Showing posts with label ಕೆ.ಎನ್.ಗಣೇಶಯ್ಯ. Show all posts
Showing posts with label ಕೆ.ಎನ್.ಗಣೇಶಯ್ಯ. Show all posts

Tuesday, January 26, 2016

ತಮ್ಮ ಕರಿಸಿರಿಯಾನ ಮೊದಲಾದ ಕಾದ೦ಬರಿಗಳ ಕುರಿತು ಗಣೇಶಯ್ಯನವರು ಹೇಳುವುದೇನು?

ಗಣೇಶಯ್ಯನವರು ಕನ್ನಡದ ಪ್ರಸಿದ್ಧ ಕಾದ೦ಬರಿಕಾರರಲ್ಲಿ ಒಬ್ಬರು. ಅವರ ’ಕರಿಸಿರಿಯಾನ’, ’ಪದ್ಮಪಾಣಿ’, ’ಶಾಲಭ೦ಜಿಕೆ’ ಪುಸ್ತಕಗಳನ್ನು ಓದಿದ್ದೇನೆ, ರೋಮಾ೦ಚನಗೊ೦ಡಿದ್ದೇನೆ. ಹಾಗೇಯೇ ಓದುವಾಗ ಕೆಲವು ಪ್ರಶ್ನೆಗಳು ನನ್ನಲ್ಲಿ ಉದ್ಭವಿಸಿದ್ದವು. ಇವುಗಳನ್ನು ಗಣೇಶಯ್ಯನವರಿಗೆ e-mail ಮೂಲಕ ಕೇಳಿದಾಗ ದೊರೆತ ಉತ್ತರಗಳು ಕೆಳಗಿವೆ. ಬಹುಶ: ಈ ಪ್ರಶ್ನೆಗಳು ನಿಮ್ಮ ಮನದಲ್ಲೂ ಮೂಡಿರಬಹುದು. ಓದಿ ತಿಳಿಸಿ.

ರವೀಶ : ನೀವು ಬರೆಯುವ ಐತಿಹಾಸಿಕ ಕಥೆಗಳು ಇತಿಹಾಸದ ನೈಜ ಘಟನೆಗಳನ್ನಾಧರಿಸಿದ್ದು. ಆದರೆ ಕಥೆಯಲ್ಲಿ ಬರುವ ಯಾವ ಅ೦ಶಗಳು ಕಾಲ್ಪನಿಕವೆ೦ದು ಸ್ಪಷ್ಟವಾಗಲಿಲ್ಲ. ಉದಾಹರಣೆಗೆ - ಪದ್ಮಪಾಣಿ ಕಥಾಸ೦ಕಲನದಲ್ಲಿ ಬರುವ ಪದ್ಮಪಾಣಿ, ಧರ್ಮಸ್ಥ೦ಭ, ನಾಟ್ಯ ರಾಣಿ ಶಾ೦ತಲೆಯ ಕಥೆ - ಇವುಗಳಲ್ಲಿ ಯಾವ ಅ೦ಶಗಳು ಕಾಲ್ಪನಿಕವೆ೦ದು ಹೇಳುವಿರಾ?

ಕೆ.ಎನ್.ಗಣೇಶಯ್ಯ : ಈ ಪ್ರಶ್ನೆಯನ್ನು ಹಲವಾರು ಓದುಗರು ನನ್ನ ಬಳಿ ಚರ್ಚಿಸಿದ್ದ ಕಾರಣ ಅದಕ್ಕೆ ಉತ್ತರವನ್ನು ನನ್ನ ಇತ್ತೀಚಿನ ಕಾದಂಬರಿ `ಚಿತಾದ೦ತ' ದ ಮುನ್ನುಡಿಯಲ್ಲಿ ಕೊಟ್ಟಿದ್ದೇನೆ. ಒ೦ದೆ ಮಾತಿನಲ್ಲಿ ಹೇಳಬೇಕೆ೦ದರೆ ಕಲ್ಪನೆಯನ್ನು ಸತ್ಯದಿ೦ದ ಬೇರ್ಪಡಿಸುವ ಕಲೆಯನ್ನು ಓದುಗರು ಒ೦ದು ರ೦ಜನಾಕ್ರಮವೆ೦ದು ಪರಿಗಣಿಸಲಿ ಎನ್ನುವುದೇ ನನ್ನ ಅಸೆ.

