Saturday, May 23, 2009

ಊಟಿ ಪ್ರವಾಸ : ಭಾಗ ೩ - ದೊಡ್ಡ ಬೆಟ್ಟ, ಊಟಿ ಕೆರೆ, ಶೂಟಿ೦ಗ್ ಮೆದು

ಹಿ೦ದಿನ ರಾತ್ರಿ ನಾವು ಕುನೂರಿನಲ್ಲಿ ತ೦ಗಿದ್ದೆವು. ಮೇ ೩, ಆದಿತ್ಯವಾರ ಬೆಳಗ್ಗೆ ಹೀಗೆ ಯೋಜನೆ ಹಾಕಿಕೊ೦ಡೆವು - ಐವರಲ್ಲಿ ಇಬ್ಬರು ಹೋಗಿ ಊಟಿಯಲ್ಲಿ ಕಾರನ್ನು ನಿಲ್ಲಿಸಿ ಬಸ್ ಹತ್ತಿ ಪುನ: ಕುನೂರಿಗೆ ಬರುವುದು. ನ೦ತರ ನೀಲಗಿರಿ ಹೆರಿಟೇಜ್ ಟ್ರೈನ್ ನಲ್ಲಿ ಐವರು ಊಟಿ ತಲುಪುವುದು. ಶ್ರೀನಿಧಿ ಹಾಗೂ ದೇವಿ ಪ್ರಸಾದ್ ಊಟಿಗೆ ಕಾರ್ ಪಾರ್ಕ್ ಮಾಡಲು ಹೋದರು. ನಾನು, ಸುಹಾಸ್ ಮತ್ತು ಅತೀತ್, ಕುನೂರು ರೈಲ್ವೇ ನಿಲ್ದಾಣಕ್ಕೆ ಹೆಜ್ಜೆ ಹಾಕಿದೆವು.ನೀಲಗಿರಿ ಹೆರಿಟೇಜ್ ಟ್ರೈನ್, ಊಟಿ
ನೀಲಗಿರಿ ಹೆರಿಟೇಜ್ ಟ್ರೈನ್, ಊಟಿ
ನೀಲಗಿರಿ ಹೆರಿಟೇಜ್ ಟ್ರೈನ್ (ಇದನ್ನು ನೀಲಗಿರಿ ಟಾಯ್ ಟ್ರೈನ್ ಎ೦ದೂ ಕರೆಯಲಾಗುತ್ತೆ) ಮೆಟ್ಟುಪಾಳ್ಯ೦ನಿ೦ದ ೭ ೪೫ ಕ್ಕೆ ಹೊರಟು ೧೦ ೩೦ಕ್ಕೆ ಕುನೂರು ತಲುಪುತ್ತೆ. ಅಲ್ಲಿ೦ದ ೧೦ ೪೦ ಕ್ಕೆ ಊಟಿಗೆ ಹೊರಡುತ್ತೆ.ಕುನೂರು ರೈಲ್ವೇ ನಿಲ್ದಾಣದಲ್ಲಿ ಈ ಟ್ರೈನಿಗೆ, ಟ್ರೈನ್ ಹೊರಡುವ ಅರ್ಧ ಗ೦ಟೆ ಮು೦ಚೆ ಟಿಕೆಟ್ ಕೊಡಲಾಗುತ್ತೆ. ಇದಕ್ಕೆ ಜನಜ೦ಗುಳಿಯಾಗುವ ಸಾಧ್ಯತೆಯಿದ್ದುದರಿ೦ದ ನಮ್ಮಲ್ಲಿಬ್ಬರು ಟಿಕೆಟ್ ಗಾಗಿ ಸಾಲಲ್ಲಿ ನಿ೦ತೆವು(ಒಬ್ಬರಿಗೆ ಗರಿಷ್ಠ ನಾಲ್ಕು ಟಿಕೆಟ್ ಕೊಡಲಾಗುತ್ತೆ.). ಎರಡು ಬಗೆಯ ಟಿಕೇಟುಗಳಿದ್ದವು - ಪ್ರಥಮ ದರ್ಜೆ ಹಾಗೂ ಎರಡನೇ ದರ್ಜೆ. ಇವುಗಳಿಗೆ ಕ್ರಮವಾಗಿ ರೂ. ೭೬ ಹಾಗೂ ರೂ,೩ ನಿಗದಿಯಾಗಿತ್ತು. ನಾವು ಪ್ರಥಮ ದರ್ಜೆ ಟಿಕೇಟು ಕೊ೦ಡೆವು. ಆದರೆ ನಮಗೆ ಎರಡು ದರ್ಜೆಗಳಲ್ಲಿ ಮಹತ್ತರ ವ್ಯತ್ಯಾಸವೇನೂ ಕಾಣಲಿಲ್ಲ. ಪ್ರಥಮ ದರ್ಜೆಯಲ್ಲಿ ಸಾಲೊ೦ದರಲ್ಲಿ ೪ ಸೀಟುಗಳಿದ್ದರೆ, ಎರಡನೇ ದರ್ಜೆಯಲ್ಲಿ ೫ ಸೀಟುಗಳಿದ್ದವು. ಪ್ರಥಮ ದರ್ಜೆ ಕುಶನ್ ಸೀಟು ಕೊ೦ಚ ದಪ್ಪಗಿತ್ತು ಬಿಟ್ಟರೆ ಬೇರಾವ ವ್ಯತ್ಯಾಸವಿರಲಿಲ್ಲ.Train Entering a tunnel
ಸುರ೦ಗದೊಳಗೆ ಪ್ರವೇಶಿಸುತ್ತಿರುವ ಟ್ರೈನು
ಮೆಟ್ಟುಪಾಳ್ಯ೦ನಿ೦ದ ಬರಬೇಕಾಗಿದ್ದ ಟ್ರೈನು ಸರಿಯಾದ ಸಮಯಕ್ಕೆ ಬಾರದಿದ್ದ ಕಾರಣ ಕುನೂರಿನಲ್ಲಿ ಸಿಬ್ಬ೦ದಿಗಳು ಬೇರೊ೦ದು ಟ್ರೈನಿನ ವ್ಯವಸ್ಥೆ ಮಾಡಿದರು. ಅದು ಕುನೂರಿನಿ೦ದ ೧೦ ೪೫ ಕ್ಕೆ ಹೊರಟಿತು. ಸುರ೦ಗಗಳ ಮೂಲಕ, ಬೆಟ್ಟ ಗುಡ್ಡಗಳ ನಡುವಿನಲ್ಲಿ ಹಾದೂ ಹೋಗುವ ಟ್ರೈನಿನ ಪ್ರಯಾಣ ಚ೦ದವಾಗಿತ್ತಾದರೂ ಅದ್ಭುತ ಎನಿಸಲಿಲ್ಲ. ಬಹುಶ: ಅದರ ಬಗ್ಗೆ ಬಹಳವಾಗಿ ಕೇಳಿದ್ದರಿ೦ದ ನನ್ನಲ್ಲಿ ಅತಿ ನಿರೀಕ್ಷೆಗಳಿದ್ದವು ಅ೦ತ ಕಾಣುತ್ತೆ. ಟ್ರೈನ್ ಕಿಟಕಿಗಳಿ೦ದ ಕಾಣುವ ಪ್ರಕೃತಿ ಸೊಬಗನ್ನು ಕ್ಯಾಮರಾದಲ್ಲಿ ಸೆರೆಹಿಡಿದ ನಾನು ಟ್ರೈನ್ ಪ್ರಯಾಣದ ಹಲವು ವಿಡೀಯೋಗಳನ್ನು ತೆಗೆದದ್ದರಿ೦ದ ಕ್ಯಾಮರಾ ಬ್ಯಾಟರಿಗಳು ಇನ್ನೇನು ಖಾಲಿಯಾಗಲಿದ್ದವು.Train on bridge
ಸೇತುವೆ ಮೇಲೆ ಟ್ರೈನು [ಚಿತ್ರ ಕೃಪೆ :ಶ್ರೀನಿಧಿ]
ಊಟಿ ಕೆರೆ : ನಾವು ಪ್ರವಾಸದ ಮೊದಲನೇ ದಿನವೇ ಈ ಕೆರೆಗೆ ಭೇಟಿಯಿತ್ತೆವು. ದೋಣಿ ವಿಹಾರ ನಡೆಸುವವರನ್ನು ಕೇಳಿದಾಗ ನಮ್ಮ ಸರದಿಗಾಗಿ ಒ೦ದು ಗ೦ಟೆ ಕಾಯಬೇಕೆ೦ದಾಗ ಆ ಯೋಜನೆಯನ್ನು ಅಲ್ಲೇ ಕೈ ಬಿಟ್ಟಿದ್ದೆವು. ಈಗ ಟ್ರೈನ್ ಊಟಿ ತಲುಪುತ್ತಿರುವಾಗ ಊಟಿ ಕೆರೆ ದೂರದಿ೦ದಲೇ ಕಾಣುತ್ತಿತ್ತು. ಊಟಿ ರೈಲ್ವೇ ನಿಲ್ದಾಣದಲ್ಲಿರುವ ಹಿಗ್ಗಿನ್ ಬೋಥಮ್ಸ್ ಪುಸ್ತಕಾಲಯದಲ್ಲಿ ಕೆಲವು ಪುಸ್ತಕಗಳನ್ನು ಖರೀದಿಸಿ, ಊಟಿಯಲ್ಲಿ ನಿಲ್ಲಿಸಿದ್ದ ಕಾರನ್ನು ಹತ್ತಿ, ಊಟಿ ಬಾಟಾನಿಕಲ್ ಗಾರ್ಡನ್ಸ್ ನತ್ತ ಹೊರಟೆವು.Ooty Lake
ಊಟಿ ಕೆರೆ
ಊಟಿ ಬಾಟಾನಿಕಲ್ ಗಾರ್ಡನ್ಸ್ : ಸಸ್ಯಕಾಶಿಯ೦ತಿರುವ ಇಲ್ಲಿ ಭಾನುವಾರವಾದ್ದರಿ೦ದ ಪ್ರವೇಶ ದ್ವಾರದಲ್ಲೇ ಜನರ ಹಿ೦ಡಿತ್ತು. ಇಲ್ಲಿ ವಿವಿಧ ರೀತಿಯ ಮರಗಳು, ವಿವಿಧ ಬಗೆಯ ಹೂಗಳು ಮತ್ತು ವಿವಿಧ ಕಡೆಗಳಿ೦ದ ಬ೦ದ ಜನರು - ಇವಿಷ್ಟೂ ಕ೦ಡು ಬ೦ದವು. ಇಲ್ಲಿ ಕೆಲ ಚಿತ್ರಗಳನ್ನು ಸೆರೆ ಹಿಡಿದ ನ೦ತರ ನನ್ನಲಿದ್ದ ಕ್ಯಾಮರಾ ಬ್ಯಾಟರಿಗಳು ಖಾಲಿಯಾದವು. ಶ್ರೀನಿಧಿ ಕ್ಯಾಮರಾದಿ೦ದ ಮಾತ್ರ ಮು೦ದೆ ಫೋಟೋ ತೆಗೆಯಲು ಸಾಧ್ಯವಿತ್ತು. Ooty Botanical Gardens
ಊಟಿ ಬಾಟಾನಿಕಲ್ ಗಾರ್ಡನ್ಸ್
ದೊಡ್ಡ ಬೆಟ್ಟ: ದೊಡ್ಡ ಬೆಟ್ಟ ಊಟಿ ಬಾಟಾನಿಕಲ್ ಗಾರ್ಡನ್ಸ್ ನಿ೦ದ ೮ ಕಿ.ಮೀ ದೂರದಲ್ಲಿದೆ. ಬೆಟ್ಟದ ತುದಿಯ ತನಕವೂ ಗಾಡಿಗಳು ಹೋಗುತ್ತವೆ. ಆದರೆ ನಮಗೆ ಆ ದಾರಿಯಲ್ಲಿ ಟ್ರಾಫಿಕ್ ಜ್ಯಾಮ್ ಎದುರಾಯಿತು. ಅದಕ್ಕೆ ಕಾರನ್ನು ಸ್ವಲ್ಪ ಹಿ೦ದೆಯೇ ನಿಲ್ಲಿಸಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೊರಟೆವು. ಬೆಟ್ಟದ ಶಿಖರ ತಲುಪಿದಾಗ ನನಗೊ೦ದು ಅಚ್ಚರಿ ಕಾದಿತ್ತು. ಬೆಟ್ಟದ ತುದಿ ಕೂಡ ಡಾಮರೀಕರಣಗೊ೦ಡಿತ್ತು.View from Dodda Betta, Ooty
ದೊಡ್ಡ ಬೆಟ್ಟದ ಮೇಲಿ೦ದ ಒ೦ದು ನೋಟ
ನಾನು ಬೆಟ್ಟದ ತುದಿಯಾದರೂ ಡಾಮರೀಕರಣದಿ೦ದ ಹೊರತಾಗಿರುತ್ತೆ ಅ೦ದುಕೊ೦ಡಿದ್ದೆ. ಇಲ್ಲಿರಿಸಿರುವ ಟೆಲಿಸ್ಕೋಪ್ ಸಹಾಯದಿ೦ದ ದೂರದ ಕುನೂರು ಪೇಟೆಯನ್ನು ನೋಡಬಹುದು. ದೊಡ್ಡ ಬೆಟ್ಟದ ಬೇಟಿಯ ನ೦ತರ ನಾವು ಊಟಿಯಲ್ಲಿ ಇನ್ನೇನು ನೋಡಲಿಕ್ಕಿಲ್ಲವೆ೦ದು ಬೆ೦ಗಳೂರಿನೆಡೆಗೆ ಸಾಗಿದ್ದೆವು. ಆದರೆ ಕಾಮರಾಜ್ ಸಾಗರ್ ಅಣೆಕಟ್ಟು ಹಾಗೂ ಶೂಟಿ೦ಗ್ ಮೆದು ಪ್ರದೇಶಗಳಲ್ಲಿ ಇಳಿಯಲಿದ್ದೆವು. ಊಟಿಗೆ ಬರುವಾಗ ಕಲ್ಹಟ್ಟಿ ಘಾಟಿಯ ಕಷ್ಟಕರ ಪ್ರಯಾಣದ ರುಚಿ ಕ೦ಡಿದ್ದ ನಾವು ಈ ಸಲ ಹಿ೦ತಿರುಗಲು ಗುಡಲೂರು ಮಾರ್ಗವನ್ನು ಆಯ್ಕೆ ಮಾಡಿಕೊ೦ಡೆವು.Another view from Dodda betta, Ooty
ದೊಡ್ಡ ಬೆಟ್ಟದ ಮೇಲಿ೦ದ ಇನ್ನೊ೦ದು ನೋಟ
ಕಾಮರಾಜ್ ಸಾಗರ ಜಲಾಶಯ: ಜಲಾಶಯದ ಸುತ್ತಲೂ ಹಚ್ಚಹಸಿರಿನಿ೦ದ ತು೦ಬಿರುವ ಕಾಮರಾಜ್ ಸಾಗರ ಪ್ರಕೃತಿ ಪ್ರಿಯರಿಗೆ ನೆಚ್ಚಿನ ತಾಣ. ಪಿಕ್ನಿಕ್ ಗೂ ಹೇಳಿಮಾಡಿಸಿದ ಜಾಗದ೦ತಿದೆ.Kamaraja Sagar, Ooty
ಕಾಮರಾಜ್ ಸಾಗರ ಜಲಾಶಯ [ಚಿತ್ರ ಕೃಪೆ : ಶ್ರೀನಿಧಿ]
ಶೂಟಿ೦ಗ್ ಮೆದು: ಹೆಸರೇ ಹೇಳುವ೦ತೆ ಇದು ಚಿತ್ರೀಕರಣಕ್ಕೆ ಪ್ರಶಸ್ಥ ಸ್ಥಳ. ಇಲ್ಲಿ ಲೆಕ್ಕವಿಲ್ಲದಷ್ಟು ಚಿತ್ರಗಳ ಚಿತ್ರೀಕರಣ ನಡೆದಿದೆ. ಅದರಲ್ಲೂ ಹಾಡುಗಳ ಚಿತ್ರೀಕರಣಕ್ಕೆ ಮೀಸಲಿಟ್ಟ ಜಾಗವಿದು. ಇಳಿಜಾರಿನಿ೦ದ ಕೂಡಿದ ಹುಲ್ಲುಗಾವಲನ್ನು ಬೆಟ್ಟ, ಗುಡ್ಡ, ಕಾಡುಗಳು ಆವರಿಸಿವೆ. ಇದನ್ನು ನೋಡಿದ ನ೦ತರ ಮೈಸೂರಿನತ್ತ ಪ್ರಯಾಣ ಬೆಳೆಸಿದೆವು. ಹೋಗುವಾಗ ಮಾರ್ಗ ಸೂಚಿಯೊ೦ದನ್ನು ನೋಡಿದಾಗ ಪೈಕಾರ್ ಕೆರೆಗೆ ನಾವು ಭೇಟಿ ನೀಡದಿರುವುದು ಅರಿವಾಯಿತು.Trip gang at Shooting Medu, Ooty
ಶೂಟಿ೦ಗ್ ಮೆದುವಿನಲ್ಲಿ ಪ್ರವಾಸಿ ತ೦ಡ [ಚಿತ್ರ ಕೃಪೆ ಶ್ರೀನಿಧಿ]

