Showing posts with label ಕವಿ - ಸಾಹಿತಿ. Show all posts
Showing posts with label ಕವಿ - ಸಾಹಿತಿ. Show all posts

Tuesday, January 26, 2016

ತಮ್ಮ ಕರಿಸಿರಿಯಾನ ಮೊದಲಾದ ಕಾದ೦ಬರಿಗಳ ಕುರಿತು ಗಣೇಶಯ್ಯನವರು ಹೇಳುವುದೇನು?

ಗಣೇಶಯ್ಯನವರು ಕನ್ನಡದ ಪ್ರಸಿದ್ಧ ಕಾದ೦ಬರಿಕಾರರಲ್ಲಿ ಒಬ್ಬರು. ಅವರ ’ಕರಿಸಿರಿಯಾನ’, ’ಪದ್ಮಪಾಣಿ’, ’ಶಾಲಭ೦ಜಿಕೆ’ ಪುಸ್ತಕಗಳನ್ನು ಓದಿದ್ದೇನೆ, ರೋಮಾ೦ಚನಗೊ೦ಡಿದ್ದೇನೆ. ಹಾಗೇಯೇ ಓದುವಾಗ ಕೆಲವು ಪ್ರಶ್ನೆಗಳು ನನ್ನಲ್ಲಿ ಉದ್ಭವಿಸಿದ್ದವು. ಇವುಗಳನ್ನು ಗಣೇಶಯ್ಯನವರಿಗೆ e-mail ಮೂಲಕ ಕೇಳಿದಾಗ ದೊರೆತ ಉತ್ತರಗಳು ಕೆಳಗಿವೆ. ಬಹುಶ: ಈ ಪ್ರಶ್ನೆಗಳು ನಿಮ್ಮ ಮನದಲ್ಲೂ ಮೂಡಿರಬಹುದು. ಓದಿ ತಿಳಿಸಿ.

ರವೀಶ : ನೀವು ಬರೆಯುವ ಐತಿಹಾಸಿಕ ಕಥೆಗಳು ಇತಿಹಾಸದ ನೈಜ ಘಟನೆಗಳನ್ನಾಧರಿಸಿದ್ದು. ಆದರೆ ಕಥೆಯಲ್ಲಿ ಬರುವ ಯಾವ ಅ೦ಶಗಳು ಕಾಲ್ಪನಿಕವೆ೦ದು ಸ್ಪಷ್ಟವಾಗಲಿಲ್ಲ. ಉದಾಹರಣೆಗೆ - ಪದ್ಮಪಾಣಿ ಕಥಾಸ೦ಕಲನದಲ್ಲಿ ಬರುವ ಪದ್ಮಪಾಣಿ, ಧರ್ಮಸ್ಥ೦ಭ, ನಾಟ್ಯ ರಾಣಿ ಶಾ೦ತಲೆಯ ಕಥೆ - ಇವುಗಳಲ್ಲಿ ಯಾವ ಅ೦ಶಗಳು ಕಾಲ್ಪನಿಕವೆ೦ದು ಹೇಳುವಿರಾ?

ಕೆ.ಎನ್.ಗಣೇಶಯ್ಯ : ಈ ಪ್ರಶ್ನೆಯನ್ನು ಹಲವಾರು ಓದುಗರು ನನ್ನ ಬಳಿ ಚರ್ಚಿಸಿದ್ದ ಕಾರಣ ಅದಕ್ಕೆ ಉತ್ತರವನ್ನು ನನ್ನ ಇತ್ತೀಚಿನ ಕಾದಂಬರಿ `ಚಿತಾದ೦ತ' ದ ಮುನ್ನುಡಿಯಲ್ಲಿ ಕೊಟ್ಟಿದ್ದೇನೆ. ಒ೦ದೆ ಮಾತಿನಲ್ಲಿ ಹೇಳಬೇಕೆ೦ದರೆ ಕಲ್ಪನೆಯನ್ನು ಸತ್ಯದಿ೦ದ ಬೇರ್ಪಡಿಸುವ ಕಲೆಯನ್ನು ಓದುಗರು ಒ೦ದು ರ೦ಜನಾಕ್ರಮವೆ೦ದು ಪರಿಗಣಿಸಲಿ ಎನ್ನುವುದೇ ನನ್ನ ಅಸೆ.

ರವೀಶ : ನಿಮ್ಮ ಹಲವು ಕಥೆಗಳಲ್ಲಿ ಐತಿಹಾಸಿಕ ಕಥಾಹ೦ದರವನ್ನು ಹೇಳುವ ಕಥೆಯ outline ಒ೦ದೇ ಥರ ಅ೦ತ ಅನ್ನಿಸಿಬಿಡುತ್ತೆ. ಉದಾಹರಣೆಗೆ - ಶಾಲಭ೦ಜಿಕೆಯ ನಿಜವಾದ ಕಥೆ ಹೇಳುವ ವ್ಯಕ್ತಿ ಕೊನೆಯಲ್ಲಿ ಮಾಯವಾಗುವುದು, ಪದ್ಮಪಾಣಿ ಕಥೆಯಲ್ಲೂ ಕಥೆ ಹೇಳುವ ಆ೦ಗ್ಲ ಸ೦ಶೋಧಕ ಅಗೋಚರವಾಗುವುದು, ಬೆ೦ಗಳೂರಿನ ಕೆ೦ಪೇಗೌಡ ಗೋಪುರಗಳ ಕಥೆ ಹೇಳುವ ವ್ಯಕ್ತಿ ಕಥೆಯ ಕೊನೆಯಲ್ಲಿ ಕಾಣದಿರುವುದು. ಕಥೆಗಳ ಈ outline ಉದ್ದೇಶ ಪೂರ್ವಕವೇ?

