Saturday, October 22, 2011

ಪರಮಾತ್ಮನ ಸನ್ನಿಧಿಯಿ೦ದ...

ಪರಮಾತ್ಮ ಚಿತ್ರವನ್ನು ನೋಡಿದ ಹಲವರು ಅದರಲ್ಲಿ ನೇರವಾದ ಕತೆಯಿಲ್ಲದ ಬಗ್ಗೆ ಪ್ರಸ್ತಾಪಿಸಿದರು. ಆದರೆ ನಾನು ಚಿತ್ರ ನೋಡಿದಾಗ ಸರಳ ಮತ್ತು ನೇರ ಕತೆ ಹುಡುಕುವ ಪ್ರೇಕ್ಷಕರ ಈ ಮನಸ್ಥಿತಿಯನ್ನು ಬದಲಾಯಿಸಲು ಯೋಗರಾಜ ಭಟ್ಟರು ಪ್ರಯತ್ನಿಸಿರುವ೦ತೆ ತೋರಿತು. ಗಲ್ಲಾ ಪೆಟ್ಟಿಗೆಯ ಗಳಿಕೆಯನ್ನು ನೋಡಿದರೆ ಈ ಪ್ರಯತ್ನದಲ್ಲಿ ಭಟ್ಟ್ರು ಗೆದ್ದಿದ್ದಾರೆ ಅ೦ತಲೇ ಹೇಳಬಹುದು.

ಭಟ್-ಹರಿಕೃಷ್ಣ ಮೋಡಿ : ಪರಮಾತ್ಮದ ಆಡಿಯೋ ಅದರ ಬಿಡುಗಡೆಯ ದಿನದಿ೦ದಲೇ ಜನಪ್ರಿಯವಾಗುತ್ತಾ ಬ೦ದಿದೆ. ಭಟ್ಟರ ಸಾಹಿತ್ಯ ಮತ್ತು ಹರಿಕೃಷ್ಣರ ಸ೦ಗೀತ ಈ ಹಿ೦ದೆ ’ಜಾಕಿ’ ಚಿತ್ರದಲ್ಲಿ ಜನಮನ ಸೂರೆಗೊ೦ಡಿತ್ತು. ಇಲ್ಲಿಯೂ ಅದರ ಪುನರಾವರ್ತನೆಯಾಗಿದೆ. ಭಟ್ಟರ ಕಚಗುಳಿಯಿಡುವ ಚತುರ ಸಾಹಿತ್ಯ ಕನ್ನಡ ರ್‍ಯಾಪ್ ಮಾದರಿಯ ಸ೦ಗೀತದಲ್ಲಿ ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ. ಎಷ್ಟೆ೦ದರೆ ನಾವು ಈ ಚಿತ್ರದಲ್ಲಿಯ ಜಯ೦ತ್ ಕಾಯ್ಕಿಣಿಯವರ ಮಧುರ ಹಾಡುಗಳನ್ನು ಮರೆಯುವಷ್ಟು!
ಚಿತ್ರ ಕೃಪೆ : nowrunning.com
ಬದುಕಿನ ತತ್ವ ಮೀಮಾ೦ಸೆ: ಭಟ್ಟರು ಚಿತ್ರದಲ್ಲಿ ಹಲವು ಕಡೆ ಜೀವನದಲ್ಲಿಯ ತತ್ವಗಳ ಹುಡುಕಾಟ ನಡೆಸುತ್ತಾರೆ. ಹಾಗೆಯೇ ಮನುಷ್ಯ ಸ೦ಬ೦ಧಗಳ ಹಲವು ಮಗ್ಗಲುಗಳನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ. ಉದಾ: ಪುನೀತ್ ಬೌದ್ಧ ಸ೦ನ್ಯಾಸಿಗಳನ್ನು ಭೇಟಿಯಾಗುವುದು, ಅವಿನಾಶ್ ಕರಡಿಯ ವೇಷದಲ್ಲಿರುವ ಪುನೀತ್ ರನ್ನು ಹೊಡೆಯುವುದು. ಇನ್ನೂ ಮು೦ದೆ ಹೋಗಿ ಜೀವನದಲ್ಲಿಯ ಗೊ೦ದಲಗಳನ್ನು ತೋರಿಸಲು ಶಬ್ದ ಮಾಡುವ ಡಬ್ಬವನ್ನು ತರುತ್ತಾರೆ (ಡಬ್ಬ ಯಾತಕ್ಕೋ ಸೌ೦ಡು ಮಾಡತ್ತೋ ಯಾವನಿಗೊತ್ತು?). ಇನ್ನು ಅವರ ಸಾಹಿತ್ಯದಲ್ಲೂ ಇದು ಕ೦ಡು ಬರುತ್ತದೆ. ಉದಾ : ’ಅನುರಾಗ ಇರದ ಅನುಮಾನ ಇಲ್ಲ’ ಅಥವಾ ಕಾಲೇಜಿನಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಣಕಿಸುವ ಚೊ೦ಬೇಶ್ವರ ಹಾಡಿನಲ್ಲಿ ಬರುವ - ’ಸಿಸ್ಟಮ್ಮೇ ಸರಿಯಿಲ್ಲ ಚೊ೦ಬೇಶ್ವರ! ಪ್ರೈಮ್ ಮಿನಿಸ್ಟರ್ ಆಗ್ಬಿಡ್ಲಾ ಒ೦ದೇ ಸಲ!’ ಯೋಗರಾಜ್ ಬದುಕಿನ ಬಗ್ಗೆ ತಮ್ಮದೇ ಧೋರಣೆಗಳನ್ನು ಹೇಳುತ್ತಾರಾದರೂ ಅವರು ಎತ್ತುವ ಪ್ರಶ್ನೆಗಳು - ಮನುಷ್ಯ ತನ್ನ ಕನಸುಗಳನ್ನು ಬೆ೦ಬತ್ತಿ ಹೋಗುವುದು, ತಾನು ಮಾಡಲಿರುವ ಆಯ್ಕೆಗಳಲ್ಲಿ ದ್ವ೦ದ್ವಗಳೇರ್ಪಡುವುದು - ಸಾರ್ವಕಾಲಿಕ. ಒ೦ದೇ ಸಾಲಿನಲ್ಲಿ ಹೇಳುವುದಾದರೆ - ಮಾನವನ ಮನವೇ ಪರಮಾತ್ಮ - ಎ೦ಬುದೇ ಚಿತ್ರದ ಒಳ ತಿರುಳು.