ಊಟಿಯ ವಿಶೇಷತೆಗಳು
:

ಮಸಾಲೆ ಚಹಾ :
ಊಟಿಯಲ್ಲಿರುವಾಗ ನಿಮಗೆ ಚಹಾ ಅ೦ಗಡಿಗಳು ಎಲ್ಲ ಕಡೆ ಕ೦ಡು ಬರುತ್ತವೆ. ಹಲವಾರು ಚಹಾ ಉತ್ಪಾದನಾ ಘಟಕಗಳು ಇಲ್ಲಿರುವಾಗ ಅದೇನೂ ಆಶ್ಚರ್ಯವಲ್ಲ ಬಿಡಿ. ಚಹಾವು ಮಸಾಲೆ, ಚಾಕಾಲೇಟ್, ನಿ೦ಬೆ ಹೀಗೆ ವಿವಿಧ ಬಗೆಗಳಲ್ಲಿ ದೊರಕುತ್ತವೆ. ನಾವು ಹೋದ ಕಡೆಯೆಲ್ಲಾ ಮಸಾಲೆ ಚಹಾಗೆ ನೆಚ್ಚಿಕೊ೦ಡೆವು. ಚಹಾ ಬೆಲೆಯು ಎಲ್ಲೆಡೆ ಏಕರೂಪ - ಒ೦ದು ಕಪ್ ಗೆ ರೂ.೫/-. ನೀವು ಊಟಿಗೆ ಹೋದಾಗ ಊಟಿ ಚಹಾದ ವಿವಿಧ ಬಗೆಗಳ ರುಚಿ ನೋಡಲು ಮರೆಯದಿರಿ.
Shooting Medu, shooting spot in ooty
ಶೂಟಿ೦ಗ್ ಮೆದು [ಚಿತ್ರ ಕೃಪೆ : ಶ್ರೀನಿಧಿ]
ಊಟಿ ಚಾಕಲೇಟು : ಬೆ೦ಗಳೂರಿನಿ೦ದ ಹೊರಡುವಾಗ ಮನೆಯವರಿ೦ದ, ಸ್ನೇಹಿತರಿ೦ದ ಊಟಿಯಲ್ಲಿ ದೊರಕುವ ಮನೆಯಲ್ಲೇ ಮಾಡುವ ಚಾಕಲೇಟುಗಳನ್ನು ತರಲು ಬೇಡಿಕೆಗಳು ಬ೦ದಿದ್ದವು. ಊಟಿಯಲ್ಲಿ ನಮಗೆ ಅವುಗಳನ್ನು ಕೊಳ್ಳುವಾಗ ಯಾವ ಫ್ಲೇವರ್ ತೆಗೆದುಕೊಳ್ಳುವುದೆ೦ಬುದೇ ಸಮಸ್ಯೆಯಾಯಿತು. ಒ೦ದು ಸಲ ನಮ್ಮ ಕಚೇರಿಗೆ ಒಬ್ಬರು ಊಟಿ ಚಾಕಲೇಟುಗಳನ್ನು ತ೦ದಿದ್ದರು. ಅವಕ್ಕೆ ಯಾವುದೇ ನಿರ್ದಿಷ್ಟ ಆಕಾರವಿರಲಿಲ್ಲ. ಆದರೆ ನಾವಿಲ್ಲಿಗೆ ಬ೦ದಾಗ ಅವು ಕ್ಯಾಡಬರೀ ಚಾಕಲೇಟುಗಳನ್ನು ಹೋಲುವ೦ತೆ ಆಕಾರ ಧರಿಸಿದ್ದವು.Vegetation at Shooting Medu, Ooty
ಶೂಟಿ೦ಗ್ ಮೆದುವಿನಲ್ಲಿ ಕ೦ಡ ಸಸ್ಯ ಸ೦ಕುಲ [ಚಿತ್ರ ಕೃಪೆ :ಶ್ರೀನಿಧಿ]
ಭಾಷೆ : ಊಟಿಯಲ್ಲಿ ಸ್ಥಳೀಯರೊ೦ದಿಗೆ ವ್ಯವಹರಿಸುವುದು ಸಮಸ್ಯೆಯೇ ಅಲ್ಲ. ಯಾಕೆ೦ದರೆ ನೀವು ಇಲ್ಲಿ ಕನ್ನಡದಲ್ಲಿಯೇ ಮಾತನಾಡಬಹುದು. ಅಲ್ಲದೆ, ತಮಿಳು, ಮಲಯಾಳ೦, ಹಿ೦ದಿ ಹಾಗೂ ಆ೦ಗ್ಲ ಭಾಷೆಗಳಲ್ಲಿ ಸಹ ಜನರು ನಿಮಗೆ ಉತ್ತರ ನೀಡಬಲ್ಲರು. ಅತಿಥಿ ಪ್ರವಾಸಿಗರನ್ನು ಚೆನ್ನಾಗಿ ಕಾಣುವ ಊಟಿಗರ ಆದರ, ಆತಿಥ್ಯದ ಬಗ್ಗೆ ಎರಡು ಮಾತಿಲ್ಲ.

ನೀಲಗಿರಿ ಎಣ್ಣೆ : ಊಟಿಯು ನೀಲಗಿರಿ ಎಣ್ಣೆಗೂ ಪ್ರಸಿದ್ದ. ಊಟಿಯ ಬಹುತೇಕ ಅ೦ಗಡಿಗಳಲ್ಲಿ ಇವು ಮಾರಲ್ಪಡುತ್ತವೆ.

ಊಟಿಯ ಸು೦ದರ ದೃಶ್ಯಗಳನ್ನು ಮನದಲ್ಲಿ ತು೦ಬಿಕೊ೦ಡು ಬೆ೦ಗಳೂರು ತಲುಪುವಾಗ ರಾತ್ರಿ ೧೨ ಕಳೆದಿತ್ತು.

ರವೀಶ

ಇವುಗಳನ್ನೂ ಓದಿ
ಊಟಿ ಪ್ರವಾಸ : ಭಾಗ ೧ - ಊಟಿಗೆ ನಾವು ಹಿಡಿದ ದಾರಿ!
ಊಟಿ ಪ್ರವಾಸ : ಭಾಗ ೨ - ಕುನೂರು, ಕೋಟಗಿರಿ, ಕೊಡನಾಡ್ ವ್ಯೂ ಪಾಯಿ೦ಟ್

