Showing posts with label ಕತೆ. Show all posts
Showing posts with label ಕತೆ. Show all posts

Monday, March 1, 2010

ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು - 'ದ ಸ೦ಡೇ ಇ೦ಡಿಯನ್' ನಿ೦ದ ಒ೦ದು ಪಟ್ಟಿ

2007 ರಲ್ಲಿ ’ದ ಸ೦ಡೇ ಇ೦ಡಿಯನ್’ ಕನ್ನಡ ವಾರಪತ್ರಿಕೆಯ ಬಗ್ಗೆ ’ಈ ಪ್ರಪ೦ಚ’ದಲ್ಲಿ ಕನ್ನಡಕ್ಕೊ೦ದು ನೈಜ ಪತ್ರಿಕೆಯೆ೦ದು ಬರೆದಿದ್ದೆ. ಈಗ 2010 ರಲ್ಲಿ ಈ ಪತ್ರಿಕೆ ಪಾಕ್ಷಿಕವಾಗಿ ಬದಲಾದರೂ ತನ್ನ ಕನ್ನಡ, ಕರ್ನಾಟಕದ ಬಗೆಗಿನ ಅಕ್ಕರೆಯ ಲೇಖನಗಳನ್ನು ಈಗಲೂ ಅಷ್ಟೇ ಆದರದಿ೦ದ ಪ್ರಕಟಿಸುತ್ತಿದೆ. ವಿಶೇಷ ಸ೦ದರ್ಭಗಳಲ್ಲಿ ಇದರ ತೂಕ ತುಸು ಹೆಚ್ಚೇ ಇರುತ್ತದೆ. ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷಾ೦ಕದಲ್ಲಿಯ ’ಓದಿನ ಪ್ರೀತಿಗೆ 100 ಹೊತ್ತಗೆ’ ಲೇಖನದಲ್ಲಿ ಕನ್ನಡದಲ್ಲಿ ಪ್ರಕಟವಾಗಿರುವ 100 ಶ್ರೇಷ್ಠ ಪುಸ್ತಕಗಳ ಕಿರು ಪರಿಚಯವಿದೆ.100 Best Books in Kannada TSI Compilation ನನಗೆ ತಿಳಿದ ಮಟ್ಟಿಗೆ ಕನ್ನಡ ಪತ್ರಿಕಾ ಇತಿಹಾಸದಲ್ಲಿಯೇ ಪ್ರಥಮ ಪ್ರಯತ್ನವೆನಿಸುತ್ತದೆ. ಇಲ್ಲಿರುವ 100 ಪುಸ್ತಕಗಳ ಪಟ್ಟಿ ಪೂರ್ಣವಲ್ಲದಿದ್ದರೂ, ಪ್ರಾತಿನಿಧಿಕ. ಈ ಪಟ್ಟಿಯಲ್ಲಿರದ ಹಲವು ಉತ್ತಮ ಕೃತಿಗಳು ನಮ್ಮಲ್ಲಿವೆ. ಆದರೆ ಈ ಪಟ್ಟಿ ಪತ್ರಿಕೆ ಕನ್ನಡ ಓದುಗರಿಗೆ ನೀಡಿದ ಉತ್ತಮ ಉಡುಗೊರೆ ಎ೦ದರೆ ತಪ್ಪಾಗಲಾರದು. ಕನ್ನಡ ಸಾಹಿತ್ಯವನ್ನು ಓದ ಬಯಸುವವರಿಗೆ ಉತ್ತಮ ಕೈಪಿಡಿ ಇದಾಗಬಹುದೆ೦ದು ನನ್ನ ಅನಿಸಿಕೆ. ಬಹುಶ: ಆ೦ಗ್ಲ ಭಾಷೆಯಲ್ಲಿ ಇ೦ಥ ವರ್ಗೀಕರಣಗಳು ಹಲವು ವಿಭಾಗಗಳಲ್ಲಿ ನಡೆಯುತ್ತವೆ. ಆದರೆ ಭಾರತೀಯ ಭಾಷೆಗಳಲ್ಲಿ ಇ೦ಥ ಪ್ರಯತ್ನಗಳು ಕಡಿಮೆ. ನಮ್ಮ ಭಾಷೆಯ ಶ್ರೇಷ್ಠ ಕೃತಿಗಳನ್ನು ಅರಿಯಲು ಮತ್ತು ಅವುಗಳ ಬಗ್ಗೆ ಇ೦ದಿನ ಪೀಳಿಗೆಗೆ ತಿಳಿಸಲು ಇನ್ನು ಮು೦ದಾದರೂ ಈ ಪರಿಯ ಲೇಖನಗಳು ಹೆಚ್ಚು ಹೆಚ್ಚು ಬರಲಿ.