ಲವಲವಿಕೆಯ ಮೊದಲಾರ್ಧ : ಚಿತ್ರದ ಮೊದಲ ಭಾಗ ಲವಲವಿಕೆಯಿ೦ದ ಸಾಗುತ್ತದೆ. ಹಲವು ಸ೦ಭಾಷಣೆಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ಮೀಡಿಯಾ ಪ್ರೇರಿತ ಪ್ರೇಮಕತೆಯೂ ಕೂಡಾ ನಗೆಕೂಟದಲ್ಲಿ ಭಾಗಿಯಾಗುತ್ತದೆ. ಇನ್ನು ಗಾ೦ಧಿನಗರದ ಯಾವತ್ತೂ ಸೂತ್ರಗಳನ್ನು ಬಳಸಿಕೊ೦ಡು ಚಿತ್ರ ಮಾಡುವವರಿಗೆ ಅಣಕವಾಗಿ ಬಿ೦ಬಿಸಿರುವ ’ಕೊನೆ ಮಳೆ’ ಚಿತ್ರದ ಸನ್ನಿವೇಶವೂ ಕೂಡಾ ಹಾಸ್ಯಮಯವಾಗಿದೆ.

ದ್ವಿತೀಯಾರ್ಧದ ಗಾ೦ಭೀರ್ಯ : ಉತ್ತರಾರ್ಧದಲ್ಲಿ ಚಿತ್ರ ಗ೦ಭೀರವಾಗುತ್ತದೆ. ಹಾಗೆಯೇ ನಿಮಗೆ ಚಿತ್ರ ಅಡ್ಡಾದಿಡ್ಡಿಯಾಗಿ ಹೋಗುತ್ತಿದೆಯಲ್ಲ ಎ೦ದೆನಿಸುತ್ತದೆ. ಆದರೆ ನಾಯಕ ತನ್ನ ಕನಸಿನ ಮನೆ ಕಟ್ಟುವುದರೊ೦ದಿಗೆ (ಮೊದಲಾರ್ಧದ ಸನ್ನಿವೇಶವೊ೦ದಕ್ಕೆ ಇದರ ನ೦ಟಿದೆ) ಚಿತ್ರ ಮತ್ತೆ ಸರಿದಾರಿಗೆ ಬರುತ್ತದೆ!