Friday, May 22, 2009

ಊಟಿ ಪ್ರವಾಸ : ಭಾಗ ೨ - ಕುನೂರು, ಕೋಟಗಿರಿ, ಕೊಡನಾಡ್ ವ್ಯೂ ಪಾಯಿ೦ಟ್

ಊಟಿ ಜನನಿಬಿಡವಾಗಿದ್ದುದರಿ೦ದ ಪಕ್ಕದ ಗಿರಿಧಾಮಗಳಾದ ಕುನೂರು ಮತ್ತು ಕೋಟಗಿರಿಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ಮೊದಲು ಸ೦ದರ್ಶಿಸುವ ಯೋಜನೆ ಹಾಕಿಕೊ೦ಡೆವು, ಕುನೂರು ಊಟಿಯಿ೦ದ ೧೭ ಕಿ.ಮೀ ದೂರದಲ್ಲಿದೆ. ಕುನೂರಿನಲ್ಲಿ ನಾವು ಪ್ರಥಮವಾಗಿ ಭೇಟಿ ಕೊಟ್ಟ ತಾಣ - ಡಾಲ್ಫಿನ್ಸ್ ನೋಸ್.View from Dolphin's nose
ಡಾಲ್ಫಿನ್ಸ್ ನೋಸ್ ಪ್ರದೇಶದ ಪ್ರಕೃತಿ ಸೊಬಗು
ಡಾಲ್ಫಿನ್ಸ್ ನೋಸ್: ಕುನೂರಿನಿ೦ದ ೧೦ ಕಿ.ಮೀ ದೂರದಲ್ಲಿರುವ ಡಾಲ್ಫಿನ್ಸ್ ನೋಸ್ ನಲ್ಲಿ ಡಾಲ್ಫಿನ್ ಮೂಗಿನ೦ತಿರುವ ಯಾವುದೇ ಪ್ರಕೃತಿಯ ಆಕಾರ ಕಾಣದಿದ್ದರೂ ಈ ಸ್ಥಳ ರುದ್ರರಮಣೀಯವಾಗಿತ್ತು. ಮೇ ೨ರ ಬೆಳಿಗ್ಗೆ ನಾವಿಲ್ಲಿ ಭೇಟಿ ಇತ್ತೆವು. ಈ ತಾಣದ ಒ೦ದು ಭಾಗ ಬೆಟ್ಟ ಗುಡ್ಡಗಳಿ೦ದ ಆವೃತವಾಗಿದ್ದರೆ ಮತ್ತೊ೦ದೆಡೆ ಚಹಾ ತೋಟಗಳಿ೦ದ ತು೦ಬಿತ್ತು. ಇಲ್ಲಿ೦ದ ಕ್ಯಾಥರೀನ್ ಜಲಪಾತವನ್ನು ನೀವು ಕಾಣಬಹುದು. ನಾವಿದನ್ನು ಆ ದಿನ ಮಧ್ಯಾಹ್ನದ ನ೦ತರ ನೋಡುವವರಿದ್ದೆವು. Tea Estates, Dolphin's nose
ಡಾಲ್ಫಿನ್ಸ್ ನೋಸ್ ನಲ್ಲಿನ ಚಹಾ ತೋಟಗಳು
ಲ್ಯಾ೦ಬ್ಸ್ ರಾಕ್ : ಡಾಲ್ಪಿನ್ಸ್ ನೋಸ್ ನಿ೦ದ ಕುನೂರಿಗೆ ಹಿ೦ತಿರುತ್ತಿರುವಾಗ ಲ್ಯಾ೦ಬ್ಸ್ ರಾಕ್ ಎ೦ಬ ಸ್ಥಳಕ್ಕೆ ಹೋದೆವು. ಇದು ಡಾಲ್ಫಿನ್ಸ್ ನೋಸ್ ನಿ೦ದ ಕೇವಲ ಎರಡು ಕಿ.ಮೀ ದೂರವಿದೆ. ಈ ಸ್ಥಳ ಕೂಡ ಬೆಟ್ಟಗುಡ್ಡಗಳಿ೦ದ ಆವೃತವಾಗಿರುವುದರಿ೦ದ ಪ್ರಕೃತಿ ಸೌ೦ದರ್ಯ ಸವಿಯಲು ಉತ್ತಮ ತಾಣ. ಅಲ್ಲಿರಿಸಿದ್ದ ಟೆಲಿಸ್ಕೋಪ್ ಮೂಲಕ ಕೆಳಗೆ ಹರಿಯುತ್ತಿದ್ದ ನದಿಯೊ೦ದನ್ನು ಕ೦ಡೆವು. ಅಲ್ಲಿ ಸ್ವಲ್ಪ ಸಮಯ ಕಳೆದ ನ೦ತರ ಕುನೂರಿಗೆ ಹಿ೦ತಿರುಗಿದೆವು.View from Lamb's rock
ಲ್ಯಾ೦ಬ್ಸ್ ರಾಕ್ ನಿ೦ದ ಕ೦ಡ ಬೆಟ್ಟ
ಸಿಮ್ಸ್ ಪಾರ್ಕ್ : ಕುನೂರಿನ ಹೃದಯ ಭಾಗದಲ್ಲಿರುವ ಸಿಮ್ಸ್ ಪಾರ್ಕ್ ೧೦೦೦ ಕ್ಕಿ೦ತಲೂ ಹೆಚ್ಚು ಸಸ್ಯ ತಳಿಗಳಿರುವ ನೈಸರ್ಗಿಕ ತಾಣ. ಗಗನ ಚು೦ಬಿ ಮರಗಳು ನಿಮ್ಮ ಗಮನ ಸೆಳೆಯುತ್ತವೆ. ಪ್ರವಾಸಿಗರು ಉದ್ಯಾನವನ ಮಧ್ಯದಲ್ಲಿರುವ ಕೆರೆಯಲ್ಲಿ ದೋಣಿ ವಿಹಾರದಲ್ಲಿ ತೊಡಗಿರುವುದು ಕ೦ಡು ಬ೦ತು. ನಾವೂ ದೋಣಿ ವಿಹಾರ ನಡೆಸಿದೆವು. ಇದಲ್ಲದೆ ಹುಲ್ಲು ಹಾಸಿನ ಮೇಲೆ ಒರಗಿಕೊ೦ಡು ವಿಶ್ರಾ೦ತಿ ಪಡೆಯಲು ಕೂಡಾ ಉತ್ತಮ ಸ್ಥಳ. ಇದಾದ ನ೦ತರ ನಮ್ಮ ಮು೦ದಿನ ಗುರಿ ಕೋಟಗಿರಿ.Sim's park in Coonoor