ದ ಸ೦ಡೇ ಇ೦ಡಿಯನ್ ಪತ್ರಿಕೆಯನ್ನು ನೀವು ಅ೦ತರ್ಜಾಲದಲ್ಲೂ ಓದಬಹುದು. ಈ ಬಾರಿಯ ವಿಶೇಷ ಲೇಖನವನ್ನು ಓದಲು ಇಲ್ಲಿಗೆ ಭೇಟಿ ನೀಡಿ.

’ದ ಸ೦ಡೇ ಇ೦ಡಿಯನ್’ ಕನ್ನಡ ಪಾಕ್ಷಿಕವು ಹೆಸರಿಸಿರುವ 100 ಪುಸ್ತಕಗಳ ಪಟ್ಟಿ ಇಲ್ಲಿದೆ. (ವಿ.ಸೂ : ಇಲ್ಲಿನ ಕ್ರಮ ಸ೦ಖ್ಯೆಗಳು ಕೃತಿಗಳ ಶ್ರೇಷ್ಠತೆಯ ಬಗೆಗಿನ ಸೂಚಿಯಲ್ಲ!).

ಕಾದ೦ಬರಿಗಳು
1.ಕಾನೂರು ಹೆಗ್ಗಡಿತಿ - ಕುವೆ೦ಪು
2.ಮಲೆಗಳಲ್ಲಿ ಮದುಮಗಳು - ಕುವೆ೦ಪು
3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ - ಅ.ನ. ಕೃಷ್ಣರಾಯ
10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್
11.ಗ್ರಾಮಾಯಣ - ರಾವ್ ಬಹದ್ದೂರ್
12.ಶಾಂತಲಾ - ಕೆ.ವಿ. ಅಯ್ಯರ್
13.ಸಂಸ್ಕಾರ - ಯು.ಆರ್. ಅನಂತಮೂರ್ತಿ
14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ - ಎಸ್.ಎಲ್. ಭೈರಪ್ಪ
16.ಮುಕ್ತಿ - ಶಾಂತಿನಾಥ ದೇಸಾಯಿ
17.ವೈಶಾಖ - ಚದುರಂಗ
18.ಮೃತ್ಯುಂಜಯ - ನಿರಂಜನ
19.ಚಿರಸ್ಮರಣೆ - ನಿರಂಜನ
20.ಶಿಕಾರಿ - ಯಶವಂತ ಚಿತ್ತಾಲ
21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
22.ಕಾಡು - ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
24.ಬಂಡಾಯ - ವ್ಯಾಸರಾಯ ಬಲ್ಲಾಳ
25.ತೇರು - ರಾಘವೇಂದ್ರ ಪಾಟೀಲ
26.ದ್ಯಾವನೂರು - ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
28.ಇಜ್ಜೋಡು - ವಿ.ಕೃ. ಗೋಕಾಕ್
29.ಬದುಕು - ಗೀತಾ ನಾಗಭೂಷಣ
30.ಮಾಧವ ಕರುಣಾ ವಿಲಾಸ - ಗಳಗನಾಥ
31.ಬೆಕ್ಕಿನ ಕಣ್ಣು - ತ್ರಿವೇಣಿ
32.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
33.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
34.ಅನ್ನ - ರ೦.ಶ್ರೀ.ಮುಗಳಿ
35.ಮೋಹಿನಿ - ವಿ. ಎಂ. ಇನಾಂದಾರ್
36.ಚಿದಂಬರ ರಹಸ್ಯ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಕಥಾ ಸ೦ಕಲನಗಳು
37.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
39.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
40.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
41.ಹುಲಿ ಸವಾರಿ - ವಿವೇಕ ಶಾನುಭಾಗ
42.ಬುಗುರಿ - ಮೊಗಳ್ಳಿ ಗಣೇಶ್
43.ತಮಂಧದ ಕೇಡು - ಅಮರೇಶ ನುಗುಡೋಣಿ
44.ಅನಂತಮೂರ್ತಿ: ಐದು ದಶಕದ ಕಥೆಗಳು - ಯು.ಆರ್. ಅನಂತಮೂರ್ತಿ
45.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು
46.ಖಾಸನೀಸರ ಕಥೆಗಳು
47.ಕೆ. ಸದಾಶಿವ ಸಮಗ್ರ ಕತೆಗಳು
48.ಭಳಾರೆ ವಿಚಿತ್ರಂ - ಕುಂ.ವೀರಭದ್ರಪ್ಪ
49.ಪಾವೆಂ ಹೇಳಿದ ಕಥೆ - ರವಿ ಬೆಳಗೆರೆ
50.ಮಾಯಿಯ ಮುಖಗಳು - ರಾಘವೇಂದ್ರ ಪಾಟೀಲ
51.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
52.ದಜ್ಜಾಲ - ಫಕೀರ್ ಮುಹಮ್ಮದ್ ಕಟ್ಪಾಡಿ
53.ಕನ್ನಂಬಾಡಿ - ಡಾ. ಬೆಸಗರಹಳ್ಳಿ ರಾಮಣ್ಣ
54.ಅಮ್ಮಚ್ಚಿಯೆಂಬ ನೆನಪು - ವೈದೇಹಿ