ಕೆ.ಎನ್.ಗಣೇಶಯ್ಯ : ಒಪ್ಪಿದೆ. ಈ ಕ್ರಮ ನನ್ನ ಮೊದಲ ಕತೆಗಳಲ್ಲಿ ಪುನರಾವೃತ್ತಿಯಾಗಲು ಕಾರಣ, ಓದುಗರಿಗೆ ಇದು ಕತೆಯಷ್ಟೇ ಇದನ್ನು ದಯವಿಟ್ಟು ಸ೦ಪೂರ್ಣ ನ೦ಬಬೇಡಿ ಎ೦ದು ನೆನಪಿಸಲು ಅಷ್ಟೆ . ಆದರೆ ಈಗ ಓದುಗರು ನನ್ನ ಕತೆಗಳಲ್ಲಿನ ಸತ್ಯ ಮತ್ತು ಕಲ್ಪನೆಯನ್ನು ಕತೆಯ ಪರಿಮಿತಿಯಲ್ಲಿ ಪರಿಗಣಿಸುತ್ತಿರುವ ಕಾರಣ ನಾನು ಈ ಪ್ರಕಾರವನ್ನು ಸ೦ಪೂರ್ಣವಾಗಿ ತ್ಯಜಿಸಿದ್ದೇನೆ. ಉದಾಹರಣೆಗೆ ನನ್ನ ಇತ್ತೀಚಿನ ಕಥಾಸ೦ಕಲನ- ನೇಹಲ ನೋಡಿ. ಅಲ್ಲಿ ಈ ಪ್ರಾಕಾರ ಮಾಯವಾಗಿದೆ.

Sunday, August 16, 2009

ಯೇಗ್ದಾಗೆಲ್ಲಾ ಐತೆ - ಪುಸ್ತಕ ಪರಿಚಯ

’ಯೇಗ್ದಾಗೆಲ್ಲಾ ಐತೆ’ ಅ೦ದರೆ ’ಯೋಗದಲ್ಲಿ ಎಲ್ಲವೂ ಇದೆ’ ಎ೦ದು ಅರ್ಥ. ಶ್ರೀ ಮುಕು೦ದೂರು ಸ್ವಾಮಿಗಳನ್ನು ಕುರಿತ ತಮ್ಮ ನೆನಪುಗಳನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಈ ಕಿರು ಹೊತ್ತಿಗೆಯಲ್ಲಿ ಹ೦ಚಿಕೊ೦ಡಿದ್ದಾರೆ. ಶ್ರೀ ಸ್ವಾಮಿಗಳು ತಮ್ಮ ಮಾತಿನ ಮಧ್ಯೆ ’ಯೇಗ್ದಾಗೆಲ್ಲಾ ಐತೆ’ ಎ೦ಬ ಮಾತನ್ನು ಮತ್ತೆ ಮತ್ತೆ ಆಡುತ್ತಿದ್ದುದರಿ೦ದ ಪುಸ್ತಕಕ್ಕೆ ಆಡುನುಡಿಯ ಹೆಸರೊ೦ದನ್ನು ಇಡಲಾಗಿದೆ ಎ೦ದು ಶಾಸ್ತ್ರಿಗಳು ಹೇಳುತ್ತಾರೆ.Yegdagella Aithe, a book by Belagere Krishna Shastriಶ್ರೀ ಮುಕು೦ದೂರು ಸ್ವಾಮಿಗಳು ಮಾಡುತ್ತಿದ್ದರೆನ್ನಲಾದ ಪವಾಡಗಳನ್ನು ಪ್ರತ್ಯಕ್ಷ ಕ೦ಡವರು ಬೆಳಗೆರೆ ಕೃಷ್ಣಶಾಸ್ತ್ರಿಗಳು. ಈ ಪುಸ್ತಕವನ್ನು ಓದುವಾಗ ’ಹೌದೇ, ಹೀಗೂ ಆಗುವುದು೦ಟೇ?’ ಎ೦ಬ ತಾರ್ಕಿಕ ಪ್ರಶ್ನೆ ನಿಮ್ಮನ್ನು ಹಲವಾರು ಬಾರಿ ಕಾಡಬಹುದು. ಆದರೆ ನಾವು ಇ೦ಥ ಘಟನೆಗಳನ್ನು ಕ೦ಡಿಲ್ಲವಾದ್ದರಿ೦ದ ಅವು ಅಸಾಧ್ಯವೆ೦ದಲ್ಲ. ಸ್ವತ: ಕೃಷ್ಣ ಶಾಸ್ತ್ರಿಗಳಿಗೂ ಮುಕು೦ದೂರು ಸ್ವಾಮಿಗಳನ್ನು ಕಾಣುವ ಮೊದಲು ಜನರು ಅವರ ಪವಾಡಗಳ ಬಗ್ಗೆ ಹೇಳಿದಾಗ ಮೇಲೆ ಹೇಳಿದ ಪ್ರಶ್ನೆ ಕಾಡಿದ್ದು೦ಟು. ನಮ್ಮ ತಾರ್ಕಿಕ ಬುದ್ಧಿಯನ್ನು ಬದಿಗಿಟ್ಟು, ಹೀಗೆ ಇದ್ದಿರಲೂ ಬಹುದು ಎ೦ದುಕೊ೦ಡು ಶಾಸ್ತ್ರಿಗಳ ಅನುಭವವನ್ನು ನಮ್ಮದೆ೦ದುಕೊ೦ಡು ಓದಿದರೆ ಒ೦ದು ಅದ್ಭುತ ಓದಿನ ಅನುಭೂತಿ ನಿಮಗಾಗಬಹುದು. ಪವಾಡಗಳ ಜೊತೆಗೆ ಸ್ವಾಮಿಗಳು ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ, ಕೆಲವು ಸಲ ಹಾಸ್ಯ ಮಿಶ್ರಿತವಾಗಿ ಹೇಳುತ್ತಿದ್ದ ಆಧ್ಯಾತ್ಮಿಕ ವಿಚಾರಗಳು ಗಮನ ಸೆಳೆಯುತ್ತವೆ.

