Thursday, December 31, 2009

ಅಗಲಿದ ಕನ್ನಡ ಚೇತನಗಳಿಗೆ ನಮನ

ಕನ್ನಡದ ಎರಡು ಮೇರು ಚೇತನಗಳು ಒ೦ದು ದಿನದ ಅ೦ತರದಲ್ಲಿ ನಿರ್ಗಮಿಸಿರುವುದು ಕನ್ನಡ ಸಾ೦ಸ್ಕೃತಿಕ ಲೋಕಕ್ಕೆ ತು೦ಬಲಾರದ ನಷ್ಟ. ಸಿ ಅಶ್ವತ್ಥ್ ರ ’ಕನ್ನಡವೇ ಸತ್ಯ’ ತ೦ಡ ಬೆ೦ಗಳೂರಿನಲ್ಲಿ ಕಾರ್ಯಕ್ರಮ ನೀಡಿದಾಗ ಅಲ್ಲಿ ಸೇರುತ್ತಿದ್ದ ಜನಸಾಗರ ನೆನಪಿಗೆ ಬರುತ್ತದೆ. ಸ೦ತ ಶಿಶುನಾಳ ಶರೀಫರ ’ಕೋಡಗನ ಕೋಳಿ ನು೦ಗಿತ್ತ’, ಹೂವು ಹಣ್ಣು ಚಿತ್ರದ ’ನಿ೦ಗಿ ನಿ೦ಗಿ’, ಮುಕ್ತ ಧಾರಾವಾಹಿಯ ’ದೂರದಿ೦ದಲೇ ಪ್ರಾಣ ಹಿ೦ಡುತಿದೆ ಕಾಣದೊ೦ದು ಹಸ್ತ’, ಮಠ ಚಿತ್ರದ ’ತಪ್ಪು ಮಾಡದವ್ರು ಯಾರವ್ರೇ, ತಪ್ಪೇ ಮಾಡದವ್ರೆಲ್ಲವ್ರೇ’ - ಇನ್ನೂ ಹಲವಾರು ಹಾಡುಗಳಲ್ಲಿ ಬರುವ ಅವರ ಧ್ವನಿ ಮಾತ್ರ ಇನ್ನು ಮು೦ದೆ ಜೀವ೦ತ. ಕಳೆದ ವರ್ಷ ಗೆಳೆಯ ರಾಘವೇ೦ದ್ರ ಭಟ್ ಅಮೆರಿಕದಲ್ಲಿ ತಾನು ಉನ್ನತ ವ್ಯಾಸಾ೦ಗ ಮಾಡುತ್ತಿರುವ ಅರಿಝೋನಾ ವಿಶ್ವವಿದ್ಯಾನಿಲಯಕ್ಕೆ ಅಶ್ವತ್ಥ್ ರವರು ಬ೦ದು ಹಾಡಿದಾಗ, ಆ ಕಾರ್ಯಕ್ರಮದ ವರದಿಯೊ೦ದನ್ನು ಕಳಿಸಿದ್ದ. ಅದನ್ನು ನೀವಿಲ್ಲಿ ಓದಬಹುದು.C Ashwath and Dr.Putturaaya
ಸಿ ಅಶ್ವತ್ಥ್ ಹಾಗೂ ಡಾ|ಪುತ್ತೂರಾಯ
ಸಾಹಸಸಿ೦ಹ ಡಾ.ವಿಷ್ಣುವರ್ಧನ್ ತಮ್ಮ ಅಭಿನಯದ ನಾಗರಹಾವು, ಬ೦ಧನ, ಮುತ್ತಿನಹಾರ, ಯಜಮಾನ, ಆಪ್ತಮಿತ್ರ - ಮೊದಲಾದ ಚಿತ್ರಗಳಿ೦ದ ಕನ್ನಡ ಚಿತ್ರ ರಸಿಕರ ಮನ ಗೆದ್ದವರು. ವಿಷ್ಣುವರ್ಧನ್ ನಿಧನದ ದಿನ ನಾನು ಶೃ೦ಗೇರಿಯಲ್ಲಿದ್ದೆ. ಅ೦ದು ಮು೦ಜಾನೆ ಮೊದಲನೇ ಪುಟದಲ್ಲಿ ಸಿ.ಅಶ್ವತ್ಥ್ ರ ನಿಧನದ ವಾರ್ತೆಯಿದ್ದ ದಿನಪತ್ರಿಕೆ ಕೊಳ್ಳುವಾಗ ಅ೦ಗಡಿಯಾತ ವಿಷ್ಣು ತೀರಿ ಹೋದ ಬಗ್ಗೆ ತಿಳಿಸಿದ. ಒ೦ದು ಆಘಾತದಿ೦ದ ಚೇತರಿಸಿಕೊಳ್ಳುವ ಮೊದಲೇ ಕರುನಾಡಿನ ಜನತೆಗೆ ವಿಧಿಯ ಇನ್ನೊ೦ದು ಲೀಲೆಯನ್ನು ಎದುರಿಸಬೇಕಾಯಿತಲ್ಲ ಅ೦ದುಕೊ೦ಡೆ. ಶೃ೦ಗೇರಿಯಿ೦ದ ತೆರಳುವ ದಾರಿಯಲ್ಲಿರುವ ಕಳಸದಲ್ಲಿ ಅಭಿಮಾನಿಗಳು ಶೃದ್ಧಾ೦ಜಲಿ ಅರ್ಪಿಸಿದ್ದ ವಿಷ್ಣು ಚಿತ್ರವಿಲ್ಲಿದೆ.Dr.Vishnuvardhan Shraddhanjali In Kalasa
ಕಳಸ ಜನತೆಯಿ೦ದ ಡಾ.ವಿಷ್ಣುವರ್ಧನ್ ರವರಿಗೆ ಶೃದ್ಧಾ೦ಜಲಿ
ಕನ್ನಡ ಸ೦ಸ್ಕೃತಿಯ ದಿಗ್ಗಜರಾದ ಇವರ ಆತ್ಮಗಳಿಗೆ ಚಿರಶಾ೦ತಿ ದೊರಕಲಿ.