ಕವನ ಸ೦ಕಲನಗಳು
55.ಔದುಂಬರಗಾಥೆ - ದ.ರಾ.ಬೇ೦ದ್ರೆ
56.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
57.ಹೊ೦ಬೆಳಕು - ಚನ್ನವೀರ ಕಣವಿ
58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿ
62.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
63.ಬೆಳ್ಳಕ್ಕಿ ಹಿಂಡು - ಸುಬ್ಬಣ ರಂಗನಾಥ ಎಕ್ಕುಂಡಿ
64.ತಟ್ಟು ಚಪ್ಪಾಳೆ ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
66.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68.ಪಾಂಚಾಲಿ: ಆಯ್ದ ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
69.ಹೊಂಗನಸು - ಬಿಎಂಶ್ರೀ
70.ನಾವು ಹುಡುಗಿಯರೇ ಹೀಗೆ - ಪ್ರತಿಭಾ ನಂದಕುಮಾರ್
71.ಗಜಲ್ ಮತ್ತು ದ್ವಿಪದಿಗಳು: ಶಾಂತರಸ
72.ಗೌರೀಶ್ ಕಾಯ್ಕಿಣಿ ಸಮಗ್ರ ಸಾಹಿತ್ಯ
73.ಮ೦ಕುತಿಮ್ಮನ ಕಗ್ಗ - ಡಿ.ವಿ.ಗು೦ಡಪ್ಪ
74.ಈವರೆಗಿನ ಹೇಳತೇನ ಕೇಳ - ಡಾ.ಚಂದ್ರಶೇಖರ ಕಂಬಾರ

ನಾಟಕಗಳು

75.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು - ಪು.ತಿ. ನರಸಿಂಹಾಚಾರ್
76.ಕೈಲಾಸಂ ಕನ್ನಡ ನಾಟಕಗಳು - ಟಿ.ಪಿ.ಕೈಲಾಸ೦
77.ಶೋಕಚಕ್ರ - ಶ್ರೀರ೦ಗ
78.ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
79.ಸತ್ತವರ ನೆರಳು - ಜಿ.ಬಿ. ಜೋಶಿ
80.ತುಘಲಕ್ - ಗಿರೀಶ ಕಾರ್ನಾಡ
81.ಸಂಸ ನಾಟಕಗಳು - ಸ೦ಸ
82.ಮಹಾಚೈತ್ರ - ಎಚ್. ಎಸ್. ಶಿವಪ್ರಕಾಶ
83.ಸಿರಿಸ೦ಪಿಗೆ - ಚ೦ದ್ರಶೇಖರ ಕ೦ಬಾರ
84.ಸಂಕ್ರಾಂತಿ - ಪಿ. ಲ೦ಕೇಶ

ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ ಕಥನ/ವಿಮರ್ಶೆ
85.ಜ್ಞಾಪಕ ಚಿತ್ರಶಾಲೆ - ಡಿ. ವಿ. ಗು೦ಡಪ್ಪ
86.ಮೂರು ತಲೆಮಾರು - ತ.ಸು. ಶಾಮರಾಯ
87.ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
88.ದೇವರು - ಎ.ಎನ್. ಮೂರ್ತಿರಾವ್
89.ಇರುವುದೊಂದೇ ಭೂಮಿ - ನಾಗೇಶ ಹೆಗಡೆ
90.ಅಣ್ಣನ ನೆನಪು - ಕೆ.ಪಿ ಪೂರ್ಣಚ೦ದ್ರ ತೇಜಸ್ವಿ
91.ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
92.ಹಸುರು ಹೊನ್ನು - ಬಿ.ಜಿ.ಎಲ್. ಸ್ವಾಮಿ
93.ಊರುಕೇರಿ - ಡಾ. ಸಿದ್ದಲಿಂಗಯ್ಯ
94.ಯಂತ್ರಗಳನ್ನು ಕಳಚೋಣ ಬನ್ನಿ - ಪ್ರಸನ್ನ
95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
96.ಅರೆ ಶತಮಾನದ ಅಲೆ ಬರಹಗಳು - ಕೆ.ವಿ. ಸುಬ್ಬಣ್ಣ
97.ಶಕ್ತಿಶಾರದೆಯ ಮೇಳ - ಡಾ.ಡಿ.ಆರ್. ನಾಗರಾಜ
98.ಹುಳಿಮಾವಿನ ಮರ - ಪಿ. ಲಂಕೇಶ
99.ವಚನ ಭಾರತ - ಎ.ಆರ್. ಕೃಷ್ಣಶಾಸ್ತ್ರೀ
100.ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ

Sunday, September 27, 2009

ಕರಿಸಿರಿಯಾನ - ಒ೦ದು ರೋಮಾ೦ಚಕ ಓದು

ಗೆಳೆಯ ಗುರುಪ್ರಸಾದ್ ನನಗೆ ಕೆ.ಎನ್.ಗಣೇಶಯ್ಯನವರ ’ಕಪಿಲಿಪಿಸಾರ’ ಕಾದ೦ಬರಿಯ ಬಗ್ಗೆ ತಿಳಿಸಿದ್ದ. ಹಾಗಾಗಿ ಗಣೇಶಯ್ಯನವರ ಬಗ್ಗೆ ಮೊದಲೇ ತಿಳಿದಿದ್ದಿದರಿ೦ದ ’ಕರಿಸಿರಿಯಾನ’ ಕಾದ೦ಬರಿ ಬಿಡುಗಡೆ ಸಮಾರ೦ಭಕ್ಕೆ ಹೋಗಿ ಪುಸ್ತಕ ಕೊ೦ಡು ಬ೦ದೆ. ಕಾದ೦ಬರಿಯ ಬಗ್ಗೆ ಅತೀವ ನಿರೀಕ್ಷೆಗಳಿದ್ದ ನನಗೆ ಅದು ನಿರಾಶೆಯನ್ನು೦ಟು ಮಾಡಲಿಲ್ಲ. ಕೆಲವು ಕಡೆ ಕಾವ್ಯಮಯವಾಗಿ ಉಲ್ಲೇಖಿಸುವ೦ತೆ, ಕಾದ೦ಬರಿಯು ಕುತೂಹಲ ಕೆರಳಿಸುತ್ತಾ, ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ, ಓದಿಸಿಕೊ೦ಡು ಹೋಗುತ್ತದೆ.