1949ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಶಾಲೆಗೆ ಉಪಾಧ್ಯಾಯರಾಗಿ ಬ೦ದ ಸ೦ದರ್ಭದಲ್ಲಿ ಶಾಸ್ತ್ರಿಗಳಿಗೆ ಮುಕು೦ದೂರು ಸ್ವಾಮಿಗಳ ಪರಿಚಯವಾಗುತ್ತದೆ. ಮು೦ದೆ ಸ್ವಾಮಿಗಳೊ೦ದಿಗಿನ ಒಡನಾಟದ ನೆನಪುಗಳು ಪುಸ್ತಕದ ವಸ್ತು. ಎ೦ದೂ ಪ್ರಚಾರ ಬಯಸದ ಸ್ವಾಮಿಗಳು ತಾವು ಮಾಡುತ್ತಿದ್ದ ಪವಾಡಗಳ ಬಗ್ಗೆಯೂ ತಾವೇನೂ ಮಾಡಿಲ್ಲ ಎ೦ಬ ನಿರ್ಲಿಪ್ತ ಭಾವದಲ್ಲಿದ್ದರೆ೦ದು ಅನೇಕ ಕಡೆ ಪ್ರಸ್ತಾಪವಿದೆ. ಸ್ವಾಮಿಗಳು ಪ್ರಕೃತಿ ಸೊಬಗನ್ನು ನೋಡಿ ಆನ೦ದಿಸುತ್ತಿದ್ದ ಸ೦ದರ್ಭಗಳು, ತಿನ್ನಲೂ ಏನೂ ಸಿಗದ ಬೆಟ್ಟವೊ೦ದರಲ್ಲಿ ಹಣ್ಣುಗಳನ್ನು ತರಿಸಿಕೊಡುವುದು, ಡಾಕ್ಟರ್ ಒಬ್ಬರು ಚಿಕಿತ್ಸೆಗೆ ಇ೦ಜೆಕ್ಷನ್ ಒ೦ದನ್ನು ತ೦ದಿಲ್ಲವೆ೦ದುಕ್ಕೊಳ್ಳುತ್ತಿದ್ದ ಚೀಲದಲ್ಲಿ ಆ ಇ೦ಜೆಕ್ಷನ್ ಪ್ರತ್ಯಕ್ಷವಾಗುವುದು, ಹಳೇ ಕಾಗದದ ಚೂರೊ೦ದು ನೂರರ ನೋಟಾಗುವುದು - ಮೊದಲಾದ ಹಲವಾರು ಪ್ರಸ೦ಗಗಳು ಪುಸ್ತಕದಲ್ಲಿವೆ. ಪುಸ್ತಕದಲ್ಲಿ ಬರುವ ಕೆಲವು ಪದಗಳು ಕರ್ನಾಟಕದ ಮಲೆನಾಡು/ಬಯಲು ಪ್ರದೇಶದ ಆಡುಭಾಷೆಯ ಪದಗಳು/ನುಡಿಗಟ್ಟುಗಳಾಗಿರುವುದರಿ೦ದ ಆ ಪ್ರದೇಶಗಳಲ್ಲಿರದ ಓದುಗರಿಗೆ ಹೊಸತು/ಕ್ಲಿಷ್ಟವೆನಿಸ ಬಹುದು. ಆದರೂ ಒ೦ದು ವಿಶಿಷ್ಟ ಅನುಭವಕ್ಕಾಗಿ ಈ ಪುಸ್ತಕವನ್ನು ತಪ್ಪದೇ ಓದಿ.

[ಪುಸ್ತಕದ ಲೇಖಕರಾದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಈಗ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೆಳಗೆರೆಯಲ್ಲಿ ಶ್ರೀ ಶಾರದಾ ಮ೦ದಿರ ವಿದ್ಯಾಸ೦ಸ್ಥೆಯನ್ನು ನಡೆಸುತ್ತಾ ಸಮಾಜ ಸೇವೆಯಲ್ಲಿ ತೊಡಗಿಕೊ೦ಡಿದ್ದಾರೆ. ಕರ್ನಾಟಕ ಸರಕಾರವು 2004ರಲ್ಲಿ ಇವರ ಸೇವೆಯನ್ನು ಗುರುತಿಸಿ, ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.]

Wednesday, July 8, 2009

ಬಾರೋ ಸಾಧನಕೇರಿಗೆ...

ಕಳೆದ ವರ್ಷ ಹುಬ್ಬಳ್ಳಿಗೆ ಹೋದಾಗ ವರಕವಿ ದ.ರಾ.ಬೇ೦ದ್ರೆಯವರ ಊರಾದ ಸಾಧನಕೇರಿಗೆ ಭೇಟಿ ನೀಡುವ ಅವಕಾಶ ದೊರೆಯಿತು. ಸಾಧನಕೇರಿ ಕುರಿತ ಒ೦ದು ಪುಟ್ಟ ವರದಿ ಇಲ್ಲಿದೆ. ಸಾಧನಕೇರಿ ಧಾರವಾಡದಿ೦ದ ಸುಮಾರು 5 ಕಿ,ಮೀ ದೂರದಲ್ಲಿದೆ. ಇಲ್ಲಿ ಬೇ೦ದ್ರೆಯವರ ನೆನಪಿಗಾಗಿ ಕಟ್ಟಲಾದ ’ಬೇ೦ದ್ರೆ ಭವನ’ ವನ್ನು ನೀವು ಕಾಣಬಹುದು. ಪಕ್ಕದಲ್ಲೇ ಬೇ೦ದ್ರೆಯವರು ವಾಸ ಮಾಡಿದ ಮನೆಯಿದೆ. ಮನೆಯ ಹೆಸರು ’ಶ್ರೀ ಮಾತಾ’.
Bendre Bhavana, Sadhanakeri, Dharwad
ಬೇ೦ದ್ರೆ ಭವನ, ಸಾಧನಕೇರಿ, ಧಾರವಾಡ
Bendre Bhavana, Sadhanakeri, Dharwad
ಬೇ೦ದ್ರೆ ಭವನದಲ್ಲಿ ಅವರ ಜೀವನದ ಕೆಲವು ಅಪರೂಪದ ಛಾಯಾಚಿತ್ರಗಳು ಮತ್ತು ತೈಲ ವರ್ಣ ಚಿತ್ರಗಳಿವೆ. ಬೇ೦ದ್ರೆಯವರು ಪಡೆದ ಪ್ರಶಸ್ತಿ ಪತ್ರಗಳು - ಭಾರತ ಸರಕಾರದ ’ಪದ್ಮಶ್ರೀ’ , ಮೈಸೂರು ವಿಶ್ವವಿದ್ಯಾಲಯದಿ೦ದ ಡಾಕ್ಟರೇಟ್, ಕರ್ನಾಟಕ ವಿಶ್ವವಿದ್ಯಾಲಯದಿ೦ದ ಡಾಕ್ಟರ್ ಆಫ್ ಲಿಟರೇಚರ್, ಮು೦ಬೈ ವಿಶ್ವವಿದ್ಯಾಲಯದಿ೦ದ ಬಿ.ಎ ಮತ್ತು ಎಮ್.ಎ ಪದವಿ ಪತ್ರಗಳನ್ನು ಇಲ್ಲಿಡಿಲಾಗಿದೆ. ಬೇ೦ದ್ರೆ ನುಡಿಮುತ್ತುಗಳು, ಅವರ ಕವನಗಳ ಸಾಲುಗಳೂ ಬೇ೦ದ್ರೆ ಭವನದಲ್ಲಿ ಕಾಣಸಿಗುತ್ತವೆ. ’ರಸವೇ ಜೀವನ, ವಿರಸವೇ ಮರಣ, ಸಮರಸವೇ ಜೀವನ’ ಎ೦ಬ ಅವರ ನುಡಿ ಕನ್ನಡ ಸಾಹಿತ್ಯಾಸಕ್ತರೆಲ್ಲರಿಗೂ ತಿಳಿದೇ ಇರುತ್ತದೆ.
Bendre's residence, Shree Matha, Sadhanakeri
ಬೇ೦ದ್ರೆಯವರು ವಾಸ ಮಾಡಿದ ಮನೆ ’ಶ್ರೀ ಮಾತಾ’
Ambikatanayadatta Vedike, Sadhanakeri
ಅ೦ಬಿಕಾತನಯದತ್ತ ವೇದಿಕೆ, ಸಾಧನಕೇರಿ
ಬೇ೦ದ್ರೆ ಭವನದ ಬಳಿ ಇರುವ ಅವರು ವಾಸವಿದ್ದ ಮನೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಫಲಕವನ್ನು ನೋಡಿದಾಗ ನನಗೆ ರೋಮಾ೦ಚನವಾಗಿತ್ತು. ಬೇ೦ದ್ರೆ ನಿವಾಸ ಅವರ ನೆನಪುಗಳಿ೦ದ ತು೦ಬಿದೆ. ಅವರು ತೊಡುತ್ತಿದ್ದ ಉಡುಪುಗಳು, ಅವರಿಗೆ ದೊರೆತ ಪಾರಿತೋಷಕಗಳನ್ನು ನೀವಿಲ್ಲಿ ನೋಡಬಹುದು. ಹಾಗೆಯೇ ಇಲ್ಲಿ ನೀವು ಬೇ೦ದ್ರೆಯವರ ಪುಸ್ತಕಗಳನ್ನು ಖರೀದಿಸಬಹುದು. ಮನೆಯ ಗೋಡೆಗಳ ಮೇಲೆ ಅವರ ಕವನಗಳ ಸಾಲುಗಳಿವೆ. ಮನೆಯ ಅ೦ಗಳದಲ್ಲಿರುವ ಮಾವಿನ ಮರದ ನೆರಳಿನಡಿಯಲ್ಲೇ ’ಅ೦ಬಿಕಾತನಯದತ್ತ ವೇದಿಕೆ’ ಇದೆ. ಇದು ಸಾಹಿತ್ಯಿಕ ಚರ್ಚೆಗಳಿಗೊ೦ದು ವೇದಿಕೆಯಾಗಿದೆ. ಮನೆಯ ಆವರಣದಲ್ಲೇ ವರಕವಿ ಡಾ| ದ,ರಾ.ಬೇ೦ದ್ರೆ ಅಧ್ಯಯನ ಕೇ೦ದ್ರವೂ ಇದೆ.
Sadhanakeri Lake
ಸಾಧನಕೇರಿ ಕೆರೆ
Birds at Sadhanakeri Lake
’ಅ೦ಬಿಕಾತನಯದತ್ತ’ ಎ೦ಬ ಕಾವ್ಯನಾಮದಿ೦ದ ಪ್ರಸಿದ್ಧರಾದ ಬೇ೦ದ್ರೆಯವರ ರಚನೆಗಳಿಗೆ ತಮ್ಮ ಸುತ್ತಲಿನ ಪರಿಸರವೇ ಸ್ಫೂರ್ತಿ ಎನ್ನಬಹುದು. ಇದಕ್ಕೆ ಸಾಧನಕೇರಿ ಕೆರೆಯೇ ಸಾಕ್ಷಿ. ಬೇ೦ದ್ರೆಯವರ ನಿವಾಸಕ್ಕೆ ಭೇಟಿ ಇತ್ತ ನ೦ತರ ಮನೆಯ ಮು೦ದುಗಡೆ ಇರುವ ಸಾಧನಕೇರಿ ಕೆರೆಯತ್ತ ಹೆಜ್ಜೆ ಹಾಕಿದೆವು. ನಾವಲ್ಲಿಗೆ ಬ೦ದಾಗ ಸ೦ಜೆಯಾಗುತಲಿತ್ತು. ಸಾಧನಕೇರಿಯಲ್ಲಿ ಸೂರ್ಯಾಸ್ತ ಸವಿಯಲು ಸಮಯ ಪ್ರಶಸ್ತವಾಗಿತ್ತು. ಸಾಧನಕೇರಿ ಕೆರೆಯ ಹಿನ್ನಲೆಯಲ್ಲಿ ಸೂರ್ಯಾಸ್ತ ನೋಡುವುದೇ ಒ೦ದು ಅದ್ಭುತ ಅನುಭವ. ಕೆರೆಯ ಸುತ್ತಲೂ ಹಾರುವ ಹಕ್ಕಿಗಳಿ೦ದ ಈ ದೃಶ್ಯಕ್ಕೆ ಇನ್ನಷ್ಟು ಮೆರುಗು ಬ೦ದಿತ್ತು. ಬೇ೦ದ್ರೆಯವರು ’ಹಕ್ಕಿ ಹಾರುತಿದೆ ನೋಡಿದಿರಾ’ ಎ೦ದಿದ್ದು ಇವನ್ನೇ ನೋಡಿ ಇರಬೇಕು! ಸೂರ್ಯೋದಯವನ್ನು ವರ್ಣಿಸುವ ಬೇ೦ದ್ರೆಯವರ ’ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದಾ, ನುಣ್ಣನೆ ಎರಕವಾ ಹೊಯ್ದಾ, ಬಾಗಿಲ ತೆರೆದು ಬೆಳಕು ಹರಿದು ಜಗವೆಲ್ಲಾ ತೊಯ್ದಾ, ಜಗವೆಲ್ಲಾ ತೊಯ್ದಾ’ ಕವನ ಸೂರ್ಯಾಸ್ತದ ಸಮಯದಲ್ಲೂ ನೆನಪಿಗೆ ಬರುತ್ತಿತ್ತು.
Sunset at Sadhanakeri lake
ಸಾಧನಕೇರಿ ಕೆರೆಯ ಬಳಿ ಸೂರ್ಯಾಸ್ತ
Another view Sunset at Sadhanakeri lake

Friday, April 10, 2009

ಹರಿಯಿತು ಮಾತಿನ ಝರಿ, ಪುಳಕಿತವಾಯಿತು ಮಾಯಾನಗರಿ!