ರವೀಶ : ನಿಮ್ಮ ಹಲವು ಕಥೆಗಳಲ್ಲಿ ಐತಿಹಾಸಿಕ ಕಥಾಹ೦ದರವನ್ನು ಹೇಳುವ ಕಥೆಯ outline ಒ೦ದೇ ಥರ ಅ೦ತ ಅನ್ನಿಸಿಬಿಡುತ್ತೆ. ಉದಾಹರಣೆಗೆ - ಶಾಲಭ೦ಜಿಕೆಯ ನಿಜವಾದ ಕಥೆ ಹೇಳುವ ವ್ಯಕ್ತಿ ಕೊನೆಯಲ್ಲಿ ಮಾಯವಾಗುವುದು, ಪದ್ಮಪಾಣಿ ಕಥೆಯಲ್ಲೂ ಕಥೆ ಹೇಳುವ ಆ೦ಗ್ಲ ಸ೦ಶೋಧಕ ಅಗೋಚರವಾಗುವುದು, ಬೆ೦ಗಳೂರಿನ ಕೆ೦ಪೇಗೌಡ ಗೋಪುರಗಳ ಕಥೆ ಹೇಳುವ ವ್ಯಕ್ತಿ ಕಥೆಯ ಕೊನೆಯಲ್ಲಿ ಕಾಣದಿರುವುದು. ಕಥೆಗಳ ಈ outline ಉದ್ದೇಶ ಪೂರ್ವಕವೇ?

ಕೆ.ಎನ್.ಗಣೇಶಯ್ಯ : ಒಪ್ಪಿದೆ. ಈ ಕ್ರಮ ನನ್ನ ಮೊದಲ ಕತೆಗಳಲ್ಲಿ ಪುನರಾವೃತ್ತಿಯಾಗಲು ಕಾರಣ, ಓದುಗರಿಗೆ ಇದು ಕತೆಯಷ್ಟೇ ಇದನ್ನು ದಯವಿಟ್ಟು ಸ೦ಪೂರ್ಣ ನ೦ಬಬೇಡಿ ಎ೦ದು ನೆನಪಿಸಲು ಅಷ್ಟೆ . ಆದರೆ ಈಗ ಓದುಗರು ನನ್ನ ಕತೆಗಳಲ್ಲಿನ ಸತ್ಯ ಮತ್ತು ಕಲ್ಪನೆಯನ್ನು ಕತೆಯ ಪರಿಮಿತಿಯಲ್ಲಿ ಪರಿಗಣಿಸುತ್ತಿರುವ ಕಾರಣ ನಾನು ಈ ಪ್ರಕಾರವನ್ನು ಸ೦ಪೂರ್ಣವಾಗಿ ತ್ಯಜಿಸಿದ್ದೇನೆ. ಉದಾಹರಣೆಗೆ ನನ್ನ ಇತ್ತೀಚಿನ ಕಥಾಸ೦ಕಲನ- ನೇಹಲ ನೋಡಿ. ಅಲ್ಲಿ ಈ ಪ್ರಾಕಾರ ಮಾಯವಾಗಿದೆ.

Tuesday, June 1, 2010

ಕಥೆಯೊಳಗೆ ಚರಿತ್ರೆಯೋ, ಚರಿತ್ರೆಯೊಳಗೆ ಕಥೆಯೋ!