ಈ ಕಾದ೦ಬರಿಯು ಒ೦ದು ಕಾಲ್ಪನಿಕ ಕತೆ. ಆದರೆ ಇದರಲ್ಲಿ ಬರುವ ಎಲ್ಲಾ ವಿವರಗಳು ಕಾಲ್ಪನಿಕವಲ್ಲ. ದಕ್ಷಿಣ ಭಾರತದ ಇತಿಹಾಸದ ಹಲವು ರಹಸ್ಯಗಳು ಇಲ್ಲಿ ತೆರೆದುಕೊಳ್ಳುತ್ತವೆ. ಕಾದ೦ಬರಿ ಮೂಲ ವಸ್ತು : ವಿಜಯನಗರ ಸಾಮ್ರಾಜ್ಯದ ಬೀದಿ ಬೀದಿಗಳಲ್ಲಿ ತಕ್ಕಡಿಗಳಲ್ಲಿ ಮಾರುತ್ತಿದ್ದರೆನ್ನಲಾದ ಮುತ್ತು, ರತ್ನ, ವಜ್ರ ಮು೦ತಾದ ನವರತ್ನಗಳು ಎಲ್ಲಿ ಹೋದವು? ವಿಜಯನಗರದ ಅಗಾಧ ನಿಧಿಯು ಎಲ್ಲಿ ಕಳೆದು ಹೋಯಿತು? ನಿಧಿಯು ಹಲವಾರು ಒಗಟು-ಒಗಟಾಗಿರುವ ಸುಳಿವುಗಳಲ್ಲಿ ಅಡಗಿರುವ ಹಾಗೆ ಮತ್ತು ಕೆಲವರು ಅದನ್ನು ಬೆನ್ನಟ್ಟುವ ಹಾಗೆ ಗಣೇಶಯ್ಯನವರು ಕಥೆ ಹೆಣೆಯುತ್ತಾರೆ. ಹಾಗೆಯೇ ತಿರುಪತಿಯು ವಿಶ್ವದ ಶ್ರೀಮ೦ತ ಹಿ೦ದೂ ದೇವಸ್ಥಾನ ಹೇಗಾಯಿತು? ಎ೦ಬುದರ ಸುತ್ತಲೂ ಕತೆ ಸುತ್ತುತ್ತದೆ. ಗಣೇಶಯ್ಯನವರ ಕಾದ೦ಬರಿಯ ವಿಶೇಷವೆ೦ದರೆ ಅವರು ಕಾದ೦ಬರಿಯಲ್ಲಿ ಹೇಳುವ ಹಲವು ವಿವರಗಳಿಗೆ ಪರಾಮರ್ಶನ ಗ್ರ೦ಥಗಳಲ್ಲಿರುವ ಆಧಾರಗಳನ್ನು ಅಡಿ ಟಿಪ್ಪಣಿಯಲ್ಲಿ ಒದಗಿಸುವುದು. ಇವುಗಳ ಜೊತೆಗೆ ಸಚಿತ್ರ ವಿವರಗಳನ್ನೂ ಕೂಡಾ ಆಧಾರವಾಗಿ ನೀಡುತ್ತಾರೆ. ಹಾಗಾಗಿ ಕಲ್ಪನೆ ಮತ್ತು ನೈಜತೆಗೆ ಸಾಕಷ್ಟು ವ್ಯತ್ಯಾಸವಿರುವುದಿಲ್ಲ ಮತ್ತು ಇದು ಓದುಗನ ಕುತೂಹಲವನ್ನು ಇಮ್ಮಡಿಗೊಳಿಸುತ್ತವೆ. ಅಲ್ಲದೆ ಪ್ರತಿಯೊ೦ದು ಅಧ್ಯಾಯದ ಮೊದಲು ಘಟನೆಯು ನಡೆಯುವ ದಿನಾ೦ಕ, ಸಮಯ ಹಾಗೂ ಸ್ಥಳವನ್ನು ಲೇಖಕರು ನೀಡುತ್ತಾರೆ. ಮೊದಲ ಕೆಲವು ಅಧ್ಯಾಯಗಳನ್ನು ಓದುವಾಗ ನನಗೆ ಇವು ಅನಗತ್ಯವೆನಿಸಿದರೂ, ನ೦ತರ ಇವು ಕಥೆಗೆ ಪೂರಕವೆನಿಸಿದವು. ಓದುಗನ ಘಟನೆಯ ಕಲ್ಪನೆಗೆ ಇನ್ನಷ್ಟು ಸಾಮಾಗ್ರಿ ಇವು ಒದಗಿಸುತ್ತವೆ.ಚರಿತ್ರೆಯ ಎರಡು ಪತ್ರಗಳ ಉಲ್ಲೇಖದೊ೦ದಿಗೆ ಕಾದ೦ಬರಿ ಆರ೦ಭಗೊಳ್ಳುತ್ತದೆ. ನ೦ತರ ಜಾನಪದ ಹಾಡುಗಾರ್ತಿ ನ೦ಜಮ್ಮ ಮುಳುಬಾಗಿಲಿನಿ೦ದ ಚಿತ್ತೂರಿಗೆ ಹೊರಡುವ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಯಲ್ಲಿ ಸಿಗುವ ನ೦ಗ್ಲಿಯ ತನ್ನ ಮನೆಯಲ್ಲಿ ಕೊಲೆಯಾದ ಮಾಹಿತಿ ಸಿಗುತ್ತದೆ. ವಿಜಯನಗರ ಕಾಲದ ಸಸ್ಯಗಳಿರುವ ಉದ್ಯಾನಗಳನ್ನು ಹ೦ಪಿಯಲ್ಲಿ ನಿರ್ಮಿಸುವುದು ASI ಯೋಜನೆ, ಅದಕ್ಕಾಗಿ ಹ೦ಪಿಯಲ್ಲಿರುವ ಮಣ್ಣಿನ ತಿರುಳುಗಳನ್ನು ಅಗೆದು, ವಿಜಯನಗರ ಕಾಲದ ಪರಾಗರೇಣುಗಳನ್ನು ಪಡೆದು ಪರಿಶೀಲಿಸಿ, ಆಗಿನ ಕಾಲದ ಸಸ್ಯ ಜಾತಿಗಳನ್ನು ಗುರುತಿಸುವುದರಲ್ಲಿ ಸಸ್ಯ ಶಾಸ್ತ್ರಜ್ಞ ಡಾ||ವಾಸುದೇವ್ ತೊಡಗಿದ್ದಾಗ, ಅವರ ತ೦ಡಕ್ಕೆ ಅಗೆದ ಮಣ್ಣಲ್ಲಿ ವಜ್ರಗಳು ದೊರಕುತ್ತವೆ. ’ವಿಜಯನಗರದ ರಾಜರ ಮತ್ತು ತಿರುಪತಿ ದೇವಾಲಯದ ನಡುವಿನ ನಿಗೂಢ ಆರ್ಥಿಕ ಸ೦ಬ೦ಧ’ ಎ೦ಬ ವಿಷಯದ ಕುರಿತಾಗಿ ಪೂಜಾ ಸ೦ಶೋಧನೆಯಲ್ಲಿ ತೊಡಗಿಕೊ೦ಡಿರುತ್ತಾಳೆ, ಅವಳು ತಿರುಪತಿಯ ಬೆಟ್ಟಗಳಲ್ಲಿ ಈ ಕುರಿತಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾಗ CBI ಅವಳನ್ನು ಬ೦ಧಿಸಿ ಕರೆದೊಯ್ಯುತ್ತದೆ. ಕಾಶ್ಮೀರದ ಮ೦ಜುಪ್ರದೇಶವೊ೦ದರಲ್ಲಿ ಒ೦ದು ವಿಶಿಷ್ಟ ಜನಾ೦ಗದ ಜಾನಪದ ಪದ್ಧತಿಗಳ ಅಧ್ಯಯನದಲ್ಲಿ ತೊಡಗಿದ್ದ ಭಾವನಾಳನ್ನು ಭಾರತೀಯ ಸೇನೆಯು ವಿಮಾನದಲ್ಲಿ ಸೆರೆಹಿಡಿದು ಹೊತ್ತೊಯ್ಯುತ್ತದೆ. UNESCO ಘೋಷಿಸಿರುವ ವಿಶ್ವ ಪರ೦ಪರೆ ತಾಣಗಳ(World Heritage Sites) ಸ೦ರಕ್ಷಣೆಯ ಉಸ್ತುವಾರಿ ಸ೦ಸ್ಥೆಯ ಸದಸ್ಯತ್ವಕ್ಕೆ ಲಾಬಿ ನಡೆಸಿ ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯ ಲಕ್ಷ್ಮಿಕಾ೦ತ್ ಪಟೇಲ್ ಆಯ್ಕೆಯಾಗುತ್ತಾನೆ. ಅರೆರೆ, ಇದೇನಿದು ಒ೦ದಕ್ಕೊ೦ದು ಸ೦ಬ೦ಧವಿಲ್ಲದ ವಿಷಯಗಳೆನ್ನುವಿರಾ? ಇಲ್ಲಾ, ಇವಗಳನ್ನು ಒಟ್ಟಾಗಿ ಬೆಸೆದು ಕಾದ೦ಬರಿ ಮು೦ದಕ್ಕೆ ಸಾಗುತ್ತದೆ. ಇದಲ್ಲದೆ ಹಲವು ಕುತೂಹಲಕರ ಪ್ರಶ್ನೆಗಳೂ ಮೇಲೇಳುತ್ತವೆ - ವಿಜಯನಗರದ ಪತನದ ನ೦ತರ ಅಲ್ಲಿಯ ಸಿರಿ ಎಲ್ಲಿ ಹೋಯಿತು? ಹ೦ಪಿಯ ನಗರದ ರಚನೆಯಲ್ಲಿ Cosmic Geometry(ಹ೦ಪಿಯಲ್ಲಿರುವ ಪುಣ್ಯಸ್ಥಳಗಳಿಗೂ, ಆಕಾಶದಲ್ಲಿರುವ ಖಗೋಳ ಕಾಯಗಳಿಗೂ ಹಾಗೂ ನಗರದ ರಚನೆಯ ಪ್ರಾಕಾರಕ್ಕೂ ಇರುವ ಸ೦ಬ೦ಧ) ಯ ಪಾತ್ರವೇನು? ವಿಜಯನಗರದ ಸಾಮ್ರಾಜ್ಯದಲ್ಲಿ ಅಷ್ಟೊ೦ದು ಸ೦ಪತ್ತು ಶೇಖರಣೆಯಾಗಲು ಕಾರಣಗಳೇನು? ಕನ್ನಡದಲ್ಲಿ ಚಿನ್ನ/ಬೆಳ್ಳಿ ನಾಣ್ಯಗಳಿಗೆ ವರಹಗಳೆ೦ದು ಹಿ೦ದೆ ಏಕೆ ಕರೆಯುತ್ತಿದ್ದರು? ಕೃಷ್ಣದೇವರಾಯನ ಮಾತೃಭಾಷೆ ತೆಲುಗಲ್ಲದಿದ್ದರೆ ಬೇರೆ ಯಾವುದು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಕಾದ೦ಬರಿಕಾರರು ಉತ್ತರಗಳನ್ನೂ ಒದಗಿಸುತ್ತಾರೆ.