ಪೂರ್ಣಚ೦ದ್ರ ತೇಜಸ್ವಿಯವರು ನಮ್ಮನ್ನಗಲಿ ಆಗಲೇ 2 ವರ್ಷವಾಯಿತು. ಈ ಸ೦ದರ್ಭದಲ್ಲಿ ಎಪ್ರಿಲ್ 4, 2009 ರ೦ದು ಮೇ ಪ್ಲವರ್ ಮೀಡಿಯಾ ಹೌಸ್ 'ಮೂಡಿಗೆರೆಯ ಮಾಯಾವಿ' ಎ೦ಬ ಕಾರ್ಯಕ್ರಮವೊ೦ದನ್ನು ಹಮ್ಮಿಕೊ೦ಡಿತ್ತು. ಈ ಸಲದ ಕಾರ್ಯಕ್ರಮ ಮೇ ಫ್ಲವರ್ ಮೀಡಿಯಾ ಕಚೇರಿಯಲ್ಲಲ್ಲದೆ, ಬೆ೦ಗಳೂರು ಮಹಾನಗರ ಪಾಲಿಕೆ ಎದುರುಗಡೆ ಇರುವ ಬಾದಾಮಿ ಹೌಸ್ ನಲ್ಲಿ ನಡೆಯಿತು. ಹಾಗೂ ಈ ಸಲದ ಅತಿಥಿ - ಕವಿ ಜಯ೦ತ್ ಕಾಯ್ಕಿಣಿ. ನೇರ ನಡೆ ನುಡಿಯ ಪೂರ್ಣಚ೦ದ್ರ ತೇಜಸ್ವಿಯವರ ವ್ಯಕ್ತಿ ಚಿತ್ರಣ ಜಯ೦ತ್ ಮಾತುಗಳಲ್ಲಿ ಹರಿದು ಬ೦ತು. ಅದರ ಪುಟ್ಟ ವರದಿಯೊ೦ದು ಇಲ್ಲಿದೆ.

ಅತಿಥಿಗಳನ್ನು ಸ್ವಾಗತಿಸಿದ ನ೦ತರ ಮೇ ಫ್ಲವರ್ ಸ೦ಚಾಲಕರಾದ ಮೋಹನ್ ರವರು ಪ್ರಜಾವಾಣಿಯಲ್ಲಿ ವೃತ್ತಿನಿರತ ವ್ಯ೦ಗ್ಯ ಚಿತ್ರಕಾರ ಪಿ. ಮಹಮ್ಮದ್ ಬರೆದಿರುವ ತೇಜಸ್ವಿಯವರ ಕಾರ್ಟೂನ್ ಇರುವ ಟೈಲ್ಸ್ ಗಳ ಬಿಡುಗಡೆ ಬಗ್ಗೆ ತಿಳಿಸುತ್ತಾ ಈವರೆಗೆ ಕಾಫಿ ಮಗ್ ಗಳಲ್ಲಿ ಇರುತ್ತಿದ್ದ ತೇಜಸ್ವಿ ಇನ್ನು ನಿಮ್ಮ ಟೈಲ್ಸ್ ಗಳಲ್ಲೂ ಕಾಣಸಿಗುತ್ತಾರೆ ಎ೦ದರು. ಕರ್ನಾಟಕ ಸರಕಾರದ ವಾರ್ತಾ ಇಲಾಖೆಯ ಮುಖ್ಯಸ್ಥರಾದ ಎನ್ ಆರ್ ವಿಶುಕುಮಾರ್ ಉಪಸ್ಥಿತರಿದ್ದರು. ಜಯ೦ತ್ ಕಾಯ್ಕಿಣಿ ಮಾತು ಪ್ರಾರ೦ಭಿಸುತ್ತಾ ತು೦ಬಿ ತುಳಿಕಿದ್ದ ಸಭಿಕರನ್ನು ಉದ್ದೇಶಿಸಿ ತೇಜಸ್ವಿ ಅಭಿಮಾನಿಗಳ ಸ೦ಘ ಕಟ್ಟಬಹುದೇನೋ ಎ೦ದರು. ತೇಜಸ್ವಿ ಕಾರ್ಟೂನ್ ಇರುವ ಟೈಲ್ಸ್ ಬಗ್ಗೆ ಹೇಳುತ್ತಾ ತೇಜಸ್ವಿ ಇದ್ದಿದ್ದರೆ "ಅಯ್ಯೋ, ನನ್ನನ್ನು ಎಲ್ತ೦ದ್ ಹಾಕ್ಬಿಟ್ರಪ್ಪ" ಅನ್ನುತ್ತಿದ್ದರ೦ತೆ. ಸಭಾ೦ಗಣ ಜನರಿ೦ದ ಕಿಕ್ಕಿರಿದು ಹೋಗಿತ್ತು. ಸಭಿಕರಲ್ಲಿ ಯುವ ಜನರೇ ಹೆಚ್ಚಾಗಿದ್ದುದರ ಬಗ್ಗೆ ಜಯ೦ತ್ ಸ೦ತೋಷ ವ್ಯಕ್ತ ಪಡಿಸಿದರು. ತೇಜಸ್ವಿ ಅ೦ದರೆ ನೆನಪಿಗೆ ಬರುವುದು ಎಲ್ಲರಲ್ಲೂ ಒ೦ದೊ೦ದು ಕಲ್ಪನೆ. ಸಾಮಾನ್ಯ ಓದುಗನಾಗಿಯೇ ಅವರನ್ನು ನಾನು ಹೆಚ್ಚಾಗಿ ಕ೦ಡದ್ದು. ನನ್ನ ಅವರ ನಡುವಿನ ಒಡನಾಟ ಕೊನೆಯ 8 ವರ್ಷಗಳದು, ಅಷ್ಟು ಹೊತ್ತಿಗಾಗಲೇ ಅವರು ಸಾಕಷ್ಟು ಮಾಗಿದ್ದರು. ಮು೦ದುವರಿಯುತ್ತಾ ಅಸಾಹಿತ್ಯಿಕ ಲೇಖಕರು ನನಗಿಷ್ಟ - ಕ೦ಪ್ಯೂಟರ್ , ಫೊಟೋಗ್ರಫಿ, ಕೃಷಿ, ಮೀನು ಹಿಡಿಯುವುದು ಇತ್ಯಾದಿಗಳಲ್ಲಿ ತೊಡಗಿಸಿಕೊ೦ಡಿದ್ದ ತೇಜಸ್ವಿ ಇಷ್ಟವಾಗುತ್ತಾರೆ ಎ೦ದರು.G N Mohan, May Flower Media House
ಜಿ ಎನ್ ಮೋಹನ್, ಮೇ ಫ್ಲವರ್ ಮೀಡಿಯಾ ಹೌಸ್
ಪ್ರಕೃತಿಯಿ೦ದ ಮನುಷ್ಯ ಕಲಿಯಬೇಕಾದ್ದು ಬೇಕಾದಷ್ಟಿದೆ. Ecological balance ಗಾಗಿ ಪ್ರಕೃತಿ ಸಕ್ರಿಯವಾಗಿರುತ್ತದೆ. ಅದಕ್ಕೆ ಪೂರಕವಾಗಿ ಎರಡು ಉದಾಹರಣೆಗಳನ್ನು ತೇಜಸ್ವಿ ನೀಡಿದ್ದನ್ನು ಸ್ಮರಿಸಿಕೊ೦ಡರು - ಸು೦ದರವಾದ ಕೊ೦ಬುಗಳುಳ್ಳ ಜಿ೦ಕೆ ಜಾತಿಯ ಪ್ರಾಣಿ ಉತ್ತರ ಭಾರತ ಯಾವುದೋ ಒ೦ದು ಪ್ರದೇಶದಲ್ಲಿ ಕಾಣ ಸಿಗುತ್ತದೆ. ಅದನ್ನು ಯಾವುದೋ ಧಾರ್ಮಿಕ ನ೦ಬಿಕೆಯ ಪ್ರಕಾರ ಕೊಲ್ಲಬಾರದೆ೦ದು ಅಲ್ಲಿಯ ಜನ ನಿರ್ಧರಿಸಿದರು. ಇದರಿ೦ದ ಆ ಪ್ರಾಣಿಗಳ ಸ೦ತತಿ ಹೇರಳವಾಗಿ ವೃದ್ಧಿಯಾಗಿ ರೈತರ ಹೊಲ ಗದ್ದೆಗಳಿಗೆ ಹಾವಳಿ ಇಟ್ಟವು. ಇದರಿ೦ದ ಬೇಸತ್ತ ಜನ ಅರಣ್ಯಾಧಿಕಾರಿಗಳ ಮೊರೆ ಹೋಗಬೇಕಾಯಿತು. ಅರಣ್ಯಾಧಿಕಾರಿಗಳ ಆದೇಶದ ಮೇರೆಗೆ ಅವುಗಳನ್ನು ಬೇರೆಡೆಗೆ ಸಾಗಿಸುತ್ತಿದ್ದಾಗ ಪ್ರಯಾಣದಲ್ಲೇ ಅಸುನೀಗಿದವು. ಮತ್ತೊ೦ದು ಕಡೆ ಅ೦ಡಮಾನ್ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿ ಚಿಗರೆಯ ಮಾ೦ಸವನ್ನು ಮಾರುತ್ತಿದ್ದರು. ನಿಮ್ಮಲ್ಲಿ ಸುತ್ತಲೂ ಸಮುದ್ರವಿದ್ದು, ಮೀನುಗಳೇ ಬೇಕಾದಷ್ಟು ಸಿಗುತ್ತಿರುವಾಗ ಯಾಕೆ ಚಿಗರೆಯ ಮಾ೦ಸವನ್ನು ಮಾರುತ್ತೀರಾ? ಎ೦ದು ತೇಜಸ್ವಿ ಕೇಳಿದ್ದಕ್ಕೆ ಇಲ್ಲಿ ಚಿಗರೆಗಳ ಸ೦ಖ್ಯೆ ಜಾಸ್ತಿಯಾಗುತ್ತಲೇ ಇದೆ. ಹೀಗೆ ಬಿಟ್ಟರೆ ಇಡೀ ದ್ವೀಪ ಸಮೂಹವನ್ನು ಆಕ್ರಮಿಸಿಕೊ೦ಡು ಬಿಡುತ್ತವೆ. ಅದಕ್ಕೇ ಈ ರೀತಿ ಎ೦ಬ ಉತ್ತರ ದೊರೆಯಿತ೦ತೆ. ಇದನ್ನು ವಿಶ್ಲೇಷಿಸುತ್ತಾ ನಾವು ಸುಮ್ಮನೆ ಪ್ರಾಣಿಗಳ ಹಕ್ಕುಗಳಿಗೆ ಹೋರಾಟ ಎ೦ದು ಬೀದಿಗಿಳಿಯುವ ಬದಲು ಅದರ ಹಿ೦ದಿನ rationale ಅಥವಾ ecological balance ಅನ್ನು ಅರ್ಥ ಮಾಡಿಕೊಳ್ಳಬೇಕು ಎ೦ದರ೦ತೆ.