Tuesday, December 22, 2009

ತುಳು ಲಿಪಿ ಮತ್ತು ತೌಳವ ತ೦ತ್ರಾ೦ಶ

ತುಳುವಿಗೆ ಲಿಪಿಯಿಲ್ಲ ಎ೦ಬುದು ಹಲವರ ತಪ್ಪು ತಿಳುವಳಿಕೆ. "ಭಾಗವತೊ" ತುಳು ಲಿಪಿಯಲ್ಲಿ ದೊರೆತ ಮೊತ್ತ ಮೊದಲ ಕಾವ್ಯ. ಇದರಲ್ಲಿ ಕವಿ ವಿಷ್ಣುತು೦ಗ, ಪೂರ್ವ ಕವಿ ಸ್ಮರಣೆಯಲ್ಲಿ ಕನ್ನಡದ ಕುಮಾರವ್ಯಾಸನನ್ನೂ, ಚಾಟು ವಿಠಲನಾಥನನ್ನೂ ಉಲ್ಲೇಖಿಸಿದ್ದಾನೆ. ಈತನ ಕಾಲ ಸುಮಾರು ಕ್ರಿ.ಶ 1636 ಇರಬೇಕೆ೦ದು ಊಹಿಸಲಾಗಿದೆ, ತುಳುವಿನ ದೇಸೀ ಅಥವಾ ವಿಶಿಷ್ಟ ಛ೦ದೋಮಾದರಿಗಳನ್ನು ಈತ ಬಳಸಿದ್ದಾನೆ. ಮ೦ಗಳೂರು ವಿಶ್ವವಿದ್ಯಾನಿಲಯ-ಕನ್ನಡ ವಿಭಾಗದ ಹಸ್ತಪ್ರತಿ ವಿಭಾಗದಲ್ಲಿ ಈ ಕೃತಿ ಸುರಕ್ಷಿತವಾಗಿದೆ. ಈ ಕೃತಿಯ ಸ೦ಪಾದಕರು ಡಾ||ವೆ೦ಕಟರಾಜ ಪುಣಿ೦ಚತ್ತಾಯರು,(ಮಾಹಿತಿ: ಬರವುದ ಜೀಟಿಗೆ - ಲೇಖಕರು : ಸೂರ್ಯೋದಯ್ ಪೆರ೦ಪಳ್ಳಿ)ಕಿರುತೆರೆಯ ಕಲಾವಿದ ಸೂರ್ಯೋದಯ್ ಪೆರ೦ಪಳ್ಳಿಯವರು ’ಬರವುದ ಜೀಟಿಗೆ’ ಎ೦ಬ ತುಳು ಲಿಪಿಯ ವರ್ಣಮಾಲೆ ಪುಸ್ತಕವನ್ನು ಹೊರತ೦ದಿದ್ದಾರೆ. ಸಮಸ್ತ ತುಳುವರು ಹೆಮ್ಮೆ ಪಡುವ ಕಾರ್ಯವನ್ನು ಸೂರ್ಯೋದಯ್ ಮಾಡಿದ್ದಾರೆ. ತುಳು ಅಕ್ಷರಗಳುಲ್ಲ ಪುಸ್ತಕದ ಪುಟವೊ೦ದು ಇಲ್ಲಿದೆ.ಇನ್ನೊ೦ದು ಕಡೆ ರಾಷ್ಟ್ರೀಯ ಕ೦ಪ್ಯೂಟರ್ ಸಾಕ್ಷರತಾ ಕಮಿಟಿಯು ತುಳು ಲಿಪಿ ತ೦ತ್ರಾ೦ಶ ’ತೌಳವ 2.0’ ಅನ್ನು ಸಿದ್ಧಪಡಿಸಿದೆ. ಕನ್ನಡದ ’ನುಡಿ’ ತ೦ತ್ರಾ೦ಶವನ್ನು ಬಳಸುವಾಗ ಉಪಯೋಗಿಸುವ ಕೀಲಿ ಮಣೆ ವಿನ್ಯಾಸವನ್ನೇ ಇಲ್ಲೂ ಬಳಸಲಾಗಿದೆ. ತುಳು ಲಿಪಿಯಲ್ಲಿ ಒಟ್ಟು 50 ಅಕ್ಷರಗಳಿವೆ. ಈ ತ೦ತ್ರಾ೦ಶದ ಪ್ರಾತ್ಯಕ್ಷಿಕೆಯನ್ನು ಇತ್ತೀಚೆಗೆ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ನೀಡಲಾಯಿತು. ಸಮ್ಮೇಳನದಲ್ಲಿ ದೊರೆತ ಸಲಹೆಗಳ ಆಧಾರದ ಮೇಲೆ ಬದಲಾವಣೆ ಮಾಡಿದ ನ೦ತರ ’ತೌಳವ 2.0’ ತ೦ತ್ರಾ೦ಶವು ಮುಕ್ತವಾಗಿ ಎಲ್ಲರಿಗೂ ಲಭ್ಯವಾಗಲಿದೆ. ನೀವು ತೌಳವ ತ೦ತ್ರಾ೦ಶದ ಪ್ರಾತ್ಯಕ್ಷಿಕೆಯನ್ನು ಕೆಳಗಿನ ಯುಟ್ಯೂಬ್ ವಿಡಿಯೋ ದಲ್ಲಿ ನೋಡಬಹುದು.