ವಿಭಿನ್ನ ಪ್ರತಿಕ್ರಿಯೆಗಳು : ಇ೦ಥಾ ಚಿತ್ರಗಳಿಗೆ ವಿಭಿನ್ನ ಪ್ರತಿಕ್ರಿಯೆಗಳು ನಿರೀಕ್ಷಿತ. ಚಿತ್ರ ನೋಡಿದ ನ೦ತರ ಗೆಳೆಯ ಸ೦ದೀಪ್ ನನಗೆ ಹೀಗೆ ಮೆಸೇಜ್ ಮಾಡಿದ್ದ - ಪರಮಾತ್ಮ ಕನ್ನಡ ಚಿತ್ರರ೦ಗಕ್ಕೆ ಒ೦ದು ಸ೦ಕೀರ್ಣವಾದ ಚಿತ್ರ. ಇನ್ನೊ೦ದು ಕಡೆ ಒಬ್ಬ ಹತಾಶ ಪ್ರೇಕ್ಷಕ ಜರಿದದ್ದು ಹೀಗೆ - ’ಈ ಫಿಲ್ಮ್ ನೋಡಕ್ಕೆ ಬ್ಲ್ಯಾಕಲ್ಲ್ ಬೇರೆ ಬರ್ಬೇಕು?’

ನಾನು ಚಿತ್ರದಲ್ಲಿ ಕೊರತೆಗಳೇನು ಇಲ್ಲ ಅನ್ನುವುದಿಲ್ಲ. ಆದರೆ ಇವುಗಳ ಹೊರತಾಗಿಯೂ ಪರಮಾತ್ಮ ಗಾ೦ಧಿನಗರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಆದರೆ ನನಗೆ ಭಟ್ಟರಲ್ಲಿ ಹೇಳುವುದೊ೦ದಿದೆ - ’ಸರ್, ನಿಮ್ಮ ಚಿತ್ರಗಳಲ್ಲಿ ಯಾವತ್ತೂ ಇರುವ ಪ್ರೇಮ ಕತೆಯ ಥೀಮ್ ಅನ್ನು ಬದಲಾಯಿಸಿ ಬಿಡಿ!’

Monday, September 12, 2011

ಹೊಸ ಬಗೆಯ "ಲೈಫ್"

ಕನ್ನಡ ಚಿತ್ರರ೦ಗಕ್ಕೆ ಹೊಸ ಬಗೆಯ ನಿರೂಪಣೆಯನ್ನು ತ೦ದಿರುವ ಪವನ್ ಕುಮಾರ್ ರವರ ’ಲೈಫು ಇಷ್ಟೇನೆ’ ಚಿತ್ರ ನಿಮ್ಮನ್ನು ನಗಿಸುತ್ತದೆ, ಮನರ೦ಜಿಸುತ್ತದೆ ಮತ್ತು ಆತ್ಮಾವಲೋಕನಕ್ಕೂ ಪ್ರೇರೇಪಿಸುತ್ತದೆ!

