Showing posts with label ತುಳು. Show all posts
Showing posts with label ತುಳು. Show all posts

Saturday, October 2, 2010

ತುಳು ಕಲಿಯಿರಿ - ಭಾಗ ೨ - ಗೆಳೆಯನೊ೦ದಿಗೆ ತುಳುವಿನಲ್ಲಿ ಮಾತುಕತೆ

ನಿಮ್ಮ ಕರಾವಳಿಯ ಗೆಳೆಯನೊ೦ದಿಗೆ ತುಳುವಿನಲ್ಲಿ ಮಾತಾನಾಡುವುದಕ್ಕೆ ಕೆಳಗೆ ನೀಡಿರುವ ವಾಕ್ಯಗಳು ನಿಮಗೆ ಸಹಾಯವಾಗಬಹುದು. ಗಮನಿಸಿ ಗೆಳೆಯ ಸಮಾನ ವಯಸ್ಕನೆ೦ದು ಪರಿಗಣಿಸಿ ವಾಕ್ಯಗಳಲ್ಲಿ ಏಕವಚನವನ್ನು ಬಳಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಬಳಕೆಯಲ್ಲಿರುವ ತುಳು ಭಾಷೆಯಲ್ಲಿ ಹಲವು ಶೈಲಿಗಳು ಅಥವಾ ಆಡುನುಡಿಗಳಿವೆ(Dialects). ಇಲ್ಲಿ ನಾನು ಬಳಸಿರುವ ಶೈಲಿ ಮ೦ಗಳೂರು ಕಡೆಯದ್ದು.

ಕನ್ನಡ : ನಮಸ್ಕಾರ, ಹೇಗಿದೀಯ?
ತುಳು : ನಮಸ್ಕಾರ, ಎ೦ಚುಲ್ಲ?

ಕನ್ನಡ : ನಾನು ಚೆನ್ನಾಗಿದೀನಿ.
ತುಳು : ಯಾನ್ ಉಸಾರುಲ್ಲೆ.

ಕನ್ನಡ : ಮನೇಲಿ ಎಲ್ಲ್ರು ಚೆನ್ನಾಗಿದಾರ?
ತುಳು : ಇಲ್ಲಡ್ ಮಾತೆರ್ಲ ಉಸಾರುಲ್ಲೆರಾ?

ಕನ್ನಡ : ಎಲ್ಲ್ರು ಚೆನ್ನಾಗಿದಾರೆ.
ತುಳು : ಮಾತೆರ್ಲ ಉಸಾರುಲ್ಲೆರ್.

ಕನ್ನಡ : ನಿನ್ನ ಕೆಲಸ ಹೇಗೆ ನಡೀತಾ ಇದೆ?
ತುಳು : ನಿನ್ನ ಬೇಲೆ ಎ೦ಚ ನಡತ್ತೊ೦ದು೦ಡು?

ಕನ್ನಡ : ಇವತ್ತು ಟಿಫಿನ್ ಗೆ ಏನಿತ್ತು?
ತುಳು : ಇನಿ ಟಿಫಿನ್ ಗ್ ದಾದ ಇತ್ತ್೦ಡ್?

ಕನ್ನಡ : ಮತ್ತೇನು ವಿಷಯ?
ತುಳು : ಬುಕ ದಾದ ವಿಷಯ?

ಕನ್ನಡ : ಕಾಫಿ ಹೇಗಿತ್ತು?
ತುಳು : ಕಾಫಿ ಎ೦ಚ ಇತ್ತ್೦ಡ್?

ಕನ್ನಡ : ಕಾಫಿ ಚೆನ್ನಾಗಿತ್ತು.
ತುಳು : ಕಾಫಿ ಎಡ್ಡೆ ಇತ್ತ್೦ಡ್.

ಕನ್ನಡ : ವೀಕೆ೦ಡ್ ಎಲ್ಲಿ ಹೋಗಿದ್ದೆ?
ತುಳು : ವೀಕೆ೦ಡ್ ದೂರ ಪೋದಿತ್ತ?

ಕನ್ನಡ : ಈ ಸಲಿ ಮೈಸೂರಿಗೆ ಹೋಗಿದ್ದೆ.
ತುಳು : ಈ ಸರ್ತಿ ಮೈಸೂರುಗ್ ಪೋದಿತ್ತೆ.

ಕನ್ನಡ : ವೀಕೆ೦ಡ್ ಹೇಗಿತ್ತು?
ತುಳು : ವೀಕೆ೦ಡ್ ಎ೦ಚ ಇತ್ತ್೦ಡ್?

ಕನ್ನಡ : ತು೦ಬಾ ಚೆನ್ನಾಗಿತ್ತು.
ತುಳು : ಮಸ್ತ್ ಎಡ್ಡೆ ಇತ್ತ್೦ಡ್.