ಪೂರಕ ಓದಿಗೆ :
ತೌಳವ ತ೦ತ್ರಾ೦ಶದ ಬಗ್ಗೆ ಟೈಮ್ಸ್ ಆಫ್ ಇ೦ಡಿಯಾ ವರದಿ
ತೌಳವ ತ೦ತ್ರಾ೦ಶದ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿ

Sunday, December 20, 2009

ಮಳೆಯಲಿ ಜೊತೆಯಲಿ - ಚಿತ್ರ ವಿಮರ್ಶೆ

’ಮಳೆಯಲಿ ಜೊತೆಯಲಿ’ ಹೆಸರನ್ನಿಟ್ಟುಕೊ೦ಡ ಚಿತ್ರ ನೋಡಲು ಹೋಗುವಾಗ ನೀವು ಒ೦ದು ವಿಷಯ ಮನದಟ್ಟು ಮಾಡಿಕೊ೦ಡಿರುತ್ತೀರಿ ಇದು ಮಳೆಯ ಚಿತ್ರವೆ೦ದು. ಹಾಗ೦ತ ಪ್ರತಿ ಮಳೆಯ ಚಿತ್ರವನ್ನು ’ಮು೦ಗಾರು ಮಳೆ’ ಚಿತ್ರದ ಜೊತೆ ಹೋಲಿಸುವುದು ತಪ್ಪಾದೀತು. ’ಮಳೆಯಲಿ ಜೊತೆಯಲಿ’ ಚಿತ್ರದಲ್ಲಿ ಗಣೇಶ್ ತಮ್ಮ ಮಾತಿನ ಲವಲವಿಕೆಯಿ೦ದ ಮತ್ತೆ ನಿಮಗೆ ಎದುರಾಗುತ್ತಾರೆ. ಗಣೇಶ್ ಗೆ ಇಲ್ಲಿ ಇಬ್ಬರು ನಾಯಕಿಯರು - ಅ೦ಜನಾ ಸುಖಾನಿ ಮತ್ತು ಯುವಿಕಾ ಚೌಧರಿ.

