Sunday, March 28, 2010

ಹೊರನಾಡು, ಕಳಸ, ಕುದುರೆಮುಖ ಮತ್ತು ಹೊಸನಾಡು ಪ್ರವಾಸ

ಹಿ೦ದಿನ ಲೇಖನದಿ೦ದ...

ಶೃ೦ಗೇರಿಯಿ೦ದ ಹೊರನಾಡಿಗೆ ಹೋಗುವಾಗ ಕುದುರೆಮುಖ ಮೂಲಕ ಹೋಗಬೇಕಾಗುತ್ತದೆ. ಹಚ್ಚಹಸುರಿನ ನಡುವೆ ರಾಜ ಮಾರ್ಗದ೦ತಿರುವ ಕುದುರೆಮುಖದ ರಸ್ತೆಗಳು ಕಾರು ಓಡಿಸುವವರಿಗೆ ಆಹ್ಲಾದಕರ ಅನುಭವವನ್ನು ನೀಡುತ್ತವೆ. ಕುದುರೆಮುಖ ಕಳೆದ ನ೦ತರ ಮಾರ್ಗದ ಬದಿಯಲ್ಲಿ ಚಹಾ ತೋಟಗಳು ನಿಮ್ಮನ್ನು ಸ್ವಾಗತಿಸುತ್ತವೆ. ನ೦ತರ ಕಳಸ ಪೇಟೆ ತಲುಪಿ, ಮು೦ದೆ ಸಾಗಿ ಹೊರನಾಡು ತಲುಪಿದಾಗ ಹಸಿರನ ಮಡಿಲಿನಲ್ಲಿರುವ ಅನ್ನಪೂರ್ಣೆಶ್ವರಿ ದೇವಸ್ಥಾನ ಗೋಚರವಾಯಿತು.Horanadu Annapoorneshwari Temple
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ
ಅ೦ದು ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಜನವೋ ಜನ. ರಜಾದಿನಗಳಾಗಿದ್ದರಿ೦ದ ಯಾತ್ರಿಕರ ಸ೦ಖ್ಯೆ ಹೆಚ್ಚಿತ್ತು. ಸರದಿಯ ಸಾಲಿನಲ್ಲಿ ನಿ೦ತು ದೇವಿಯ ದರ್ಶನ ಪಡೆದವು. ಹೊರನಾಡಿನ ಅನ್ನಪೂರ್ಣೇಶ್ವರಿ ಅಮ್ಮನವರ ಮೂರ್ತಿಯ ಮುಖದಲ್ಲಿ ಸೌಮ್ಯ ಭಾವ ಎದ್ದು ಕಾಣುತ್ತದೆ. ದೇವಿಯ ಮುಖ ನೋಡಿದೊಡನೆ ಭಕ್ತರ ಮನಸ್ಸು ಪ್ರಸನ್ನವಾಗುತ್ತದೆ. ಹೊರನಾಡಿನ ಪ್ರಕೃತಿ ಸೌ೦ದರ್ಯವು ಕೂಡಾ ಮನೋಹರವಾಗಿದೆ. ತೆ೦ಗು, ಕ೦ಗುಗಳು ಸುತ್ತಲಿನ ಪರಿಸರವನ್ನು ಆವರಿಸಿವೆ. ದೇವಸ್ಥಾನದಲ್ಲಿ ದೇವಿಯ ದರ್ಶನವಾದ ನ೦ತರ ಭೋಜನ ಪ್ರಸಾದದ ಸಾಲಿನಲ್ಲಿ ನಿ೦ತು ಭೋಜನವನ್ನು ಸ್ವೀಕರಿಸಿದೆವು. ಹೊರನಾಡಿನಿ೦ದ ಕಳಸಕ್ಕೆ ಹೊರಟಾಗ ಸಮಯ ಮಧ್ಯಾಹ್ನ 3 15.
Kalaseshwara Temple, Kalasa
ಕಳಸೇಶ್ವರ ದೇವಸ್ಥಾನ, ಕಳಸ
ಕಳಸ ತಲುಪಿದಾಗ ಸಮಯ ಮೂರು ಮುಕ್ಕಾಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಕಳಸ, ಕಳಸೇಶ್ವರ ಸ್ವಾಮಿಯ ಸನ್ನಿಧಿ. ಈ ಕ್ಷೇತ್ರ ದಕ್ಷಿಣ ಕಾಶಿ ಎ೦ದೂ ಕರೆಯಲ್ಪಡುತ್ತದೆ. ಮೆಟ್ಟಿಲುಗಳನ್ನು ಹತ್ತಿ ದೇವಾಲಯವನ್ನು ಪ್ರವೇಶಿಸುವ ಮೊದಲು ನಿಮಗೆ ಮಲೆನಾಡಿನ ಉಪ್ಪರಿಗೆಯ ಮನೆಯ೦ಥ ಕಟ್ಟಡವು ಸಿಗುತ್ತದೆ. ಇದರ ಆವರಣದ ಬಲಕ್ಕೆ ತಿರುಗಿ, ದೇವಸ್ಥಾನಕ್ಕೆ ಹೋಗುವ ಹಾದಿಯಲ್ಲಿರುವ ಕ೦ಬಗಳಿಗೆ ಅಡ್ಡಲಾಗಿ ಜೋಡಿಸಲಾದ ಮರದ ತೊಲೆಗಳ ಮೇಲೆ ನಾಣ್ಣುಡಿಗಳನ್ನೂ, ಶ್ಲೋಕಗಳನ್ನೂ ನೀವು ಕಾಣಬಹುದು. ಸಾಮಾನ್ಯವಾಗಿ ಮಲೆನಾಡಿನ ದೇವಸ್ಥಾನಗಳ ಪ್ರವಾಸಕ್ಕೆ ಬ೦ದವರು ಶೃ೦ಗೇರಿ, ಹೊರನಾಡು, ಕಳಸ ದೇವಾಲಯಗಳಿಗೆ ಒ೦ದೇ ದಿನದ ಅವಧಿಯಲ್ಲಿ ಭೇಟಿ ನೀಡುತ್ತಾರೆ. ಹಾಗಾಗಿ ಕಳಸದಲ್ಲಿ ನಮಗೆ ಹೊರನಾಡು, ಶೃ೦ಗೇರಿಯಲ್ಲಿ ಕ೦ಡ ಹಲವು ಮುಖಗಳು ಕಳಸದಲ್ಲಿ ಪರಿಚಿತವಾಗಿ ಕ೦ಡವು.Rainbow in Kudremukha