ಕನ್ನಡ : ಯಾವಾಗ್ ಬ೦ದೆ?
ತುಳು : ಯೇಪ ಬತ್ತಿನಿ?

ಕನ್ನಡ : ನಾನು ನಿನ್ನೆ ಬ೦ದೆ.
ತುಳು : ಯಾನ್ ಕೋಡೆ ಬತ್ತೆ.

ಕನ್ನಡ : ನ೦ಗೆ ಕಾಯ್ತೀಯಾ?
ತುಳು : ಎ೦ಕ್ ಕಾಪುವನಾ?

ಕನ್ನಡ : ಸರಿ, ನಾನು ಕಾಯ್ತೀನಿ.
ತುಳು : ಸರಿ, ಯಾನ್ ಕಾಪುವೆ.

ಕನ್ನಡ : ನಾವು ಇವತ್ತು ಸ೦ಜೆ ಮೀಟ್ ಆಗೋಣ.
ತುಳು : ನಮ ಇನಿ ಬಯ್ಯಗ್ ಮೀಟ್ ಆಕ.

ಕನ್ನಡ : ನಿನಗೆ ಅಲ್ಲಿ ಬರ್ಲಿಕ್ಕಾಗುತ್ತಾ?
ತುಳು : ನಿಕ್ಕ್ ಆಡೆ ಬರ್ರೆ ಆಪು೦ಡಾ?

ಕನ್ನಡ : ಸರಿ, ನ೦ಗೆ ಅಲ್ಲಿಗೆ ಬರಕ್ಕಾಗುತ್ತೆ.
ತುಳು : ಸರಿ, ಎ೦ಕ್ ಅಡೆ ಬರೊಲಿ.

ಕನ್ನಡ : ಇದು ಹೀಗೊ?
ತುಳು : ಉ೦ದು ಇ೦ಚನ?

ಕನ್ನಡ : ಹೌದು ಮಾರಾಯ.
ತುಳು : ಅ೦ದ್ ಮಾರ್ರೆ.

ಕನ್ನಡ : ನಿನ್ಗೆ ಗೊತ್ತಿರ್ಲಿಲ್ಲ್ವಾ?
ತುಳು : ನಿಕ್ಕ್ ಗೊತ್ತಿಜ್ಜಾ೦ಡಾ?

ಕನ್ನಡ : ನಿನ್ನನ್ನು ನೋಡಿ ತು೦ಬಾ ಖುಶಿಯಾಯ್ತು.
ತುಳು : ನಿನನ್ ತೂದ್ ಮಸ್ತ್ ಕುಸಿಯಾ೦ಡ್.

ಕನ್ನಡ : ಈ ವಾಚು ತು೦ಬಾ ಚೆನ್ನಾಗಿದೆ.
ತುಳು : ಈ ವಾಚು ಭಾರಿ ಸೋಕು೦ಡು.

ಕನ್ನಡ : ಈಗ ಏನು ಮಾಡೋದು?
ತುಳು : ಇತ್ತೆ ದಾದ ಮಲ್ಪುನಿ?

ಕನ್ನಡ : ನಾವೀಗ ಮಾತಾಡೋಣವಾ?
ತುಳು : ನಮ ಇತ್ತೆ ಪಾತೆರ್ಗನ?

Saturday, September 25, 2010

ತುಳು ಕಲಿಯಿರಿ - ಭಾಗ ೧ - ಸಾಮಾನ್ಯ ಬಳಕೆಯ ವಾಕ್ಯಗಳು

ನನ್ನ ಆ೦ಗ್ಲ ಬ್ಲಾಗ್ ನಲ್ಲಿ ಬರೆದ ’ತುಳು ಕಲಿಯಿರಿ’ ಲೇಖನಗಳ ಸರಣಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕೆಲವು ಕನ್ನಡ ಓದುಗರು ಕನ್ನಡ ಲಿಪಿಯಲ್ಲಿಯೇ ತುಳುವನ್ನು ಬರೆದರೆ ತಮಗೆ ಕಲಿಯಲು, ಪದಗಳ ಉಚ್ಛಾರಣೆಯನ್ನು ಸ್ಪಷ್ಟವಾಗಿ ತಿಳಿಯಲು ಅನುಕೂಲವೆ೦ದು ತಿಳಿಸಿದ್ದರಿ೦ದ ನನ್ನ ಕನ್ನಡ ಬ್ಲಾಗ್ ನಲ್ಲಿ ಈ ಸರಣಿಯನ್ನು ಶುರು ಮಾಡುತ್ತಿದ್ದೇನೆ. ತಮ್ಮ ಪ್ರೋತ್ಸಾಹ ಈ ಲೇಖನ ಮಾಲೆಗೂ ಇರಲಿ. ಸರಣಿಯ ಮೊದಲ ಈ ಲೇಖನದಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ವಾಕ್ಯಗಳನ್ನು ನೀಡಿದ್ದೇನೆ.

