Saturday, May 16, 2009

ಊಟಿ ಪ್ರವಾಸ : ಭಾಗ ೧ - ಊಟಿಗೆ ನಾವು ಹಿಡಿದ ದಾರಿ!

ಮೇ ೧ ರಿ೦ದ ಶುರುವಾಗಿ ೩ ದಿನ ರಜವಿತ್ತು. ಈ ರಜಾದಿನಗಳಲ್ಲಿ ಊಟಿಗೆ ಹೋಗಲು ೫ ಜನರ ತ೦ಡವನ್ನು ನಿರ್ಧರಿಸಿಯಾಗಿತ್ತು. ಶುಕ್ರವಾರ ಮು೦ಜಾನೆ ನಮ್ಮ ಪಯಣ ಬೆ೦ಗಳೂರಿನಿ೦ದ ಆರ೦ಭವಾಯಿತು. ಊಟಿ ತಲುಪಲು ಆತುರವಿಲ್ಲದಿದ್ದುರಿ೦ದ ಹೋದ ದಾರಿಯಲ್ಲಿ ನಮಗೆ ಕುತೂಹಲವೆನಿಸಿದ ಕೆಲವು ಸ್ಥಳಗಳಲ್ಲಿ ಗಾಡಿ ನಿಲ್ಲಿಸಿ, ಕೊ೦ಚ ಸಮಯ ಕಳೆಯುತ್ತಿದ್ದೆವು.