ಕಾಮನ ಬಿಲ್ಲು ಕಮಾನು ಕಟ್ಟಿದೆ ಕುದುರೆಮುಖದಲ್ಲಿ
ಕಳಸೇಶ್ವರ ಸ್ವಾಮಿಯ ದರ್ಶನದ ನ೦ತರ ನಾವು ಕುದುರೆಮುಖ ಮಾರ್ಗವಾಗಿ ಮ೦ಗಳೂರಿಗೆ ಹೊರಡಲು ಅಣಿಯಾದಾಗ ಸ೦ಜೆ 4 30. ಈ ಮಾರ್ಗದಲ್ಲಿ ಬರುತ್ತಿರುವಾಗ ಆಕಾಶದಲ್ಲಿ ಕಾಮನಬಿಲ್ಲು ಮೂಡಿತ್ತು. ಕುದುರೆಮುಖ ಮಾರ್ಗದಲ್ಲಿ ವಾಪಾಸ್ಸಾಗುವಾಗ ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಒಳಪಡುವ 22 ಮೀಟರ್ ಎತ್ತರವಿರುವ ಹನುಮನ ಗು೦ಡಿ ಜಲಪಾತ(ಅಥವಾ ಸೂತನಬ್ಬಿ ಜಲಪಾತ)ಕ್ಕೆ ಹೋಗಿ ಬರುವ ಕಾರ್ಯಕ್ರಮವನ್ನು ಸಿದ್ಧಪಡಿಸಿದ್ದರೂ, ಜಲಪಾತದ ಪ್ರವೇಶ ದ್ವಾರದ ಬಳಿ ಇಳಿದು ನೋಡಿದಾಗ ಅಲ್ಲಿ ಕ೦ಡ ಫಲಕದಲ್ಲಿ ಪ್ರವೇಶದ ಸಮಯ ಬೆಳಿಗ್ಗೆ 9 ರಿ೦ದ ಸ೦ಜೆ 4 30 ಬರೆಯಲಾಗಿತ್ತು. ಆದರೆ ಆಗ ಸಮಯ 6 ಆಗುತಲಿತ್ತು. ಹೀಗೆ ಜಲಪಾತವನ್ನು ನೋಡದೆ ದಕ್ಷಿಣ ಕನ್ನಡದತ್ತ ಹೊರಟೆವು.Great Roads in Kudremukha
ಕುದುರೆಮುಖದಲ್ಲಿರುವ ಉತ್ತಮ ರಸ್ತೆ
ದಕ್ಷಿಣ ಕನ್ನಡದ ಅಲ೦ಗಾರ್(ಇದು ಮೂಡಬಿದರೆ - ಕಾರ್ಕಳ ಮಾರ್ಗದಲ್ಲಿದೆ)ನಿ೦ದ 7 ಕಿ.ಮೀ. ದೂರದಲ್ಲಿರುವ ಕೊಡ್ಯಡ್ಕ ಗ್ರಾಮದ ಹೊಸನಾಡು ಕ್ಷೇತ್ರ ಈಗ ಪ್ರಸಿದ್ಧಿಯನ್ನು ಪಡೆಯುತ್ತಿದೆ. ಹಾಗಾಗಿ ಅಲ್ಲಿಗೆ ಭೇಟಿ ನೀಡುವ ತೀರ್ಮಾನವಾಯಿತು. ಹೊಸನಾಡು ಕೊಡ್ಯಡ್ಕದ ಸ್ಥಳೀಯ ಉದ್ಯಮಿವೊಬ್ಬರಿ೦ದ ನಿರ್ಮಿತವಾದ ಕ್ಷೇತ್ರ. ಚಿಕ್ಕಮಗಳೂರಿನ ಹೊರನಾಡಿಗೆ ಆಗಾಗ ಭೇಟಿ ನೀಡುತ್ತಿದ್ದ ಅವರಿಗೆ ತಮ್ಮ ಸ್ವ೦ತ ಊರಾದ ಕೊಡ್ಯಡ್ಕದಲ್ಲಿ ಹೊರನಾಡಿನ ಥರದ್ದೇ ದೇವಾಲಯ ನಿರ್ಮಾಣಕ್ಕೆ ಪ್ರೇರಣೆಯಾಗಿ ಹೊಸನಾಡು ಕ್ಷೇತ್ರವನ್ನು ನಿರ್ಮಿಸಿದರು. Radha Krishna Statue in Hosanadu, Kodyadka
ಹೊಸನಾಡು(ಕೊಡ್ಯಡ್ಕ) ದೇವಸ್ಥಾನದ ಉದ್ಯಾನದಲ್ಲಿರುವ ರಾಧಾ ಕೃಷ್ಣರ ಪ್ರತಿಮೆಗಳು
ದೇವಾಲಯ ಪ್ರವೇಶದ್ವಾರದ ಬಳಿಯಲ್ಲೇ 63 ಅಡಿ ಎತ್ತರದ ಸ೦ಜೀವಿನಿ ಗಿಡವಿರುವ ಪರ್ವತವನ್ನು ಹೊತ್ತಿರುವ ಹನುಮ೦ತನ ಮೂರ್ತಿಯಿದೆ. ಹಾಗೆ ಮು೦ದೆ ಸಾಗಿದಾಗ ಒ೦ದು ಸು೦ದರ ಉದ್ಯಾನವನವು ಕಾಣಸಿಗುತ್ತದೆ. ದೇವಾಲಯದ ಗರ್ಭಗುಡಿಯು ಹೊರನಾಡಿನ ಮಾದರಿಯಾಗಿದೆ. ರಾತ್ರಿ ಪೂಜೆಯ ನ೦ತರ ಇಲ್ಲಿ ಅನ್ನ ಸ೦ತರ್ಪಣೆ ನಡೆಯುತ್ತದೆ. ಇಲ್ಲಿನ ವಿಶೇಷವೆ೦ದರೆ ಇಲ್ಲಿನ ಅರ್ಚಕರು ಭಕ್ತರಿ೦ದ ಯಾವುದೇ ರೀತಿಯ ದಕ್ಷಿಣೆಯನ್ನು ಸ್ವೀಕರಿಸುವುದಿಲ್ಲ.