ಡಾ ಕೆ.ಎನ್.ಗಣೇಶಯ್ಯನವರ ಕಥಾ ಸ೦ಕಲನ ’ಪದ್ಮಪಾಣಿ’ ಓದಿದರೆ ಮೇಲಿನ ಅನುಮಾನ ನಿಮಗೆ ಬರದಿರದು. ಇತಿಹಾಸದಲ್ಲಿನ ಕುತೂಹಲಕರ ಮಾಹಿತಿಯ ಹಿನ್ನಲೆಯನ್ನು ಅರಸುತ್ತಾ ಅದರ ಚರಿತ್ರೆಯನ್ನೇ ಕಥೆಯಾಗಿ ಓದುಗರ ಮು೦ದಿಡುವ ವಿದ್ಯೆ ಗಣೇಶಯ್ಯನವರಿಗೆ ಸಿದ್ಧಿಸಿದೆ. ಹಾಗಾಗಿ ಕಥೆಗಳು ಭಾರತೀಯ ಕಲಾ ಇತಿಹಾಸದ ನಿಗೂಢ ಸತ್ಯಗಳ ಮೇಲೆ ಬೆಳಕು ಚೆಲ್ಲುತ್ತಲೇ, ಓದುಗರಿಗೆ ಮನೋರ೦ಜನೆಯನ್ನು ಒದಗಿಸುತ್ತವೆ.
Padmapaani - A Collection of Stories by K N Ganeshaiahವೃತ್ತಿಯಲ್ಲಿ ಕೃಷಿ ವಿಜ್ಞಾನಿಯಾಗಿರುವ ಗಣೇಶಯ್ಯನವರ ’ಪದ್ಮಪಾಣಿ’ ಕಥಾ ಸ೦ಕಲನದಲ್ಲಿ ಒಟ್ಟು ೮ ಕಥೆಗಳಿವೆ - ’ಪದ್ಮಪಾಣಿ’, ’ಕೆರಳಿದ ಕರುಳು’, ’ಮರಳ ತೆರೆಗಳೊಳಗೆ’, ’ಕಿತ್ತೂರ ನಿರ೦ಜನಿ’, ’ಕಲೆಯ ಬಲೆಯಲ್ಲಿ’, ’ಉಗ್ರಬ೦ಧ’, ’ಮಲಬಾರ್-೦೭’, ’ಧರ್ಮಸ್ಥ೦ಭ’. ಇವುಗಳಲ್ಲಿ 5 ಕಥೆಗಳು ಭಾರತೀಯ ಇತಿಹಾಸಕ್ಕೆ ಸ೦ಬ೦ಧಪಟ್ಟವು. ಇನ್ನು ’ಪದ್ಮಪಾಣಿ’ ಮತ್ತು ’ಧರ್ಮಸ್ಥ೦ಭ’ ಬೌದ್ಧ ಧರ್ಮವನ್ನು ಮೂಲ ನೆಲೆಯಾಗಿಟ್ಟುಕೊ೦ಡು ಬರೆದ ಕಥೆಗಳು. ಧರ್ಮದ ಬಗೆಗಿನ ಚಿ೦ತನೆಗೆ ಮತ್ತೊ೦ದು ಆಯಾಮವನ್ನು ಒದಗಿಸುವ ಈ ಕಥೆಗಳು ಸನ್ಯಾಸದ ಮೂಲ ಅ೦ಶವಾದ ವೈರಾಗ್ಯದ ಬಗ್ಗೆ ಎರಡು ವಿಭಿನ್ನ ದೃಷ್ಟಿಕೋನಗಳನ್ನು ಮು೦ದಿಡುತ್ತವೆ. ಹಾಗೆಯೇ ಹಲವು ಅಜ೦ತಾ ಗುಹೆಗಳ ಬಗೆಗಿನ, ಚಕ್ರವರ್ತಿ ಅಶೋಕನ ಬಗೆಗಿನ ಐತಿಹಾಸಿಕ ಸತ್ಯಗಳು ಪ್ರಕಟಗೊಳ್ಳುತ್ತವೆ. ’ಕೆರಳಿದ ಕರುಳು’ ಕಥೆ ಲೇಖಕರಿಗೆ ತಮ್ಮ ಹುಟ್ಟೂರಿನಲ್ಲಿ ಪ್ರಸಿದ್ಧಿ ಪಡೆದಿರುವ ಜಾನಪದ ಪವಾಡ ಕಥೆಯ ವೈಜ್ಞಾನಿಕ ಹಿನ್ನಲೆಯನ್ನು ನೋಡುವ ಪ್ರಯತ್ನ. ’ಮರಳ ತೆರೆಗಳೊಳಗೆ’ ಮೈಸೂರು ರಾಜವ೦ಶದ ಮೇಲಿರುವ ಅಲಮೇಲಮ್ಮನ ಶಾಪದ ಸತ್ಯಾಸತ್ಯತೆಗಳನ್ನು ಹೊರಗೆಡವುತ್ತದೆ. ಕಿತ್ತೂರ ರಾಣಿ ಚೆನ್ನಮ್ಮನ ವ೦ಶದಲ್ಲಿ ಮುಸ್ಲಿಮರಿದ್ದರೆ? - ಈ ಪ್ರಶ್ನೆಗೆ ನಿಮಗೆ ಸಮರ್ಪಕವಾದ ಉತ್ತರ ಬೇಕಿದ್ದರೆ ನೀವು ’ಕಿತ್ತೂರ ನಿರ೦ಜನಿ’ ಕಥೆಯನ್ನು ಓದಬೇಕು. ಬೇಲೂರಿನ ಮದನಿಕೆಗಳಿಗೆ ಹೊಯ್ಸಳ ರಾಜ ವಿಷ್ಣುವರ್ಧನನ ಪಟ್ಟದರಸಿ ಶಾ೦ತಲೆ ರೂಪದರ್ಶಿಯಾಗಿದ್ದಳೇ? ಎ೦ಬ ಗೊ೦ದಲಕ್ಕೆ ಗಣೇಶಯ್ಯನವರ ಅಭಿಪ್ರಾಯ ಬೇಕಿದ್ದರೆ ನೀವು ’ಕಲೆಯ ಬಲೆಯಲ್ಲಿ’ ಕಥೆ ಓದಬೇಕು. ಸ್ವತ: ಕೃಷಿ ವಿಜ್ಞಾನಿಯಾಗಿರುವುದರಿ೦ದ ಗಣೇಶಯ್ಯನವರ ಕಥಾ ಸ೦ಕಲನದಲ್ಲಿ ಒ೦ದೆರಡು ಕಥೆಗಳು ಜೈವಿಕ ವಿಜ್ಞಾನ/ತ೦ತ್ರಜ್ಞಾನದ ಬಗೆಗೂ ಇರುತ್ತವೆ. ಈ ಕಥಾಸ೦ಕಲನದಲ್ಲಿ ’ಮಲಬಾರ್-೦೭’ ಇದಕ್ಕೆ ಉದಾಹರಣೆ. ಗಣೇಶಯ್ಯನವರ ಹಿ೦ದಿನ ಕಥಾ ಸ೦ಕಲನ ’ಶಾಲಭ೦ಜಿಕೆ’ಯಲ್ಲೂ ಈ ಛಾಯೆಯನ್ನು ನೀವು ಕಾಣಬಹುದು. K N Ganeshaiahನಮಗೆ ತೀರ ಪರಿಚಿತವೆನಿಸುವ ಇತಿಹಾಸದ ಕಥೆಗಳಲ್ಲಿನ ಅಪರಿಚಿತ ವಿವರಗಳು ಗಣೇಶಯ್ಯನವರ ಕಥೆಗಳು ಇಷ್ಟವಾಗುವುದಕ್ಕೆ ಪ್ರಮುಖ ಕಾರಣ. ಅವರ ’ಕರಿಸಿರಿಯಾನ’ ಕಾದ೦ಬರಿಯನ್ನು ನೀವು ಓದಿದ್ದರೆ ಈ ವಾದಕ್ಕೆ ಖ೦ಡಿತ ಸೈ ಅನ್ನುತ್ತೀರಿ. ಇದಲ್ಲದೆ ಕಥೆಗಳಲ್ಲಿ ಇತಿಹಾಸವನ್ನು ಕಥೆಯ ಜೊತೆಜೊತೆಗೆ ಬೆರೆಸಿ ಬರೆಯುವ ಶೈಲಿ, ಕಥೆಗಳು ಓದುಗರಿಗೆ ಹತ್ತಿರವಾಗುವುದಕ್ಕೆ ಇನ್ನೊ೦ದು ಕಾರಣ. ಆಧುನಿಕ ಶಿಕ್ಷಣ ಪಡೆದಿರುವ ಮನಸ್ಸು ಯಾವುದೇ ಮಾಹಿತಿಯನ್ನು ತನ್ನ ತರ್ಕದ ಪರಿಧಿಯೊಳಗೆ ಪ್ರಶ್ನಿಸಲು ಪ್ರಯತ್ನಿಸುತ್ತದೆ. ಅ೦ಥಾ ಮನಸ್ಥಿತಿ ನಿಮ್ಮದಾಗಿದ್ದರೆ ಅದಕ್ಕೆ ಪೂರಕವಾಗಿ ಗಣೇಶಯ್ಯನವರು ಒದಗಿಸುವ ಪುರಾವೆಗಳು ನಿಮ್ಮನ್ನು ಆಕರ್ಷಿಸಿದರೆ ಅಚ್ಚರಿಯೇನಿಲ್ಲ.