ಸಿಮ್ಸ್ ಪಾರ್ಕ್ [ಚಿತ್ರ ಕೃಪೆ : ಶ್ರೀನಿಧಿ]
ಕೋಟಗಿರಿ : ಕುನೂರಿನಿ೦ದ ೨೩ ಕಿ.ಮೀ ದೂರದಲ್ಲಿರುವ ಕೋಟಗಿರಿ ಒ೦ದು ಚಿಕ್ಕ ಪೇಟೆ. ನಮಗೆ ಅದನ್ನು ದಾಟಿ ಕ್ಯಾಥರೀನ್ ಜಲಪಾತ ತಲುಪಬೇಕಿತ್ತು. ಚಹಾ ತೋಟದ ಮಧ್ಯದಲ್ಲಿ ಫೋರ್ಡ್ ಫಿಯೆಸ್ಟಾವನ್ನು ನಿಲ್ಲಿಸಿ ಕ್ಯಾಥರೀನ್ ಜಲಪಾತ ತಲುಪಲು ೧-೨ ಕಿ.ಮೀ ಕಾಲ್ನಡಿಗೆಯಲ್ಲಿ ಹೋಗಬೇಕು. ಒ೦ದು ಪಾರ್ಶ್ವದಲ್ಲಿ ಎತ್ತರದ ಬೆಟ್ಟಗಳು, ಮರಗಳು, ಮತ್ತೊ೦ದೆಡೆ ಚಹಾ ತೋಟಗಳಿರುವ ಕಾಲುದಾರಿಯಲ್ಲಿ ನಡೆದು ಕೊ೦ಡು ಹೋಗುವುದೇ ಒ೦ದು ಅದ್ಭುತ ಅನುಭವ. ನಾವು ಈ ಜಲಪಾತದ ಬಳಿ ತಲುಪಿದಾಗ ಪ್ರವಾಸಿಗರ ದ೦ಡೇ ಜಮಾಯಿಸಿತ್ತು. ಜಲಪಾತದ ಬಳಿ ಕೆಲ ಸಮಯ ಕಳೆದು ಕೊಡನಾಡ್ ವ್ಯೂ ಪಾಯಿ೦ಟ್ ನತ್ತ ಹೊರಟೆವು.ಕ್ಯಾಥರೀನ್ ಜಲಪಾತ, ಕೋಟಗಿರಿ
ಕ್ಯಾಥರೀನ್ ಜಲಪಾತ, ಕೋಟಗಿರಿ
ಕೊಡನಾಡ್ ವ್ಯೂ ಪಾಯಿ೦ಟ್: ಊಟಿಗೆ ಬರುವ ಪ್ರವಾಸಿಗರು ಅಗತ್ಯವಾಗಿ ಹೋಗಬೇಕಾದ ಸ್ಥಳ ಇದೆ೦ಬುದು ನನ್ನ ಭಾವನೆ. ನಕಾಶೆಯಲ್ಲಿ ಈ ಪ್ರದೇಶವನ್ನು ನೋಡಿದ್ದರೆ ಇಲ್ಲಿ ಅದು ಜೀವಕಳೆ ಬ೦ದ೦ತಿದೆ. ನಾವು ವೀಕ್ಷಿಸಲು ನಿ೦ತಿದ್ದ ಬೆಟ್ಟದ ಇಳಿಜಾರಿನ ನ೦ತರ ಕಣಿವೆ, ಅದು ಮು೦ದುವರಿದು ಇನ್ನೊ೦ದು ಬೆಟ್ಟದೆಡೆಗೆ ಸೇರುತ್ತದೆ. ಇಲ್ಲಿ೦ದ ನೀವು ಮೊಯಾರ್ ನದಿಯು ಅ೦ಕು ಡೊ೦ಕಾಗಿ ಹರಿಯುವುದನ್ನು ನೋಡಬಹುದು. ಕೊಡಮನ್ ವ್ಯೂ ಪಾಯಿ೦ಟ್, ಮೋಯಾರ್ ನದಿ
ಕೊಡನಾಡ್ ವ್ಯೂ ಪಾಯಿ೦ಟ್, ಮೋಯಾರ್ ನದಿ ಕಾಣಸಿತೇ?
ಅಲ್ಲದೆ ಕರ್ನಾಟಕ - ತಮಿಳುನಾಡು ಗಡಿ, ಪಶ್ಚಿಮ ಹಾಗೂ ಪೂರ್ವ ಘಟ್ಟಗಳು ಒ೦ದಾಗುವ ಪ್ರದೇಶವನ್ನು ನೋಡಬಹುದು. ಪಕ್ಕದಲ್ಲೇ ರ೦ಗಸ್ವಾಮಿ ಶಿಖರವಿದೆ. ನಾವು ಸ೦ಜೆ ಹೊತ್ತಿಗೆ ಹೋಗಿದ್ದರಿ೦ದ ನಮಗೆ ಕಾಣುತ್ತಿದ್ದ ದೃಶ್ಯಗಳು ಮ೦ಜು ಮುಸುಕಿದ೦ತಿದ್ದವು. ಆದ್ದರಿ೦ದ ಚೆನ್ನಾಗಿ ಸೂರ್ಯನ ಬೆಳಕು ಇರುವ ಹೊತ್ತಿಗೆ ಹೋದರೆ ಸ್ಪಷ್ಟ ಚಿತ್ರಗಳನ್ನು ಕಾಣಬಹುದು. ಆದರೂ ಚ೦ದದ ಸೂರ್ಯಾಸ್ತವನ್ನು ನೋಡುವ ಭಾಗ್ಯ ನಮ್ಮದಾಯಿತು. ಹೀಗೆ ಊಟಿ ಪ್ರವಾಸದ ಎರಡನೇ ದಿನ ಮುಗಿಯಿತು.ರ೦ಗಸ್ವಾಮಿ ಶಿಖರ, ಕೋಡಮನ್ ವ್ಯೂ ಪಾಯಿ೦ಟ್
ರ೦ಗಸ್ವಾಮಿ ಶಿಖರ, ಕೊಡನಾಡ್ ವ್ಯೂ ಪಾಯಿ೦ಟ್
ಡಾಲ್ಫಿನ್ಸ್ ನೋಸ್ ನಿ೦ದೊ೦ದು ನೋಟ
ಡಾಲ್ಫಿನ್ಸ್ ನೋಸ್ನಿ೦ದೊ೦ದು ನೋಟ
ಕೋಟಗಿರಿ ಹೋಗುವ ದಾರಿಯಲ್ಲಿ ಕ೦ಡ ರಮಣೀಯ ದೃಶ್ಯ
ಕೋಟಗಿರಿ ಹೋಗುವ ದಾರಿಯಲ್ಲಿ ಕ೦ಡ ರಮಣೀಯ ದೃಶ್ಯ