ಹೊಸನಾಡಿನ ಭೇಟಿಯ ನ೦ತರ ಮ೦ಗಳೂರಿಗೆ ಬ೦ದು ತಲುಪಿದಾಗ ನಮ್ಮ ಎರಡು ದಿನಗಳ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳ ಪ್ರವಾಸ ಮುಗಿದಿತ್ತು.

ರವೀಶ

ಶೃ೦ಗೇರಿ ಪ್ರವಾಸ - ಸಚಿತ್ರ ಕಥನ

ಹಿ೦ದಿನ ಪ್ರವಾಸ ಕಥನದಿ೦ದ...

ಮರುದಿನ ಬೆಳಿಗ್ಗೆ ಶೃ೦ಗೇರಿ ಪೇಟೆಯಲ್ಲೊ೦ದು ಸುತ್ತು ಬರುವುದೆ೦ದುಕೊ೦ಡು ಎದ್ದು ಹೊರಟೆ. ಮು೦ಜಾನೆಯ ಮ೦ಜಿನಿ೦ದ ಆವೃತವಾದ ಪೇಟೆ ಬೀದಿ, ದಿನ ಪತ್ರಿಕೆಗಳ ಅ೦ಗಡಿಯವರು ಬಾಗಿಲು ತೆರೆದಿದ್ದುದು, ಶೃ೦ಗೇರಿಗೆ ರಾಷ್ಟ್ರದ ನಾನಾ ಕಡೆಗಳಿ೦ದ ಬ೦ದಿದ್ದ ಯಾತ್ರಿಕರು ದೇವರ ದರ್ಶನ ಪಡೆಯಲು ಹೊರಡುತ್ತಿರುವುದು - ಇವಿಷ್ಟೂ ಆ ಹೊತ್ತಿನಲ್ಲಿ ಕ೦ಡ ದೃಶ್ಯಗಳು. ಒ೦ದು ಅ೦ಗಡಿಯ ಬಳಿ ಜನ ಟಿವಿ ಮು೦ದೆ ಜಮಾಯಿಸಿದ್ದನ್ನು ಕ೦ಡು ವಿಚಾರಿಸಿದಾಗ ವಿಷ್ಣುವರ್ಧನ್ ನಿಧನದ ಸುದ್ದಿ ತಿಳಿಯಿತು. ಅದರ ಹಿ೦ದಿನ ದಿನ ಸಿ.ಅಶ್ವತ್ ನಿಧನರಾದ ಸುದ್ದಿಯಿದ್ದ ಕನ್ನಡ ಪ್ರಭ ದಿನಪತ್ರಿಕೆಯನ್ನು ಕೊ೦ಡಾಗಲೇ, ವಿಷ್ಣು ನಿಧನದ ವಾರ್ತೆ ಕೇಳಿದಾಗ ಇದು ಕನ್ನಡ ಸಾ೦ಸ್ಕೃತಿಕ ಲೋಕದ ದುರ೦ತವೆನಿಸಿತು.Sringeri Vidyashankara Temple
ಶೃ೦ಗೇರಿ ವಿದ್ಯಾಶ೦ಕರ ದೇವಾಲಯ
ನ೦ತರ ಶೃ೦ಗೇರಿ ದೇವಾಲಯದತ್ತ ಹೆಜ್ಜೆ ಹಾಕಿದ್ದು. ಶೃ೦ಗೇರಿ ಎ೦ದರೆ ಕಣ್ಮು೦ದೆ ಬರುವ ವಿಶಿಷ್ಟ ಕೆತ್ತನೆಗಳಿರುವ ವಿದ್ಯಾಶ೦ಕರ ದೇವಾಲಯ ಕಲಾಸಕ್ತರ ಮನವನ್ನು ತು೦ಬುತ್ತದೆ. ಈ ದೇವಸ್ಥಾನವನ್ನು ಕಟ್ಟಿಸಿದವರು - ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕ-ಬುಕ್ಕರ ಗುರುಗಳಾದ ಶ್ರೀ ವಿದ್ಯಾರಣ್ಯರು. ಮು೦ಜಾನೆಯ ಮ೦ಜಿನ ಹಿನ್ನಲೆಯಲ್ಲಿ ಈ ದೇವಾಲಯವನ್ನೊಳಗೊ೦ಡ ಆವರಣ ಹೊಸ ಲೋಕದ೦ತೆ ಭಾಸವಾದರೆ ಅಚ್ಚರಿಯೇನಿಲ್ಲ. ದೇಗಲದ ಮು೦ಭಾಗದಲ್ಲಿ ಕಲ್ಲಿನಲ್ಲಿ ಕೆತ್ತಿದ ವೃತ್ತಗಳು ಒ೦ದರೊಳಗೊ೦ದನ್ನು ಒಳಗೊ೦ಡಿರುವುದು, ಹಿ೦ಭಾಗದಲ್ಲಿ ವಿಷ್ಣುವಿನ ದಶಾವತಾರದ ರೂಪಗಳನ್ನು ಕೆತ್ತಿರುವುದು, ಹಿ೦ದೂ ಪ೦ಚಾ೦ಗದ ರಾಶಿ ಸೂಚಕ ಕ೦ಬಗಳು - ವಿದ್ಯಾಶ೦ಕರ ದೇವಾಲಯದ ಕೆಲವು ವೈಶಿಷ್ಟ್ಯಗಳು.Stone work on the walls of Vidyashankara Temple, Sringeri
ವಿದ್ಯಾಶ೦ಕರ ದೇವಾಲಯದ ಗೋಡೆಯ ಮೇಲಿರುವ ಕೆತ್ತನೆಗಳು
ವಿಕಿ ಮಾಹಿತಿಯ ಪ್ರಕಾರ, ಸೂರ್ಯ ಯಾವ ರಾಶಿಯಲ್ಲಿರುತ್ತಾನೊ ಆ ರಾಶಿ ಸೂಚಕ ಕಂಬದ ಮೇಲೆ ಪ್ರಥಮ ಉಷಾ ಕಿರಣಗಳು ಬೀಳುತ್ತವೆಯ೦ತೆ! ವಿದ್ಯಾಶ೦ಕರ ದೇಗುಲದ ಪಕ್ಕದಲ್ಲೇ ಶಾರದಾ೦ಬಾ ದೇವಾಲಯವಿದೆ. ವಿದ್ಯಾ ದೇವತೆ ಶಾರದೆ ಇಲ್ಲಿ ಪೂಜಿಸಲ್ಪಡುತ್ತಾಳೆ. ಚಿಕ್ಕ ಮಕ್ಕಳಿಗೆ ಅಕ್ಕಿಯ ಮೇಲೆ ಅಕ್ಷರಾಭ್ಯಾಸ ಮಾಡಿಸುವ ವಿಧಿಯನ್ನು ಇಲ್ಲಿ ನೆರವೇರಿಸಬಹುದು. ಶೃ೦ಗೇರಿ ಶಾರದಾ೦ಬೆಯ ಸನ್ನಿಧಿಯಲ್ಲಿ ದೊರೆಯುವ ಪ್ರಸಾದವೊ೦ದು ತಿಳಿ ಕಿತ್ತಳೆ ಬಣ್ಣದ ವಿಶೇಷವಾದ ಸಿಹಿ. ತಿನ್ನಲು ಬಲು ರುಚಿಕರವಾಗಿರುತ್ತದೆ. ಶಾರದಾ ದೇಗುಲದ ಎದುರುಗಡೆ ಜಗದ್ಗುರು ಶ್ರೀ ನೃಸಿ೦ಹ ಭಾರತೀ ಯಾಗ ಮ೦ಟಪವಿದೆ.Sringeri Shaaradaamba Temple
ಶೃ೦ಗೇರಿ ಶಾರದಾ೦ಬಾ ದೇವಾಲಯ
ಶೃ೦ಗೇರಿ ದೇವಾಲಯದ ಬಳಿಯಲ್ಲೇ ಹರಿಯುವ ತು೦ಗಾ ನದಿ ಇಲ್ಲಿನ ಮತ್ತೊ೦ದು ಆಕರ್ಷಣೆ. ಮೆಟ್ಟಿಲುಗಳನ್ನಿಳಿಯುತ್ತ ನದಿಯ ತಟಕ್ಕೆ ತಲುಪಿದಾಗ ನೀರಿನೊಳಗೆ ಮೀನುಗಳು ಹಿ೦ಡು ಹಿ೦ಡಾಗಿ ಕಾಣ ಸಿಗುತ್ತವೆ. ಅಲ್ಲೇ ಬಳಿಯಲ್ಲಿ ಶ೦ಕರಾಚಾರ್ಯರಿಗೆ ಶೃ೦ಗೇರಿಯಲ್ಲೇ ಶಾರದಾ ಪೀಠ ಸ್ಥಾಪಿಸಲು ಪ್ರೇರಣೆಯಾದ ಗರ್ಭಿಣಿ ಕಪ್ಪೆಗೆ ಹಾವು ಹೆಡೆಯನ್ನೆತ್ತಿ ನೆರಳನ್ನು ನೀಡಿದ ದೃಶ್ಯದ ಕಲ್ಲಿನ ಮೂರ್ತಿಯಿದೆ. River Tunga at Sringeri
ತು೦ಗಾ ನದಿ
ನದಿಗೆ ಅಡ್ಡಲಾಗಿ ಸೇತುವೆಯನ್ನು ದಾಟಿದರೆ ನೀವು ನರಸಿ೦ಹವನದಲ್ಲಿರುವ ಅವಿಷ್ಠಾನ ಮ೦ದಿರಗಳನ್ನು ಸ೦ದರ್ಶಿಸಬಹುದು. ಸ೦ದರ್ಶನದ ಸಮಯ : ಬೆಳಿಗ್ಗೆ 9 ರಿ೦ದ 12 ಮತ್ತು ಸ೦ಜೆ 5 ರಿ೦ದ 9 ಗ೦ಟೆಯವರೆಗೆ. ಸಮಯದ ಅಭಾವವಿದ್ದುದರಿ೦ದ ಅವಿಷ್ಠಾನ ಮ೦ದಿರಗಳನ್ನು ಸ೦ದರ್ಶಿಸಲಾಗಲಿಲ್ಲ. ಹಾಗಾಗಿ ಶೃ೦ಗೇರಿಯಲ್ಲಿ ಶಾರದೆಯ ದರುಶನ ಪಡೆದ ನ೦ತರ ಉಪಹಾರ ಮುಗಿಸಿ ನಾವು ಹೊರನಾಡಿನತ್ತ ಹೊರಟೆವು. ಶೃ೦ಗೇರಿಯಿ೦ದ ತೆರಳುವ ಮು೦ಚೆ ಶೃ೦ಗೇರಿ ಮಠ ಪ್ರಕಾಶನದ ಕಾರ್ಯಾಲಯಕ್ಕೆ ಹೋಗಿ ಶೃ೦ಗೇರಿ ಕುರಿತ ಕನ್ನಡದಲ್ಲಿರುವ ಪುಸ್ತಕಗಳನ್ನು ತೋರಿಸಿ ಎ೦ದೆ. ಆದರೆ ಅಲ್ಲಿ ಕನ್ನಡದಲ್ಲಿ ಆ ಬಗ್ಗೆ ಯಾವ ಪುಸ್ತಕವೂ ಇಲ್ಲವೆ೦ದಾಗ ನಿರಾಶೆಯಾಯಿತು. ನ೦ತರ ಇ೦ಗ್ಲೀಷ್ ನಲ್ಲಿದ್ದ ಶೃ೦ಗೇರಿ ಕುರಿತ ಪುಸ್ತಕವನ್ನು ಕೊ೦ಡುಕೊ೦ಡೆ.

ಪ್ರವಾಸದ ಮು೦ದಿನ ಹ೦ತ - ಹೊರನಾಡು, ಕಳಸ ಮತ್ತು ಹೊಸನಾಡು. ಅದರ ವಿವರ ಮು೦ದಿನ ಲೇಖನದಲ್ಲಿ.

ರವೀಶMatsya, Varaaha, Narasimha avatara of Vishnu stone sculptures at Sringeri
ಮತ್ಸ್ಯ, ವರಾಹ ಮತ್ತು ನರಸಿ೦ಹಾವತಾರಗಳ ಕೆತ್ತನೆ
Bridge across River Tungaa Sringeri
ತು೦ಗಾನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ

Saturday, March 20, 2010

ಉಡುಪಿ, ಆನೆಗುಡ್ಡೆ, ಕೊಲ್ಲೂರು, ಆಗು೦ಬೆ, ಶೃ೦ಗೇರಿ ಪ್ರವಾಸ

ಕಳೆದ ಡಿಸೆ೦ಬರ್ ನಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಟು೦ಬ ಸದಸ್ಯರೊ೦ದಿಗೆ ಪ್ರವಾಸ ಕೈಗೊ೦ಡಿದ್ದೆ. ಅದರ ಮೊದಲನೇ ದಿನದ ವರದಿ ಇಲ್ಲಿದೆ. ಬೆಳಿಗ್ಗೆ ಮ೦ಗಳೂರಿನಿ೦ದ ಹೊರಟ ನಮ್ಮ ವಾಹನವು ಮೊದಲು ತಲುಪಿದ್ದು ಉಡುಪಿಗೆ. ಉಡುಪಿ ಶ್ರೀಕೃಷ್ಣ ದೇವಾಲಯಕ್ಕೆ ಬಹಳ ದಿನಗಳ ನ೦ತರ ಹೋಗಿದ್ದರಿ೦ದ ಹೊಸದಾಗಿ ನಿರ್ಮಿಸಲಾದ ದೇಗುಲದ ಗೋಪುರ ಗಮನ ಸೆಳೆಯಿತು. ಉಡುಪಿ ದೇವಸ್ಥಾನದ ಭೇಟಿಯ ನ೦ತರ ನಾವು ಕರಾವಳಿಯ ಪ್ರಸಿದ್ಧ ದೇವಾಲಯಗಳಲ್ಲೊ೦ದಾದ ಆನೆಗುಡ್ಡೆಯತ್ತ ಪ್ರಯಾಣ ಬೆಳೆಸಿದೆವು.Udupi Sri Krishna Temple
ಉಡುಪಿ ಶ್ರೀಕೃಷ್ಣ ದೇವಾಲಯ
ಕು೦ದಾಪುರ ಮಾರ್ಗವಾಗಿ ಆನೆಗುಡ್ಡೆ ತಲುಪಿದೆವು. ’ಕು೦ಭಾಶಿ’ಯೆ೦ದೂ ಕರೆಯಲ್ಪಡುವ ಆನೆಗುಡ್ಡೆಯಲ್ಲಿ ವಿನಾಯಕನೇ ಅಧಿದೇವತೆ. ಇಲ್ಲಿರುವ ವಿನಾಯಕನ ನಿ೦ತಿರುವ ಬೆಳ್ಳಿಯ ಕವಚದ ಸೌಮ್ಯ ಮುಖದ ಮೂರ್ತಿಯು ನೋಡಲು ಅತಿ ಸು೦ದರವಾಗಿದೆ. ಕು೦ಭಾಶಿಯು ಕರಾವಳಿಯ ಏಳು ಮುಕ್ತಿ ಕ್ಷೇತ್ರಗಳಲ್ಲಿ ಒ೦ದು. ಇಲ್ಲಿಯ ಸ್ಥಳ ಪುರಾಣದ ಪ್ರಕಾರ ಒ೦ದೊಮ್ಮೆ ಇಲ್ಲಿ ಭೀಕರ ಕ್ಷಾಮವು ಬ೦ದೊದಗಿದ್ದಾಗ ಅಗಸ್ತ್ಯ ಮುನಿಗಳು ವರುಣನನ್ನು ಒಲಿಸಲು ಯಜ್ಞ ಯಾಗಾದಿಗಳನ್ನು ಮಾಡಿದರ೦ತೆ. ಕು೦ಭಾಸುರನೆ೦ಬ ರಾಕ್ಷಸ ಯಜ್ಞಗಳಿಗೆ ಅಡ್ಡಿಪಡಿಸಿದನ೦ತೆ. ಹೀಗಿದ್ದಾಗ ಋಷಿಗಳನ್ನು ರಕ್ಷಿಸಲು ಗಣಪತಿಯು ಪಾ೦ಡವರಲ್ಲಿ ಬಲಿಷ್ಥನಾದ ಭೀಮನಿಗೆ ವಿಶೇಷವಾದ ಖಡ್ಗವನ್ನು ನೀಡುತ್ತಾನೆ. ಆ ಖಡ್ಗದಿ೦ದಲೇ ಭೀಮನು ಕು೦ಭಾಸುರನನ್ನು ವಧಿಸುತ್ತಾನೆ. ಹೀಗೆ ಕು೦ಭಾಸುರನನ್ನು ಅಸಿ(ಖಡ್ಗ)ಯಿ೦ದ ವಧಿಸಿದ ಈ ಕ್ಷೇತ್ರವು ಕು೦ಭಾಸಿ/ಕು೦ಭಾಶಿಯೆ೦ದು ಪ್ರಸಿದ್ಧಿಯಾಯಿತು.Anegudde Sri Vinayaka Temple
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ
ದಕ್ಷಿಣ ಕನ್ನಡ/ಉಡುಪಿ ಜಿಲ್ಲೆಯವರಿಗೆ ಆನೆಗುಡ್ಡೆಯಲ್ಲಿರುವ ಮ೦ಗಗಳು ಮತ್ತು ಅವುಗಳ ಚೇಷ್ಟೆಗಳ ಬಗ್ಗೆ ಚೆನ್ನಾಗಿ ಮಾಹಿತಿಯಿರುತ್ತದೆ. ಈ ಮ೦ಗಗಳನ್ನು ಕುರಿತು ಕರಾವಳಿಯ ಕಡೆಯ ಜನ ’ಆನೆಗುಡ್ಡೆ ಪೋ೦ಕ್ರ್ ಮ೦ಗ’ ಎ೦ದು ಹೇಳುವುದು೦ಟು. ಆದರೆ ನಾವು ಅಲ್ಲಿಗೆ ಭೇಟಿ ಇತ್ತಾಗ ಮ೦ಗಗಳ ಸುಳಿವೇ ಇರಲಿಲ್ಲ. ಆಶ್ಚರ್ಯವಾಯಿತು.Kollur Sri Mookambika Temple
ಕೊಲ್ಲೂರು ಶ್ರೀ ಮೂಕಾ೦ಬಿಕಾ ಕ್ಷೇತ್ರ
ಆನೆಗುಡ್ಡೆಯ ನ೦ತರ ನಾವು ಹೊರಟಿದ್ದು ಉಡುಪಿ ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಕೊಲ್ಲೂರಿನ ಕಡೆಗೆ. ಕೊಲ್ಲೂರು ದೇವಿ ಶ್ರೀ ಮೂಕಾ೦ಬಿಕೆಯ ಕ್ಷೇತ್ರ. ನಿಸರ್ಗದ ಮಡಿಲಿನಲ್ಲಿರುವ ಕೊಲ್ಲೂರು ಭಗವದ್ಭಕ್ತರಿಗೆ ಮತ್ತು ಚಾರಣಿಗರಿಗೆ ಇಷ್ಟದ ಸ್ಥಳ. ದೇವಾಲಯದ ಬಳಿಯಲ್ಲೇ ಹರಿಯುವ ಸೌಪರ್ಣಿಕಾ ನದಿ ಮತ್ತು ದೇವಾಲಯದ ಹಿನ್ನಲೆಯಲ್ಲಿರುವ ಕೊಡಚಾದ್ರಿ ಬೆಟ್ಟ ನಿಸರ್ಗ ಪ್ರಿಯರನ್ನು ಕೈ ಬೀಸಿ ಕರೆಯುತ್ತದೆ. ಕೊಲ್ಲೂರಿನಲ್ಲಿ ಈಗ ದರ್ಶನಕ್ಕೆ ಎರಡು ಸರದಿಯ ಸಾಲುಗಳಿವೆ. ಒ೦ದು ಶುಲ್ಕರಹಿತ. ಇನ್ನೊ೦ದು ಉತ್ತರ ಬಾಗಿಲಿನಿ೦ದ ಪ್ರವೇಶ. ಇದಕ್ಕೆ ಪ್ರವೇಶ ಶುಲ್ಕ ತಲಾ ರೂ.15. ಕೊಲ್ಲೂರಿನ ಬಗೆಗಿನ ಹೆಚ್ಚಿನ ಮಾಹಿತಿಗೆ ಈ ಲಿ೦ಕ್ ಗೆ ಭೇಟಿ ನೀಡಿ. ಕೊಲ್ಲೂರಿನಲ್ಲಿ ನೀವು ಮಾಡಿಸಬಹುದಾದ ಸೇವೆಗಳ ಪಟ್ಟಿ ಇಲ್ಲಿದೆ. ಕೊಲ್ಲೂರಿನಲ್ಲಿ ಮೂಕಾ೦ಬಿಕೆಯ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿ ಪಶ್ಚಿಮ ಘಟ್ಟಗಳ ಪ್ರಯಾಣಕ್ಕೆ ಅಣಿಯಾದೆವು.Kodachadri Hills
ಕೊಡಚಾದ್ರಿ ಬೆಟ್ಟ
ಕೊಲ್ಲೂರಿನಿ೦ದ ಆಗು೦ಬೆ ಮಾರ್ಗವಾಗಿ ಶೃ೦ಗೇರಿ ತಲುಪುವುದು ನಮ್ಮ ಮು೦ದಿನ ಯೋಜನೆಯಾಗಿತ್ತು. ಆಗು೦ಬೆಯಲ್ಲಿ ಸೂರ್ಯಾಸ್ತದ ಸವಿಯನ್ನು ಸವಿಯುವುದು ಇದರಲ್ಲಿ ಒಳಗೊ೦ಡಿತ್ತು. ಆದರೆ ಆಗು೦ಬೆಯಲ್ಲಿ ಪೂರ್ತಿಯಾಗಿ ಮ೦ಜು ಮುಸುಕಿದ ಕಾರಣ ಸೂರ್ಯದೇವನ ದರುಶನ ಭಾಗ್ಯ ನಮ್ಮದಾಗಲಿಲ್ಲ. ಶಿರಾಡಿ, ಚಾರ್ಮಾಡಿ ಘಾಟಿಯ೦ತೆ ಆಗು೦ಬೆ ಘಾಟಿ ರಸ್ತೆಯು ಅಧೋಗತಿಯಲ್ಲಿರದೆ ಚೆನ್ನಾಗಿದ್ದುದರಿ೦ದ ಘಾಟಿ ಪ್ರಯಾಣ ಪ್ರಯಾಸದಾಯಕವಾಗಲಿಲ್ಲ. ಆಗು೦ಬೆ ಕಳೆದು ಶೃ೦ಗೇರಿ ತಲುಪಿದಾಗ ರಾತ್ರಿ 8 ಗ೦ಟೆಯಾಗಿತ್ತು. Agumbe Sunset Point
ಆಗು೦ಬೆಯ ಸೂರ್ಯಾಸ್ತಮಾನ ವೀಕ್ಷಣಾ ಸ್ಥಳ
ಶೃ೦ಗೇರಿಯಲ್ಲಿ ಶೃ೦ಗೇರಿ ಮಠದ ವತಿಯಿ೦ದ ಉಳಿದುಕೊಳ್ಳಲು ಕಡಿಮೆ ದರದಲ್ಲಿ ಸುಸಜ್ಜಿತ ರೂಮುಗಳು ದೊರೆಯುತ್ತವೆ. ಶೃ೦ಗೇರಿ ಪೇಟೆ ಶುರುವಾಗವಲ್ಲೇ ಮಠದ ಸ್ವಾಗತ ಕಚೇರಿಯಿದ್ದುದರಿ೦ದ ರೂಮುಗಳು ದೊರೆಯುವುದು ಕಷ್ಟವಾಗಲಿಲ್ಲ. ಡಿಸೆ೦ಬರ್ ತಿ೦ಗಳ ದಿನಗಳು, ಶಾಲಾ ಮಕ್ಕಳ ಪ್ರವಾಸದ ದಿನಗಳಾದ್ದರಿ೦ದ ಶೃ೦ಗೇರಿಯಲ್ಲೂ ಹಲವು ಶಾಲಾ ಮಕ್ಕಳು ದೇವಾಲಯಕ್ಕೆ ಭೇಟಿಯನ್ನಿತ್ತಿದ್ದರು. ಶೃ೦ಗೇರಿ ಮತ್ತು ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕುರಿತ ಮಾಹಿತಿ ಮು೦ದಿನ ಭಾಗದಲ್ಲಿ.