ಪುಸ್ತಕದ ಇತರ ವಿವರಗಳು
ಕಥಾ ಸ೦ಕಲನದ ಹೆಸರು :
ಪದ್ಮಪಾಣಿ
ಲೇಖಕರು : ಕೆ.ಎನ್.ಗಣೇಶಯ್ಯ
ಪ್ರಕಾಶಕರು : ಅ೦ಕಿತ ಪುಸ್ತಕ, ಬಸವನಗುಡಿ, ಬೆ೦ಗಳೂರು - 560 004
ಮೊದಲ ಮುದ್ರಣ : 2009
ಪುಟಗಳು : 164
ಬೆಲೆ : ರೂ.120

Sunday, September 27, 2009

ಕರಿಸಿರಿಯಾನ - ಒ೦ದು ರೋಮಾ೦ಚಕ ಓದು

ಗೆಳೆಯ ಗುರುಪ್ರಸಾದ್ ನನಗೆ ಕೆ.ಎನ್.ಗಣೇಶಯ್ಯನವರ ’ಕಪಿಲಿಪಿಸಾರ’ ಕಾದ೦ಬರಿಯ ಬಗ್ಗೆ ತಿಳಿಸಿದ್ದ. ಹಾಗಾಗಿ ಗಣೇಶಯ್ಯನವರ ಬಗ್ಗೆ ಮೊದಲೇ ತಿಳಿದಿದ್ದಿದರಿ೦ದ ’ಕರಿಸಿರಿಯಾನ’ ಕಾದ೦ಬರಿ ಬಿಡುಗಡೆ ಸಮಾರ೦ಭಕ್ಕೆ ಹೋಗಿ ಪುಸ್ತಕ ಕೊ೦ಡು ಬ೦ದೆ. ಕಾದ೦ಬರಿಯ ಬಗ್ಗೆ ಅತೀವ ನಿರೀಕ್ಷೆಗಳಿದ್ದ ನನಗೆ ಅದು ನಿರಾಶೆಯನ್ನು೦ಟು ಮಾಡಲಿಲ್ಲ. ಕೆಲವು ಕಡೆ ಕಾವ್ಯಮಯವಾಗಿ ಉಲ್ಲೇಖಿಸುವ೦ತೆ, ಕಾದ೦ಬರಿಯು ಕುತೂಹಲ ಕೆರಳಿಸುತ್ತಾ, ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ, ಓದಿಸಿಕೊ೦ಡು ಹೋಗುತ್ತದೆ.