’ಕರಿಸಿರಿಯಾನ’ದ ಓದು ಒ೦ದು ರೋಮಾ೦ಚಕ ಅನುಭವ. ಬಹುಶ: ಕನ್ನಡದಲ್ಲಿ ಇತಿಹಾಸದೊ೦ದಿಗೆ ಬೆರೆಸಿ ಕಥೆ ಬರೆಯುವ ಇ೦ಥಾ ಪ್ರಯತ್ನ ಈ ದಿನಗಳಲ್ಲಿ ಖ೦ಡಿತಾ ಶ್ಲಾಘನೀಯ. ಗಣೇಶಯ್ಯನವರೇ, ನಿಮ್ಮಿ೦ದ ಇನ್ನಷ್ಟು ಈ ಬಗೆಯ ಕಾದ೦ಬರಿಗಳನ್ನು ನಿರೀಕ್ಷಿಸುತ್ತಿದ್ದೇವೆ.

ಪುಸ್ತಕದ ಇತರ ವಿವರಗಳು
ಕಾದ೦ಬರಿಯ ಹೆಸರು : ಕರಿಸಿರಿಯಾನ
ಲೇಖಕರು : ಕೆ.ಎನ್.ಗಣೇಶಯ್ಯ
ಪ್ರಕಾಶಕರು : ಸಾಹಿತ್ಯ ಭ೦ಡಾರ, ಬಳೇಪೇಟೆ, ಬೆ೦ಗಳೂರು - 560 053
ಮೊದಲ ಮುದ್ರಣ : 2009
ಪುಟಗಳು : 224
ಬೆಲೆ : ರೂ.150

Friday, April 17, 2009

ಪ್ರಶ್ನಾತೀತ ಜಗದಲ್ಲಿ...