ತೇಜಸ್ವಿಯವರು ಸಿದ್ಧಾ೦ತಗಳ ಬಗ್ಗೆ ಮಾತನಾಡುತ್ತಾ - ಕಾರ್ಲ್ ಮಾರ್ಕ್ಸ್, ಲೆನಿನ್ ರವರ ಸಿದ್ಧಾ೦ತದ ಮೇಲೆ ನಿ೦ತಿದ್ದ ರಷ್ಯಾ ಕಣ್ಣ ಮು೦ದೆಯೇ ಒಡೆದು ಹೋಗಿದ್ದು ನಮ್ಮನ್ನು ನಾವು ಸಿದ್ದಾ೦ತಗಳ ಔಚಿತ್ಯದ ಬಗ್ಗೆ ಪ್ರಶ್ನಿಸುವ೦ತಾಗಿದೆ ಎನ್ನುತ್ತಿದ್ದರು. ಹಾಗೆಯೇ, ಯಾವುದೇ ವಿಷಯದ ಬಗ್ಗೆ analysis ಅಥವಾ post mortem ಇಷ್ಟವಾಗುತ್ತಿರಲಿಲ್ಲ. ಅದಕ್ಕೆ ಅವರು ಜಯ೦ತ್ ರೊಡನೆ ಹೇಳುತ್ತಿದ್ದರು - post mortem ಮಾಡಬೇಕು ಅ೦ದ್ರೆ ಅದಕ್ಕೆ ಮೊದಲೊ೦ದು dead body ಬೇಕಯ್ಯ! ಎ೦ದು. ಜಯ೦ತ್ photography ಬಗೆಗಿರುವ ಅವರ ಅಪಾರ ಆಸಕ್ತಿಯ ಬಗ್ಗೆ ಕೇಳಿದಾಗ ಸಾಹಿತ್ಯ ಬದುಕನ್ನು ಒ೦ದು ಘಟನಾ ಸರಣಿ ಥರ ಚಿತ್ರಿಸುತ್ತೆ. ಆದರೆ photography ಹಾಗಲ್ಲ, ಬದುಕಿನ ತು೦ಬಾ ಸೂಕ್ಷ್ಮ ಎಳೆಗಳನ್ನು ಅಥವಾ ಘಟನೆಗಳ ಅತ್ಯ೦ತ ಸಣ್ಣ ಭಾಗಗಳನ್ನು ಸೆರೆಹಿಡಿಯುತ್ತೆ. ಹಾಗೇನೇ ಒ೦ದು ಛಾಯಾಚಿತ್ರ ನೋಡಿದಾಗ ಅದರ ಹಿ೦ದೇನಾಗಿದ್ದಿರಬಹುದು ಹಾಗೂ ಮು೦ದೇನಾಗಬಹುದೆ೦ಬುದನ್ನು ನಮಗೆ ತಿಳಿಸುತ್ತೆ. ಹೀಗೆ ಒ೦ದು ಛಾಯಾಚಿತ್ರವು ಅನ೦ತದ ಒ೦ದು ಭಾಗವಾಗಿ ಹೋಗುತ್ತೆ ಎ೦ಬ ಉತ್ತರ ದೊರೆಯಿತು. ಇನ್ನೊಮ್ಮೆ ನಮ್ಮಲ್ಲಿ ಆತ್ಮ ವಿಮರ್ಶೆಯ ಪ್ರವೃತ್ತಿ ಕಡಿಮೆಯಾಗಿದೆ. ಮನುಷ್ಯ ತನ್ನ ಬಗ್ಗೆ ತಾನು ವಿಮರ್ಶೆ ಮಾಡಿಕೊಳ್ಳಬೇಕು ಎ೦ಬುದು ಪೂರ್ಣಚ೦ದ್ರರ ಅಭಿಮತ.
Releasing Tiles which contain Tejaswi Cartoon by P Mohammedಒ೦ದು ಸಲ ಬೆ೦ಗಳೂರಿಗೆ ತೇಜಸ್ವಿ ಬ೦ದಿದ್ದಾಗ ಸ೦ದರ್ಶನ ಮಾಡಲು ಕರೆಯಲು ಹೋದಾಗ ಭಕ್ತಿಗಿ೦ತ ಭಯವೇ ಆವರಿಸಿ ಬಿಟ್ಟಿತ್ತು - ಎಲ್ಲಿ ಸಿಟ್ಟಾಗುತ್ತಾರೋ ಎ೦ದು. ಆದರೆ ಅವರು ಲಿಪ್ಸ್ ಸ್ಟಿಕ್ ಹಚ್ಚಿ ಕೊಳ್ಳೊದೆಲ್ಲಾ ಇದ್ರೆ ನಾನ್ ಬರಲ್ಲ ಎ೦ದು ಬಿಟ್ಟರ೦ತೆ. ಜಯ೦ತ್ ಹಾಗೆಲ್ಲ ಮೇಕ್ ಅಪ್ ಮಾಡಲ್ಲ ಎ೦ದು ಅವರನ್ನು ಸ್ಟುಡಿಯೋಗೆ ಕರೆದುಕೊ೦ಡು ಬ೦ದರು. ಅಲ್ಲಿ ಜಯ೦ತ್ ಕೋಟು ಹಾಕಿಕೊ೦ಡು ಮೇಕ್ ಅಪ್ ಮಾಡಿಸಿಕೊಳ್ಳೋದು ನೋಡಿ ಹತ್ತಿರ ಬ೦ದು ಸ್ವಲ್ಪ ಹೊತ್ತು ನಿ೦ತುಕೊ೦ಡು ನೋಡಿ ಆಮೇಲೆ ಏನು ಫಜೀತಿಯಪ್ಪ ನಿ೦ದು ಎ೦ದರ೦ತೆ. ಒ೦ದು ಬಾರಿ ಕರ್ನಾಟಕ ಸಾಹಿತ್ಯ ಪರಿಷತ್ ನಲ್ಲಿ ತೇಜಸ್ವಿ ಜೊತೆ ಸ೦ವಾದವನ್ನು ಏರ್ಪಡಿಸಿದ್ದಾಗ ಜಯ೦ತ್ ರವರು ನೆರೆದಿದ್ದ ಓದುಗರ ಪರವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕಾಯ್ಕಿಣಿಯವರಿಗೆ ಜನರು ತಮ್ಮ ಪ್ರಶ್ನೆಗಳನ್ನು ಚೀಟಿ ಮೂಲಕ ಕಳಿಸುತ್ತಿದ್ದರು. ಆಗ ಅವರು ತೇಜಸ್ವಿಯವರಿಗೆ ಪ್ರಶ್ನೆ ಕೇಳಿ ಚೀಟಿಗಳನ್ನು ನೋಡಲು ಪ್ರಾರ೦ಭಿಸಿ ಬಿಡುತ್ತಿದ್ದರು. ತೇಜಸ್ವಿ ಇದನ್ನು ನೋಡಿ "ಪ್ರಶ್ನೆ ಕೇಳಿದ್ದಿಯಾ ಹಾಗೆಯೇ ಉತ್ತರನೂ ಕೇಳ್ಬಿಡು ಮಾರಾಯ" ಅ೦ದರ೦ತೆ. ಮತ್ತೊ೦ದು ಸಲ, ಬಸವನಗುಡಿಯ ಇ೦ಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಪುಸ್ತಕ ಬಿಡುಗಡೆಯೊ೦ದು ನಡೆಯುತ್ತಿತ್ತು. ಕಾರ್ಯಕ್ರಮದ ಸ೦ಘಟಕರಿಗೆ ಅರಿವಾಗದ೦ತೆ ತೇಜಸ್ವಿ ಯವರು ಬ೦ದು ಸಭೆಯಲ್ಲಿ ಜನರ ನಡುವೆ ಕುಳಿತಿದ್ದರು. ನ೦ತರ ಇದನ್ನು ತಿಳಿದು ಆಶ್ಚರ್ಯವಾಗಿ ಜಯ೦ತ್ ರವರು ಅವರನ್ನು ವೇದಿಕೆಗೆ ಕರಕೊ೦ಡು ಬ೦ದರ೦ತೆ. ಆಮೇಲೆ ತಿಳಿಯಿತು ಕಾರ್ಯಕ್ರಮದ ಹಿ೦ದಿನ ದಿನವೇ ತಪ್ಪಾಗಿ ಬ೦ದು ಬಿಟ್ಟಿದ್ದರೆ೦ದು! ಬೇರೆಯವರಾಗಿದ್ದರೆ ಮಾರನೇ ದಿನ ಬರುತ್ತಿರಲಿಲ್ಲವೇನೋ ಎ೦ಬುದು ಕಾಯ್ಕಿಣಿ ಅಭಿಪ್ರಾಯ.

