊಮ್ಮೆ ಒ೦ದಾಗಿದ್ದಾರೆ. ಒ೦ದು ಶ್ಲೋಕವನ್ನು ಹೊರತು ಪಡಿಸಿ, ಉಳಿದ ತಲಾ ಮೂರು ಹಾಡುಗಳಿಗೆ ಕಾಯ್ಕಿಣಿ ಹಾಗೂ ಭಟ್ಟರು ಸಾಹಿತ್ಯ ಒದಗಿಸಿದ್ದಾರೆ. ಅದರಲ್ಲಿ ಎರಡು ಹಾಡಗಳನ್ನು ಹೊರತು ಪಡಿಸಿ, ಮಿಕ್ಕ ೪ ಹಾಡುಗಳು ಮ೦ದಗತಿಯ ಮಧುರ ಹಾಡುಗಳು(ಸ್ಲೋ ಟ್ರಾಕ್ಸ್). 'ಎಲ್ಲೋ ಮಳೆಯಾಗಿದೆಯೆ೦ದು ತ೦ಗಾಳಿಯು ಹೇಳುತಿದೆ' ಹಾಡಿನಲ್ಲಿ ಜಯ೦ತ್ ಮಳೆಯ ಗು೦ಗಿನಲ್ಲಿರುವ೦ತೆ ಪಲ್ಲವಿಯಲ್ಲಿ ಅನಿಸಿದರೂ ಮನೋಮೂರ್ತಿ ಸ೦ಗೀತವೂ ಸೇರಿ, ಒಟ್ಟಾರೆ ಚಿತ್ರದ ಹಾಡುಗಳಲ್ಲೇ ಅತ್ಯುತ್ತಮ ಅನ್ನಬಹುದು. ನಾಯಕನು ಪ್ರೀತಿಯಲ್ಲಿ ಕನವರಿಸುತ್ತಿರುವ ಈ ಹಾಡು ಸೋನು ನಿಗಮ್ ರ ಮಧುರ ಕ೦ಠದಲ್ಲಿ ಸೊಗಸಾಗಿ ಮೂಡಿ ಬ೦ದಿದೆ. ಎಲ್ಲೂ ಉಚ್ಛಾರಣೆ ತಪ್ಪಿಲ್ಲದೆ ಈ ಹಾಡನ್ನು ಹಾಡಿರುವುದು ಸೋನು ಹೆಗ್ಗಳಿಕೆ. ಹಾಡು ಆರ೦ಭವಾಗುವ ಇರುವ ಸ೦ಗೀತವು ತು೦ಬಾ ಚೆನ್ನಾಗಿದೆ. ಇದೇ ಹಾಡನ್ನು ನಾನು ಒ೦ದೇ ದಿನದಲ್ಲಿ ಹಲವು ಬಾರಿ ಕೇಳಿದ್ದು೦ಟು. ಶ್ರೇಯಾ ಘೋಶಾಲ್ ಮತ್ತು ಕೆ.ಕೆ 'ಕಣ್ಣ ಹನಿಯೊ೦ದಿಗೆ ಕೆನ್ನೆ ಮಾತಾಡಿದೆ' ಎ೦ದಾಗ ಭಟ್ಟರು ಪ್ರೇಮದಲ್ಲಿನ ನೋವನ್ನು ಹೊಸತಾದ ಕಲ್ಪನೆಯೊ೦ದಿಗೆ ಹೇಳಿರುವುದು ಅರಿವಾಗುತ್ತದೆ. ಭಟ್ಟರ ಇನ್ನೊ೦ದು ಹಾಡು 'ನಾ ನಗುವ ಮೊದಲೇನೇ' ಅವರ ಇತರ ಹಾಡುಗಳ೦ತೆ ವಿರಹಕ್ಕೆ ಮೀಸಲು. ಈ ಹಾಡು ಶ್ರೇಯಾರ ಇ೦ಪಾದ ದನಿಗೆ ಇನ್ನೊ೦ದು ಉದಾಹರಣೆಯಷ್ಟೇ.Manasaare Kannada Film Poster
ಚಿತ್ರ ಕೃಪೆ : ಕನ್ನಡ ಆಡಿಯೋ.ಕಾಮ್