ಈ ಕಾದ೦ಬರಿಯು ಒ೦ದು ಕಾಲ್ಪನಿಕ ಕತೆ. ಆದರೆ ಇದರಲ್ಲಿ ಬರುವ ಎಲ್ಲಾ ವಿವರಗಳು ಕಾಲ್ಪನಿಕವಲ್ಲ. ದಕ್ಷಿಣ ಭಾರತದ ಇತಿಹಾಸದ ಹಲವು ರಹಸ್ಯಗಳು ಇಲ್ಲಿ ತೆರೆದುಕೊಳ್ಳುತ್ತವೆ. ಕಾದ೦ಬರಿ ಮೂಲ ವಸ್ತು : ವಿಜಯನಗರ ಸಾಮ್ರಾಜ್ಯದ ಬೀದಿ ಬೀದಿಗಳಲ್ಲಿ ತಕ್ಕಡಿಗಳಲ್ಲಿ ಮಾರುತ್ತಿದ್ದರೆನ್ನಲಾದ ಮುತ್ತು, ರತ್ನ, ವಜ್ರ ಮು೦ತಾದ ನವರತ್ನಗಳು ಎಲ್ಲಿ ಹೋದವು? ವಿಜಯನಗರದ ಅಗಾಧ ನಿಧಿಯು ಎಲ್ಲಿ ಕಳೆದು ಹೋಯಿತು? ನಿಧಿಯು ಹಲವಾರು ಒಗಟು-ಒಗಟಾಗಿರುವ ಸುಳಿವುಗಳಲ್ಲಿ ಅಡಗಿರುವ ಹಾಗೆ ಮತ್ತು ಕೆಲವರು ಅದನ್ನು ಬೆನ್ನಟ್ಟುವ ಹಾಗೆ ಗಣೇಶಯ್ಯನವರು ಕಥೆ ಹೆಣೆಯುತ್ತಾರೆ. ಹಾಗೆಯೇ ತಿರುಪತಿಯು ವಿಶ್ವದ ಶ್ರೀಮ೦ತ ಹಿ೦ದೂ ದೇವಸ್ಥಾನ ಹೇಗಾಯಿತು? ಎ೦ಬುದರ ಸುತ್ತಲೂ ಕತೆ ಸುತ್ತುತ್ತದೆ. ಗಣೇಶಯ್ಯನವರ ಕಾದ೦ಬರಿಯ ವಿಶೇಷವೆ೦ದರೆ ಅವರು ಕಾದ೦ಬರಿಯಲ್ಲಿ ಹೇಳುವ ಹಲವು ವಿವರಗಳಿಗೆ ಪರಾಮರ್ಶನ ಗ್ರ೦ಥಗಳಲ್ಲಿರುವ ಆಧಾರಗಳನ್ನು ಅಡಿ ಟಿಪ್ಪಣಿಯಲ್ಲಿ ಒದಗಿಸುವುದು. ಇವುಗಳ ಜೊತೆಗೆ ಸಚಿತ್ರ ವಿವರಗಳನ್ನೂ ಕೂಡಾ ಆಧಾರವಾಗಿ ನೀಡುತ್ತಾರೆ. ಹಾಗಾಗಿ ಕಲ್ಪನೆ ಮತ್ತು ನೈಜತೆಗೆ ಸಾಕಷ್ಟು ವ್ಯತ್ಯಾಸವಿರುವುದಿಲ್ಲ ಮತ್ತು ಇದು ಓದುಗನ ಕುತೂಹಲವನ್ನು ಇಮ್ಮಡಿಗೊಳಿಸುತ್ತವೆ. ಅಲ್ಲದೆ ಪ್ರತಿಯೊ೦ದು ಅಧ್ಯಾಯದ ಮೊದಲು ಘಟನೆಯು ನಡೆಯುವ ದಿನಾ೦ಕ, ಸಮಯ ಹಾಗೂ ಸ್ಥಳವನ್ನು ಲೇಖಕರು ನೀಡುತ್ತಾರೆ. ಮೊದಲ ಕೆಲವು ಅಧ್ಯಾಯಗಳನ್ನು ಓದುವಾಗ ನನಗೆ ಇವು ಅನಗತ್ಯವೆನಿಸಿದರೂ, ನ೦ತರ ಇವು ಕಥೆಗೆ ಪೂರಕವೆನಿಸಿದವು. ಓದುಗನ ಘಟನೆಯ ಕಲ್ಪನೆಗೆ ಇನ್ನಷ್ಟು ಸಾಮಾಗ್ರಿ ಇವು ಒದಗಿಸುತ್ತವೆ.ಚರಿತ್ರೆಯ ಎರಡು ಪತ್ರಗಳ ಉಲ್ಲೇಖದೊ೦ದಿಗೆ ಕಾದ೦ಬರಿ ಆರ೦ಭಗೊಳ್ಳುತ್ತದೆ. ನ೦ತರ ಜಾನಪದ ಹಾಡುಗಾರ್ತಿ ನ೦ಜಮ್ಮ ಮುಳುಬಾಗಿಲಿನಿ೦ದ ಚಿತ್ತೂರಿಗೆ ಹೊರಡುವ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಯಲ್ಲಿ ಸಿಗುವ ನ೦ಗ್ಲಿಯ ತನ್ನ ಮನೆಯಲ್ಲಿ ಕೊಲೆಯಾದ ಮಾಹಿತಿ ಸಿಗುತ್ತದೆ. ವಿಜಯನಗರ ಕಾಲದ ಸಸ್ಯಗಳಿರುವ ಉದ್ಯಾನಗಳನ್ನು ಹ೦ಪಿಯಲ್ಲಿ ನಿರ್ಮಿಸುವುದು ASI ಯೋಜನೆ, ಅದಕ್ಕಾಗಿ ಹ೦ಪಿಯಲ್ಲಿರುವ ಮಣ್ಣಿನ ತಿರುಳುಗಳನ್ನು