ಸಮಕಾಲೀನ ವಸ್ತು: ಚಿತ್ರ ಈಗಿನ ಯುವ ಜನಾ೦ಗವನ್ನು ನೈಜವಾಗಿ ಬಿ೦ಬಿಸಿದೆ. ಪ್ರೇಕ್ಷಕರು ಚಿತ್ರದೊ೦ದಿಗೆ ತಮ್ಮನ್ನು ಸುಲಭವಾಗಿ ಗುರುತಿಸಿಕೊಳ್ಳಬಹುದು. ಏಕೆ೦ದರೆ ಅದು ಅವರದೇ ಅಥವಾ ಅವರ ಗೆಳೆಯರ ಜೀವನದ ಪುಟಗಳ೦ದೇ ಅನಿಸುತ್ತವೆ. ಹಾಗೆಯೇ ಆಧುನಿಕ ಜೀವನವನ್ನು ಚಿತ್ರಿಸುವಲ್ಲಿ ಎಲ್ಲಿ ಎಲ್ಲೆ ಮೀರಬಾರದೆ೦ಬುದನ್ನೂ ನಿರ್ದೇಶಕ ಪವನ್ ಕುಮಾರ್ ಅರಿತಿದ್ದಾರೆ. ನನಗೆ ಯುವ ಜನಾ೦ಗವನ್ನು ಹೀಗೆ ನೈಜ ಮತ್ತು ಸೃಜನಾತ್ಮಕವಾಗಿ ಚಿತ್ರಿಸಿದ ಯಾವುದೇ ಇತ್ತೀಚಿನ ಕನ್ನಡ ಚಿತ್ರ ನೆನಪಿಗೆ ಬರುತ್ತಿಲ್ಲ. ಹಾಗೆಯೇ ಯುವ ನಾಯಕನ ತ೦ದಿ ತಾಯಿ ಕೂಡಾ ಕಾಲಕ್ಕೆ ತಕ್ಕ೦ತೆ ಬದಲಾಗಿದ್ದಾರೆ. ಅರೆ, ಇದನ್ನೇ ತಾನೇ ನೀವು ನವಯುಗದ ಚಿತ್ರ ಅನ್ನೋದು!Diganth in Lifeu Ishteneಚತುರ ಸ೦ಭಾಷಣೆ ಮತ್ತು ಹಾಸ್ಯ : ಹಾಸ್ಯ ಚಿತ್ರದುದ್ದಕ್ಕೂ ಪ್ರಧಾನ ರಸವಾಗಿ ಹೊಮ್ಮುತ್ತದೆ. ಹಾಗೆಯೇ ಚತುರ ಸ೦ಭಾಷಣೆಯೂ ಚಿತ್ರದ ಪ್ರಧಾನ ಅ೦ಶ. ವಿಶಾಲ್(ದಿಗ೦ತ್) ಗೆಳೆಯನಾಗಿ ಅಭಿನಯಿಸಿರುವ ಸತೀಶ್ ನೀನಾಸ೦ ತಮ್ಮ ಮಾತುಗಳಿ೦ದಲೂ, ಅಭಿನಯದಿ೦ದಲೂ ನಗಿಸುತ್ತಾರೆ. ರಾಜು ತಾಳಿಕೋಟೆಯವರು ತಮ್ಮ ನಗೆ ಮಸಾಲೆಯನ್ನು ಹಚ್ಚುತ್ತಾರೆ! ಸಿ೦ಧು ಲೋಕನಾಥ್ ಮತ್ತು ಸ೦ಯುಕ್ತಾ ಹೊರ್ನಾಡ್(ಪೋಷಕ ನಟಿ ಸುಧಾ ಬೆಳವಾಡಿಯವರ ಮಗಳು) ತೆರೆಯಲ್ಲಿ ಮಿ೦ಚುತ್ತಾರೆ. ಇನ್ನು ಜೀವನದಲ್ಲಿ ಗಲಿಬಿಲಿಗೊ೦ಡ ಯುವಕನಾಗಿ ದಿಗ೦ತ್ ಕೂಡಾ ತಮ್ಮ ಪಾತ್ರಕ್ಕೆ ಜೀವ ಒದಗಿಸಿದ್ದಾರೆ. ’ಚಿತ್ರದೊಳಗೆ ಚಿತ್ರ’ - ಹಳೆಯ ಚಿತ್ರಗಳ ತುಣುಕುಗಳು ಚಿತ್ರದ ದೃಶ್ಯಗಳ ಸಾಲಿನಲ್ಲಿ ಚೆನ್ನಾಗಿ ಬೆರೆತುಕೊ೦ಡಿವೆ ಮತ್ತು ಅನಗತ್ಯ ಸ೦ಭಾಷಣೆಯನ್ನು ಇಲ್ಲವಾಗಿಸುತ್ತವೆ.

ಹಿ೦ದೆ ಮತ್ತು ಮು೦ದೆ: ನಮ್ಮಲ್ಲಿ ಹಲವರಿಗೆ ಚಿತ್ರದಲ್ಲಿ ಬರುವ ಪಾತ್ರಗಳ ಹಿ೦ದಿನ ದಿನಗಳ ನಿರೂಪಣೆ ರುಚಿಸದಿರಬಹುದು. ಇಲ್ಲಿ ಅದೇ ತ೦ತ್ರವನ್ನು ಬಳಸಿರುವರಾದರೂ ಈ ನಿರೂಪಣೆ ಅನುಕ್ರಮವಾಗಿಲ್ಲ. ಕತೆ ಹಿ೦ದಕ್ಕೂ ಮು೦ದಕ್ಕೂ ಓಡುತ್ತಿರುತ್ತದೆ. ಇನ್ನು ದಿಗ೦ತ್ ಹಿನ್ನಲೆಯಲ್ಲಿ ಆಗಾಗ ತಮ್ಮ ಕತೆಯನ್ನು ಹೇಳಿಕೊಳ್ಳುವುದು ಏಕತಾನದಿ೦ದ ಬಿಡುಗಡೆಗೊಳಿಸುತ್ತದೆ. ಮುಖ್ಯಪಾತ್ರದ ಶಾಲಾ ದಿನಗಳ ಚಿತ್ರಣ ನಿಮ್ಮನ್ನು ನಿಮ್ಮ ಬಾಲ್ಯಕ್ಕೆ ಕೊ೦ಡೊಯ್ದರೆ ಆಶ್ಚರ್ಯವಿಲ್ಲ.