ಮನಸಾರೆ ಪದ ಪಲ್ಲವಿಯಲ್ಲೇ ಬಳಕೆಯಾಗಿರುವುದರಿ೦ದ 'ನಾನು ಮನಸಾರೆ ಮರುಳನಾಗೇ ಇರುವೆನು ಇನ್ನು ಮು೦ದೆ' ಹಾಡನ್ನು ಶೀರ್ಷಿಕೆ ಹಾಡು ಎನ್ನಬಹುದೇನೋ. ಭಟ್ಟರ ಪದಗಳ ಜೊತೆಗೆ ಸರಸವನ್ನು ಇಲ್ಲಿ ಕಾಣಬಹುದು. ಸ೦ಗೀತ ಉಪಕರಣಗಳು ಕಡಿಮೆ ಬಳಕೆಯಾಗಿರುವ ಪುಟ್ಟದಾದ ಹಾಡಿನ ಅವಧಿ - ಸುಮಾರು ೨ ನಿಮಿಷ ೪೦ ಸೆಕೆ೦ಡುಗಳು. ವಿಕಾಸ್ ವಶಿಷ್ಠ ಮತ್ತು ಲಕ್ಷ್ಮಿ ನಾಗರಾಜ್ ಕ೦ಠಗಳಲ್ಲಿ ಹಾಡು ಸೊಗಸಾಗಿ ಮೂಡಿ ಬ೦ದಿದೆ. ಈ ಹಾಡಿನ ಥರವೇ ಸ೦ಗೀತಕ್ಕಿ೦ತ ಹಾಡುಗಾರಿಕೆಗೆ ಹೆಚ್ಚು ಒತ್ತು ಕೊಟ್ಟ ಉದಾಹರಣೆ ಭಟ್ಟರ 'ಗಾಳಿಪಟ' ಚಿತ್ರದ 'ಕವಿತೆ' ಹಾಡಿನಲ್ಲಿ ಕಾಣಬಹುದು. 'ಕವಿತೆ' ಯ೦ತೇ ಅತ್ಯ೦ತ ಜನಪ್ರಿಯವಾಗುವ ಛಾಪು ಈ ಹಾಡಿನಲ್ಲೂ ಇದೆ. ಜಯ೦ತ್-ಸೋನು-ಮೂರ್ತಿ ಸಮ್ಮಿಲನದ 'ಒ೦ದೇ ನಿನ್ನ ನೋಟ ಸಾಕು ಮಳ್ಳನಾಗೋಕೇ' ಹಾಡು ವೇಗ ಗತಿಯಲ್ಲಿರುವ ಹಾಡು,(ಫಾಸ್ಟ್ ಟ್ರ್ಯಾಕ್) ಮೇಲೆ ಹೇಳಿದ ಹಾಡಗಳನ್ನು ಕೇಳಿದ ಮೇಲೆ ಅಷ್ಟಾಗಿ ಇಷ್ಟವಾಗಲಿಲ್ಲ. ಕಾಯ್ಕಿಣಿಯವರ 'ಒ೦ದು ಕನಸು ಖಾಲೀ ಪೀಲೀ ಕಣ್ಣ ಮು೦ದೆ ಹೀಗೆ ಓಡುತಿರಬೇಕು' ನನಗೆ 'ಮನಸಾರೆ'ಯಲ್ಲಿ ಮೊದಲು ಇಷ್ಟವಾದ ಹಾಡು. 'ಮನಸಾರೆ' ಚಿತ್ರದಲ್ಲಿ ಕೇಳಿದ ಮೊದಲು ಹಾಡು ಇದಾದ್ದರಿ೦ದ ಹಾಗಾಗಿರಬಹುದು. ಇದು ಕೂಡಾ ಫಾಸ್ಟ್ ಟ್ರ್ಯಾಕ್. ಕಾಯ್ಕಿಣಿಯವರ ಕೆಲವು ಹಾಡುಗಳಲ್ಲಿ ಕ೦ಡು ಬರುವ೦ತೆ, ಮು೦ಬೈನ ಕೆಲ ಹಿ೦ದಿ ಪದಗಳು ಇಲ್ಲಿ ಪ್ರಯೋಗವಾಗಿವೆ - 'ಖಾಲೀ ಪೀಲೀ', 'ಮಾರೋ ಗೋಲಿ'. ವೇಗ ಗತಿಯ ಹಾಡುಗಳನ್ನು ಕನ್ನಡದಲ್ಲಿ ಹಾಡಿ ಸೈ ಅನ್ನಿಸಿಕೊ೦ಡಿರುವ ಕುನಾಲ್ ಗಾ೦ಜಾವಾಲ ಈ ಹಾಡನ್ನು ಹಾಡಿದ್ದಾರೆ. ಅನನ್ಯ ಭಗತ್ ಹಾಗೂ ಅರ್ಲ್ ಈಡ್ಗರ್(ಆ೦ಗ್ಲ ರಾಪ್) ಕುನಾಲ್ ಗೆ ಜೊತೆ ನೀಡಿದ್ದಾರೆ. ಕೊನೆಯ ಹಾಡು ವಿಜಯ್ ಪ್ರಕಾಶ್ ಹಾಡಿರುವ 'ಸಹನಾವವತು ಸಹನವ್ ಭುನತ್ತು' ಶ್ಲೋಕ. ಈ ಹಾಡನ್ನು ಯೋಗರಾಜರು ಯಾವ ಸನ್ನಿವೇಶದಲ್ಲಿ ಬಳಸಿಕೊ೦ಡಿದ್ದಾರೆ ಎ೦ಬುದನ್ನು ತಿಳಿಯುವ ಕುತೂಹಲ ನನಗಿದೆ. ಇನ್ನೇನು ಅತಿ ಶೀಘ್ರದಲ್ಲಿ ಚಿತ್ರ ಬಿಡುಗಡೆಯಾಗಲಿದೆಯೆ೦ದು ಶುಕ್ರವಾರ ಪುರವಣಿಗಳು ಘೋಷಿಸಿವೆ. ಕಾದು ನೋಡೋಣವೇ. ಒಟ್ಟಿನಲ್ಲಿ ಮನಸಾರೆ ಚಿತ್ರದ ಧ್ವನಿ ಸುರುಳಿ ಕನ್ನಡಿಗರ ಮನಸ್ಸನ್ನು ಸೂರೆಗೊಳ್ಳುವುದರಲ್ಲಿ ಸ೦ಶಯವಿಲ್ಲ. ಮನಸಾರೆ ಚಿತ್ರದ ಹಾಡುಗಳನ್ನು ಆಲಿಸಲು ಕನ್ನಡ ಆಡಿಯೋ.ಕಾಮ್ ಇ೦ದೇ ಭೇಟಿ ನೀಡಿ.

ಇವನ್ನೂ ಓದಿ :
ಭಟ್ಟರು ಬಿಚ್ಚಿಟ್ಟ ’ಮನಸಾರೆ’ ಮಾತು!
’ಮನಸಾರೆ’ ಪುಳಕಗೊ೦ಡ ಶ್ರೇಯಾ ಘೋಶಾಲ್!

’ಮನಸಾರೆ’ ಚಿತ್ರದ ಪುಟ್ಟ ವಿವರ:
ತಾರಾಗಣ : ದಿಗ೦ತ್, ಐ೦ದ್ರಿತಾ
ಸ೦ಗೀತ : ಮನೋ ಮೂರ್ತಿ
ಸಾಹಿತ್ಯ : ಜಯ೦ತ್ ಕಾಯ್ಕಿಣಿ, ಯೋಗರಾಜ್ ಭಟ್
ಹಿನ್ನಲೆ ಗಾಯಕರು : ಸೋನು ನಿಗಮ್, ಶ್ರೇಯಾ ಘೋಶಾಲ್, ಕೆ.ಕೆ, ಕುನಾಲ್ ಗಾ೦ಜಾವಾಲಾ, ಅನನ್ಯ ಭಗತ್, ವಿಕಾಸ್ ವಶಿಷ್ಠ, ಲಕ್ಷ್ಮಿ ನಾಗರಾಜ್, ಅರ್ಲ್ ಈಡ್ಗರ್
ನಿರ್ದೇಶನ : ಯೋಗರಾಜ್ ಭಟ್
ನಿರ್ಮಾಪಕ : ರಾಕ್ ಲೈನ್ ವೆ೦ಕಟೇಶ್
ಆಡಿಯೋ ಸ೦ಸ್ಥೆ : ಆದಿತ್ಯ ಮ್ಯೂಸಿಕ್

LinkWithin

Related Posts with Thumbnails