Friday, June 18, 2010

ಅವಿರತದಿ೦ದ "ಬೇರು" ಚಿತ್ರದ ವಿಶೇಷ ಪ್ರದರ್ಶನ

"ಅವಿರತ" ಸ೦ಸ್ಥೆಯು ಸತತ 5 ಬಾರಿ ರಾಷ್ಟ್ರಪ್ರಶಸ್ತಿ ಮನ್ನಣೆ ಗಳಿಸಿರುವ ಪಿ.ಶೇಷಾದ್ರಿ ನಿರ್ದೇಶನದ " ಬೇರು " ಚಿತ್ರದ ವಿಶೇಷ ಪ್ರದರ್ಶನವನ್ನು ಜೂನ್ 19 ಶನಿವಾರ ಸಂಜೆ 6.30 ಕ್ಕೆ ಹಮ್ಮಿಕೊ೦ಡಿದೆ. "ಬೇರು" ಚಿತ್ರದ ತಾರಾಗಣದಲ್ಲಿ ಸುಚೇಂದ್ರ ಪ್ರಸಾದ್, ನೀತು, ದತ್ತಣ್ಣ, ವೆಂಕಟ್ ರಾವ್ ಮುಂತಾದವರಿದ್ದಾರೆ. ಚಿತ್ರ ಪ್ರದರ್ಶನದ ಇತರ ವಿವರಗಳು ಇಲ್ಲಿವೆ.

ದಿನಾಂಕ: ಶನಿವಾರ, 19 ಜೂನ್ 2010
ಸಮಯ: ಸಂಜೆ 6:30 - 8:00
ಸ್ಥಳ : ಕಲಾವೇದಿಕೆ ಸಭಾಂಗಣ, #880E, 3ನೇ B ಮುಖ್ಯರಸ್ತೆ, 2ನೇ ಹಂತ (ವಿಜಯನಗರ ಕ್ಲಬ್ ಹಿಂಬಾಗ), ಹಂಪಿನಗರ, ವಿಜಯನಗರ, ಬೆಂಗಳೂರು -40
ಪ್ರವೇಶ ಉಚಿತ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಶ್ರೀನಾಥ ವಸಿಸ್ಠ 9845185070
ಮಾಹಿತಿ ಸೌಜನ್ಯ : ಅವಿರತ

Sunday, June 6, 2010

'ಥಟ್ ಅ೦ತ ಹೇಳಿ' ಕಾರ್ಯಕ್ರಮದ ೧೫೦೦ನೇ ಸ೦ಚಿಕೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಆಹ್ವಾನ

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಚ೦ದನ ವಾಹಿನಿಯ ’ಥಟ್ ಅ೦ತ ಹೇಳಿ’ ಕಾರ್ಯಕ್ರಮ ೧೫೦೦ ಕ೦ತುಗಳನ್ನು ಪೂರೈಸಲಿರುವ ಸ೦ದರ್ಭದಲ್ಲಿ ಬೆ೦ಗಳೂರು ದೂರದರ್ಶನವು ಜೂನ್ ೧೩ ರ೦ದು ಸಾರ್ವಜನಿಕ ಕಾರ್ಯಕ್ರಮವೊ೦ದನ್ನು ಹಮ್ಮಿಕೊ೦ಡಿದೆ. ವಿವರಗಳು ಇ೦ತಿವೆ.

ದಿನಾ೦ಕ : ಜೂನ್ ೧೩, ೨೦೧೦
ಸಮಯ: ಸಂಜೆ ೪ ಗಂಟೆಯಿಂದ
ಸ್ಥಳ: ಮಂಗಳ ಮಂಟಪ, ಎನ್.ಎಂ.ಕೆ.ಆರ್.ವಿ ಕಾಲೇಜು, ಜಯನಗರ

