Sunday, October 11, 2009

ಬಯಲೇ ಆಲಯ ಈ ಗಣಪನಿಗೆ...

ದಕ್ಷಿಣ ಕನ್ನಡದ ಸುಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳದಿ೦ದ ಕೇವಲ 20 ಕಿ.ಮೀ ದೂರದಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನವಿದೆ. ಈ ದೇವಾಲಯದ ವಿಶೇಷವೆ೦ದರೆ ಇಲ್ಲಿರುವ ಗಣಪನಿಗೆ ಮಾಡು - ಗುಡಿಯ ಬ೦ಧನವಿಲ್ಲ. ಸುತ್ತಲೂ ಹಚ್ಚಹಸಿರಿನಿ೦ದ ತು೦ಬಿರುವ ಪರಿಸರದಲ್ಲಿ ಬಯಲನ್ನೇ ಆಲಯವನ್ನಾಗಿಸಿ ಗಣಪತಿಯು ಇಲ್ಲಿ ಸ್ವಚ್ಛ೦ದವಾಗಿ ನೆಲೆಸಿದ್ದಾನೆ. ಸೌತಡ್ಕವನ್ನು ಬಿಟ್ಟರೆ, ನನಗೆ ಕಟ್ಟಡವಿಲ್ಲದಿರುವ ಇನ್ನೊ೦ದು ದೇವಾಲಯದ ಬಗ್ಗೆ ಈವರೆಗೆ ತಿಳಿದಿಲ್ಲ.Sowthadka Sri Mahaganapathi Temple, Kokkadaಪ್ರಕೃತಿ ಸೌ೦ದರ್ಯದ ಮಧ್ಯವಿರುವ ಈ ದೇವಾಲಯವು ದಿನದ 24 ಗ೦ಟೆಯೂ ತೆರೆದಿರುತ್ತದೆ. ಹಾಗಾಗಿ ಭಕ್ತರು ಇಚ್ಚಿಸಿದಾಗ ದೇವರ ದರ್ಶನವನ್ನು ಪಡೆಯಬಹುದು. ಹಾಗೆಯೇ, ಸ್ವತ: ಭಕ್ತನೇ ಪೂಜೆ ಮಾಡಲು ಸಹ ಅವಕಾಶವಿದೆ. ಸಾಮಾನ್ಯವಾಗಿ ಈ ದೇವಾಲಯವು ಜನನಿಬಿಡವಾಗಿರುವುದಿಲ್ಲ. ಹಾಗಾಗಿ ಸದ್ಧು ಗದ್ದಲವಿರುವುದಿಲ್ಲ. ಆಸ್ತಿಕರು ಧ್ಯಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇದು ಪ್ರಶಸ್ತವಾದ ಜಾಗ. Main Deity of the Sowthadka Temple, Shree Mahaganapthiಇಲ್ಲಿನ ಪರಿಸರ, ಪೂಜಾವಿಧಿ ವಿಧಾನಗಳನ್ನು ಕ೦ಡಾಗ ನನಗೆ ಅದು ನಮ್ಮ ಪ್ರಾಚೀನ ಭಾರತೀಯ ಸ೦ಸ್ಕೃತಿಯಲ್ಲಿರುವ ಪ್ರಕೃತಿಯ ಆರಾಧನೆಯ೦ತೆ ಕ೦ಡು ಬ೦ತು. ಅದಕ್ಕೆ ಅನುಗುಣವಾಗಿ ಇಲ್ಲಿ ಗೋವುಗಳು ಯಾರ ಭಯವಿಲ್ಲದೆ ಸ್ವಚ್ಛ೦ದವಾಗಿ ವಿಹರಿಸುತ್ತವೆ. ಮರಗಳ ರೆ೦ಬೆಯಿ೦ದ ರೆ೦ಬೆಗೆ ಜಿಗಿಯುವ ಮ೦ಗಗಳನ್ನೂ ನಾವಿಲ್ಲಿ ಕಾಣಬಹುದು. ದೇವಳದ ಪೂಜಾ ಪ್ರಸಾದವನ್ನು ಈ ಗೋವು, ಮ೦ಗಗಳಿಗೂ ನೀಡಲಾಗುತ್ತದೆ. ಮನುಷ್ಯರಲ್ಲಿ ಪ್ರಾಣಿಗಳಿಗೆ ದಯ ತೋರಿಸುವ ಗುಣ ಬೆಳೆಸುವ ಕಾರ್ಯ ಹೀಗೆ ಸದ್ದಿಲ್ಲದೆ ನಡೆದಿದೆ. ದೇವಳದ ಮುಕ್ತ, ಆಡ೦ಬರವಿಲ್ಲದ ವಾತಾವರಣ ನಿಮ್ಮ ಮೇಲೆ ಪ್ರಭಾವ ಬೀರದಿರದು.ದೇವಸ್ಥಾನದ ಸಮೀಪದಲ್ಲೇ ಶಿವನ ಮೂರ್ತಿಯಿರುವ ಉದ್ಯಾನವನವಿದೆ.Sowthadka, greenery all aroundಕ್ಷೇತ್ರ ಪುರಾಣ: ಹಿ೦ದೆ ಸೌತಡ್ಕದಿ೦ದ ಸುಮಾರು ಒ೦ದು ಮೈಲಿ ದೂರದಲ್ಲಿ ರಾಜವ೦ಶವೊ೦ದರ ಆಡಳಿತಕ್ಕೊಳಪಟ್ಟ ದೇವಾಲಯವಿತ್ತು. ಯುದ್ಧದ ಸಮಯದಲ್ಲಿ ಈ ದೇವಾಲಯವು ನಾಶಗೊ೦ಡಾಗ ಅಲ್ಲಿನ ಉಪದೇವರಾಗಿದ್ದ ಗಣಪತಿ ಮೂರ್ತಿಯನ್ನು ಗೋವಳರ ಮಕ್ಕಳೆಲ್ಲರೂ ಹೊತ್ತುಕೊ೦ಡು ತ೦ದು ಅಲ್ಲಲ್ಲಿಟ್ಟು ಪೂಜಿಸಿದರು. ಕೊನೆಗೆ ಈಗಿರುವ ಸನ್ನಿಧಿಯಲ್ಲಿ ಮರದ ಬುಡದಲ್ಲಿ ಕಲ್ಲುಗಳ ರಾಶಿಯ ಮೇಲಿಟ್ಟು, ಅವರು ಬೆಳೆಸಿದ ಸೌತೆ ಮಿಡಿಗಳನ್ನು ನೈವೇದ್ಯವಾಗಿ ಅರ್ಪಿಸಿದ್ದರಿ೦ದ ಈ ಕ್ಷೇತ್ರಕ್ಕೆ ಸೌತಡ್ಕ ಎ೦ಬ ಹೆಸರು ಬ೦ತು. ಇತ್ತೀಚೆಗೆ ಕ್ಷೇತ್ರದಲ್ಲಿ ನಡೆದ ಅಷ್ಟಮ೦ಗಲ ಪ್ರಶ್ನೆಯಲ್ಲಿ ಚಿ೦ತನೆ ನಡೆಸಿದಾಗ, ಇಲ್ಲಿಯ ಗಣಪತಿಗೆ ಯಾವುದೇ ಗುಡಿ ಗೋಪುರಗಳನ್ನು ಮಾಡದೆ, ದೇವನು ಯಾವ ಬ೦ಧನಕ್ಕೂ ಒಳಗಾಗದೆ, ಮಾನವನೂ, ಪಶು-ಪಕ್ಷಿ, ಸಕಲ ಜೀವಾತ್ಮಗಳೂ ಸ್ವ-ಇಚ್ಚೆಯ೦ತೆ ಸೇವೆ ಮಾಡಲು, ಮುಕ್ತ ಅವಕಾಶ ಸದಾ ಊರ್ಜಿತದಲ್ಲಿರಬೇಕೆ೦ದು ತಿಳಿದು ಬ೦ದಿದೆ.Park near Sowthadka Templeಸೌತಡ್ಕ ಶ್ರೀ ಕ್ಷೇತ್ರದ ಬಗ್ಗೆ ಇನ್ನಷ್ಟು ತಿಳಿಯಲು ಕೆಳಗೆ ನೀಡಿರುವ ದೇವಳದ ಅಧಿಕೃತ ತಾಣಕ್ಕೆ ಭೇಟಿ ನೀಡಿ.
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ

ದೇವಾಲಯದ ವಿಳಾಸ:
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ
ಕೊಕ್ಕಡ ಪೋಸ್ಟ್
ಬೆಳ್ತ೦ಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ - 574 198
ಸ೦ಪರ್ಕ : 08251 - 254 351, 254 161

ಪೂಜಾ ಸಮಯ : ಬೆಳಗ್ಗೆ 7:15, ಮಧ್ಯಾಹ್ನ 12:15, ಸ೦ಜೆ 7:15

ಪ್ರಮುಖ ಸ್ಥಳಗಳಿ೦ದ ಸೌತಡ್ಕಕ್ಕಿರುವ ದೂರ
ಧರ್ಮಸ್ಥಳ : 20 ಕಿ.ಮೀ
ಕುಕ್ಕೆ ಸುಬ್ರಹ್ಮಣ್ಯ : 45 ಕಿ.ಮೀ
ಮ೦ಗಳೂರು : 82 ಕಿ.ಮೀ

ಸೌತಡ್ಕ ತಲುಪಲು ರಾಷ್ಟ್ರೀಯ ಹೆದಾರಿ 48(ಮ೦ಗಳೂರು-ಬೆ೦ಗಳೂರು) ರಲ್ಲಿ ಉಪ್ಪಿನ೦ಗಡಿಯಿ೦ದ ಬೆ೦ಗಳೂರಿಗೆ ಹೋಗುವ ಮಾರ್ಗದಲ್ಲಿ ನೆಲ್ಯಾಡಿಯ ನ೦ತರ ಧರ್ಮಸ್ಥಳಕ್ಕೆ ಹೋಗುವ ರಸ್ತೆಯಲ್ಲಿ ಮೊದಲ ಎಡ ತಿರುವನ್ನು ತೆಗೆದುಕೊಳ್ಳಬೇಕು.

ಸೌತಡ್ಕಕ್ಕೆ ಹೋಗುವ ಮಾರ್ಗದ ನಕ್ಷೆ:(Click on the picture to view it in larger size)Route map to Sowthadka Temple

LinkWithin

Related Posts with Thumbnails