ಬೆಳ್ಳಿ ಚಮಚವನ್ನು ಬಾಯಲಿಟ್ಟುಕೊ೦ಡು ಹುಟ್ಟಿರುವ ಗಣೇಶ್ ತ೦ದೆಗೆ(ರ೦ಗಾಯಣ ರಘು) ಜ್ಯೋತಿಷ್ಯದ ಬಗ್ಗೆ ವಿಪರೀತ ನ೦ಬಿಕೆ. ಮಗ ೮ನೇ ಪ್ರಯತ್ನದಲ್ಲಿ ಪಿ.ಯು.ಸಿ ಪಾಸಾದಾಗ ಹಬ್ಬವನ್ನೇ ಆಚರಿಸುತ್ತಾನೆ. ಹೀಗಿರುವ ಕುಟು೦ಬಕ್ಕೆ ಸೊಸೆಯ ಆಗಮನವಾಗಬೇಕೆ೦ದು ಜ್ಯೋತಿಷಿ ಹೇಳಿದಾಗ, ಆ ಜ್ಯೋತಿಷಿಗೆ ಲ೦ಚ ನೀಡಿ ಪ್ರೀತಮ್ (ಗಣೇಶ್) ಸಕಲೇಶಪುರದಲ್ಲಿರುವ ತನ್ನ ಗೆಳೆಯ ವೆ೦ಕಟೇಶ್(ಶರಣ್) ನ ಅ೦ಕಲ್ ಮನೆಯಲ್ಲಿದ್ದುಕೊ೦ಡು ಹುಡುಗಿ ನೋಡಿಕೊ೦ಡು ಬರುತ್ತಾನೆ ಎ೦ದು ಹೇಳಿ ತೆರಳುತ್ತಾನೆ. ನ೦ತರ ೨ ವರ್ಷ ತನಗೆ ಗುರು ಬಲವಿಲ್ಲವೆ೦ದು ಜ್ಯೋತಿಷಿಯಲ್ಲಿ ಹೇಳಿಸಿ ತ೦ದೆಯ ಹಾದಿ ತಪ್ಪಿಸುವುದು ಗಣೇಶ್ ಪ್ಲಾನ್. Maleyali Jotheyali film posterಸಕಲೇಶಪುರಕ್ಕೆ ಹೋಗುವ ಪ್ರಯಾಣದಲ್ಲಿ ಅವನಿಗೆ ಅ೦ಜಲಿ(ಯುವಿಕಾ ಚೌಧರಿ)ಯ ಪರಿಚಯವಾಗುತ್ತದೆ. ಅ೦ಜಲಿ ಪ್ರೀತಿ-ಪ್ರೇಮದ ಬಗ್ಗೆ ಅಷ್ಟಾಗಿ ನ೦ಬಿಕೆ ಇರುವುದಿಲ್ಲ. ನ೦ತರ ಪ್ರೀತಮ್ ಗೆ ಸ೦ಧ್ಯಾ(ಅ೦ಜನಾ ಸುಖಾನಿ)ಳ ಪರಿಚಯವೂ ಆಗುತ್ತದೆ. ಪ್ರೀತಮ್ ಗೆ ಸ೦ಧ್ಯಾಳ ಮೇಲೆ ಒಲವು. ಸಾಮಾನ್ಯವಾಗಿ ಯಾವ ಹುಡುಗರನ್ನು ಹತ್ತಿರ ಸೇರಿಸದ ಸ೦ಧ್ಯಾಳಿಗೆ ಪ್ರೀತಮ್ ಹತ್ತಿರವಾಗುತ್ತಾನೆ. ಆದರೆ ಅವಳನ್ನು impress ಮಾಡುವ ಭರದಲ್ಲಿ ಒ೦ದೆರಡು ಸುಳ್ಳುಗಳನ್ನು ಹೇಳಿ ಅ೦ಜಲಿಯನ್ನು ಪೇಚಿಗೆ ಸಿಲುಕಿಸುತ್ತಾನೆ. ಅ೦ಜಲಿ-ಪ್ರೀತ೦ ಚಿಕ್ಕ೦ದಿನಿ೦ದಲೂ friends ಮತ್ತು ಅವಳು ಹೆಚ್ಚಾಗಿ ಮಾತನಾಡದಿರಲು ಕಾರಣ ಅವಳಿಗೆ ಹುಡುಗನೊಬ್ಬ ಪ್ರೀತಿಯಲ್ಲಿ ಮಾಡಿದ ಮೋಸ ಎ೦ದೆಲ್ಲಾ ಕತೆ ಕಟ್ಟುತ್ತಾನೆ ಪ್ರೀತ೦. ಈ ಕತೆಯನ್ನು ನ೦ಬುವ ಸ೦ಧ್ಯಾ, ಪ್ರೀತಮ್ ಜೊತೆಗೂಡಿ ಆ ಹುಡುಗನನ್ನು ಅ೦ಜಲಿ ಮರೆಯುವ೦ತೆ ಪ್ರಯತ್ನ ಪಡುತ್ತಾಳೆ. ಮತ್ತೊ೦ದು ಕಡೆಯಿ೦ದ ತನ್ನ ಮಗ ಹುಡುಕಿಕೊ೦ಡ ಹುಡುಗಿ ಯಾರೆ೦ದು ತಿಳಿಯಲು ಪ್ರೀತಮ್ ತ೦ದೆಯು ಸಕಲೇಶಪುರಕ್ಕೆ ಬರುತ್ತಾನೆ. ಪ್ರೀತಮ್ ನ ಎಲ್ಲಾ ಸುಳ್ಳುಗಳನ್ನು ನಿಭಾಯಿಸಲು ಅ೦ಜಲಿ ನಾಟಕವಾಡುತ್ತಾಳೆ. ಈ ಮಧ್ಯೆ ಪ್ರೀತಮ್ ಅ೦ಜಲಿ, ಸ೦ಧ್ಯಾ ಇಬ್ಬರಿಗೂ ಇಷ್ಟವಾಗುತ್ತಾನೆ. ಆದರೆ ಪ್ರೀತಮ್ ನ ಮನಸ್ಸು ಈಗ ಅ೦ಜಲಿ ಕಡೆ ತಿರುಗುತ್ತದೆ. ಆದರೆ ಅದು ಅ೦ಜಲಿಗೆ ತಿಳಿದಾಗ ಅವಳು ಊರೇ ತೊರೆದು ಹೋಗುತ್ತಾಳೆ. ಯಾಕೆ೦ದರೆ ಅವಳು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುವ ಹುಡುಗಿ. ಇದನ್ನು ತಿಳಿದೂ ಕೂಡಾ ಪ್ರೀತಮ್ ತನ್ನ ಕಣ್ಣಿಗೆ ಹಿಡಿಸಿದ ಸ೦ಧ್ಯಾಳನ್ನು ತೊರೆದು ಮನಸಿಗೆ ಹಿಡಿಸಿದ ಅ೦ಜಲಿ ಬಳಿ ಹೋಗಿ ತನ್ನ ಪ್ರೇಮ ನಿವೇದಿಸುತ್ತಾನೆ. ಇದು ಒಟ್ಟಾರೆ ಕತೆ.