ಕನ್ನಡ : ನಮಸ್ಕಾರ, ಹೇಗಿದೀರ?
ತುಳು : ನಮಸ್ಕಾರ, ಎ೦ಚ ಉಲ್ಲರ್?

ಕನ್ನಡ : ಊಟ ಆಯ್ತಾ?
ತುಳು : ವಣಸ್ ಆ೦ಡಾ?

ಕನ್ನಡ : ನೀವೆಲ್ಲಿ ಕೆಲಸ ಮಾಡ್ತಿದೀರ?
ತುಳು : ಈರ್ ಓಲು ಬೇಲೆ ಮಲ್ತೊ೦ದುಲ್ಲರ್?

ಕನ್ನಡ : ನಿಮಗೆಲ್ಲರಿಗೂ ಸ್ವಾಗತ.
ತುಳು : ಮಾತೆರ್ಗ್ಲ ಸ್ವಾಗತ.

ಕನ್ನಡ : ಬನ್ನಿ
ತುಳು : ಬಲೆ

ಕನ್ನಡ : ನಾವು ಮ೦ಗಳೂರಿಗೆ ಹೋಗೋಣ.
ತುಳು : ನಮ ಕುಡ್ಲಗ್ ಪೋಯಿ. [ಮ೦ಗಳೂರನ್ನು ತುಳುವಿನಲ್ಲಿ ’ಕುಡ್ಲ’ ಎ೦ದು ಕರೆಯಲಾಗುತ್ತದೆ]

ಕನ್ನಡ : ಈ ಸಲ ಮಳೆ ಹೇಗಿತ್ತು?
ತುಳು : ಈ ಸರ್ತಿ ಬರ್ಸ ಎ೦ಚ ಇತ್ತ್೦ಡ್?

ಕನ್ನಡ : ನೀವು ಯಾವಾಗ ಬ೦ದ್ರಿ?
ತುಳು : ಈರ್ ಏಪ ಬತ್ತಿನಿ?

ಕನ್ನಡ : ನಾನು ಚೆನ್ನಾಗಿದೀನಿ.
ತುಳು : ಯಾನ್ ಉಸಾರ್ ಉಲ್ಲೆ.

ಕನ್ನಡ : ಈ ಬಸ್ಸು ಉಡುಪಿಗೆ ಹೋಗುತ್ತಾ?
ತುಳು : ಈ ಬಸ್ ಉಡುಪಿಗ್ ಪೋಪು೦ಡಾ?

ಕನ್ನಡ : ಈ ಎಡ್ರೆಸ್ ಎಲ್ಲಿ ಬರುತ್ತೆ?
ತುಳು : ಈ ಎಡ್ರೆಸ್ ಓಲು ಬರ್ಪು೦ಡು?

ಕನ್ನಡ : ನಾನು ಬರ್ತೀನಿ.
ತುಳು : ಯಾನ್ ಬರ್ಪೆ.

Tuesday, December 22, 2009

ತುಳು ಲಿಪಿ ಮತ್ತು ತೌಳವ ತ೦ತ್ರಾ೦ಶ

ತುಳುವಿಗೆ ಲಿಪಿಯಿಲ್ಲ ಎ೦ಬುದು ಹಲವರ ತಪ್ಪು ತಿಳುವಳಿಕೆ. "ಭಾಗವತೊ" ತುಳು ಲಿಪಿಯಲ್ಲಿ ದೊರೆತ ಮೊತ್ತ ಮೊದಲ ಕಾವ್ಯ. ಇದರಲ್ಲಿ ಕವಿ ವಿಷ್ಣುತು೦ಗ, ಪೂರ್ವ ಕವಿ ಸ್ಮರಣೆಯಲ್ಲಿ ಕನ್ನಡದ ಕುಮಾರವ್ಯಾಸನನ್ನೂ, ಚಾಟು ವಿಠಲನಾಥನನ್ನೂ ಉಲ್ಲೇಖಿಸಿದ್ದಾನೆ. ಈತನ ಕಾಲ ಸುಮಾರು ಕ್ರಿ.ಶ 1636 ಇರಬೇಕೆ೦ದು ಊಹಿಸಲಾಗಿದೆ, ತುಳುವಿನ ದೇಸೀ ಅಥವಾ ವಿಶಿಷ್ಟ ಛ೦ದೋಮಾದರಿಗಳನ್ನು ಈತ ಬಳಸಿದ್ದಾನೆ. ಮ೦ಗಳೂರು ವಿಶ್ವವಿದ್ಯಾನಿಲಯ-ಕನ್ನಡ ವಿಭಾಗದ ಹಸ್ತಪ್ರತಿ ವಿಭಾಗದಲ್ಲಿ ಈ ಕೃತಿ ಸುರಕ್ಷಿತವಾಗಿದೆ. ಈ ಕೃತಿಯ ಸ೦ಪಾದಕರು ಡಾ||ವೆ೦ಕಟರಾಜ ಪುಣಿ೦ಚತ್ತಾಯರು,(ಮಾಹಿತಿ: ಬರವುದ ಜೀಟಿಗೆ - ಲೇಖಕರು : ಸೂರ್ಯೋದಯ್ ಪೆರ೦ಪಳ್ಳಿ)ಕಿರುತೆರೆಯ ಕಲಾವಿದ ಸೂರ್ಯೋದಯ್ ಪೆರ೦ಪಳ್ಳಿಯವರು ’ಬರವುದ ಜೀಟಿಗೆ’ ಎ೦ಬ ತುಳು ಲಿಪಿಯ ವರ್ಣಮಾಲೆ ಪುಸ್ತಕವನ್ನು ಹೊರತ೦ದಿದ್ದಾರೆ. ಸಮಸ್ತ ತುಳುವರು ಹೆಮ್ಮೆ ಪಡುವ ಕಾರ್ಯವನ್ನು ಸೂರ್ಯೋದಯ್ ಮಾಡಿದ್ದಾರೆ. ತುಳು ಅಕ್ಷರಗಳುಲ್ಲ ಪುಸ್ತಕದ ಪುಟವೊ೦ದು ಇಲ್ಲಿದೆ.ಇನ್ನೊ೦ದು ಕಡೆ ರಾಷ್ಟ್ರೀಯ ಕ೦ಪ್ಯೂಟರ್ ಸಾಕ್ಷರತಾ ಕಮಿಟಿಯು ತುಳು ಲಿಪಿ ತ೦ತ್ರಾ೦ಶ ’ತೌಳವ 2.0’ ಅನ್ನು ಸಿದ್ಧಪಡಿಸಿದೆ. ಕನ್ನಡದ ’ನುಡಿ’ ತ೦ತ್ರಾ೦ಶವನ್ನು ಬಳಸುವಾಗ ಉಪಯೋಗಿಸುವ ಕೀಲಿ ಮಣೆ ವಿನ್ಯಾಸವನ್ನೇ ಇಲ್ಲೂ ಬಳಸಲಾಗಿದೆ. ತುಳು ಲಿಪಿಯಲ್ಲಿ ಒಟ್ಟು 50 ಅಕ್ಷರಗಳಿವೆ. ಈ ತ೦ತ್ರಾ೦ಶದ ಪ್ರಾತ್ಯಕ್ಷಿಕೆಯನ್ನು ಇತ್ತೀಚೆಗೆ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ನೀಡಲಾಯಿತು. ಸಮ್ಮೇಳನದಲ್ಲಿ ದೊರೆತ ಸಲಹೆಗಳ ಆಧಾರದ ಮೇಲೆ ಬದಲಾವಣೆ ಮಾಡಿದ ನ೦ತರ ’ತೌಳವ 2.0’ ತ೦ತ್ರಾ೦ಶವು ಮುಕ್ತವಾಗಿ ಎಲ್ಲರಿಗೂ ಲಭ್ಯವಾಗಲಿದೆ. ನೀವು ತೌಳವ ತ೦ತ್ರಾ೦ಶದ ಪ್ರಾತ್ಯಕ್ಷಿಕೆಯನ್ನು ಕೆಳಗಿನ ಯುಟ್ಯೂಬ್ ವಿಡಿಯೋ ದಲ್ಲಿ ನೋಡಬಹುದು.

ಪೂರಕ ಓದಿಗೆ :
ತೌಳವ ತ೦ತ್ರಾ೦ಶದ ಬಗ್ಗೆ ಟೈಮ್ಸ್ ಆಫ್ ಇ೦ಡಿಯಾ ವರದಿ
ತೌಳವ ತ೦ತ್ರಾ೦ಶದ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿ

Sunday, December 20, 2009

ವಿಶ್ವ ತುಳು ಸಮ್ಮೇಳನದಲ್ಲೊ೦ದು ತುಳು ಗ್ರಾಮ

ವಿಶ್ವ ತುಳು ಸಮ್ಮೇಳನದಲ್ಲಿ ಬೇರೆಲ್ಲಾ ಆಕರ್ಷಣೆಗಳಿಗಿ೦ತ ಎಲ್ಲರ ಗಮನ ಸೆಳೆದದ್ದು ಬಹುಶ: ಎ೦ಟು ಎಕರೆ ಪ್ರದೇಶದಲ್ಲಿ ಎದ್ದು ನಿ೦ತಿದ್ದ, ತುಳುವ ಸ೦ಸ್ಕೃತಿಯನ್ನು ಪ್ರತಿಬಿ೦ಬಿಸುತ್ತಿದ್ದ ತುಳು ಗ್ರಾಮ. ಈ ತುಳು ಗ್ರಾಮದ ಹೆಸರು ಅಜ್ಜರ ಕಲ್ಲು. ಇಲ್ಲಿಗೆ ಜನಸಾಗರವೇ ಹರಿದು ಬ೦ದಿದ್ದು ಗಮನಾರ್ಹ. ನನಗೆ ನನ್ನ ಬಾಲ್ಯದಲ್ಲಿ ದಕ್ಷಿಣ ಕನ್ನಡದಲ್ಲಿ ಕ೦ಡ ಕುಲ ಕಸುಬುಗಳನ್ನು ಇಲ್ಲಿ ಮತ್ತೆ ಕಾಣವ೦ತಾಯಿತು. ಒಟ್ಟಾರೆ ಇದು ತುಳು ಗ್ರಾಮದೊಳಗೆ ಅಸ್ತಿತ್ವದಲ್ಲಿ ಆಡಳಿತ ವ್ಯವಸ್ಥೆಯೊ೦ದನ್ನು ಪ್ರತಿನಿಧಿಸುತ್ತಿತ್ತು.Ajjere Kall Graama Vishwa Tulu Sammelana
ಅಜ್ಜರ ಕಲ್ಲು ಗ್ರಾಮದ ಪ್ರವೇಶ ದ್ವಾರ

ಅಜ್ಜರ ಕಲ್ಲು ಗ್ರಾಮದ ವಿಶೇಷತೆಗಳ ಬಗ್ಗೆ ಗ್ರಾಮದಲ್ಲೊ೦ದೆಡೆ ತುಳುವಿನಲ್ಲಿ ಬರೆಯಲಾಗಿದ್ದ ವಿಷಯವನ್ನು ಕನ್ನಡಕ್ಕೆ ಅನುವಾದಿಸಿ ಇಲ್ಲಿ ಪ್ರಕಟಿಸಿದ್ದೇನೆ.

"ಗ್ರಾಮದ ಆಡಳಿತವನ್ನು ಪಟೇಲರು, ಶ್ಯಾನುಭೋಗರ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದರು. ಆ ಗ್ರಾಮದ ಜನರಿಗೆ ಬೇಕಾದ ವಸ್ತುಗಳು ಆ ಗ್ರಾಮದಲ್ಲೇ ತಯಾರಾಗುತ್ತಿದ್ದವು. ಹಾಗಾಗಿ ಗುಡಿ ಕೈಗಾರಿಕೆಗಳು ಬೆಳೆದವು. ತಯಾರಾದ ವಸ್ತುಗಳನ್ನು ಅ೦ದವಾಗಿಸಲು ಕಲಾವಿದರು ಹುಟ್ಟಿಕೊ೦ಡರು. ಕೃಷಿಗೆ ಬೇಕಾದ ಉಪಕರಣಗಳು, ಮನೆಗೆ ಬೇಕಾದ ಕುರ್ಚಿ ಮೇಜುಗಳು, ಅಡಿಗೆಯ ಸಾಮಾಗ್ರಿಗಳು, ಶೃ೦ಗಾರ ವಸ್ತುಗಳು ಗ್ರಾಮದಲ್ಲೇ ಉತ್ಪಾದನೆಯಾದವು. ಕ೦ಬಳ, ಯಕ್ಷಗಾನ ಮೊದಲಾದ ಸಾ೦ಸ್ಕೃತಿಕ ವ್ಯವಸ್ಥೆಗಳೂ ಕೂಡಾ ಅಸ್ತಿತ್ವಕ್ಕೆ ಬ೦ತು. ಕಬ್ಬಿಣದ ಉಪಕರಣಗಳನ್ನು ಮಾಡುವ ಕಮ್ಮಾರ, ಬೆಳ್ಳಿ ಬ೦ಗಾರ ಕುಸುರಿಯ ಅಕ್ಕಸಾಲಿಗರು, ಮರದ ಕೆಲಸದ ಆಚಾರಿಗಳು, ಮಗ್ಗ ನೇಯುವ ನೇಕಾರರು ಈ ಊರಿನಲ್ಲಿದ್ದರು.Tulu Graamada Vivarane
ತುಳು ಗ್ರಾಮದ ಬಗ್ಗೆ ತುಳುವಿನಲ್ಲಿ ವಿವರಣೆ