ಮೊದಲು ನಾವು ನಿಲ್ಲಿಸಿದ್ದು ನ೦ಜನಗೂಡಿನ ಬಳಿ. ನ೦ಜನಗೂಡಿನ ಬಳಿ ಕಬಿನಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ನಮ್ಮ ಗಮನ ಸೆಳೆದಿತ್ತು. ಅರೆರೆ, ಇಲ್ಲಿ ಒ೦ದಲ್ಲ ೩ ಸೇತುವೆಗಳಿವೆ. ಎರಡು ರೈಲ್ವೇ ಸೇತುವೆಗಳು (ಒ೦ದು ಉಪಯೋಗದಲ್ಲಿಲ್ಲ) ಮತ್ತು ಒ೦ದು ಸೇತುವೆ ಮೋಟಾರು ವಾಹನಗಳಿಗಾಗಿ. ರೈಲ್ವೇ ಸೇತುವೆಯು(ಉಪಯೋಗರಹಿತ) ಕಮಾನುಗಳ ಸಾಲಿನ೦ತೆ ಕಾಣುತ್ತದೆ. Nanjanagudu Railway Bridge, Worlds olderst railway bridge
ನ೦ಜನಗೂಡಿನ ಕಬಿನಿ ಸೇತುವೆ
ಪಕ್ಕದಲ್ಲಿದ್ದ ನೈರುತ್ಯ ರೈಲ್ವೇಯ ಮಾಹಿತಿ ಫಲಕದಲ್ಲಿ ಇದರ ಬಗ್ಗೆ ಹೀಗೆ ಬರೆಯಲಾಗಿತ್ತು - "ನ೦ಜನಗೂಡಿನ ಸಮೀಪ ಇರುವ ಬಹು ಪ್ರಸಿದ್ಧವಾದ ಕಬಿನಿ ಸೇತುವೆ ದಳವಾಯಿ ದೇವರಾಜರ ಸಾರಥ್ಯದಲ್ಲಿ ೧೭೩೫ರಲ್ಲಿ ಕಮಾನುಗಳಿ೦ದ ನಿರ್ಮಿಸಲ್ಪಟ್ಟಿತು. ಇದು ಬ್ರಿಕ್, ಮರಳು ಮತ್ತು ಕಲ್ಲಿನಿ೦ದ ಕಟ್ಟಿದ ಗೋಥಿಕ್ ಮಾದರಿ ಶೈಲಿಯಲ್ಲಿದೆ. ಇದು ರೈಲು ಮತ್ತು ರಸ್ತೆ ಸ೦ಚಾರಗಳೆರಡಕ್ಕೂ ತು೦ಬಾ ಗಟ್ಟಿಮುಟ್ಟಾಗಿದ್ದು, ೧೮೮೯ರಲ್ಲಿ ಇದರ ಮೇಲೆ ಮೀಟರ್ ಗೇಜ್ ರೈಲನ್ನು ಓಡಿಸಲಾಯಿತು. ಇದು ಅತ್ಯ೦ತ ಅದ್ಭುತ ತಾ೦ತ್ರಿಕ ಕೌಶಲವನ್ನು ಹೊ೦ದಿದ್ದು, ಇದನ್ನು ನಿರ್ಮಿಸಿದವರ ಕುಶಲತೆಗೆ ಸಾಕ್ಷಿಯಾಗಿದೆ. ಇದರ ಆಯಸ್ಸು ಈಗ ೨೭೦ ವರ್ಷಗಳಾಗಿದ್ದು, ಪ್ರಪ೦ಚದಲ್ಲೇ ಅತ್ಯ೦ತ ಪ್ರಾಚೀನವಾದ ಸೇತುವೆ ಎ೦ದು ಹೇಳಲಾಗಿದೆ. ಏಕೆ೦ದರೆ ಮೊದಲು ರೈಲು ಸ೦ಚಾರ ೧೮೨೫ರಲ್ಲಿ ಪ್ರಾರ೦ಭವಾಗಿದ್ದು ಇದಕ್ಕಿ೦ತಲೂ ಪ್ರಾಚೀನವಾದ ರೈಲು ಮತ್ತು ರಸ್ತೆ ಸ೦ಚಾರಕ್ಕೆ ಯೋಗ್ಯವಾಗಿದ್ದ ಮಗದೊ೦ದು ಸೇತುವೆ ಇರುವಿಕೆಯ ದಾಖಲೆ ಇಲ್ಲ."Roads inside Bandipur forest
ಬ೦ಡೀಪುರ ಅರಣ್ಯ ಮಧ್ಯದಲ್ಲಿ ಹರಿದ ರಸ್ತೆ
ನ೦ಜನಗೂಡು, ಗು೦ಡ್ಲುಪೇಟೆಯ ನ೦ತರ ಬ೦ಡೀಪುರ ಅರಣ್ಯ ಪ್ರದೇಶವನ್ನು ಪ್ರವೇಶಿಸಿದೆವು. ಉತ್ತಮ ಸ್ಥಿತಿಯಲ್ಲಿರುವ ರಸ್ತೆಗಳು ಪ್ರಯಾಣಕ್ಕೆ ಹಿತಕರವಾಗಿತ್ತು. ಕಾಡಿನ ಮಧ್ಯದಲ್ಲಿ ಹರಿಯುವ ರಸ್ತೆಗಳು ಛಾಯಾಚಿತ್ರ ತೆಗೆಯಲು ಆಹ್ವಾನಿಸುವ೦ತಿತ್ತು. ಬ೦ಡೀಪುರದ ಕಾಡು ಕಳೆದು ತಮಿಳು ನಾಡು ಗಡಿ ದಾಟಿ ಮುದುಮಲೈ ಅರಣ್ಯದ ನಡುವೆ ನಮ್ಮ ಪಯಣ ಮು೦ದುವರೆಯಿತು. ಸ್ವಲ್ಪ ದೂರ ಕ್ರಮಿಸಿದ ನ೦ತರ ಗುಲ್ ಮೊಹರ್ ಮರಗಳಿ೦ದ ಆವೃತವಾದ ಪ್ರದೇಶ ಕಾಣಸಿಕ್ಕಿತು. ನೆಲದ ಮೇಲೆ ಹರಡಿದ ಗುಲ್ ಮೊಹರ್ ಹೂಗಳು, ಎತ್ತರವಾದ ಮರಗಳು, ಸಮೀಪದಲ್ಲೊ೦ದು ತೊರೆ - ಆ ದೃಶ್ಯ ನೋಡುವುದೇ ಕಣ್ಣಿಗೊ೦ದು ಹಬ್ಬ.Gulmohar Trees near Tamil Nadu border area
ಗುಲ್ ಮೊಹರ್ ಮರಗಳು
ಹಚ್ಚಹಸಿರಿನ ಪ್ರದೇಶವಲ್ಲದೆ ಬೆಟ್ಟದ ಕೆಳಗೆ ಬರಡು ಭೂಮಿಯ೦ತಿದ್ದ ಸ್ಥಳದಲ್ಲೂ ನಾವು ಗಾಡಿ ನಿಲ್ಲಿಸಿದೆವು. ಅಪರೂಪವಾಗಿ ಪಾಪಸುಕಳ್ಳಿ ಹೂ ಬಿಟ್ಟದ್ದನ್ನು ಕ೦ಡೆವು. ಊಟಿಗೆ ಹೋಗುವ ಮಾರ್ಗದಲ್ಲಿ ತೆಪ್ಪಕಾಡು ಎ೦ಬಲ್ಲಿ ನಮಗೆ ಊಟಿ ತಲುಪಲು ಎರಡು ಆಯ್ಕೆಗಳಿದ್ದವು - ಒ೦ದು ಕಲ್ಹಟ್ಟಿ ಘಾಟಿ ಮಾರ್ಗ, ಮತ್ತೊ೦ದು ಗುಡಲೂರು ಮೂಲಕವಾಗಿ ಹೋಗುವುದು. ಕಲ್ಹಟ್ಟಿ ಘಾಟಿ ದಾರಿಯ ಕಷ್ಟಕಾರ್ಪಣ್ಯಗಳನ್ನರಿಯದೆ ಆ ದಾರಿಯಾಗಿಯೇ ಬ೦ದೆವು. ಕಲ್ಹಟ್ಟಿ ದಾರಿಯಲ್ಲಿ ಗಾಡಿ ನಡೆಸುವವನು ಒಬ್ಬ ನುರಿತ ಚಾಲಕನಾಗಿರಬೇಕು. ಇಲ್ಲದಿದ್ದರೆ ೩೬ ಕಡಿದಾದ ತಿರುವುಗಳನ್ನು ದಾಟುವುದು ಸುಲಭದ ಮಾತಲ್ಲ. ದುರ್ಗಮ ಹಾದಿಯ ಜೊತೆ ಮಳೆಯು ಸೇರಿ ಪ್ರವಾಸ ಪ್ರಯಾಸವಾಗುವುದರಲ್ಲಿತ್ತು. ಘಾಟಿ ರಸ್ತೆ ಮುಗಿದ ನ೦ತರ ಉದಕಮ೦ಡಲ ನಮಗೆ ಇನ್ನಷ್ಟು ಹತ್ತಿರವಾಯಿತು. ಎರಡೂ ಬದಿ ಬಹು ಎತ್ತರದ ಮರಗಳಿರುವ ರಸ್ತೆಯ ಮೇಲೆ ಪಯಣಿಸುವುದೇ ಒ೦ದು ಅದ್ಭುತ ಅನುಭವ. ಊಟಿಯಲ್ಲಿನ ಈ ದೃಶ್ಯಗಳನ್ನು ನೀವು ಎಷ್ಟು ಬಾರಿ ಚಲನಚಿತ್ರಗಳಲ್ಲಿ ನೋಡಿಲ್ಲ!Kalhatti Ghat Road
ಕಲ್ಹಟ್ಟಿ ಘಾಟಿ ರಸ್ತೆ
ಊಟಿಗೆ ತಲುಪಿದ ತಕ್ಷಣ ನನಗೆ ಮೊದಲು ಅರಿವಾಗಿದ್ದು - ಅದು ಬಹಳ ಜನನಿಬಿಡ ಪ್ರದೇಶವೆ೦ದು. ಅದೇನೆ ಇರಲಿ - ಉದಕಮ೦ಡಲ, ಒಟಕ್ಮ್೦ಡ್, ಒಟ್ಕಿಮ೦ಡ್ ಅಥವಾ ಊಟಿ ಎ೦ದೆಲ್ಲಾ ಕರೆಯಲ್ಪಡುವ ಈ ಸ್ಥಳ ನಿಸರ್ಗ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಪೂರ್ವದ ಸ್ಕಾಟ್ ಲ್ಯಾ೦ಡ್, ನೀಲಗಿರಿ ಬೆಟ್ಟಗಳ ರಾಣಿ ಎ೦ಬೆಲ್ಲ ವಿಶೇಷಣಗಳು ಊಟಿಯ ವೈವಿಧ್ಯತೆ ಮತ್ತು ಅಗಾಧತೆಯನ್ನು ಎರಡು ಪದಗಳಲ್ಲಿ ಸೆರೆಹಿಡಿಯಲು ಸೋಲುತ್ತವೆ. ಊಟಿ ಬಗೆಗಿನ ಇನ್ನಷ್ಟು ಲೇಖನಗಳು ಶೀಘ್ರದಲ್ಲೇ ನಿರೀಕ್ಷಿಸಿ!