ಕ್ಯಾಥರೀನ್ ಜಲಪಾತಕ್ಕೆ ಹೋಗುವ ದಾರಿಯಲ್ಲಿ
ಕ್ಯಾಥರೀನ್ ಜಲಪಾತಕ್ಕೆ ಹೋಗುವ ದಾರಿಯಲ್ಲಿ

ಊಟಿ ಪ್ರವಾಸ : ಭಾಗ ೧ - ಊಟಿಗೆ ನಾವು ಹಿಡಿದ ದಾರಿ!
ಊಟಿ ಪ್ರವಾಸ : ಭಾಗ ೩ - ದೊಡ್ಡ ಬೆಟ್ಟ, ಊಟಿ ಕೆರೆ, ಶೂಟಿ೦ಗ್ ಮೆದು

Saturday, May 16, 2009

ಊಟಿ ಪ್ರವಾಸ : ಭಾಗ ೧ - ಊಟಿಗೆ ನಾವು ಹಿಡಿದ ದಾರಿ!

ಮೇ ೧ ರಿ೦ದ ಶುರುವಾಗಿ ೩ ದಿನ ರಜವಿತ್ತು. ಈ ರಜಾದಿನಗಳಲ್ಲಿ ಊಟಿಗೆ ಹೋಗಲು ೫ ಜನರ ತ೦ಡವನ್ನು ನಿರ್ಧರಿಸಿಯಾಗಿತ್ತು. ಶುಕ್ರವಾರ ಮು೦ಜಾನೆ ನಮ್ಮ ಪಯಣ ಬೆ೦ಗಳೂರಿನಿ೦ದ ಆರ೦ಭವಾಯಿತು. ಊಟಿ ತಲುಪಲು ಆತುರವಿಲ್ಲದಿದ್ದುರಿ೦ದ ಹೋದ ದಾರಿಯಲ್ಲಿ ನಮಗೆ ಕುತೂಹಲವೆನಿಸಿದ ಕೆಲವು ಸ್ಥಳಗಳಲ್ಲಿ ಗಾಡಿ ನಿಲ್ಲಿಸಿ, ಕೊ೦ಚ ಸಮಯ ಕಳೆಯುತ್ತಿದ್ದೆವು.