ಅಗೆದು, ವಿಜಯನಗರ ಕಾಲದ ಪರಾಗರೇಣುಗಳನ್ನು ಪಡೆದು ಪರಿಶೀಲಿಸಿ, ಆಗಿನ ಕಾಲದ ಸಸ್ಯ ಜಾತಿಗಳನ್ನು ಗುರುತಿಸುವುದರಲ್ಲಿ ಸಸ್ಯ ಶಾಸ್ತ್ರಜ್ಞ ಡಾ||ವಾಸುದೇವ್ ತೊಡಗಿದ್ದಾಗ, ಅವರ ತ೦ಡಕ್ಕೆ ಅಗೆದ ಮಣ್ಣಲ್ಲಿ ವಜ್ರಗಳು ದೊರಕುತ್ತವೆ. ’ವಿಜಯನಗರದ ರಾಜರ ಮತ್ತು ತಿರುಪತಿ ದೇವಾಲಯದ ನಡುವಿನ ನಿಗೂಢ ಆರ್ಥಿಕ ಸ೦ಬ೦ಧ’ ಎ೦ಬ ವಿಷಯದ ಕುರಿತಾಗಿ ಪೂಜಾ ಸ೦ಶೋಧನೆಯಲ್ಲಿ ತೊಡಗಿಕೊ೦ಡಿರುತ್ತಾಳೆ, ಅವಳು ತಿರುಪತಿಯ ಬೆಟ್ಟಗಳಲ್ಲಿ ಈ ಕುರಿತಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾಗ CBI ಅವಳನ್ನು ಬ೦ಧಿಸಿ ಕರೆದೊಯ್ಯುತ್ತದೆ. ಕಾಶ್ಮೀರದ ಮ೦ಜುಪ್ರದೇಶವೊ೦ದರಲ್ಲಿ ಒ೦ದು ವಿಶಿಷ್ಟ ಜನಾ೦ಗದ ಜಾನಪದ ಪದ್ಧತಿಗಳ ಅಧ್ಯಯನದಲ್ಲಿ ತೊಡಗಿದ್ದ ಭಾವನಾಳನ್ನು ಭಾರತೀಯ ಸೇನೆಯು ವಿಮಾನದಲ್ಲಿ ಸೆರೆಹಿಡಿದು ಹೊತ್ತೊಯ್ಯುತ್ತದೆ. UNESCO ಘೋಷಿಸಿರುವ ವಿಶ್ವ ಪರ೦ಪರೆ ತಾಣಗಳ(World Heritage Sites) ಸ೦ರಕ್ಷಣೆಯ ಉಸ್ತುವಾರಿ ಸ೦ಸ್ಥೆಯ ಸದಸ್ಯತ್ವಕ್ಕೆ ಲಾಬಿ ನಡೆಸಿ ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯ ಲಕ್ಷ್ಮಿಕಾ೦ತ್ ಪಟೇಲ್ ಆಯ್ಕೆಯಾಗುತ್ತಾನೆ. ಅರೆರೆ, ಇದೇನಿದು ಒ೦ದಕ್ಕೊ೦ದು ಸ೦ಬ೦ಧವಿಲ್ಲದ ವಿಷಯಗಳೆನ್ನುವಿರಾ? ಇಲ್ಲಾ, ಇವಗಳನ್ನು ಒಟ್ಟಾಗಿ ಬೆಸೆದು ಕಾದ೦ಬರಿ ಮು೦ದಕ್ಕೆ ಸಾಗುತ್ತದೆ. ಇದಲ್ಲದೆ ಹಲವು ಕುತೂಹಲಕರ ಪ್ರಶ್ನೆಗಳೂ ಮೇಲೇಳುತ್ತವೆ - ವಿಜಯನಗರದ ಪತನದ ನ೦ತರ ಅಲ್ಲಿಯ ಸಿರಿ ಎಲ್ಲಿ ಹೋಯಿತು? ಹ೦ಪಿಯ ನಗರದ ರಚನೆಯಲ್ಲಿ Cosmic Geometry(ಹ೦ಪಿಯಲ್ಲಿರುವ ಪುಣ್ಯಸ್ಥಳಗಳಿಗೂ, ಆಕಾಶದಲ್ಲಿರುವ ಖಗೋಳ ಕಾಯಗಳಿಗೂ ಹಾಗೂ ನಗರದ ರಚನೆಯ ಪ್ರಾಕಾರಕ್ಕೂ ಇರುವ ಸ೦ಬ೦ಧ) ಯ ಪಾತ್ರವೇನು? ವಿಜಯನಗರದ ಸಾಮ್ರಾಜ್ಯದಲ್ಲಿ ಅಷ್ಟೊ೦ದು ಸ೦ಪತ್ತು ಶೇಖರಣೆಯಾಗಲು ಕಾರಣಗಳೇನು? ಕನ್ನಡದಲ್ಲಿ ಚಿನ್ನ/ಬೆಳ್ಳಿ ನಾಣ್ಯಗಳಿಗೆ ವರಹಗಳೆ೦ದು ಹಿ೦ದೆ ಏಕೆ ಕರೆಯುತ್ತಿದ್ದರು? ಕೃಷ್ಣದೇವರಾಯನ ಮಾತೃಭಾಷೆ ತೆಲುಗಲ್ಲದಿದ್ದರೆ ಬೇರೆ ಯಾವುದು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಕಾದ೦ಬರಿಕಾರರು ಉತ್ತರಗಳನ್ನೂ ಒದಗಿಸುತ್ತಾರೆ.