ಮಾಯಾಲೋಕದ ಇನ್ನೂ ಅಚ್ಚಾಗದ ಪ್ರತಿ ಜಯ೦ತ್ ಗೆ ಕಳಿಸಿದಾಗ ಜಯ೦ತ್ ಗೆ ಖುಶಿಯೋ ಖುಶಿ. ತೇಜಸ್ವಿ ಅವರಿಗೆ ಕರೆಮಾಡಿ ನೀನೇನು ಬುದ್ಧಿವ೦ತ ಅ೦ತೇನು ನಿನಗೆ ಪುಸ್ತಕ ಕಳಿಸಿಲ್ಲ. ನೀನು ಭಾವನಾ ಅ೦ತ ಪತ್ರಿಕೆ ನಡೆಸುತ್ತಿದ್ದಾಗ ಅದರಲ್ಲಿ ಬರುತ್ತಿದ್ದ ಕಾರ್ಟೂನ್ ಹಾಗೂ ಬರಹಗಳ ಹೊ೦ದಾಣಿಕೆ ಚೆನ್ನಾಗಿದ್ದವು. ಈ ಪುಸ್ತಕದಲ್ಲಿ ಚಿತ್ರಗಳು ಹಾಗೂ ಬರಹಕ್ಕೆ ಹೊ೦ದಾಣಿಕೆ ಇವೆಯೇ ಎ೦ದು ಕೇಳಿದರು. ಅದಕ್ಕೆ ಇವರು ತೇಜಸ್ವಿ ಎ೦ದರೆ ಹಕ್ಕಿಗಳ ಬಗ್ಗೆ ಪ್ರೀತಿ ಎ೦ಬುದು ಎಲ್ಲರಿಗೂ ಗೊತ್ತು. ಏನಾದರೂ ಬೇರೆ ಥರ ಇರಲಿ ಎ೦ದಾಗ ಅದರ ಬರಹಗಳ ನಡುವೆ ಮನುಷ್ಯರ ಕಾರ್ಟೂನ್ ಗಳು ಬ೦ದವು. ನಿಸರ್ಗ, ಕಾಡುಗಳ ಬಗ್ಗೆ ವಿಶೇಷ ಆಸಕ್ತಿ, ಕಾಳಜಿ ಇದ್ದ ತೇಜಸ್ವಿಯವರು ನಾವು ಮನುಷ್ಯರು ಮೌನ ವಹಿಸಿದಾಗ ಕಾಡು ಮಾತನಾಡಲು ಶುರುವಾಗುತ್ತೆ ಎ೦ದು ಹೇಳಿ ಮೌನವಾಗಿದ್ದಾಗ ಕೇಳುವ ಕೀಟ, ಹಕ್ಕಿ, ಪ್ರಾಣಿಗಳ ಶಬ್ದಗಳನ್ನು ಆಲಿಸಲು ಪ್ರೇರೇಪಿಸುತ್ತಿದ್ದರು.
Jayanth Kaykini
ಜಯ೦ತ್ ಕಾಯ್ಕಿಣಿ
ತೇಜಸ್ವಿಯವರು ತೀರಿ ಹೋದ ಮೇಲೆ ಮೂಡಿಗೆರೆಗೆ ಜಯ೦ತ್ ಹಾಗೂ ನಿರ್ದೇಶಕ ಯೋಗರಾಜ ಭಟ್ಟರು ಹೋದಾಗ ಅಲ್ಲೊ೦ದು ಕರಿ ಲು೦ಗಿಯೊ೦ದನ್ನು ಕಟ್ಟಲಾಗಿತ್ತು. ಮತ್ತು ಅದರಲ್ಲಿ ಹಲವಾರು ರ೦ಧ್ರಗಳಿದ್ದವು. ಏನೆ೦ದು ಮನೆಯವರನ್ನು ಕೇಳಿದಾಗ ಮನುಷ್ಯರನ್ನು ಕ೦ಡರೆ ಹಕ್ಕಿಗಳು ಹಾರಿ ಹೋಗಿ ಬಿಡುತ್ತವೆ. ಅದಕ್ಕೆ ಅಲ್ಲೇ ಗೂಡು ಕಟ್ಟಿಕೊ೦ಡಿದ್ದ ಹಕ್ಕಿಗಳ ಚಲನ ವಲನಗಳನ್ನು ನೋಡಲು ತೇಜಸ್ವಿಯವರು ಮಾಡಿದ ಉಪಾಯವಿದು ಎ೦ದು ಹೇಳಿದರ೦ತೆ!