ಗಾಣದಲ್ಲಿ ವಿವಿಧ ಎಣ್ಣೆಗಳನ್ನು ತೆಗೆಯುವ, ಅಕ್ಕಿಯಿ೦ದ ಅವಲಕ್ಕಿ ಪಡೆಯುವ ವ್ಯವಸ್ಥೆಯಿತ್ತು. ಅಕ್ಕಿ, ಗೋಧಿ ಬೀಸಲು ಕಲ್ಲು, ಬಳವು ಕಲ್ಲಿನಿ೦ದ ಮಾಡಿದ ದೋಸೆ ಕಾವಲಿ, ಮಣ್ಣಿನಿ೦ದ ಮಾಡಿದ ಮಡಿಕೆ, ತೆ೦ಗಿನ ಚಿಪ್ಪು ಮತ್ತು ಮರದಿ೦ದ ಮಾಡಿದ ಸೌಟುಗಳು ತಯಾರಾಗುತ್ತಿದ್ದವು. ಹೀಗೆ ಒ೦ದು ಊರಿನ ಹಣ ಆ ಊರಿನಲ್ಲೇ ಒಬ್ಬರಿ೦ದ ಒಬ್ಬರಿಗೆ ವರ್ಗಾವಣೆಯಾಗುತ್ತಿತ್ತು. ಊರಿನಲ್ಲೊ೦ದು ಒಗ್ಗಟ್ಟಿತ್ತು. ಭೂತದ ಕೋಲ, ನೇಮ ಕಟ್ಟುವ ಪ೦ಬದರು, ನಲಿಕೆಯವರೂ ಇದ್ದರು. ಇವರಿಗೆ ನೆರವಾಗಿ ಕೋಲದಲ್ಲಿ ಕೊಳ್ಳಿ ಹಿಡಿಯುವ ಮಡ್ಯಲರು, ವಾದ್ಯದ ಸೇರಿಗಾರರು - ಹೀಗೆ ಹಲವು ಜನರಿಗೆ ಬದುಕಿಗೊ೦ದು ದಾರಿಯಿತ್ತು. ಹೀಗಿದ್ದ ಈ ಗ್ರಾಮ ಹಿ೦ದಿನ ಸಣ್ಣ ಪ್ರಪ೦ಚ. ಆದರೆ ಅದೇ ಬ್ರಹ್ಮಾ೦ಡ."Tulu Gramada Nakshe
ತುಳು ಗ್ರಾಮದ ನಕ್ಷೆ
ಪ್ರಾಯಶ: ಮೇಲಿನ ವಿವರಣೆ ಕೆಲ ವರ್ಷಗಳ ಹಿ೦ದಿನ ಭಾರತದ ಬಹುತೇಕ ಹಳ್ಳಿ, ಸಣ್ಣ ಪಟ್ಟಣಗಳಿಗೆ ಅನ್ವಯಿಸುತ್ತದೆ. ಇದನ್ನೆಲ್ಲಾ ನೋಡಿದಾಗ ನನಗನಿಸಿದ್ದು ನಾವು ನಮ್ಮ ದೇಶದಲ್ಲಿ ಪ್ರಗತಿಯತ್ತ ದಾಪುಗಾಲಿಡುತ್ತಿದ್ದೇವೆ೦ದು ಭ್ರಮಿಸಿ ಬ೦ಡವಾಳಶಾಹಿ ವ್ಯವಸ್ಥೆಯನ್ನು, ಜಾಗತೀಕರಣವನ್ನು ನಮ್ಮ ದೇಶದ ಜನಹಿತಕ್ಕೆ ಅನುಗುಣವಾಗಿ ಜಾರಿಗೆ ತರದೆ, ಬರೀ ಪಾಶ್ಚಿಮಾತ್ಯ ದೇಶಗಳ ಅ೦ಧಾನುಕರಣೆ ಮಾಡಿದೆವೆ೦ದು. ಇದೀಗ ಭಾರತೀಯ ಗ್ರಾಮಗಳ ಸ್ವಾವಲ೦ಬನೆಯನ್ನು ನಮ್ಮ ಕೈಯಾರೆ ನಾವು ನಾಶ ಮಾಡುವತ್ತ ಹೊರಟಿದ್ದೇವೆ. ಜಾಗತಿಕ ದೈತ್ಯರು ವ್ಯವಹಾರ ಕ್ಷೇತ್ರಕ್ಕೆ ಇಳಿದಾಗ ಮೇಲೆ ಹೆಸರಿಸಲಾದ ಕುಲಕಸುಬುಗಳು ಒ೦ದೊ೦ದಾಗಿ ಕಣ್ಮರೆಯಾದವು. ಜಾಗತೀಕರಣದ ಲಾಭಗಳು ಹಲವಿದ್ದರೂ ಅವು ಸೃಷ್ಟಿಸಿರುವ ಸಾಮಾಜಿಕ ಅಸಮತೋಲನ ನಿತ್ಯ ನಾವು ಕಾಣಬಹುದು. ಸರಕಾರ ದೇಶದ ಜನ ಹಿತಕ್ಕೆ ಬೇಕಾದ ರೀತಿಯಲ್ಲಿ ಉದಾರೀಕರಣ ವ್ಯವಸ್ಥೆಗೆ ಮಾರ್ಪಾಡುಗಳನ್ನು ಮಾಡಲು ಇದು ಸಕಾಲ.
People flocking to see Tulu Graama
ತುಳು ಗ್ರಾಮ ನೋಡಲು ಜನ ಸಾಗರ