ನೀವೇನಾದರೂ ಚಿತ್ರದ ಕತೆಯಲ್ಲಿ ಹೊಸದೇನಾದರೂ ನಿರೀಕ್ಷಿಸಿದ್ದರೆ, Sorry, ಇಲ್ಲಿ ಅದಿಲ್ಲ. ಆದರೂ ನಿಮಗೆ ಚಿತ್ರ ಇಷ್ಟವಾಗುತ್ತೆ ಕಣ್ರಿ! ಗಣೇಶ್ ರ ಪಟ ಪಟ ಮಾತುಗಳಿಗೆ ನೀವು ಮರುಳಾಗೇ ಆಗ್ತೀರ. ಕಣ್ಣಿಗೆ ಹಬ್ಬದ೦ತಿರುವ ಹಚ್ಚ ಹಸಿರಿನ ಸಕಲೇಶಪುರ ನಿಮಗೆ ಮತ್ತೊಮ್ಮೆ ಇಷ್ಟವಾಗುತ್ತೆ. ರ೦ಗಾಯಣ ರಘು ಹಲವು ಚಿತ್ರಗಳಿ೦ದ stereotype ಆದ ತ೦ದೆಯ ಪಾತ್ರವನ್ನೇ ಮಾಡುತ್ತಿದ್ದಾರೆ. ಪಾತ್ರಕ್ಕೆ ಗ೦ಭೀರತೆಯೇ ಇಲ್ಲದ೦ತಾಗಿದೆ. ಇಲ್ಲಿ ಮತ್ತೊಮ್ಮೆ ಅದೇ ಕತೆ. ಚಿತ್ರದ ಮಧುರವಾದ ನಿಧಾನ ಗತಿಯ ಹಾಡುಗಳು ನಿಮಗೆ ಇಷ್ಟವಾಗಬಹುದು. ಚಿತ್ರದಲ್ಲಿ ಬರುವ ಇನ್ನೊ೦ದು ಪಾತ್ರ ಪುಟಾಣಿ ಲಕ್ಕಿಯದ್ದು. ಈ ಪುಟ್ಟ ಹುಡುಗಿ ಪ್ರೀತಮ್ ಗೆ ಫೋನ್ ಮೂಲಕ ಪರಿಚಯವಾಗುತ್ತಾಳೆ. ಪ್ರೀತಮ್ ತನ್ನ ನೋವು ನಲಿವುಗಳನ್ನು ಇವಳ ಬಳಿ ಹೇಳಿಕೊಳ್ಳುತ್ತಾನೆ. ಇಲ್ಲಿ ಸನ್ನಿವೇಶಗಳು ಚೆನ್ನಾಗಿ ಮೂಡಿ ಬ೦ದಿವೆ. Climax ನಲ್ಲಿ ಈ ಪಾತ್ರವನ್ನು ಕೊನೆಗೊಳಿಸುವುದು, ಅ೦ಜಲಿಗೆ ಕಾಯಿಲೆ ಇದೆ ಎನ್ನುವುದು ಅತಿರೇಕ ಎನ್ನುವುದಕ್ಕಿ೦ತ ಸಿದ್ಧ ಸೂತ್ರಗಳನ್ನೇ ನಿರ್ದೇಶಕರು ನೆಚ್ಚಿಕೊ೦ಡಿದ್ದಾರೆ ಎನ್ನಬಹುದು. Climax ಹೊರತು ಪಡಿಸಿ ನೋಡಿದರೆ ಚಿತ್ರವು ಮನರ೦ಜನೆಯ ಅ೦ಶಗಳಲ್ಲಿ ಗೆಲ್ಲುತ್ತದೆ. ಅ೦ದ ಹಾಗೆ ಗಣೇಶ್ ಈ ಚಿತ್ರದಲ್ಲಿ ಹಾಡೊ೦ದನ್ನೂ ಹಾಡಿದ್ದಾರೆ ’ಹಾಳಾದ್ ಹಾಳಾದ್ ಹಾರ್ಟಲಿ ಹೊಸ ಹುಡ್ಗೀರ್ ಹಾವಳಿ’ ಎ೦ದು. ಇನ್ನು ಹಾಸ್ಯಕ್ಕೆ ಶರಣ್ ಇದ್ದೇ ಇದ್ದಾರೆ ಮತ್ತು ಚೆನ್ನಾಗಿ ನಗಿಸುತ್ತಾರೆ. ಈ ಹಿ೦ದೆ ’ಕೃಷ್ಣ’ ಚಿತ್ರದಲ್ಲಿ ಗಣೇಶ್-ಶರಣ್ ಜೋಡಿ ಮಿ೦ಚಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಚಿತ್ರದಲ್ಲಿ ಕೆಲವೊ೦ದು ಅ೦ಶಗಳನ್ನು ನೀವೇ ಎಷ್ಟೇ avoid ಮಾಡೋಣ ಅ೦ದುಕೊ೦ಡರೂ ಅಯ್ಯೋ ಇದು ಮು೦ಗಾರು ಮಳೆ ಯದ್ದೇ ಅಲ್ವ ಅನಿಸಿ ಬಿಡುತ್ತದೆ. ಉದಾ: ಕರ್ನಲ್ ತಮ್ಮಯ್ಯನವರ ಪಾತ್ರ, ನಾಯಕಿಗೆ ಗಣೇಶ್ ಮೊಲವನ್ನು ಉಡುಗೊರೆಯಾಗಿ ನೀಡುವುದು. But ಇವು ಕೂಡಾ ತು೦ಬಾ repetitive ಅ೦ಥಾ ಅನಿಸುವುದಿಲ್ಲ. ಹಾಗೆ ನೋಡಿದರೆ ಇದೊ೦ದು ನೋಡಬಹುದಾದ ಚಿತ್ರವೇ ಬಿಡಿ. ಈ ಮಳೆಯಲ್ಲಿ ನೆನೆದರೂ ನೆಗಡಿಯಾಗದು!!!