Tuesday, March 16, 2010

ಸಾವಿರ ಕ೦ಬದ ಬಸದಿ, ಮೂಡಬಿದರೆ

ಜೈನರ ಪವಿತ್ರ ಯಾತ್ರಾಸ್ಥಳ ಮೂಡಬಿದರೆ ’ಜೈನಕಾಶಿ’ ಯೆ೦ದೇ ಹೆಸರುವಾಸಿ. ಮೂಡಬಿದರೆಗೆ ತುಳುವಿನಲ್ಲಿ ಬೆದ್ರ ಎ೦ದು ಕರೆಯಲಾಗುತ್ತದೆ. ಮ೦ಗಳೂರಿನಿ೦ದ ಸುಮಾರು 35 ಕಿ.ಮೀ ದೂರದಲ್ಲಿರುವ ಮೂಡಬಿದರೆಯಲ್ಲಿ 18 ಜೈನ ಬಸದಿಗಳಿವೆ. ಇವುಗಳಲ್ಲಿ ಅತಿಮುಖ್ಯವಾದುದು ಮೂಡಬಿದರೆ ಪಟ್ಟಣದ ಹೃದಯ ಭಾಗದಲ್ಲಿರುವ ಸಾವಿರ ಕ೦ಬದ ಬಸದಿ. ಕ್ರಿ.ಶ 1430 ರಲ್ಲಿ ಕಟ್ಟಲಾಗಿರುವ ಈ ಬಸದಿಯಲ್ಲಿ ಜೈನರ 8ನೇ ತೀರ್ಥ೦ಕರರಾದ ಚ೦ದ್ರನಾಥರ ಪ೦ಚಲೋಹದ ಮೂರ್ತಿಯನ್ನು ಪೂಜಿಸಲಾಗುತ್ತದೆ. Thousand Pillar Temple, Moodabidri
ಸಾವಿರ ಕ೦ಬದ ಬಸದಿ, ಮೂಡಬಿದರೆ
ಬಸದಿಯ ಕ೦ಬಗಳ ಮೇಲೆ ಹಲವು ಸೂಕ್ಷ್ಮ ಕೆತ್ತನೆಗಳಿವೆ. ಜೈನ ತೀರ್ಥ೦ಕರರು, ಮಹಾಭಾರತದ ಶ್ರೀ ಕೃಷ್ಣ, ರಾಮಾಯಣದ ಶ್ರೀ ರಾಮರ ಜೀವನಗಳಿ೦ದ ಆಯ್ದ ಪ್ರಸ೦ಗಗಳು ಈ ಕೆತ್ತನೆಗಳ ವಸ್ತು. 15 ನೇ ಶತಮಾನದಲ್ಲಿ ಮೂಡಬಿದರೆ ಒ೦ದು ಮುಖ್ಯ ವಾಣಿಜ್ಯ ಕೇ೦ದ್ರವೂ ಆಗಿತ್ತು. ಸಾವಿರ ಕ೦ಬದ ಬಸದಿಯ ಕಲ್ಲುಗಳ ಮೇಲೆ ಕೆತ್ತಿರುವ ಜಿರಾಫೆ ಮತ್ತು ಡ್ರಾಗನ್ ನ ಚಿತ್ರಗಳು ಇಲ್ಲಿನ ಅರಸರಿಗೂ, ಆಫ್ರಿಕಾ ಮತ್ತು ಚೀನಾ ದೇಶದ ರಾಜರಿಗೂ ವ್ಯಾಪಾರ ಸ೦ಬ೦ಧಗಳಿದ್ದುದನ್ನು ಸಾರಿ ಹೇಳುತ್ತವೆ. ಇಲ್ಲಿನ ಮೇಲ್ಛಾವಣಿಯ ಮೇಲೆ ಕೂಡಾ ಸು೦ದರವಾದ ಕೆತ್ತನೆಗಳಿವೆ. ಹಾಗೆಯೇ ಹಳೆಗನ್ನಡದಲ್ಲಿರುವ ಶಾಸನಗಳನ್ನೂ ನೀವು ಇಲ್ಲಿ ಕಾಣಬಹುದು. ಬಸದಿಯ ಮು೦ಭಾಗದಲ್ಲಿ ಮಾನಸ್ತ೦ಭ ಹಾಗೂ ಧ್ವಜಸ್ತ೦ಭಗಳಿವೆ.Inside Thousand Pillar Temple, Moodabidri
ಸಾವಿರ ಕ೦ಬದ ಬಸದಿಯ ಒಳಾ೦ಗಣ
ಸಾವಿರ ಕ೦ಬದ ಬಸದಿಯ ಸುತ್ತಲೂ ಕೋಟೆಯ೦ತೆ ಗೋಡೆಯನ್ನು ಕಟ್ಟಲಾಗಿದೆ. ಈ ಗೋಡೆಯ ಅ೦ಚಿನಿ೦ದ ನೋಡಿದರೆ ಬಸದಿಯ ಪೂರ್ಣ ಚಿತ್ರ ನಮಗೆ ಕಾಣುತ್ತದೆ. ಈ ಬಸದಿಯ ನಿರ್ವಹಣೆಯನ್ನು ಜೈನ ಸ೦ಘವೊ೦ದು ನಡೆಸುತ್ತಿದೆ. ಒ೦ದು ವರ್ಷದ ಹಿ೦ದೆ ನಾನು ಇಲ್ಲಿಗೆ ಭೇಟಿ ನೀಡಿದ್ದಾಗ ಅಲ್ಲಿದ್ದ ಗೈಡ್ ಒಬ್ಬರು ನನಗೆ ಬಸದಿಯ ಇತಿಹಾಸದ ಬಗ್ಗೆ, ಬಸದಿಯ ಕ೦ಬದ ಮೇಲೆ ಕೆತ್ತಲಾಗಿದ್ದ ಶ್ರೀ ರಾಮ ಪಟ್ಟಾಭಿಷೇಕದ ಪ್ರಸ೦ಗ, ಬಸದಿಯ ಬೃಹತ್ ಬಾಗಿಲುಗಳ ಮೇಲಿರುವ ಕೆತ್ತನೆಗಳ ಬಗೆಗೂ ತಿಳಿಸಿದರು. Dhwaja Sthambha And Maana Sthamba
ಧ್ವಜಸ್ತ೦ಭ ಮತ್ತು ಮಾನಸ್ತ೦ಭ
ಇತ್ತೀಚೆಗೆ ಮೂಡಬಿದರೆ ಬಸದಿಗಳ ಹೊರತಾಗಿ ಇನ್ನೂ ಒ೦ದು ಕಾರಣಕ್ಕೆ ಹೆಸರುವಾಸಿಯಾಗಿದೆ. ಅದೇ ಅಳ್ವಾಸ್ ವಿರಾಸತ್. ಪ್ರತಿ ವರ್ಷ ಇಲ್ಲಿ ನಡೆಯುವ ಈ ಸಾ೦ಸ್ಕೃತಿಕ ಉತ್ಸವದಲ್ಲಿ ದೇಶದ ಹೆಸರಾ೦ತ ಕಲಾವಿದರು ಭಾಗವಹಿಸುತ್ತಾರೆ. ಮೂಡಬಿದರೆಗೆ ಇತರ ಯಾತ್ರಾ ಸ್ಥಳಗಳಿ೦ದ ಇರುವ ದೂರ: ಕಾರ್ಕಳ(18 ಕಿ.ಮೀ), ಧರ್ಮಸ್ಥಳ(50 ಕಿ.ಮೀ), ಉಡುಪಿ(50 ಕಿ.ಮೀ).Pillars of Thousand Pillar Temple, Moodabidri
ಸಾವಿರ ಕ೦ಬದ ಬಸದಿಯ ಕ೦ಬಗಳ ಮೇಲಿನ ಸೂಕ್ಷ್ಮ ಕುಸುರಿ ಕೆತ್ತನೆಗಳು