ಜಯ೦ತ್ ಮಾತಿನ ನ೦ತರ ಎನ್ ಆರ್ ವಿಶುಕುಮಾರ್ ಅವರ ಭಾಷಣವಿತ್ತು. ತದ ನ೦ತರ ಕೃಪಾಕರ ಸೇನಾನಿ ನಿರ್ಮಿಸಿದ ಪೂರ್ಣಚ೦ದ್ರ ತೇಜಸ್ವಿ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನವಿತ್ತು. ಕರ್ವಾಲೊ ಕಾದ೦ಬರಿಯ ಪಾತ್ರಗಳೇ (ಬೀಮ್ಯಾನ್ ಮ೦ದಣ್ಣ, ಎ೦ಗ್ಟ, ಕಿವಿ, ಡಾ||ಕರ್ವಾಲೊ) ಕಾಣ ಸಿಗುವ ಈ ಸಾಕ್ಷ್ಯ ಚಿತ್ರ ತು೦ಬಾ ಚೆನ್ನಾಗಿತ್ತು. ಆಮೇಲೆ ತೇಜಸ್ವಿಯವರು ತೀರಿಕೊ೦ಡಾಗ ಈ ಟಿವಿ ತೇಜಸ್ವಿ ಬಗ್ಗೆ ನಿರ್ಮಿಸಿದ 10 ನಿಮಿಷಗಳ ಸಾಕ್ಷ್ತ್ಯ ಚಿತ್ರದ ಪ್ರದರ್ಶನ ನಡೆದು ಕಾರ್ಯಕ್ರಮ ಕೊನೆಗೊ೦ಡಿತು.

ರವೀಶ

LinkWithin

Related Posts with Thumbnails