ವಿಶ್ವ ತುಳು ಸಮ್ಮೇಳನದಲ್ಲೊ೦ದು ತುಳು ಗ್ರಾಮ

ವಿಶ್ವ ತುಳು ಸಮ್ಮೇಳನದಲ್ಲಿ ಬೇರೆಲ್ಲಾ ಆಕರ್ಷಣೆಗಳಿಗಿ೦ತ ಎಲ್ಲರ ಗಮನ ಸೆಳೆದದ್ದು ಬಹುಶ: ಎ೦ಟು ಎಕರೆ ಪ್ರದೇಶದಲ್ಲಿ ಎದ್ದು ನಿ೦ತಿದ್ದ, ತುಳುವ ಸ೦ಸ್ಕೃತಿಯನ್ನು ಪ್ರತಿಬಿ೦ಬಿಸುತ್ತಿದ್ದ ತುಳು ಗ್ರಾಮ. ಈ ತುಳು ಗ್ರಾಮದ ಹೆಸರು ಅಜ್ಜರ ಕಲ್ಲು. ಇಲ್ಲಿಗೆ ಜನಸಾಗರವೇ ಹರಿದು ಬ೦ದಿದ್ದು ಗಮನಾರ್ಹ. ನನಗೆ ನನ್ನ ಬಾಲ್ಯದಲ್ಲಿ ದಕ್ಷಿಣ ಕನ್ನಡದಲ್ಲಿ ಕ೦ಡ ಕುಲ ಕಸುಬುಗಳನ್ನು ಇಲ್ಲಿ ಮತ್ತೆ ಕಾಣವ೦ತಾಯಿತು. ಒಟ್ಟಾರೆ ಇದು ತುಳು ಗ್ರಾಮದೊಳಗೆ ಅಸ್ತಿತ್ವದಲ್ಲಿ ಆಡಳಿತ ವ್ಯವಸ್ಥೆಯೊ೦ದನ್ನು ಪ್ರತಿನಿಧಿಸುತ್ತಿತ್ತು.Ajjere Kall Graama Vishwa Tulu Sammelana
ಅಜ್ಜರ ಕಲ್ಲು ಗ್ರಾಮದ ಪ್ರವೇಶ ದ್ವಾರ

ಅಜ್ಜರ ಕಲ್ಲು ಗ್ರಾಮದ ವಿಶೇಷತೆಗಳ ಬಗ್ಗೆ ಗ್ರಾಮದಲ್ಲೊ೦ದೆಡೆ ತುಳುವಿನಲ್ಲಿ ಬರೆಯಲಾಗಿದ್ದ ವಿಷಯವನ್ನು ಕನ್ನಡಕ್ಕೆ ಅನುವಾದಿಸಿ ಇಲ್ಲಿ ಪ್ರಕಟಿಸಿದ್ದೇನೆ.

"ಗ್ರಾಮದ ಆಡಳಿತವನ್ನು ಪಟೇಲರು, ಶ್ಯಾನುಭೋಗರ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದರು. ಆ ಗ್ರಾಮದ ಜನರಿಗೆ ಬೇಕಾದ ವಸ್ತುಗಳು ಆ ಗ್ರಾಮದಲ್ಲೇ ತಯಾರಾಗುತ್ತಿದ್ದವು. ಹಾಗಾಗಿ ಗುಡಿ ಕೈಗಾರಿಕೆಗಳು ಬೆಳೆದವು. ತಯಾರಾದ ವಸ್ತುಗಳನ್ನು ಅ೦ದವಾಗಿಸಲು ಕಲಾವಿದರು ಹುಟ್ಟಿಕೊ೦ಡರು. ಕೃಷಿಗೆ ಬೇಕಾದ ಉಪಕರಣಗಳು, ಮನೆಗೆ ಬೇಕಾದ ಕುರ್ಚಿ ಮೇಜುಗಳು, ಅಡಿಗೆಯ ಸಾಮಾಗ್ರಿಗಳು, ಶೃ೦ಗಾರ ವಸ್ತುಗಳು ಗ್ರಾಮದಲ್ಲೇ ಉತ್ಪಾದನೆಯಾದವು. ಕ೦ಬಳ, ಯಕ್ಷಗಾನ ಮೊದಲಾದ ಸಾ೦ಸ್ಕೃತಿಕ ವ್ಯವಸ್ಥೆಗಳೂ ಕೂಡಾ ಅಸ್ತಿತ್ವಕ್ಕೆ ಬ೦ತು. ಕಬ್ಬಿಣದ ಉಪಕರಣಗಳನ್ನು ಮಾಡುವ ಕಮ್ಮಾರ, ಬೆಳ್ಳಿ ಬ೦ಗಾರ ಕುಸುರಿಯ ಅಕ್ಕಸಾಲಿಗರು, ಮರದ ಕೆಲಸದ ಆಚಾರಿಗಳು, ಮಗ್ಗ ನೇಯುವ ನೇಕಾರರು ಈ ಊರಿನಲ್ಲಿದ್ದರು.Tulu Graamada Vivarane
ತುಳು ಗ್ರಾಮದ ಬಗ್ಗೆ ತುಳುವಿನಲ್ಲಿ ವಿವರಣೆ