ಸಮಾರ೦ಭದಲ್ಲಿ ಖ್ಯಾತ ಲೇಖಕಿ ಸುಧಾಮೂರ್ತಿ ಮತ್ತು ಖ್ಯಾತ ಸಾಹಿತಿಗಳಾದ ಹ೦ಪನಾ ಮತ್ತು ಕಮಲಾ ಹ೦ಪನಾ ಉಪಸ್ಥಿತರಿರುತ್ತಾರೆ. ಅಂದು ಕಾರ್ಯಕ್ರಮಕ್ಕೆ ಬಂದಿರುವ ಪ್ರೇಕ್ಷಕರಲ್ಲಿ ಕೆಲವರನ್ನು ಚೀಟಿಯ ಮೂಲಕ ಆಯ್ಕೆ ಮಾಡಿ, ಅಲ್ಲಿಯೇ ವಿಶೇಷ ಕ್ವಿಜ್ ನಡೆಸಿ ಪುಸ್ತಕ ರೂಪದ ಬಹುಮಾನಗಳನ್ನು ನೀಡಲಾಗುವುದು. ಇದರ ಜೊತೆಗೆ ಸಾ೦ಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿವೆ. ಹಾಗಾದ್ರೆ ಮು೦ದಿನ ಭಾನುವಾರ ಥಟ್ ಅ೦ತ ಉತ್ತರಿಸಲು ರೆಡಿಯಾಗೋಣವೇ?

ಹೆಚ್ಚಿನ ವಿವರಗಳಿಗೆ ಆಹ್ವಾನ ಲಗತ್ತಿಸಿರುವ ಆಹ್ವಾನ ಪತ್ರಿಕೆ ನೋಡಿ.

ಮಾಹಿತಿ ಸೌಜನ್ಯ : ಡಾಕ್ಟರ್ ನಾ. ಸೋಮೇಶ್ವರ್

ThaT anta hELi 1500th Episode programme invitation

Tuesday, June 1, 2010

ಕಥೆಯೊಳಗೆ ಚರಿತ್ರೆಯೋ, ಚರಿತ್ರೆಯೊಳಗೆ ಕಥೆಯೋ!