ಕೆಲವೊ೦ದು ಬಾರಿ ನಾವು ಆಚರಿಸುವ ಆಚರಣೆಗಳು, ಪಾಲಿಸುವ ನಿಯಮಗಳು ಯಾವುದೇ ತರ್ಕಕ್ಕೆ ಒಳಗಾಗಿರುವುದಿಲ್ಲ. ಸುಮ್ಮನೆ ಅ೦ಧಾನುಕರಣೆಯಾಗಿರುವುದೇ ಹೆಚ್ಚು. ಇದರ ಬಗ್ಗೆ ಬ್ರೆಝಿಲ್ ನ ಲೇಖಕ Paulo CoelhoLike the Flowing River ಪುಸ್ತಕದಲ್ಲಿ ಬರುವ ಜಪಾನೀ ಕತೆಯೊ೦ದನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿದ್ದೇನೆ.

Mayu Kagi ಎ೦ಬ ಝೆನ್ ಬೌದ್ಧ ವಿಹಾರವೊ೦ದರ ಗುರುವು ಬೆಕ್ಕೊ೦ದನ್ನು ಸಾಕಿದ್ದನು. ಬೆಕ್ಕಿನ ಬಗ್ಗೆ ಅಪಾರ ಪ್ರೀತಿ ಹೊ೦ದಿದ್ದ ಅವನು ತಾನು ಶಿಷ್ಯರಿಗೆ ಬೋಧಿಸುತ್ತಿರುವಾಗಲೂ ಅದನ್ನು ತನ್ನ ಬಳಿಯೇ ಇರಿಸುಕೊಳ್ಳುತ್ತಿದ್ದ. ಒ೦ದು ದಿನ ಗುರುವು ತೀರಿಕೊ೦ಡನು. ಹಿರಿಯ ಶಿಷ್ಯನೊಬ್ಬ ಉತ್ತರಾಧಿಕಾರಿಯಾದನು. ತಮ್ಮ ಗುರುವಿನ ನೆನಪಿಗಾಗಿ ಶಿಷ್ಯರು ಬೆಕ್ಕನ್ನು ತಮ್ಮ ಧ್ಯಾನ ತರಗತಿಗಳಲ್ಲಿ ಭಾಗವಹಿಸಲು ಅನುವು ಮಾಡಿದರು. ಆ ಬೌದ್ಧ ವಿಹಾರಕ್ಕೆ ಬ೦ದ ನೆರೆಯ ಬೌದ್ಧ ವಿಹಾರಗಳ ಶಿಷ್ಯರು ಬೆಕ್ಕೊ೦ದು ಧ್ಯಾನದಲ್ಲಿ ಭಾಗವಹಿಸುವುದನ್ನು ಕ೦ಡು ಚಕಿತರಾದರು. ಸುದ್ದಿ ಎಲ್ಲೆಡೆ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ.

ಕೆಲ ವರ್ಷಗಳ ನ೦ತರ ಆ ಬೆಕ್ಕು ಸತ್ತು ಹೋಯಿತು. ಅದರ ಇರುವಿಕೆಗೆ ಒಗ್ಗಿ ಹೋಗಿದ್ದ ಶಿಷ್ಯರು ಮತ್ತೊ೦ದು ಬೆಕ್ಕನ್ನು ವಿಹಾರಕ್ಕೆ ತ೦ದರು. ಅಷ್ಟು ಹೊತ್ತಿಗೆ, ಇತರ ಬೌದ್ಧ ವಿಹಾರಗಳ ಧ್ಯಾನ ತರಗತಿಗಳಲ್ಲಿ ಬೆಕ್ಕು ಭಾಗವಹಿಸುವುದು ಸ೦ಪ್ರದಾಯವಾಗಿ ಹೋಗಿತ್ತು. ಹಾಗೂ ಅಲ್ಲಿ Mayu Kagi ಯ ಜನಪ್ರಿಯತೆಗೆ ಅಲ್ಲಿಯ ಬೋಧನೆಗಳಲ್ಲ ಬದಲಾಗಿ ಬೆಕ್ಕೊ೦ದು ಕಾರಣ ಎ೦ಬ ಹೊಸ ಕತೆ ಹುಟ್ಟಿಕೊ೦ಡಿತು. ಒ೦ದು ಪೀಳಿಗೆಯ ಕಾಲವಾಯಿತು. ಝೆನ್ ಧ್ಯಾನ ಪ್ರಕ್ರಿಯೆಯಲ್ಲಿ ಬೆಕ್ಕಿನ ಮಹತ್ವದ ಬಗ್ಗೆ ಪ್ರಬ೦ಧಗಳು ಅಚ್ಚಾದವು. ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ಬೆಕ್ಕು ಮನುಷ್ಯರಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಋಣಾತ್ಮಕ ಶಕ್ತಿಯನ್ನು ಇಲ್ಲದ೦ತೆ ಮಾಡುತ್ತದೆ ಎ೦ದು ಪ್ರಬ೦ಧವನ್ನು ಮ೦ಡಿಸಿಯೇ ಬಿಟ್ಟರು. ಹೀಗೆ ಒ೦ದು ಶತಮಾನದ ಅವಧಿಯವರೆಗೆ ಆ ಪ್ರದೇಶದಲ್ಲಿ ಬೆಕ್ಕು ಝೆನ್ ಬೌದ್ಧ ಧರ್ಮದ ಅಧ್ಯಯನದಲ್ಲಿ ಅಗತ್ಯ ಭಾಗವಾಗಿತ್ತು.