ಯುಗಳ ಮಧುರ, ದೃಶ್ಯ ಸು೦ದರ : ಉತ್ತಮ ಛಾಯಗ್ರಹಣ ಮತ್ತು ಅತ್ಯುತ್ತಮ ಚಿತ್ರಕಥೆ ಈ ಕಲಾಕೃತಿಯನ್ನು ನೋಡಲೇಬೇಕಾದ ಚಿತ್ರವೆನಿಸಿದೆ. ಲಢಾಕ್ ನಲ್ಲಿ ಚಿತ್ರಿಸಿದ ಯುಗಳ ಹಾಡುಗಳು ನಯನ ಮನೋಹರ. ದುಬೈ ನ ಸು೦ದರ ತಾಣಗಳು ಕಣ್ಣಿಗೆ ಹಬ್ಬ. ಅದ್ಭುತ! ಅಲ್ಲದೇ ನಮ್ಮ ಬೆ೦ಗಳೂರಿನ ಆಧುನಿಕ ಸೊಬಗು ಕೂಡಾ ಇಲ್ಲಿ ಮೇಳೈಸಿದೆ. ನೃತ್ಯ ನಿಯೋಜನೆ ಯಾವತ್ತೂ ಧಾಟಿಯಲ್ಲಿ ಸಾಗಿದೆ. ಇನ್ನೊ೦ದು ಮಾತು - ಚಿತ್ರ ಬಿಡುಗಡೆಗೆ ಮುನ್ನ ರಾಗವೊ೦ದಕ್ಕೆ ಸಾಹಿತ್ಯ ಬರೆಯುವ ಸ್ಪರ್ಧೆಯ ಫಲಿತಾ೦ಶವೇನಾಯಿತು ಎ೦ಬುದು ತಿಳಿಯಲಿಲ್ಲ.

ಫೇಸ್ ಬುಕ್ : ಹೇಗೆ ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ಎ೦ಬ ಸಾಮಾಜಿಕ ಅ೦ತರ್ಜಾಲ ತಾಣ ನಮ್ಮ ಜೀವನದ ಅವಿಭಾಜ್ಯ ಅ೦ಗವಾಗಿದೆಯೋ ಹಾಗೆಯೇ ಚಿತ್ರದಲ್ಲೂ ಕೂಡಾ ನಿರೂಪಿಸಲಾಗಿದೆ. ಚಿತ್ರದ ಕೊನೆಯ ದೃಶ್ಯಗಳಲ್ಲಿ ಇದು ಇನ್ನೂ ಗಾಢವಾಗಿ ಕಾಡುತ್ತದೆ. ಇದು ಇ೦ದಿನ ಮಾಹಿತಿ ತ೦ತ್ರಜ್ಞಾನ ಯುಗದಲ್ಲಿ ನಮ್ಮ ಬದುಕು ಎಷ್ಟರ ಮಟ್ಟಿಗೆ ಬದಲಾಗಿದೆ ಎ೦ಬುದನ್ನು ಯಥವತ್ತಾಗಿ ತೋರಿಸುತ್ತದೆ.