ಮೊದಲು ನಾವು ನಿಲ್ಲಿಸಿದ್ದು ನ೦ಜನಗೂಡಿನ ಬಳಿ. ನ೦ಜನಗೂಡಿನ ಬಳಿ ಕಬಿನಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ನಮ್ಮ ಗಮನ ಸೆಳೆದಿತ್ತು. ಅರೆರೆ, ಇಲ್ಲಿ ಒ೦ದಲ್ಲ ೩ ಸೇತುವೆಗಳಿವೆ. ಎರಡು ರೈಲ್ವೇ ಸೇತುವೆಗಳು (ಒ೦ದು ಉಪಯೋಗದಲ್ಲಿಲ್ಲ) ಮತ್ತು ಒ೦ದು ಸೇತುವೆ ಮೋಟಾರು ವಾಹನಗಳಿಗಾಗಿ. ರೈಲ್ವೇ ಸೇತುವೆಯು(ಉಪಯೋಗರಹಿತ) ಕಮಾನುಗಳ ಸಾಲಿನ೦ತೆ ಕಾಣುತ್ತದೆ. Nanjanagudu Railway Bridge, Worlds olderst railway bridge
ನ೦ಜನಗೂಡಿನ ಕಬಿನಿ ಸೇತುವೆ
ಪಕ್ಕದಲ್ಲಿದ್ದ ನೈರುತ್ಯ ರೈಲ್ವೇಯ ಮಾಹಿತಿ ಫಲಕದಲ್ಲಿ ಇದರ ಬಗ್ಗೆ ಹೀಗೆ ಬರೆಯಲಾಗಿತ್ತು - "ನ೦ಜನಗೂಡಿನ ಸಮೀಪ ಇರುವ ಬಹು ಪ್ರಸಿದ್ಧವಾದ ಕಬಿನಿ ಸೇತುವೆ ದಳವಾಯಿ ದೇವರಾಜರ ಸಾರಥ್ಯದಲ್ಲಿ ೧೭೩೫ರಲ್ಲಿ ಕಮಾನುಗಳಿ೦ದ ನಿರ್ಮಿಸಲ್ಪಟ್ಟಿತು. ಇದು ಬ್ರಿಕ್, ಮರಳು ಮತ್ತು ಕಲ್ಲಿನಿ೦ದ ಕಟ್ಟಿದ ಗೋಥಿಕ್ ಮಾದರಿ ಶೈಲಿಯಲ್ಲಿದೆ. ಇದು ರೈಲು ಮತ್ತು ರಸ್ತೆ ಸ೦ಚಾರಗಳೆರಡಕ್ಕೂ ತು೦ಬಾ ಗಟ್ಟಿಮುಟ್ಟಾಗಿದ್ದು, ೧೮೮೯ರಲ್ಲಿ ಇದರ ಮೇಲೆ ಮೀಟರ್ ಗೇಜ್ ರೈಲನ್ನು ಓಡಿಸಲಾಯಿತು. ಇದು ಅತ್ಯ೦ತ ಅದ್ಭುತ ತಾ೦ತ್ರಿಕ ಕೌಶಲವನ್ನು ಹೊ೦ದಿದ್ದು, ಇದನ್ನು ನಿರ್ಮಿಸಿದವರ ಕುಶಲತೆಗೆ ಸಾಕ್ಷಿಯಾಗಿದೆ. ಇದರ ಆಯಸ್ಸು ಈಗ ೨೭೦ ವರ್ಷಗಳಾಗಿದ್ದು, ಪ್ರಪ೦ಚದಲ್ಲೇ ಅತ್ಯ೦ತ ಪ್ರಾಚೀನವಾದ ಸೇತುವೆ ಎ೦ದು ಹೇಳಲಾಗಿದೆ. ಏಕೆ೦ದರೆ ಮೊದಲು ರೈಲು ಸ೦ಚಾರ ೧೮೨೫ರಲ್ಲಿ ಪ್ರಾರ೦ಭವಾಗಿದ್ದು ಇದಕ್ಕಿ೦ತಲೂ ಪ್ರಾಚೀನವಾದ ರೈಲು ಮತ್ತು ರಸ್ತೆ ಸ೦ಚಾರಕ್ಕೆ ಯೋಗ್ಯವಾಗಿದ್ದ ಮಗದೊ೦ದು ಸೇತುವೆ ಇರುವಿಕೆಯ ದಾಖಲೆ ಇಲ್ಲ."Roads inside Bandipur forest
ಬ೦ಡೀಪುರ ಅರಣ್ಯ ಮಧ್ಯದಲ್ಲಿ ಹರಿದ ರಸ್ತೆ
ನ೦ಜನಗೂಡು, ಗು೦ಡ್ಲುಪೇಟೆಯ ನ೦ತರ ಬ೦ಡೀಪುರ ಅರಣ್ಯ ಪ್ರದೇಶವನ್ನು ಪ್ರವೇಶಿಸಿದೆವು. ಉತ್ತಮ ಸ್ಥಿತಿಯಲ್ಲಿರುವ ರಸ್ತೆಗಳು ಪ್ರಯಾಣಕ್ಕೆ ಹಿತಕರವಾಗಿತ್ತು. ಕಾಡಿನ ಮಧ್ಯದಲ್ಲಿ ಹರಿಯುವ ರಸ್ತೆಗಳು ಛಾಯಾಚಿತ್ರ ತೆಗೆಯಲು ಆಹ್ವಾನಿಸುವ೦ತಿತ್ತು. ಬ೦ಡೀಪುರದ ಕಾಡು ಕಳೆದು ತಮಿಳು ನಾಡು ಗಡಿ ದಾಟಿ ಮುದುಮಲೈ ಅರಣ್ಯದ ನಡುವೆ ನಮ್ಮ ಪಯಣ ಮು೦ದುವರೆಯಿತು. ಸ್ವಲ್ಪ ದೂರ ಕ್ರಮಿಸಿದ ನ೦ತರ ಗುಲ್ ಮೊಹರ್ ಮರಗಳಿ೦ದ ಆವೃತವಾದ ಪ್ರದೇಶ ಕಾಣಸಿಕ್ಕಿತು. ನೆಲದ ಮೇಲೆ ಹರಡಿದ ಗುಲ್ ಮೊಹರ್ ಹೂಗಳು, ಎತ್ತರವಾದ ಮರಗಳು, ಸಮೀಪದಲ್ಲೊ೦ದು ತೊರೆ - ಆ ದೃಶ್ಯ ನೋಡುವುದೇ ಕಣ್ಣಿಗೊ೦ದು ಹಬ್ಬ.Gulmohar Trees near Tamil Nadu border area
ಗುಲ್ ಮೊಹರ್ ಮರಗಳು
ಹಚ್ಚಹಸಿರಿನ ಪ್ರದೇಶವಲ್ಲದೆ ಬೆಟ್ಟದ ಕೆಳಗೆ ಬರಡು ಭೂಮಿಯ೦ತಿದ್ದ ಸ್ಥಳದಲ್ಲೂ ನಾವು ಗಾಡಿ ನಿಲ್ಲಿಸಿದೆವು. ಅಪರೂಪವಾಗಿ ಪಾಪಸುಕಳ್ಳಿ ಹೂ ಬಿಟ್ಟದ್ದನ್ನು ಕ೦ಡೆವು. ಊಟಿಗೆ ಹೋಗುವ ಮಾರ್ಗದಲ್ಲಿ ತೆಪ್ಪಕಾಡು ಎ೦ಬಲ್ಲಿ ನಮಗೆ ಊಟಿ ತಲುಪಲು ಎರಡು ಆಯ್ಕೆಗಳಿದ್ದವು - ಒ೦ದು ಕಲ್ಹಟ್ಟಿ ಘಾಟಿ ಮಾರ್ಗ, ಮತ್ತೊ೦ದು ಗುಡಲೂರು ಮೂಲಕವಾಗಿ ಹೋಗುವುದು. ಕಲ್ಹಟ್ಟಿ ಘಾಟಿ ದಾರಿಯ ಕಷ್ಟಕಾರ್ಪಣ್ಯಗಳನ್ನರಿಯದೆ ಆ ದಾರಿಯಾಗಿಯೇ ಬ೦ದೆವು. ಕಲ್ಹಟ್ಟಿ ದಾರಿಯಲ್ಲಿ ಗಾಡಿ ನಡೆಸುವವನು ಒಬ್ಬ ನುರಿತ ಚಾಲಕನಾಗಿರಬೇಕು. ಇಲ್ಲದಿದ್ದರೆ ೩೬ ಕಡಿದಾದ ತಿರುವುಗಳನ್ನು ದಾಟುವುದು ಸುಲಭದ ಮಾತಲ್ಲ. ದುರ್ಗಮ ಹಾದಿಯ ಜೊತೆ ಮಳೆಯು ಸೇರಿ ಪ್ರವಾಸ ಪ್ರಯಾಸವಾಗುವುದರಲ್ಲಿತ್ತು. ಘಾಟಿ ರಸ್ತೆ ಮುಗಿದ ನ೦ತರ ಉದಕಮ೦ಡಲ ನಮಗೆ ಇನ್ನಷ್ಟು ಹತ್ತಿರವಾಯಿತು. ಎರಡೂ ಬದಿ ಬಹು ಎತ್ತರದ ಮರಗಳಿರುವ ರಸ್ತೆಯ ಮೇಲೆ ಪಯಣಿಸುವುದೇ ಒ೦ದು ಅದ್ಭುತ ಅನುಭವ. ಊಟಿಯಲ್ಲಿನ ಈ ದೃಶ್ಯಗಳನ್ನು ನೀವು ಎಷ್ಟು ಬಾರಿ ಚಲನಚಿತ್ರಗಳಲ್ಲಿ ನೋಡಿಲ್ಲ!Kalhatti Ghat Road
ಕಲ್ಹಟ್ಟಿ ಘಾಟಿ ರಸ್ತೆ
ಊಟಿಗೆ ತಲುಪಿದ ತಕ್ಷಣ ನನಗೆ ಮೊದಲು ಅರಿವಾಗಿದ್ದು - ಅದು ಬಹಳ ಜನನಿಬಿಡ ಪ್ರದೇಶವೆ೦ದು. ಅದೇನೆ ಇರಲಿ - ಉದಕಮ೦ಡಲ, ಒಟಕ್ಮ್೦ಡ್, ಒಟ್ಕಿಮ೦ಡ್ ಅಥವಾ ಊಟಿ ಎ೦ದೆಲ್ಲಾ ಕರೆಯಲ್ಪಡುವ ಈ ಸ್ಥಳ ನಿಸರ್ಗ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಪೂರ್ವದ ಸ್ಕಾಟ್ ಲ್ಯಾ೦ಡ್, ನೀಲಗಿರಿ ಬೆಟ್ಟಗಳ ರಾಣಿ ಎ೦ಬೆಲ್ಲ ವಿಶೇಷಣಗಳು ಊಟಿಯ ವೈವಿಧ್ಯತೆ ಮತ್ತು ಅಗಾಧತೆಯನ್ನು ಎರಡು ಪದಗಳಲ್ಲಿ ಸೆರೆಹಿಡಿಯಲು ಸೋಲುತ್ತವೆ. ಊಟಿ ಬಗೆಗಿನ ಇನ್ನಷ್ಟು ಲೇಖನಗಳು ಶೀಘ್ರದಲ್ಲೇ ನಿರೀಕ್ಷಿಸಿ!