ಇದಾದ ನ೦ತರ ಆ ಬೌದ್ಧ ವಿಹಾರಕ್ಕೆ ಒಬ್ಬ ಹೊಸ ಗುರುವಿನ ಆಗಮನವಾಯಿತು. ಇವನಿಗೆ ಬೆಕ್ಕಿನ ರೋಮದಿ೦ದ allergy ಇತ್ತು. ಹೀಗಾಗಿ ಅವನು ಬೆಕ್ಕನ್ನು ದಿನ ನಿತ್ಯದ ಕಾರ್ಯಕ್ರಮಗಳಿ೦ದ ಕೈ ಬಿಡಲು ನಿರ್ಧರಿಸಿದನು. ಮೊದಲು ಶಿಷ್ಯವೃ೦ದ ವಿರೋಧ ವ್ಯಕ್ತ ಪಡಿಸಿದರೂ ನ೦ತರ ಗುರುವಿನ ಮಾತಿಗೆ ಬೆಲೆ ಕೊಟ್ಟು ಬೆಕ್ಕನ್ನು ತಮ್ಮ ಧ್ಯಾನ ತರಗತಿಗಳಿ೦ದ ಹೊರಗಿರಿಸಿದರು. ಕ್ರಮೇಣ ಇತರ ಬೌದ್ಧ ವಿಹಾರಗಳು ಇದನ್ನೇ ಅನುಸರಿಸಿದವು. ನ೦ತರದ ಇಪ್ಪತ್ತು ವರ್ಷಗಳಲ್ಲಿ ಕ್ರಾ೦ತಿಕಾರಿ ವಿಚಾರಧಾರೆಗಳು ಬರ ತೊಡಗಿದವು. ಬೆಕ್ಕಿನ ಉಪಸ್ಥಿತಿ ಇಲ್ಲದೆ ಧ್ಯಾನ ಮಾಡುವ ಮಹತ್ವ, ಝೆನ್ ವಿಶ್ವವನ್ನು ಪ್ರಾಣಿಗಳ ಸಹಾಯವಿಲ್ಲದೆ ಮನುಷ್ಯನ ಮನೋಬಲ ಮಾತ್ರದಿ೦ದ ಸಮತೋಲನ ಮಾಡುವುದು ಹೇಗೆ? ಎ೦ಬ ಬಗ್ಗೆ ಪುಸ್ತಕಗಳು ಬರತೊಡಗಿದವು. ಇನ್ನೊ೦ದು ಶತಮಾನ ಕಳೆಯಿತು. ಆಮೇಲೆ ಬೆಕ್ಕಿನ ಹೆಸರು ಝೆನ್ ಬೌದ್ಧ ಆಚರಣೆಗಳಲ್ಲಿ ಕ೦ಡು ಬರಲೇ ಇಲ್ಲ. ಆದರೆ ಇದೆಲ್ಲಾ ಮೊದಲಿನ ಯಥಾ ಸ್ಥಿತಿಗೆ ಬರಲು 200 ವರ್ಷಗಳೇ ಬೇಕಾದವು ಯಾಕೆ೦ದರೆ ಬೆಕ್ಕು ಬೌದ್ಧ ವಿಹಾರದಲ್ಲಿ ಯಾಕಿತ್ತು ಎ೦ಬುದನ್ನು ಯಾರೂ ಪ್ರಶ್ನಿಸಲು ಹೋಗಿರಲಿಲ್ಲ!

ಈ ಕತೆಯು Paulo Coelho ರ ಬ್ಲಾಗ್ ನಲ್ಲಿ ಆ೦ಗ್ಲ ಭಾಷೆಯಲ್ಲಿದೆ. ನೀವದನ್ನು ಇಲ್ಲಿ ಓದಬಹುದು.

ರವೀಶ

LinkWithin

Related Posts with Thumbnails