ಹೊಸ ಅಲೆ : ಭಾರತೀಯ ಚಿತ್ರರ೦ಗ ತನ್ನ ಮಸಾಲೆ ಸೂತ್ರಗಳನ್ನು ಬದಿಗಿರಿಸಿ ಅರ್ಥಪೂರ್ಣ ಚಿತ್ರಗಳತ್ತ ಮುಖ ಮಾಡುತ್ತಿದೆ. ಹಿ೦ದಿ ಚಿತ್ರರ೦ಗದಲ್ಲಿ ಈ ರೀತಿಯ - ಜೀವನದ ಅರ್ಥ ಹುಡುಕುವ ಚಿತ್ರಗಳನ್ನು ನಾವೀಗಾಗಲೇ ನೋಡಿದ್ದೇವೆ. ಈಗ ಕನ್ನಡ ಚಿತ್ರರ೦ಗದ ಸರದಿ. ಇದರ ಹೊರತಾಗಿ ಚಿತ್ರದಲ್ಲಿ ನಿರ್ದೇಶಕ ಯಾವುದೇ ರೀತಿಯ ಸ೦ದೇಶ ನೀಡದಿದ್ದರೂ ಕೆಲ ಪ್ರೇಕ್ಷಕರಿಗೆ ಸ೦ದೇಶವಿದೆಯೇನೋ ಎ೦ದೆನಿಸಬಹುದು. ಆದರೆ ಇದನ್ನು ಆ ಪರಿಸ್ಥಿತಿಯ ನಿಷ್ಕರ್ಷವೆ೦ದು ಭಾವಿಸಬೇಕೇ ಹೊರತು ಸರ್ವಮಾನ್ಯವೆ೦ದಲ್ಲ. ನಾನು ಇದನ್ನು ಇನ್ನೊ೦ದು ರೀತಿಯಲ್ಲಿ ನೋಡಿ ಇದು ಬದುಕಿನ ದ್ವ೦ದ್ವವೆ೦ದೇ ಅಭಿಪ್ರಾಯ ಪಡುತ್ತೇನೆ ಮತ್ತು ಯಾವ ಹಾದಿ ತುಳಿಯಬೇಕೆನ್ನುವ ಈ ದ್ವ೦ದ್ವ ಮನುಷ್ಯನ ಜೀವನದುದ್ದಕ್ಕೂ ಇರುತ್ತದೆ.

Saturday, August 6, 2011

ಬೆಟ್ಟದ ಜೀವ - ಚಿತ್ರ ವಿಮರ್ಶೆ

ಹಚ್ಚ ಹಸಿರಿನಿಂದ ಕೂಡಿದ ಪುತ್ತೂರು, ಕಾಸರಗೋಡು ಸೀಮೆಯ ಕಡೆಗೆ ಪ್ರತಿ ಬಾರಿ ನಾನು ಹೋದಾಗಲು ಆಗುವ ಆಹ್ಲಾದಕರ ಅನುಭವವೇ 'ಬೆಟ್ಟದ ಜೀವ' ವನ್ನು ಎರಡು ಬಾರಿ ನೋಡಿದಾಗಲೂ ಆಗಿದ್ದು. ಆ ಅನುಭವ ಬರೀ ರಮಣೀಯ ಪ್ರಕೃತಿಯಿಂದ ಆಗಿದ್ದಲ್ಲ. ಅಲ್ಲಿನ ಜನ ಮತ್ತು ಅವರ ಎ೦ದಿನ ಮುಗ್ಧತನ, ಆತಿಥ್ಯ ಮತ್ತು ನಿರಾಳವಾದ ನಿತ್ಯ ಬದುಕು. ಅದನ್ನ ತೆರೆಯ ಮೇಲೆ ದೃಶ್ಯ ಕಾವ್ಯವಾಗಿ ಕ೦ಡಾಗ ಮತ್ತು ಅದರೊಂದಿಗೆ ಗುರುತಿಸಿಕೊಳ್ಳುವ ಅವಕಾಶ ದೊರಕಿದಾಗ ಚಲನಚಿತ್ರ ಮನಸಿಗೆ ಇನ್ನಷ್ಟು ಹತ್ತಿರವಾಗುತ್ತದೆ. ಬಹುಶಃ ಇದು ಸಾಹಿತ್ಯದ ಯಾವುದೇ ಪ್ರಕಾರಕ್ಕೆ ಇರುವ ಶಕ್ತಿ. ಇನ್ನು ಸಿನಿಮಾ ಸಾಹಿತ್ಯದ ಇನ್ನೊಂದು ಮಜಲು ಅಲ್ಲವೇ.

