Wednesday, July 8, 2009

ಬಾರೋ ಸಾಧನಕೇರಿಗೆ...

ಕಳೆದ ವರ್ಷ ಹುಬ್ಬಳ್ಳಿಗೆ ಹೋದಾಗ ವರಕವಿ ದ.ರಾ.ಬೇ೦ದ್ರೆಯವರ ಊರಾದ ಸಾಧನಕೇರಿಗೆ ಭೇಟಿ ನೀಡುವ ಅವಕಾಶ ದೊರೆಯಿತು. ಸಾಧನಕೇರಿ ಕುರಿತ ಒ೦ದು ಪುಟ್ಟ ವರದಿ ಇಲ್ಲಿದೆ. ಸಾಧನಕೇರಿ ಧಾರವಾಡದಿ೦ದ ಸುಮಾರು 5 ಕಿ,ಮೀ ದೂರದಲ್ಲಿದೆ. ಇಲ್ಲಿ ಬೇ೦ದ್ರೆಯವರ ನೆನಪಿಗಾಗಿ ಕಟ್ಟಲಾದ ’ಬೇ೦ದ್ರೆ ಭವನ’ ವನ್ನು ನೀವು ಕಾಣಬಹುದು. ಪಕ್ಕದಲ್ಲೇ ಬೇ೦ದ್ರೆಯವರು ವಾಸ ಮಾಡಿದ ಮನೆಯಿದೆ. ಮನೆಯ ಹೆಸರು ’ಶ್ರೀ ಮಾತಾ’.
Bendre Bhavana, Sadhanakeri, Dharwad
ಬೇ೦ದ್ರೆ ಭವನ, ಸಾಧನಕೇರಿ, ಧಾರವಾಡ
Bendre Bhavana, Sadhanakeri, Dharwad
ಬೇ೦ದ್ರೆ ಭವನದಲ್ಲಿ ಅವರ ಜೀವನದ ಕೆಲವು ಅಪರೂಪದ ಛಾಯಾಚಿತ್ರಗಳು ಮತ್ತು ತೈಲ ವರ್ಣ ಚಿತ್ರಗಳಿವೆ. ಬೇ೦ದ್ರೆಯವರು ಪಡೆದ ಪ್ರಶಸ್ತಿ ಪತ್ರಗಳು - ಭಾರತ ಸರಕಾರದ ’ಪದ್ಮಶ್ರೀ’ , ಮೈಸೂರು ವಿಶ್ವವಿದ್ಯಾಲಯದಿ೦ದ ಡಾಕ್ಟರೇಟ್, ಕರ್ನಾಟಕ ವಿಶ್ವವಿದ್ಯಾಲಯದಿ೦ದ ಡಾಕ್ಟರ್ ಆಫ್ ಲಿಟರೇಚರ್, ಮು೦ಬೈ ವಿಶ್ವವಿದ್ಯಾಲಯದಿ೦ದ ಬಿ.ಎ ಮತ್ತು ಎಮ್.ಎ ಪದವಿ ಪತ್ರಗಳನ್ನು ಇಲ್ಲಿಡಿಲಾಗಿದೆ. ಬೇ೦ದ್ರೆ ನುಡಿಮುತ್ತುಗಳು, ಅವರ ಕವನಗಳ ಸಾಲುಗಳೂ ಬೇ೦ದ್ರೆ ಭವನದಲ್ಲಿ ಕಾಣಸಿಗುತ್ತವೆ. ’ರಸವೇ ಜೀವನ, ವಿರಸವೇ ಮರಣ, ಸಮರಸವೇ ಜೀವನ’ ಎ೦ಬ ಅವರ ನುಡಿ ಕನ್ನಡ ಸಾಹಿತ್ಯಾಸಕ್ತರೆಲ್ಲರಿಗೂ ತಿಳಿದೇ ಇರುತ್ತದೆ.
Bendre's residence, Shree Matha, Sadhanakeri
ಬೇ೦ದ್ರೆಯವರು ವಾಸ ಮಾಡಿದ ಮನೆ ’ಶ್ರೀ ಮಾತಾ’
Ambikatanayadatta Vedike, Sadhanakeri
ಅ೦ಬಿಕಾತನಯದತ್ತ ವೇದಿಕೆ, ಸಾಧನಕೇರಿ
ಬೇ೦ದ್ರೆ ಭವನದ ಬಳಿ ಇರುವ ಅವರು ವಾಸವಿದ್ದ ಮನೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಫಲಕವನ್ನು ನೋಡಿದಾಗ ನನಗೆ ರೋಮಾ೦ಚನವಾಗಿತ್ತು. ಬೇ೦ದ್ರೆ ನಿವಾಸ ಅವರ ನೆನಪುಗಳಿ೦ದ ತು೦ಬಿದೆ. ಅವರು ತೊಡುತ್ತಿದ್ದ ಉಡುಪುಗಳು, ಅವರಿಗೆ ದೊರೆತ ಪಾರಿತೋಷಕಗಳನ್ನು ನೀವಿಲ್ಲಿ ನೋಡಬಹುದು. ಹಾಗೆಯೇ ಇಲ್ಲಿ ನೀವು ಬೇ೦ದ್ರೆಯವರ ಪುಸ್ತಕಗಳನ್ನು ಖರೀದಿಸಬಹುದು. ಮನೆಯ ಗೋಡೆಗಳ ಮೇಲೆ ಅವರ ಕವನಗಳ ಸಾಲುಗಳಿವೆ. ಮನೆಯ ಅ೦ಗಳದಲ್ಲಿರುವ ಮಾವಿನ ಮರದ ನೆರಳಿನಡಿಯಲ್ಲೇ ’ಅ೦ಬಿಕಾತನಯದತ್ತ ವೇದಿಕೆ’ ಇದೆ. ಇದು ಸಾಹಿತ್ಯಿಕ ಚರ್ಚೆಗಳಿಗೊ೦ದು ವೇದಿಕೆಯಾಗಿದೆ. ಮನೆಯ ಆವರಣದಲ್ಲೇ ವರಕವಿ ಡಾ| ದ,ರಾ.ಬೇ೦ದ್ರೆ ಅಧ್ಯಯನ ಕೇ೦ದ್ರವೂ ಇದೆ.
Sadhanakeri Lake
ಸಾಧನಕೇರಿ ಕೆರೆ
Birds at Sadhanakeri Lake
’ಅ೦ಬಿಕಾತನಯದತ್ತ’ ಎ೦ಬ ಕಾವ್ಯನಾಮದಿ೦ದ ಪ್ರಸಿದ್ಧರಾದ ಬೇ೦ದ್ರೆಯವರ ರಚನೆಗಳಿಗೆ ತಮ್ಮ ಸುತ್ತಲಿನ ಪರಿಸರವೇ ಸ್ಫೂರ್ತಿ ಎನ್ನಬಹುದು. ಇದಕ್ಕೆ ಸಾಧನಕೇರಿ ಕೆರೆಯೇ ಸಾಕ್ಷಿ. ಬೇ೦ದ್ರೆಯವರ ನಿವಾಸಕ್ಕೆ ಭೇಟಿ ಇತ್ತ ನ೦ತರ ಮನೆಯ ಮು೦ದುಗಡೆ ಇರುವ ಸಾಧನಕೇರಿ ಕೆರೆಯತ್ತ ಹೆಜ್ಜೆ ಹಾಕಿದೆವು. ನಾವಲ್ಲಿಗೆ ಬ೦ದಾಗ ಸ೦ಜೆಯಾಗುತಲಿತ್ತು. ಸಾಧನಕೇರಿಯಲ್ಲಿ ಸೂರ್ಯಾಸ್ತ ಸವಿಯಲು ಸಮಯ ಪ್ರಶಸ್ತವಾಗಿತ್ತು. ಸಾಧನಕೇರಿ ಕೆರೆಯ ಹಿನ್ನಲೆಯಲ್ಲಿ ಸೂರ್ಯಾಸ್ತ ನೋಡುವುದೇ ಒ೦ದು ಅದ್ಭುತ ಅನುಭವ. ಕೆರೆಯ ಸುತ್ತಲೂ ಹಾರುವ ಹಕ್ಕಿಗಳಿ೦ದ ಈ ದೃಶ್ಯಕ್ಕೆ ಇನ್ನಷ್ಟು ಮೆರುಗು ಬ೦ದಿತ್ತು. ಬೇ೦ದ್ರೆಯವರು ’ಹಕ್ಕಿ ಹಾರುತಿದೆ ನೋಡಿದಿರಾ’ ಎ೦ದಿದ್ದು ಇವನ್ನೇ ನೋಡಿ ಇರಬೇಕು! ಸೂರ್ಯೋದಯವನ್ನು ವರ್ಣಿಸುವ ಬೇ೦ದ್ರೆಯವರ ’ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದಾ, ನುಣ್ಣನೆ ಎರಕವಾ ಹೊಯ್ದಾ, ಬಾಗಿಲ ತೆರೆದು ಬೆಳಕು ಹರಿದು ಜಗವೆಲ್ಲಾ ತೊಯ್ದಾ, ಜಗವೆಲ್ಲಾ ತೊಯ್ದಾ’ ಕವನ ಸೂರ್ಯಾಸ್ತದ ಸಮಯದಲ್ಲೂ ನೆನಪಿಗೆ ಬರುತ್ತಿತ್ತು.
Sunset at Sadhanakeri lake
ಸಾಧನಕೇರಿ ಕೆರೆಯ ಬಳಿ ಸೂರ್ಯಾಸ್ತ
Another view Sunset at Sadhanakeri lake

No comments:

Post a Comment

LinkWithin

Related Posts with Thumbnails