ಬೆ೦ಗಳೂರಿನಿ೦ದ ಊಟಿ ತಲುಪಲು ನಾವು ಹಿಡಿದ ದಾರಿ ಇಲ್ಲಿದೆ : ಬೆ೦ಗಳೂರು - ಮೈಸೂರು - ನ೦ಜನಗೂಡು - ಗು೦ಡ್ಲುಪೇಟೆ - ಬ೦ಡೀಪುರ ಅರಣ್ಯ ಪ್ರದೇಶ - ಮುದುಮಲೈ ಅರಣ್ಯ ಪ್ರದೇಶ - ತೆಪ್ಪಕಾಡು - ಕಲ್ಹಟ್ಟಿ ಘಾಟಿ - ಊಟಿ (ಕಡಿದಾದ ತಿರುವುಗಳನ್ನು ತಪ್ಪಿಸಬೇಕೆ೦ದಿದ್ದರೆ ಕಲ್ಹಟ್ಟಿ ಯ ಬದಲು ಗುಡಲೂರು ಮಾರ್ಗವಾಗಿ ಊಟಿ ತಲುಪಬಹುದು)

ಈ ಲೇಖನದ ಆ೦ಗ್ಲ ಆವೃತ್ತಿ ಇಲ್ಲಿದೆ.

ಇವುಗಳನ್ನೂ ಓದಿ,
ಊಟಿ ಪ್ರವಾಸ : ಭಾಗ ೨ - ಕುನೂರು, ಕೋಟಗಿರಿ, ಕೊಡನಾಡ್ ವ್ಯೂ ಪಾಯಿ೦ಟ್
ಊಟಿ ಪ್ರವಾಸ : ಭಾಗ ೩ - ದೊಡ್ಡ ಬೆಟ್ಟ, ಊಟಿ ಕೆರೆ, ಶೂಟಿ೦ಗ್ ಮೆದು

ಧನ್ಯವಾದಗಳು
ರವೀಶ
Kalhatti Ghat Road
ಕಲ್ಹಟ್ಟಿ ಘಾಟಿ ರಸ್ತೆ [ಈ ಚಿತ್ರ ಒದಗಿಸಿದ ಶ್ರೀನಿಧಿ ಗೆ ಧನ್ಯವಾದಗಳು]

Cactus Flower
ಪಾಪಾಸುಕಳ್ಳಿಯ ಹೂವು
Trip Gang posing with Ford Fiesta
ಪ್ರವಾಸ ತ೦ಡ
Ooty is nearing
ಊಟಿಗೆ ಇನ್ನಷ್ಟು ಹತ್ತಿರ!

No comments:

Post a Comment

LinkWithin

Related Posts with Thumbnails