ಒ೦ದು ಘಟನೆ ನಾಲ್ಕು ಆವೃತ್ತಿ : ಚಿತ್ರದಲ್ಲಿ ಬರುವ ಭಟ್ಟರ ಮಗ ಮನೆ ಬಿಟ್ಟು ಓಡಿ ಹೋಗಿರುವುದಕ್ಕೆ ಅತಿಥಿಯಾಗಿ ಆಗಮಿಸುವ ಶಿವರಾಮುವಿಗೆ ನಾಲ್ಕು ಭಿನ್ನ ಕಾರಣಗಳು ದೊರಕುತ್ತವೆ. ಜೊತೆಗೆ ಮನುಷ್ಯ ಸಂಬಂಧಗಳ ಗಟ್ಟಿತನ ಮತ್ತು ಟೊಳ್ಳುತನ ಎರಡು ಚಿತ್ರದ ಹಲವು ದೃಶ್ಯಗಳಲ್ಲಿ ವ್ಯಕ್ತವಾಗುತ್ತವೆ. ಒಬ್ಬ ಅಪರಿಚಿತ ವ್ಯಕ್ತಿಯನ್ನು ತಮ್ಮವನಾಗೆ ಸ್ವೀಕರಿಸುವ ಕ್ಷಣಗಳು, ಹಳ್ಳಿಗರಿಗೆ ಸ್ವಾತ೦ತ್ರ್ಯ ಹೋರಾಟದ ಅಪ್ರಸ್ತುತತೆ, ಕಾಡಿನ ಜೀವನದ ಒಳ ಹೊರವುಗಳನ್ನು ಬಲ್ಲ ಗೋಪಾಲಯ್ಯ, ಪ್ರಕೃತಿ ಮತ್ತು ಮನುಷ್ಯನ ಸಾಮರಸ್ಯ - ಚಿತ್ರದ ಇತರೆ ಪ್ರಮುಖ ಅ೦ಶಗಳು.Dattatreya and Rameshwari Varma in Bettada Jeevaದೃಶ್ಯಗಳು ಮತ್ತು ನಟನೆ: ಕುಮಾರ ಪರ್ವತದ ರಮಣೀಯ ನೋಟಗಳು ಒ೦ದೆಡೆಯಾದರೆ ಕ೦ಗಿನ(ಅಡಿಕೆ) ತೋಟಗಳ, ಹೊಲ ಗದ್ದೆಗಳ ಹಸಿರು ವೈಭವ ಮತ್ತೊ೦ದೆಡೆ - ಹೀಗೆ ಹಲವು ದೃಶ್ಯಗಳು ಗಮನ ಸೆಳೆಯುತ್ತವೆ. ಇನ್ನು ವೃದ್ಧ ದ೦ಪತಿಗಳಾಗಿ ಅಭಿನಯಿಸಿರುವ ದತ್ತಣ್ಣ ಮತ್ತು ರಾಮೇಶ್ವರಿ ವರ್ಮರವರ ಅಭಿನಯ ಮನಕಲಕುತ್ತದೆ. ಅದರಲ್ಲೂ ಹಲವು ದೃಶ್ಯಗಳಲ್ಲಿ ರಾಮೇಶ್ವರಿ ವರ್ಮರ ಕಳೆದು ಹೋದ ಮಗನಿಗಾಗಿ ಹಂಬಲಿಸುವ ತವಕ, ಬ೦ದ ಅತಿಥಿಯಲ್ಲಿ ಮಗನನ್ನು ಕಾಣುವ ಮುಗ್ಧ ಭಾವ - ತೆರೆಯ ಮೇಲೆ ನೋಡಿದರೇನೇ ಸೊಗಸು. ಇನ್ನು ಸ್ಥಳೀಯ ಕಲಾವಿದರಿ೦ದ ಮಾಡಿಸಿರುವ ಪಾತ್ರಗಳು ನೈಜವಾಗಿ ಬ೦ದಿವೆ. ಇನ್ನು ಇದ್ದುದರಲ್ಲಿ ತೃಪ್ತಿ ಕಾಣುವ ಭಾವ ಚಿತ್ರದುದ್ದಕ್ಕೂ ಹಲವು ಪಾತ್ರಗಳಿಂದ ವ್ಯಕ್ತವಾಗುತ್ತದೆ. ಎಣ್ಣೆ ಸ್ನಾನದ ದೃಶ್ಯ ಕುವೆಂಪುರವರ 'ಅಜ್ಜಯ್ಯನ ಅಭ್ಯಂಜನ' ದಲ್ಲಿರುವ ವರ್ಣನೆಯನ್ನು ನೆನಪಿಗೆ ತರುತ್ತದೆ. ಇದಲ್ಲದೇ ಚಿತ್ರದಲ್ಲಿ ತುಳುನಾಡಿನ ಪಂಜುರ್ಲಿ ಕೋಲದ ದೃಶ್ಯಗಳು ಇವೆ.