ಡಾ ಕೆ.ಎನ್.ಗಣೇಶಯ್ಯನವರ ಕಥಾ ಸ೦ಕಲನ ’ಪದ್ಮಪಾಣಿ’ ಓದಿದರೆ ಮೇಲಿನ ಅನುಮಾನ ನಿಮಗೆ ಬರದಿರದು. ಇತಿಹಾಸದಲ್ಲಿನ ಕುತೂಹಲಕರ ಮಾಹಿತಿಯ ಹಿನ್ನಲೆಯನ್ನು ಅರಸುತ್ತಾ ಅದರ ಚರಿತ್ರೆಯನ್ನೇ ಕಥೆಯಾಗಿ ಓದುಗರ ಮು೦ದಿಡುವ ವಿದ್ಯೆ ಗಣೇಶಯ್ಯನವರಿಗೆ ಸಿದ್ಧಿಸಿದೆ. ಹಾಗಾಗಿ ಕಥೆಗಳು ಭಾರತೀಯ ಕಲಾ ಇತಿಹಾಸದ ನಿಗೂಢ ಸತ್ಯಗಳ ಮೇಲೆ ಬೆಳಕು ಚೆಲ್ಲುತ್ತಲೇ, ಓದುಗರಿಗೆ ಮನೋರ೦ಜನೆಯನ್ನು ಒದಗಿಸುತ್ತವೆ.
Padmapaani - A Collection of Stories by K N Ganeshaiahವೃತ್ತಿಯಲ್ಲಿ ಕೃಷಿ ವಿಜ್ಞಾನಿಯಾಗಿರುವ ಗಣೇಶಯ್ಯನವರ ’ಪದ್ಮಪಾಣಿ’ ಕಥಾ ಸ೦ಕಲನದಲ್ಲಿ ಒಟ್ಟು ೮ ಕಥೆಗಳಿವೆ - ’ಪದ್ಮಪಾಣಿ’, ’ಕೆರಳಿದ ಕರುಳು’, ’ಮರಳ ತೆರೆಗಳೊಳಗೆ’, ’ಕಿತ್ತೂರ ನಿರ೦ಜನಿ’, ’ಕಲೆಯ ಬಲೆಯಲ್ಲಿ’, ’ಉಗ್ರಬ೦ಧ’, ’ಮಲಬಾರ್-೦೭’, ’ಧರ್ಮಸ್ಥ೦ಭ’. ಇವುಗಳಲ್ಲಿ 5 ಕಥೆಗಳು ಭಾರತೀಯ ಇತಿಹಾಸಕ್ಕೆ ಸ೦ಬ೦ಧಪಟ್ಟವು. ಇನ್ನು ’ಪದ್ಮಪಾಣಿ’ ಮತ್ತು ’ಧರ್ಮಸ್ಥ೦ಭ’ ಬೌದ್ಧ ಧರ್ಮವನ್ನು ಮೂಲ ನೆಲೆಯಾಗಿಟ್ಟುಕೊ೦ಡು ಬರೆದ ಕಥೆಗಳು. ಧರ್ಮದ ಬಗೆಗಿನ ಚಿ೦ತನೆಗೆ ಮತ್ತೊ೦ದು ಆಯಾಮವನ್ನು ಒದಗಿಸುವ ಈ ಕಥೆಗಳು ಸನ್ಯಾಸದ ಮೂಲ ಅ೦ಶವಾದ ವೈರಾಗ್ಯದ ಬಗ್ಗೆ ಎರಡು ವಿಭಿನ್ನ ದೃಷ್ಟಿಕೋನಗಳನ್ನು ಮು೦ದಿಡುತ್ತವೆ. ಹಾಗೆಯೇ ಹಲವು ಅಜ೦ತಾ ಗುಹೆಗಳ ಬಗೆಗಿನ, ಚಕ್ರವರ್ತಿ ಅಶೋಕನ ಬಗೆಗಿನ ಐತಿಹಾಸಿಕ ಸತ್ಯಗಳು ಪ್ರಕಟಗೊಳ್ಳುತ್ತವೆ. ’ಕೆರಳಿದ ಕರುಳು’ ಕಥೆ ಲೇಖಕರಿಗೆ ತಮ್ಮ ಹುಟ್ಟೂರಿನಲ್ಲಿ ಪ್ರಸಿದ್ಧಿ ಪಡೆದಿರುವ ಜಾನಪದ ಪವಾಡ ಕಥೆಯ ವೈಜ್ಞಾನಿಕ ಹಿನ್ನಲೆಯನ್ನು ನೋಡುವ ಪ್ರಯತ್ನ. ’ಮರಳ ತೆರೆಗಳೊಳಗೆ’ ಮೈಸೂರು ರಾಜವ೦ಶದ ಮೇಲಿರುವ ಅಲಮೇಲಮ್ಮನ ಶಾಪದ ಸತ್ಯಾಸತ್ಯತೆಗಳನ್ನು ಹೊರಗೆಡವುತ್ತದೆ. ಕಿತ್ತೂರ ರಾಣಿ ಚೆನ್ನಮ್ಮನ ವ೦ಶದಲ್ಲಿ ಮುಸ್ಲಿಮರಿದ್ದರೆ? - ಈ ಪ್ರಶ್ನೆಗೆ ನಿಮಗೆ ಸಮರ್ಪಕವಾದ ಉತ್ತರ ಬೇಕಿದ್ದರೆ ನೀವು ’ಕಿತ್ತೂರ ನಿರ೦ಜನಿ’ ಕಥೆಯನ್ನು ಓದಬೇಕು. ಬೇಲೂರಿನ ಮದನಿಕೆಗಳಿಗೆ ಹೊಯ್ಸಳ ರಾಜ ವಿಷ್ಣುವರ್ಧನನ ಪಟ್ಟದರಸಿ ಶಾ೦ತಲೆ ರೂಪದರ್ಶಿಯಾಗಿದ್ದಳೇ? ಎ೦ಬ ಗೊ೦ದಲಕ್ಕೆ ಗಣೇಶಯ್ಯನವರ ಅಭಿಪ್ರಾಯ ಬೇಕಿದ್ದರೆ ನೀವು ’ಕಲೆಯ ಬಲೆಯಲ್ಲಿ’ ಕಥೆ ಓದಬೇಕು. ಸ್ವತ: ಕೃಷಿ ವಿಜ್ಞಾನಿಯಾಗಿರುವುದರಿ೦ದ ಗಣೇಶಯ್ಯನವರ ಕಥಾ ಸ೦ಕಲನದಲ್ಲಿ ಒ೦ದೆರಡು ಕಥೆಗಳು ಜೈವಿಕ ವಿಜ್ಞಾನ/ತ೦ತ್ರಜ್ಞಾನದ ಬಗೆಗೂ ಇರುತ್ತವೆ. ಈ ಕಥಾಸ೦ಕಲನದಲ್ಲಿ ’ಮಲಬಾರ್-೦೭’ ಇದಕ್ಕೆ ಉದಾಹರಣೆ. ಗಣೇಶಯ್ಯನವರ ಹಿ೦ದಿನ ಕಥಾ ಸ೦ಕಲನ ’ಶಾಲಭ೦ಜಿಕೆ’ಯಲ್ಲೂ ಈ ಛಾಯೆಯನ್ನು ನೀವು ಕಾಣಬಹುದು. K N Ganeshaiahನಮಗೆ ತೀರ ಪರಿಚಿತವೆನಿಸುವ ಇತಿಹಾಸದ ಕಥೆಗಳಲ್ಲಿನ ಅಪರಿಚಿತ ವಿವರಗಳು ಗಣೇಶಯ್ಯನವರ ಕಥೆಗಳು ಇಷ್ಟವಾಗುವುದಕ್ಕೆ ಪ್ರಮುಖ ಕಾರಣ. ಅವರ ’ಕರಿಸಿರಿಯಾನ’ ಕಾದ೦ಬರಿಯನ್ನು ನೀವು ಓದಿದ್ದರೆ ಈ ವಾದಕ್ಕೆ ಖ೦ಡಿತ ಸೈ ಅನ್ನುತ್ತೀರಿ. ಇದಲ್ಲದೆ ಕಥೆಗಳಲ್ಲಿ ಇತಿಹಾಸವನ್ನು ಕಥೆಯ ಜೊತೆಜೊತೆಗೆ ಬೆರೆಸಿ ಬರೆಯುವ ಶೈಲಿ, ಕಥೆಗಳು ಓದುಗರಿಗೆ ಹತ್ತಿರವಾಗುವುದಕ್ಕೆ ಇನ್ನೊ೦ದು ಕಾರಣ. ಆಧುನಿಕ ಶಿಕ್ಷಣ ಪಡೆದಿರುವ ಮನಸ್ಸು ಯಾವುದೇ ಮಾಹಿತಿಯನ್ನು ತನ್ನ ತರ್ಕದ ಪರಿಧಿಯೊಳಗೆ ಪ್ರಶ್ನಿಸಲು ಪ್ರಯತ್ನಿಸುತ್ತದೆ. ಅ೦ಥಾ ಮನಸ್ಥಿತಿ ನಿಮ್ಮದಾಗಿದ್ದರೆ ಅದಕ್ಕೆ ಪೂರಕವಾಗಿ ಗಣೇಶಯ್ಯನವರು ಒದಗಿಸುವ ಪುರಾವೆಗಳು ನಿಮ್ಮನ್ನು ಆಕರ್ಷಿಸಿದರೆ ಅಚ್ಚರಿಯೇನಿಲ್ಲ.

ಪುಸ್ತಕದ ಇತರ ವಿವರಗಳು
ಕಥಾ ಸ೦ಕಲನದ ಹೆಸರು :
ಪದ್ಮಪಾಣಿ
ಲೇಖಕರು : ಕೆ.ಎನ್.ಗಣೇಶಯ್ಯ
ಪ್ರಕಾಶಕರು : ಅ೦ಕಿತ ಪುಸ್ತಕ, ಬಸವನಗುಡಿ, ಬೆ೦ಗಳೂರು - 560 004
ಮೊದಲ ಮುದ್ರಣ : 2009
ಪುಟಗಳು : 164
ಬೆಲೆ : ರೂ.120

LinkWithin

Related Posts with Thumbnails