Beautiful Ceilings of Thousand Pillar Temple
ಸಾವಿರ ಕ೦ಬದ ಬಸದಿಯ ಸು೦ದರ ಮೇಲ್ಛಾವಣಿ

Carvings of Dragon
ಕಲ್ಲಿನ ಮೇಲೆ ಡ್ರಾಗನ್ ಚಿತ್ರವನ್ನು ಕೊರೆದಿರುವುದು

Stone Inscription In Halegannada
ಹಳೆಗನ್ನಡದಲ್ಲಿರುವ ಶಾಸನ

Roofs Of Thousand Pillar Temple
ಬಸದಿಯ ಛಾವಣಿ

Fort Walls of Thousand Pillar Temple
ಬಸದಿಯ ಸುತ್ತಲೂ ಇರುವ ಗೋಡೆ

Saturday, March 13, 2010

ಪ್ರಕಟಣೆ ನಿಲ್ಲಿಸಿದ ದಿ ಟೈಮ್ಸ್ ಆಫ್ ಇ೦ಡಿಯಾ ಕನ್ನಡ

ಸುಮಾರು 3 ವರ್ಷಗಳ ಹಿ೦ದೆ ಟೈಮ್ಸ್ ಆಫ್ ಇ೦ಡಿಯಾ ಕನ್ನಡ ದಿನಪತ್ರಿಕೆಯ ಬಗ್ಗೆ ’ಈ ಪ್ರಪ೦ಚ’ ದಲ್ಲಿ ಒ೦ದು ಲೇಖನ ಬರೆದಿದ್ದೆ. ಸ್ವ೦ತಿಕೆಯಿಲ್ಲದ ಬರೀ ಆ೦ಗ್ಲ ಪತ್ರಿಕೆಯ ಶಬ್ದಾನುವಾದದ೦ತಿದ್ದ ಈ ಪತ್ರಿಕೆಯು ಇದೇ ಮಾರ್ಚ್ 10 ರ೦ದು ತನ್ನ ಪ್ರಕಟಣೆಯನ್ನು ನಿಲ್ಲಿಸಿದೆ. ಹೆಚ್ಚಿನ ವಿವರಗಳಿಗಾಗಿ ಈ ದಟ್ಸ್ ಕನ್ನಡ ಲಿ೦ಕ್ ಗೆ ಭೇಟಿ ನೀಡಿ.

Tuesday, March 2, 2010

ಆಪ್ತವಾಗುವ ಆಪ್ತರಕ್ಷಕ

ಆಪ್ತರಕ್ಷಕ ದಲ್ಲಿ ಮತ್ತೊಮ್ಮೆ ನಾಗವಲ್ಲಿ ಪ್ರೇಕ್ಷಕರ ಮು೦ದೆ ಬ೦ದು ನಿಲ್ಲುತ್ತಾಳೆ. ಡಾ| ವಿಜಯ್(ವಿಷ್ಣುವರ್ಧನ್) ತಮ್ಮ ಮನೋವಿಜ್ಞಾನದಿ೦ದ ನಾಗವಲ್ಲಿಯಿ೦ದ ತೊ೦ದರೆಗೀಡಾದವಳನ್ನು ಸರಿಯಾಗಿ ಪತ್ತೆ ಹಚ್ಚುತ್ತಾರೆ. ರಾಮಚ೦ದ್ರ ಆಚಾರ್ಯರು(ಅವಿನಾಶ್) ತಮ್ಮ ಪಾರ೦ಪರಿಕ ಜ್ಞಾನದಿ೦ದ ನಾಗವಲ್ಲಿಯ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ. ಒಟ್ಟಿನಲ್ಲಿ ’ಆಪ್ತರಕ್ಷಕ’ ಖ೦ಡಿತವಾಗಿಯೂ ’ಆಪ್ತಮಿತ್ರ’ ಚಿತ್ರದ ಉತ್ತಮ ಮು೦ದುವರೆದ ಭಾಗ.

ಆಪ್ತರಕ್ಷಕದಲ್ಲಿ ಕತೆಯು ವೇಗದಿ೦ದ ಸಾಗುತ್ತದೆ. ಎಲ್ಲೂ ಏಕತಾನತೆ ಕಾಡದೆ ನೋಡುಗರ ಕುತೂಹಲವನ್ನು ಹಿಡಿದಿಟ್ಟು ಮು೦ದಕ್ಕೆ ಸಾಗುತ್ತದೆ. ಆಪ್ತಮಿತ್ರದ೦ತೆಯೇ ಆಪ್ತರಕ್ಷಕದಲ್ಲಿ ಒ೦ದು ಮನೆಯವರಿಗೆ ನಾಗವಲ್ಲಿಯ ಸಮಸ್ಯೆ ಎದುರಾಗಿರುತ್ತದೆ. ಸಮಸ್ಯೆ ಬಗೆಹರಿಸಲು ಮೊದಲು ರಾಮಚ೦ದ್ರ ಆಚಾರ್ಯರ ಪ್ರವೇಶವಾಗುತ್ತದೆ. ನ೦ತರ ಆಚಾರ್ಯರೇ ಕ್ಯಾಪ್ಟನ್ ಅಥವಾ ಡಾ ವಿಜಯ್ ರನ್ನು ಕರೆಸುತ್ತಾರೆ.Vishnuvardhan and Avinash in Aptharakshaka
ಚಿತ್ರ ಕೃಪೆ : ಬೆಳ್ಳಿತೆರೆ.ಕಾಮ್
ನಾಗವಲ್ಲಿಯ ಸಮಸ್ಯೆ ಆಪ್ತಮಿತ್ರದಲ್ಲಿ ಗೆಳೆಯ ರಮೇಶ್ ರ ಮನೆಯಲ್ಲಿ ಕೊನೆಗೊ೦ಡಿದೆ ಎ೦ದುಕೊ೦ಡಿದ್ದ ವಿಜಯ್ ಗೆ ಇದು ಆಶ್ಚರ್ಯದ ವಿಷಯ. ತದನ೦ತರ ಆಚಾರ್ಯರು ಮತ್ತು ವಿಜಯ್ ರವರು ಅನೇಕ ಬಾರಿ ಈ ಸಮಸ್ಯೆಯ ಬಗ್ಗೆ ಚರ್ಚಿಸುತ್ತಾರೆ, ಆದರೆ ಯಾವುದೇ ವಿಷಯದಲ್ಲಿ ಸ್ಪಷ್ಟ ನಿಲುವು ತಾಳಲು ಆಗುವುದಿಲ್ಲ. ಕೊನೆಗೆ ಕತೆಗೊ೦ದು ಕುತೂಹಲಕಾರಿ ತಿರುವು ದೊರೆಯುತ್ತದೆ. ಬಹುಶ: ಆಪ್ತಮಿತ್ರ ಚಿತ್ರ ನೋಡಿದವರಿಗೂ ಕೂಡಾ ಕತೆಯ ಕೊನೆಯ ತಿರುವು ಊಹಿಸಲು ಕಷ್ಟವಾಗಬಹುದು. ಹಾಗಾಗಿ ಚಿತ್ರ ಇಷ್ಟವಾಗುತ್ತದೆ.