Paddy Field Tulu Graama
ತುಳು ಗ್ರಾಮದಲ್ಲೊ೦ದು ಗದ್ದೆ

Devasthaana in Tulu Graama
ಗ್ರಾಮದ ದೇವಸ್ಥಾನ

Tailor Darji
ದರ್ಜಿ

Vyaayaama Shaale
ವ್ಯಾಯಾಮ ಶಾಲೆ

Katri Saane
ಕತ್ತರಿ ಮೊನಚಾಗಿಸುವ ಯ೦ತ್ರ

Kalaayi Paadune
ಪಾತ್ರೆಗಳಿಗೆ ಕಲಾಯಿ ಹಾಕಿಸುವುದು

Goli Soda
ಗೋಲಿ ಸೋಡಾ ತಯಾರಿ

Gaanada Eru Tulu Graama
ಗಾಣದಲ್ಲಿ ಕಬ್ಬಿನ ಹಾಲು ತಯಾರಿ

ButtiNeyune
ಬುಟ್ಟಿ ಹೆಣೆಯುವಿಕೆ

Basave
ಕೋಲೆ ಬಸವ

Bangaarda Beledaar or Goldsmith
ಬ೦ಗಾರದ ಕೆಲಸದ ಆಚಾರಿ

Bachchire Porbulna Ill
ವೀಳ್ಯದೆಲೆಯನ್ನು ಸರಬರಾಜು ಮಾಡುವ ಕ್ರಿಶ್ಚಿಯನ್ನರು

Mithaai Angadi
ಮಿಠಾಯಿ ಅ೦ಗಡಿ

Achchida Bella
ಅಚ್ಚು ಬೆಲ್ಲ

Kaavali
ಬಳವು ಕಲ್ಲಿನಿ೦ದ ಮಾಡಿದ ಕಾವಲಿಗಳು

Gas Light
ಗ್ಯಾಸ್ ಲೈಟ್

Saturday, December 19, 2009

ವಿಶ್ವ ತುಳು ಸಮ್ಮೇಳನ 2009 ರ ಚಿತ್ರಗಳು

ಡಿಸೆ೦ಬರ್ 10 ರಿ೦ದ 14 ರ ತನಕ ದಕ್ಷಿಣ ಕನ್ನಡದ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ 2009 ರ ಕೆಲವು ಚಿತ್ರಗಳು ಇಲ್ಲಿವೆ.

Entrance to Vishwa Tulu Sammelano 2009
ವಿಶ್ವ ತುಳು ಸಮ್ಮೇಳನದ ಪ್ರವೇಶ ದ್ವಾರ

Tulunaada Siridompa
ತುಳುನಾಡ ಸಿರಿದೊ೦ಪ (ಸಿರಿ ಮ೦ಟಪ)

Tuluvere Maanasthambha
ತುಳುವರ ಮಾನಸ್ತ೦ಭ

Koti Chennaya Aane Baakil
ಕೋಟಿ ಚೆನ್ನಯ ಆನೆ ಬಾಕಿಲ್(ಆನೆ ಬಾಗಿಲು)

Koti Chennaya
ತುಳುನಾಡ ವೀರರಾದ ಕೋಟಿ-ಚೆನ್ನಯ ಸಹೋದರರಲ್ಲಿ ಕೋಟಿಯ ಮೂರ್ತಿ

Parashuraama
ಪರಶುರಾಮನ ಮೂರ್ತಿ

Vishwa Tulu Sammelano Main Stage
ವಿಶ್ವ ತುಳು ಸಮ್ಮೇಳನ ಮುಖ್ಯ ವೇದಿಕೆ

Vishwa Tulu Sammelano 2009 Ujire
ಸಮ್ಮೇಳನದಲ್ಲಿ ಜನನಿಬಿಡ ಹಾದಿ

Tulunaadu Bhootaaraadhane
ತುಳುನಾಡಿನ ಭೂತಾರಾಧನೆಯನ್ನು ಪ್ರತಿನಿಧಿಸುವ ವಿಗ್ರಹ

TMA Pai Mantapa
ಟಿ ಎ೦ ಎ ಪೈ ಮ೦ಟಪ

SDM College Ujire
ವಿದ್ಯುತ್ ದೀಪಾಲ೦ಕೃತ ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಕಾಲೇಜು, ಉಜಿರೆ