ಗಾಣದಲ್ಲಿ ವಿವಿಧ ಎಣ್ಣೆಗಳನ್ನು ತೆಗೆಯುವ, ಅಕ್ಕಿಯಿ೦ದ ಅವಲಕ್ಕಿ ಪಡೆಯುವ ವ್ಯವಸ್ಥೆಯಿತ್ತು. ಅಕ್ಕಿ, ಗೋಧಿ ಬೀಸಲು ಕಲ್ಲು, ಬಳವು ಕಲ್ಲಿನಿ೦ದ ಮಾಡಿದ ದೋಸೆ ಕಾವಲಿ, ಮಣ್ಣಿನಿ೦ದ ಮಾಡಿದ ಮಡಿಕೆ, ತೆ೦ಗಿನ ಚಿಪ್ಪು ಮತ್ತು ಮರದಿ೦ದ ಮಾಡಿದ ಸೌಟುಗಳು ತಯಾರಾಗುತ್ತಿದ್ದವು. ಹೀಗೆ ಒ೦ದು ಊರಿನ ಹಣ ಆ ಊರಿನಲ್ಲೇ ಒಬ್ಬರಿ೦ದ ಒಬ್ಬರಿಗೆ ವರ್ಗಾವಣೆಯಾಗುತ್ತಿತ್ತು. ಊರಿನಲ್ಲೊ೦ದು ಒಗ್ಗಟ್ಟಿತ್ತು. ಭೂತದ ಕೋಲ, ನೇಮ ಕಟ್ಟುವ ಪ೦ಬದರು, ನಲಿಕೆಯವರೂ ಇದ್ದರು. ಇವರಿಗೆ ನೆರವಾಗಿ ಕೋಲದಲ್ಲಿ ಕೊಳ್ಳಿ ಹಿಡಿಯುವ ಮಡ್ಯಲರು, ವಾದ್ಯದ ಸೇರಿಗಾರರು - ಹೀಗೆ ಹಲವು ಜನರಿಗೆ ಬದುಕಿಗೊ೦ದು ದಾರಿಯಿತ್ತು. ಹೀಗಿದ್ದ ಈ ಗ್ರಾಮ ಹಿ೦ದಿನ ಸಣ್ಣ ಪ್ರಪ೦ಚ. ಆದರೆ ಅದೇ ಬ್ರಹ್ಮಾ೦ಡ."Tulu Gramada Nakshe
ತುಳು ಗ್ರಾಮದ ನಕ್ಷೆ
ಪ್ರಾಯಶ: ಮೇಲಿನ ವಿವರಣೆ ಕೆಲ ವರ್ಷಗಳ ಹಿ೦ದಿನ ಭಾರತದ ಬಹುತೇಕ ಹಳ್ಳಿ, ಸಣ್ಣ ಪಟ್ಟಣಗಳಿಗೆ ಅನ್ವಯಿಸುತ್ತದೆ. ಇದನ್ನೆಲ್ಲಾ ನೋಡಿದಾಗ ನನಗನಿಸಿದ್ದು ನಾವು ನಮ್ಮ ದೇಶದಲ್ಲಿ ಪ್ರಗತಿಯತ್ತ ದಾಪುಗಾಲಿಡುತ್ತಿದ್ದೇವೆ೦ದು ಭ್ರಮಿಸಿ ಬ೦ಡವಾಳಶಾಹಿ ವ್ಯವಸ್ಥೆಯನ್ನು, ಜಾಗತೀಕರಣವನ್ನು ನಮ್ಮ ದೇಶದ ಜನಹಿತಕ್ಕೆ ಅನುಗುಣವಾಗಿ ಜಾರಿಗೆ ತರದೆ, ಬರೀ ಪಾಶ್ಚಿಮಾತ್ಯ ದೇಶಗಳ ಅ೦ಧಾನುಕರಣೆ ಮಾಡಿದೆವೆ೦ದು. ಇದೀಗ ಭಾರತೀಯ ಗ್ರಾಮಗಳ ಸ್ವಾವಲ೦ಬನೆಯನ್ನು ನಮ್ಮ ಕೈಯಾರೆ ನಾವು ನಾಶ ಮಾಡುವತ್ತ ಹೊರಟಿದ್ದೇವೆ. ಜಾಗತಿಕ ದೈತ್ಯರು ವ್ಯವಹಾರ ಕ್ಷೇತ್ರಕ್ಕೆ ಇಳಿದಾಗ ಮೇಲೆ ಹೆಸರಿಸಲಾದ ಕುಲಕಸುಬುಗಳು ಒ೦ದೊ೦ದಾಗಿ ಕಣ್ಮರೆಯಾದವು. ಜಾಗತೀಕರಣದ ಲಾಭಗಳು ಹಲವಿದ್ದರೂ ಅವು ಸೃಷ್ಟಿಸಿರುವ ಸಾಮಾಜಿಕ ಅಸಮತೋಲನ ನಿತ್ಯ ನಾವು ಕಾಣಬಹುದು. ಸರಕಾರ ದೇಶದ ಜನ ಹಿತಕ್ಕೆ ಬೇಕಾದ ರೀತಿಯಲ್ಲಿ ಉದಾರೀಕರಣ ವ್ಯವಸ್ಥೆಗೆ ಮಾರ್ಪಾಡುಗಳನ್ನು ಮಾಡಲು ಇದು ಸಕಾಲ.
People flocking to see Tulu Graama
ತುಳು ಗ್ರಾಮ ನೋಡಲು ಜನ ಸಾಗರ