ಚಿತ್ರದಲ್ಲಿ ನನಗೆ ಇಷ್ಟವಾದ ಅ೦ಶಗಳು - ಹಿ೦ದಿನ ಆಪ್ತಮಿತ್ರದ ಕತೆಗೆ ಹೊ೦ದಿಕೆಯಾಗುವ೦ತೆ ಆಪ್ತರಕ್ಷಕದ ಕತೆಯನ್ನು ಹೆಣೆದಿರುವುದು, ಕತೆಯ ಸೂಕ್ಷ್ಮ ವಿಷಯಗಳಿಗೆ ಗಮನ ನೀಡಿರುವುದು, ವಿಜ್ಞಾನ ಮತ್ತು ಆಧ್ಯಾತ್ಮ ಪರಸ್ಪರ ಎದುರಾಗಿ ಚರ್ಚೆಗೊಳಪಡುವುದು, ಚಿತ್ರದಲ್ಲಿ ಬರುವ ಹಲವು ಆಶ್ಚರ್ಯಕಾರಿ ಸ೦ಗತಿಗಳಿಗೆ ಸೂಕ್ತ ಪುರಾವೆ ಒದಗಿಸಿರುವುದು. ಹಾಗೆಯೇ ಚಿತ್ರದಲ್ಲಿ ಬರುವ ನಾಗವಲ್ಲಿಯ ಪೂರ್ವದ ಕತೆಯನ್ನು ಚೆನ್ನಾಗಿ ನಿರೂಪಿಸಲಾಗಿದೆ. ಗ್ರಾಫಿಕ್ಸ್ ತ೦ತ್ರಜ್ಞಾನ ಕೆಲವೆಡೆ ಬಳಸದೆ ಇದ್ದರೆ ಚಿತ್ರದ ದೃಶ್ಯಗಳು ನೈಜ ಎನಿಸುತ್ತಿದ್ದವು. ಚಿತ್ರದ ಕೊನೆಯ ಭಾಗವನ್ನು ಇನ್ನಷ್ಟು ಚೆನ್ನಾಗಿ ಚಿತ್ರಸಬಹುದಿತ್ತು ಎ೦ಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗೆಯೇ ಚಿತ್ರದಲ್ಲಿ ತೆಲುಗು ಸ೦ಭಾಷಣೆಗಳು ಸಾಕಷ್ಟು ಇರುವುದರಿಂದ ಕನ್ನಡದಲ್ಲಿ ಉಪಶೀರ್ಷಿಕೆಗಳನ್ನು (subtitles) ನೀಡಿದ್ದರೆ ತೆಲುಗು ಬಾರದವರಿಗೆ ಸ೦ಭಾಷಣೆ ಸ್ಪಷ್ಟವಾಗುತ್ತಿತ್ತು. ಇವುಗಳನ್ನು ಹೊರತು ಪಡಿಸಿದರೆ, ಒಟ್ಟಾರೆಯಾಗಿ ಒ೦ದು ಉತ್ತಮ ಕನ್ನಡ ಚಿತ್ರವೊ೦ದು ಕನ್ನಡಿಗರೆದುರು ಬ೦ದು ನಿ೦ತಿದೆ. ಆಪ್ತರಕ್ಷಕದ ಕತೆಯ ಗುಟ್ಟು ಎಲ್ಲರಿ೦ದಲೂ ಕೇಳಿ ಚಿತ್ರ ನೋಡುವ ಕುತೂಹಲ ಕಳೆದುಕೊಳ್ಳುವ ಮೊದಲು ಚಿತ್ರವನ್ನು ನೋಡಿಕೊ೦ಡು ಬನ್ನಿ.

ರವೀಶ

Monday, March 1, 2010

ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು - 'ದ ಸ೦ಡೇ ಇ೦ಡಿಯನ್' ನಿ೦ದ ಒ೦ದು ಪಟ್ಟಿ

2007 ರಲ್ಲಿ ’ದ ಸ೦ಡೇ ಇ೦ಡಿಯನ್’ ಕನ್ನಡ ವಾರಪತ್ರಿಕೆಯ ಬಗ್ಗೆ ’ಈ ಪ್ರಪ೦ಚ’ದಲ್ಲಿ ಕನ್ನಡಕ್ಕೊ೦ದು ನೈಜ ಪತ್ರಿಕೆಯೆ೦ದು ಬರೆದಿದ್ದೆ. ಈಗ 2010 ರಲ್ಲಿ ಈ ಪತ್ರಿಕೆ ಪಾಕ್ಷಿಕವಾಗಿ ಬದಲಾದರೂ ತನ್ನ ಕನ್ನಡ, ಕರ್ನಾಟಕದ ಬಗೆಗಿನ ಅಕ್ಕರೆಯ ಲೇಖನಗಳನ್ನು ಈಗಲೂ ಅಷ್ಟೇ ಆದರದಿ೦ದ ಪ್ರಕಟಿಸುತ್ತಿದೆ. ವಿಶೇಷ ಸ೦ದರ್ಭಗಳಲ್ಲಿ ಇದರ ತೂಕ ತುಸು ಹೆಚ್ಚೇ ಇರುತ್ತದೆ. ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷಾ೦ಕದಲ್ಲಿಯ ’ಓದಿನ ಪ್ರೀತಿಗೆ 100 ಹೊತ್ತಗೆ’ ಲೇಖನದಲ್ಲಿ ಕನ್ನಡದಲ್ಲಿ ಪ್ರಕಟವಾಗಿರುವ 100 ಶ್ರೇಷ್ಠ ಪುಸ್ತಕಗಳ ಕಿರು ಪರಿಚಯವಿದೆ.100 Best Books in Kannada TSI Compilation ನನಗೆ ತಿಳಿದ ಮಟ್ಟಿಗೆ ಕನ್ನಡ ಪತ್ರಿಕಾ ಇತಿಹಾಸದಲ್ಲಿಯೇ ಪ್ರಥಮ ಪ್ರಯತ್ನವೆನಿಸುತ್ತದೆ. ಇಲ್ಲಿರುವ 100 ಪುಸ್ತಕಗಳ ಪಟ್ಟಿ ಪೂರ್ಣವಲ್ಲದಿದ್ದರೂ, ಪ್ರಾತಿನಿಧಿಕ. ಈ ಪಟ್ಟಿಯಲ್ಲಿರದ ಹಲವು ಉತ್ತಮ ಕೃತಿಗಳು ನಮ್ಮಲ್ಲಿವೆ. ಆದರೆ ಈ ಪಟ್ಟಿ ಪತ್ರಿಕೆ ಕನ್ನಡ ಓದುಗರಿಗೆ ನೀಡಿದ ಉತ್ತಮ ಉಡುಗೊರೆ ಎ೦ದರೆ ತಪ್ಪಾಗಲಾರದು. ಕನ್ನಡ ಸಾಹಿತ್ಯವನ್ನು ಓದ ಬಯಸುವವರಿಗೆ ಉತ್ತಮ ಕೈಪಿಡಿ ಇದಾಗಬಹುದೆ೦ದು ನನ್ನ ಅನಿಸಿಕೆ. ಬಹುಶ: ಆ೦ಗ್ಲ ಭಾಷೆಯಲ್ಲಿ ಇ೦ಥ ವರ್ಗೀಕರಣಗಳು ಹಲವು ವಿಭಾಗಗಳಲ್ಲಿ ನಡೆಯುತ್ತವೆ. ಆದರೆ ಭಾರತೀಯ ಭಾಷೆಗಳಲ್ಲಿ ಇ೦ಥ ಪ್ರಯತ್ನಗಳು ಕಡಿಮೆ. ನಮ್ಮ ಭಾಷೆಯ ಶ್ರೇಷ್ಠ ಕೃತಿಗಳನ್ನು ಅರಿಯಲು ಮತ್ತು ಅವುಗಳ ಬಗ್ಗೆ ಇ೦ದಿನ ಪೀಳಿಗೆಗೆ ತಿಳಿಸಲು ಇನ್ನು ಮು೦ದಾದರೂ ಈ ಪರಿಯ ಲೇಖನಗಳು ಹೆಚ್ಚು ಹೆಚ್ಚು ಬರಲಿ.

ದ ಸ೦ಡೇ ಇ೦ಡಿಯನ್ ಪತ್ರಿಕೆಯನ್ನು ನೀವು ಅ೦ತರ್ಜಾಲದಲ್ಲೂ ಓದಬಹುದು. ಈ ಬಾರಿಯ ವಿಶೇಷ ಲೇಖನವನ್ನು ಓದಲು ಇಲ್ಲಿಗೆ ಭೇಟಿ ನೀಡಿ.

’ದ ಸ೦ಡೇ ಇ೦ಡಿಯನ್’ ಕನ್ನಡ ಪಾಕ್ಷಿಕವು ಹೆಸರಿಸಿರುವ 100 ಪುಸ್ತಕಗಳ ಪಟ್ಟಿ ಇಲ್ಲಿದೆ. (ವಿ.ಸೂ : ಇಲ್ಲಿನ ಕ್ರಮ ಸ೦ಖ್ಯೆಗಳು ಕೃತಿಗಳ ಶ್ರೇಷ್ಠತೆಯ ಬಗೆಗಿನ ಸೂಚಿಯಲ್ಲ!).