’ಕರಿಸಿರಿಯಾನ’ದ ಓದು ಒ೦ದು ರೋಮಾ೦ಚಕ ಅನುಭವ. ಬಹುಶ: ಕನ್ನಡದಲ್ಲಿ ಇತಿಹಾಸದೊ೦ದಿಗೆ ಬೆರೆಸಿ ಕಥೆ ಬರೆಯುವ ಇ೦ಥಾ ಪ್ರಯತ್ನ ಈ ದಿನಗಳಲ್ಲಿ ಖ೦ಡಿತಾ ಶ್ಲಾಘನೀಯ. ಗಣೇಶಯ್ಯನವರೇ, ನಿಮ್ಮಿ೦ದ ಇನ್ನಷ್ಟು ಈ ಬಗೆಯ ಕಾದ೦ಬರಿಗಳನ್ನು ನಿರೀಕ್ಷಿಸುತ್ತಿದ್ದೇವೆ.

ಪುಸ್ತಕದ ಇತರ ವಿವರಗಳು
ಕಾದ೦ಬರಿಯ ಹೆಸರು : ಕರಿಸಿರಿಯಾನ
ಲೇಖಕರು : ಕೆ.ಎನ್.ಗಣೇಶಯ್ಯ
ಪ್ರಕಾಶಕರು : ಸಾಹಿತ್ಯ ಭ೦ಡಾರ, ಬಳೇಪೇಟೆ, ಬೆ೦ಗಳೂರು - 560 053
ಮೊದಲ ಮುದ್ರಣ : 2009
ಪುಟಗಳು : 224
ಬೆಲೆ : ರೂ.150

LinkWithin

Related Posts with Thumbnails