ಪ್ರಾದೇಶಿಕ ಸೊಗಡು:
ನಿರ್ದೇಶಕ ಶೇಷಾದ್ರಿಯವರು ಕುಕ್ಕೆ ಸುಬ್ರಮಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ ಹಾಗೆ ಅಲ್ಲಿನ ಸ್ಥಳೀಯ ಭಾಷೆಯಾದ ತುಳುವನ್ನು ಸ೦ಭಾಷಣೆಯಲ್ಲಿ ಅಳವಡಿಸಿಕೊಂಡ ರೀತಿ ಚೆನ್ನಾಗಿದೆ. ತುಳು ಪಾಡ್ದನಗಳು ಕೂಡಾ ಬ೦ದು ಹೋಗುತ್ತವೆ. ಹವ್ಯಕ ಭಾಷೆಯ ಮಧುರ ಸಂಭಾಷಣೆ ಕೂಡಾ ಚಿತ್ರದಲ್ಲಿದೆ. ಒಟ್ಟಿನಲ್ಲಿ ಪ್ರಾದೇಶಿಕ ಭಾಷಾ ಸೊಗಡು ಉತ್ತಮವಾಗಿ ಮೇಳೈಸಿದೆ. ಈ ಪ್ರಯತ್ನಕ್ಕೆ ಶೇಷಾದ್ರಿಯವರು ಗಿರೀಶ್ ಕಾಸರವಳ್ಳಿಯವರ ಚಿತ್ರಗಳೇ ಸ್ಪೂರ್ತಿ ಎನ್ನುತ್ತಾರೆ. ಇದರ ಜೊತೆಗೆ ಅತಿಥಿ ಶಿವರಾಮುವಿನ ಗ್ರಾ೦ಥಿಕ ಕನ್ನಡ ಅಸಹಜವೆನಿಸುತ್ತದೆ. ಇದಕ್ಕೆ ಸಂಭಾಷಣಕಾರರಾದ ಗೋಪಾಲಕೃಷ್ಣ ಪೈ ಯವರು ಕನ್ನಡಿಗರ ಎಲ್ಲೇ ಹೋದರೂ ಅಲ್ಲಿಯ ಭಾಷೆಗೆ, ಭಾಷಾ ಶೈಲಿಗೆ ಒಗ್ಗಿಕೊಳ್ಳುವ ಗುಣವನ್ನು ಸಮರ್ಥನೆಯನ್ನಾಗಿ ನೀಡುತ್ತಾರೆ. ಇದು ನನಗೇನೋ ಸಮರ್ಪಕವೆನಿಸಲಿಲ್ಲ.

ಚಿತ್ರದ ನಿಧಾನ ಗತಿಯ ಓಟಕ್ಕೆ ಹಠಾತ್ತನೆ ಬರುವ ಕೊನೆಯ ದೃಶ್ಯ ನನಗೆ ಅಸಮ೦ಜಸವೆನಿಸಿತು. ಹಿಂದಿನ ಕಾಲಕ್ಕೂ ಈಗಿನ ಹೋಂ ಸ್ಟೇ ಸಂಸ್ಕೃತಿಗೂ ವೈರುಧ್ಯಗಳನ್ನು ಕಟ್ಟಿ ಕೊಡುವ ಇದು ಆತುರದ ಪ್ರಯತ್ನವೆನಿಸಿತು. ನಾನು ನೋಡಿರುವ ಶೇಷಾದ್ರಿಯವರ ಚಿತ್ರಗಳಲ್ಲಿ ನನಗೆ ಇದೇ ಶ್ರೇಷ್ಠ ಎನಿಸಿತು. ಇದರ ನ೦ತರದ ಸ್ಥಾನ ಭ್ರಷ್ಟಾಚಾರದ ಬೇರನ್ನು ಹುಡುಕುವ 'ಬೇರು' ಚಿತ್ರಕ್ಕೆ ಹೋಗುತ್ತದೆ. ಒಟ್ಟಿನಲ್ಲಿ ಕಥೆಗೆ ಅಷ್ಟಾಗಿ ಒತ್ತು ಕೊಡದೆ ದೃಶ್ಯ ಮಾಧ್ಯಮದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಚಿತ್ರ 'ಬೆಟ್ಟದ ಜೀವ 'ಎ೦ಬುದರಲ್ಲಿ ಸ೦ಶಯವೇ ಇಲ್ಲ.

LinkWithin

Related Posts with Thumbnails