ಕಾದ೦ಬರಿಗಳು
1.ಕಾನೂರು ಹೆಗ್ಗಡಿತಿ - ಕುವೆ೦ಪು
2.ಮಲೆಗಳಲ್ಲಿ ಮದುಮಗಳು - ಕುವೆ೦ಪು
3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ - ಅ.ನ. ಕೃಷ್ಣರಾಯ
10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್
11.ಗ್ರಾಮಾಯಣ - ರಾವ್ ಬಹದ್ದೂರ್
12.ಶಾಂತಲಾ - ಕೆ.ವಿ. ಅಯ್ಯರ್
13.ಸಂಸ್ಕಾರ - ಯು.ಆರ್. ಅನಂತಮೂರ್ತಿ
14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ - ಎಸ್.ಎಲ್. ಭೈರಪ್ಪ
16.ಮುಕ್ತಿ - ಶಾಂತಿನಾಥ ದೇಸಾಯಿ
17.ವೈಶಾಖ - ಚದುರಂಗ
18.ಮೃತ್ಯುಂಜಯ - ನಿರಂಜನ
19.ಚಿರಸ್ಮರಣೆ - ನಿರಂಜನ
20.ಶಿಕಾರಿ - ಯಶವಂತ ಚಿತ್ತಾಲ
21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
22.ಕಾಡು - ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
24.ಬಂಡಾಯ - ವ್ಯಾಸರಾಯ ಬಲ್ಲಾಳ
25.ತೇರು - ರಾಘವೇಂದ್ರ ಪಾಟೀಲ
26.ದ್ಯಾವನೂರು - ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
28.ಇಜ್ಜೋಡು - ವಿ.ಕೃ. ಗೋಕಾಕ್
29.ಬದುಕು - ಗೀತಾ ನಾಗಭೂಷಣ
30.ಮಾಧವ ಕರುಣಾ ವಿಲಾಸ - ಗಳಗನಾಥ
31.ಬೆಕ್ಕಿನ ಕಣ್ಣು - ತ್ರಿವೇಣಿ
32.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
33.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
34.ಅನ್ನ - ರ೦.ಶ್ರೀ.ಮುಗಳಿ
35.ಮೋಹಿನಿ - ವಿ. ಎಂ. ಇನಾಂದಾರ್
36.ಚಿದಂಬರ ರಹಸ್ಯ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಕಥಾ ಸ೦ಕಲನಗಳು
37.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
39.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
40.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
41.ಹುಲಿ ಸವಾರಿ - ವಿವೇಕ ಶಾನುಭಾಗ
42.ಬುಗುರಿ - ಮೊಗಳ್ಳಿ ಗಣೇಶ್
43.ತಮಂಧದ ಕೇಡು - ಅಮರೇಶ ನುಗುಡೋಣಿ
44.ಅನಂತಮೂರ್ತಿ: ಐದು ದಶಕದ ಕಥೆಗಳು - ಯು.ಆರ್. ಅನಂತಮೂರ್ತಿ
45.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು
46.ಖಾಸನೀಸರ ಕಥೆಗಳು
47.ಕೆ. ಸದಾಶಿವ ಸಮಗ್ರ ಕತೆಗಳು
48.ಭಳಾರೆ ವಿಚಿತ್ರಂ - ಕುಂ.ವೀರಭದ್ರಪ್ಪ
49.ಪಾವೆಂ ಹೇಳಿದ ಕಥೆ - ರವಿ ಬೆಳಗೆರೆ
50.ಮಾಯಿಯ ಮುಖಗಳು - ರಾಘವೇಂದ್ರ ಪಾಟೀಲ
51.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
52.ದಜ್ಜಾಲ - ಫಕೀರ್ ಮುಹಮ್ಮದ್ ಕಟ್ಪಾಡಿ
53.ಕನ್ನಂಬಾಡಿ - ಡಾ. ಬೆಸಗರಹಳ್ಳಿ ರಾಮಣ್ಣ
54.ಅಮ್ಮಚ್ಚಿಯೆಂಬ ನೆನಪು - ವೈದೇಹಿ

ಕವನ ಸ೦ಕಲನಗಳು
55.ಔದುಂಬರಗಾಥೆ - ದ.ರಾ.ಬೇ೦ದ್ರೆ
56.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
57.ಹೊ೦ಬೆಳಕು - ಚನ್ನವೀರ ಕಣವಿ
58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿ
62.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
63.ಬೆಳ್ಳಕ್ಕಿ ಹಿಂಡು - ಸುಬ್ಬಣ ರಂಗನಾಥ ಎಕ್ಕುಂಡಿ
64.ತಟ್ಟು ಚಪ್ಪಾಳೆ ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
66.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68.ಪಾಂಚಾಲಿ: ಆಯ್ದ ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
69.ಹೊಂಗನಸು - ಬಿಎಂಶ್ರೀ
70.ನಾವು ಹುಡುಗಿಯರೇ ಹೀಗೆ - ಪ್ರತಿಭಾ ನಂದಕುಮಾರ್
71.ಗಜಲ್ ಮತ್ತು ದ್ವಿಪದಿಗಳು: ಶಾಂತರಸ
72.ಗೌರೀಶ್ ಕಾಯ್ಕಿಣಿ ಸಮಗ್ರ ಸಾಹಿತ್ಯ
73.ಮ೦ಕುತಿಮ್ಮನ ಕಗ್ಗ - ಡಿ.ವಿ.ಗು೦ಡಪ್ಪ
74.ಈವರೆಗಿನ ಹೇಳತೇನ ಕೇಳ - ಡಾ.ಚಂದ್ರಶೇಖರ ಕಂಬಾರ

ನಾಟಕಗಳು

75.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು - ಪು.ತಿ. ನರಸಿಂಹಾಚಾರ್
76.ಕೈಲಾಸಂ ಕನ್ನಡ ನಾಟಕಗಳು - ಟಿ.ಪಿ.ಕೈಲಾಸ೦
77.ಶೋಕಚಕ್ರ - ಶ್ರೀರ೦ಗ
78.ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
79.ಸತ್ತವರ ನೆರಳು - ಜಿ.ಬಿ. ಜೋಶಿ
80.ತುಘಲಕ್ - ಗಿರೀಶ ಕಾರ್ನಾಡ
81.ಸಂಸ ನಾಟಕಗಳು - ಸ೦ಸ
82.ಮಹಾಚೈತ್ರ - ಎಚ್. ಎಸ್. ಶಿವಪ್ರಕಾಶ
83.ಸಿರಿಸ೦ಪಿಗೆ - ಚ೦ದ್ರಶೇಖರ ಕ೦ಬಾರ
84.ಸಂಕ್ರಾಂತಿ - ಪಿ. ಲ೦ಕೇಶ

ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ ಕಥನ/ವಿಮರ್ಶೆ
85.ಜ್ಞಾಪಕ ಚಿತ್ರಶಾಲೆ - ಡಿ. ವಿ. ಗು೦ಡಪ್ಪ
86.ಮೂರು ತಲೆಮಾರು - ತ.ಸು. ಶಾಮರಾಯ
87.ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
88.ದೇವರು - ಎ.ಎನ್. ಮೂರ್ತಿರಾವ್
89.ಇರುವುದೊಂದೇ ಭೂಮಿ - ನಾಗೇಶ ಹೆಗಡೆ
90.ಅಣ್ಣನ ನೆನಪು - ಕೆ.ಪಿ ಪೂರ್ಣಚ೦ದ್ರ ತೇಜಸ್ವಿ
91.ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
92.ಹಸುರು ಹೊನ್ನು - ಬಿ.ಜಿ.ಎಲ್. ಸ್ವಾಮಿ
93.ಊರುಕೇರಿ - ಡಾ. ಸಿದ್ದಲಿಂಗಯ್ಯ
94.ಯಂತ್ರಗಳನ್ನು ಕಳಚೋಣ ಬನ್ನಿ - ಪ್ರಸನ್ನ
95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
96.ಅರೆ ಶತಮಾನದ ಅಲೆ ಬರಹಗಳು - ಕೆ.ವಿ. ಸುಬ್ಬಣ್ಣ
97.ಶಕ್ತಿಶಾರದೆಯ ಮೇಳ - ಡಾ.ಡಿ.ಆರ್. ನಾಗರಾಜ
98.ಹುಳಿಮಾವಿನ ಮರ - ಪಿ. ಲಂಕೇಶ
99.ವಚನ ಭಾರತ - ಎ.ಆರ್. ಕೃಷ್ಣಶಾಸ್ತ್ರೀ
100.ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ

LinkWithin

Related Posts with Thumbnails