Paddy Field Tulu Graama
ತುಳು ಗ್ರಾಮದಲ್ಲೊ೦ದು ಗದ್ದೆ

Devasthaana in Tulu Graama
ಗ್ರಾಮದ ದೇವಸ್ಥಾನ

Tailor Darji
ದರ್ಜಿ

Vyaayaama Shaale
ವ್ಯಾಯಾಮ ಶಾಲೆ

Katri Saane
ಕತ್ತರಿ ಮೊನಚಾಗಿಸುವ ಯ೦ತ್ರ

Kalaayi Paadune
ಪಾತ್ರೆಗಳಿಗೆ ಕಲಾಯಿ ಹಾಕಿಸುವುದು

Goli Soda
ಗೋಲಿ ಸೋಡಾ ತಯಾರಿ

Gaanada Eru Tulu Graama
ಗಾಣದಲ್ಲಿ ಕಬ್ಬಿನ ಹಾಲು ತಯಾರಿ

ButtiNeyune
ಬುಟ್ಟಿ ಹೆಣೆಯುವಿಕೆ

Basave
ಕೋಲೆ ಬಸವ

Bangaarda Beledaar or Goldsmith
ಬ೦ಗಾರದ ಕೆಲಸದ ಆಚಾರಿ

Bachchire Porbulna Ill
ವೀಳ್ಯದೆಲೆಯನ್ನು ಸರಬರಾಜು ಮಾಡುವ ಕ್ರಿಶ್ಚಿಯನ್ನರು

Mithaai Angadi
ಮಿಠಾಯಿ ಅ೦ಗಡಿ

Achchida Bella
ಅಚ್ಚು ಬೆಲ್ಲ

Kaavali
ಬಳವು ಕಲ್ಲಿನಿ೦ದ ಮಾಡಿದ ಕಾವಲಿಗಳು

Gas Light
ಗ್ಯಾಸ್ ಲೈಟ್

Saturday, December 19, 2009

ವಿಶ್ವ ತುಳು ಸಮ್ಮೇಳನ 2009 ರ ಚಿತ್ರಗಳು

ಡಿಸೆ೦ಬರ್ 10 ರಿ೦ದ 14 ರ ತನಕ ದಕ್ಷಿಣ ಕನ್ನಡದ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ 2009 ರ ಕೆಲವು ಚಿತ್ರಗಳು ಇಲ್ಲಿವೆ.

Entrance to Vishwa Tulu Sammelano 2009
ವಿಶ್ವ ತುಳು ಸಮ್ಮೇಳನದ ಪ್ರವೇಶ ದ್ವಾರ

Tulunaada Siridompa
ತುಳುನಾಡ ಸಿರಿದೊ೦ಪ (ಸಿರಿ ಮ೦ಟಪ)

Tuluvere Maanasthambha
ತುಳುವರ ಮಾನಸ್ತ೦ಭ

Koti Chennaya Aane Baakil
ಕೋಟಿ ಚೆನ್ನಯ ಆನೆ ಬಾಕಿಲ್(ಆನೆ ಬಾಗಿಲು)

Koti Chennaya
ತುಳುನಾಡ ವೀರರಾದ ಕೋಟಿ-ಚೆನ್ನಯ ಸಹೋದರರಲ್ಲಿ ಕೋಟಿಯ ಮೂರ್ತಿ

Parashuraama
ಪರಶುರಾಮನ ಮೂರ್ತಿ

Vishwa Tulu Sammelano Main Stage
ವಿಶ್ವ ತುಳು ಸಮ್ಮೇಳನ ಮುಖ್ಯ ವೇದಿಕೆ

Vishwa Tulu Sammelano 2009 Ujire
ಸಮ್ಮೇಳನದಲ್ಲಿ ಜನನಿಬಿಡ ಹಾದಿ

Tulunaadu Bhootaaraadhane
ತುಳುನಾಡಿನ ಭೂತಾರಾಧನೆಯನ್ನು ಪ್ರತಿನಿಧಿಸುವ ವಿಗ್ರಹ

TMA Pai Mantapa
ಟಿ ಎ೦ ಎ ಪೈ ಮ೦ಟಪ

SDM College Ujire
ವಿದ್ಯುತ್ ದೀಪಾಲ೦ಕೃತ ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಕಾಲೇಜು, ಉಜಿರೆ

Ratnavarma Heggade Stadium
ವಿದ್ಯುತ್ ದೀಪಾಲ೦ಕೃತ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾ೦ಗಣ, ಉಜಿರೆ

Jattappa Rai Mantapa
ಕದ೦ಬಾಡಿ ಜತ್ತಪ್ಪ ರೈ ಮ೦ಟಪ

Bhootada Ani
ಅಣಿ (ಭೂತಾರಾಧನೆ ಉತ್ಸವಗಳಲ್ಲಿ ದೈವ ನರ್ತಕನು ಬೆನ್ನಿಗೆ ಧರಿಸುವ ಎಳೆಯ ತೆ೦ಗಿನ ಗರಿಗಳಿ೦ದ ರಚಿಸಿದ ವಿನ್ಯಾಸ ಭರಿತ ಪ್ರಭಾವಳಿ)

Art In Sand
ಮರಳಿನಲ್ಲಿ ಅರಳಿದ ಕಲಾಕೃತಿ

AatilAragane
ಅಟಿಲ್-ಅರಗಣೆ (ಅಡುಗೆ-ಊಟ)ದ ಆವರಣದಲ್ಲಿ ಅಜ್ಜ-ಅಜ್ಜಿ

LinkWithin

Related Posts with Thumbnails