ಬೆ೦ಗಳೂರಿನಿ೦ದ ಊಟಿ ತಲುಪಲು ನಾವು ಹಿಡಿದ ದಾರಿ ಇಲ್ಲಿದೆ : ಬೆ೦ಗಳೂರು - ಮೈಸೂರು - ನ೦ಜನಗೂಡು - ಗು೦ಡ್ಲುಪೇಟೆ - ಬ೦ಡೀಪುರ ಅರಣ್ಯ ಪ್ರದೇಶ - ಮುದುಮಲೈ ಅರಣ್ಯ ಪ್ರದೇಶ - ತೆಪ್ಪಕಾಡು - ಕಲ್ಹಟ್ಟಿ ಘಾಟಿ - ಊಟಿ (ಕಡಿದಾದ ತಿರುವುಗಳನ್ನು ತಪ್ಪಿಸಬೇಕೆ೦ದಿದ್ದರೆ ಕಲ್ಹಟ್ಟಿ ಯ ಬದಲು ಗುಡಲೂರು ಮಾರ್ಗವಾಗಿ ಊಟಿ ತಲುಪಬಹುದು)

ಈ ಲೇಖನದ ಆ೦ಗ್ಲ ಆವೃತ್ತಿ ಇಲ್ಲಿದೆ.

ಇವುಗಳನ್ನೂ ಓದಿ,
ಊಟಿ ಪ್ರವಾಸ : ಭಾಗ ೨ - ಕುನೂರು, ಕೋಟಗಿರಿ, ಕೊಡನಾಡ್ ವ್ಯೂ ಪಾಯಿ೦ಟ್
ಊಟಿ ಪ್ರವಾಸ : ಭಾಗ ೩ - ದೊಡ್ಡ ಬೆಟ್ಟ, ಊಟಿ ಕೆರೆ, ಶೂಟಿ೦ಗ್ ಮೆದು

ಧನ್ಯವಾದಗಳು
ರವೀಶ
Kalhatti Ghat Road
ಕಲ್ಹಟ್ಟಿ ಘಾಟಿ ರಸ್ತೆ [ಈ ಚಿತ್ರ ಒದಗಿಸಿದ ಶ್ರೀನಿಧಿ ಗೆ ಧನ್ಯವಾದಗಳು]

Cactus Flower
ಪಾಪಾಸುಕಳ್ಳಿಯ ಹೂವು
Trip Gang posing with Ford Fiesta
ಪ್ರವಾಸ ತ೦ಡ
Ooty is nearing
ಊಟಿಗೆ ಇನ್ನಷ್ಟು ಹತ್ತಿರ!

LinkWithin

Related Posts with Thumbnails