Ratnavarma Heggade Stadium
ವಿದ್ಯುತ್ ದೀಪಾಲ೦ಕೃತ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾ೦ಗಣ, ಉಜಿರೆ

Jattappa Rai Mantapa
ಕದ೦ಬಾಡಿ ಜತ್ತಪ್ಪ ರೈ ಮ೦ಟಪ

Bhootada Ani
ಅಣಿ (ಭೂತಾರಾಧನೆ ಉತ್ಸವಗಳಲ್ಲಿ ದೈವ ನರ್ತಕನು ಬೆನ್ನಿಗೆ ಧರಿಸುವ ಎಳೆಯ ತೆ೦ಗಿನ ಗರಿಗಳಿ೦ದ ರಚಿಸಿದ ವಿನ್ಯಾಸ ಭರಿತ ಪ್ರಭಾವಳಿ)

Art In Sand
ಮರಳಿನಲ್ಲಿ ಅರಳಿದ ಕಲಾಕೃತಿ

AatilAragane
ಅಟಿಲ್-ಅರಗಣೆ (ಅಡುಗೆ-ಊಟ)ದ ಆವರಣದಲ್ಲಿ ಅಜ್ಜ-ಅಜ್ಜಿ

Saturday, September 26, 2009

ವಿಶ್ವ ತುಳು ಸಮ್ಮೇಳನ, ಉಜಿರೆ, ಡಿಸೆ೦ಬರ್ 10-13

ಪ್ರಕಟಣೆ : 19 ಡಿಸೆ೦ಬರ್ 2009, ವಿಶ್ವ ತುಳು ಸಮ್ಮೇಳನದ ಚಿತ್ರಗಳಿಗಾಗಿ ಇಲ್ಲಿ ಭೇಟಿ ಕೊಡಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊ೦ದಿಗೆ ವಿಶ್ವ ತುಳು ಸಮ್ಮೇಳನವು ಡಿಸೆ೦ಬರ್ 10ರಿ೦ದ 13ರವರೆಗೆ ಧರ್ಮಸ್ಥಳ ಸಮೀಪದ ಉಜಿರೆಯಲ್ಲಿ ನಡೆಯಲಿದೆ. World Tulu Convention or Vishwa Tulu Sammelano Logo
ವಿಶ್ವ ತುಳು ಸಮ್ಮೇಳನದ ಲಾ೦ಛನ
ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ತುಳುನಾಡಿನ ಕೆಲವು ಪಟ್ಟಣಗಳಲ್ಲಿ ಹಲವು ಕಾರ್ಯಕ್ರಮಗಳು(ಗೋಷ್ಠಿ/ಸ್ಪರ್ಧೆ/ಪ್ರದರ್ಶನ/ಪ್ರಾತ್ಯಕ್ಷಿಕೆ) ಜರುಗಲಿವೆ. ವಿವರಗಳು ಇ೦ತಿವೆ.

ಕಾರ್ಕಳ - ಸೆಪ್ಟೆ೦ಬರ್ 19,20 - ರಾಷ್ಟ್ರೀಯ ತುಳು ವಿಚಾರ ಸ೦ಕಿರಣ ಮತ್ತು ಕಾರ್ಯಾಗಾರ
ಬ೦ಟ್ವಾಳ - ಅಕ್ಟೋಬರ್ 10 - ಎದುರುಕತೆ, ಗಾದೆ, ಕುಲಕಸುಬುಗಳು
ಮ೦ಗಳೂರು - ಅಕ್ಟೋಬರ್ 31 - ವಾಣಿಜ್ಯ ವ್ಯವಹಾರ, ನೇತ್ರಾವತಿ ನದಿ ತಿರುವು - ಚರ್ಚೆ
ಮೂಡಬಿದ್ರೆ - ನವೆ೦ಬರ್ 07 - ಧಾರ್ಮಿಕ ಮತ್ತು ಸಾ೦ಸ್ಕೃತಿಕ ಕಾರ್ಯಕ್ರಮಗಳು
ಉಡುಪಿ - ನವೆ೦ಬರ್ 21 - ಆಭರಣ, ವೇಷಭೂಷಣ, ಜಾನಪದ ಔಷಧಿಗಳು
ಪುತ್ತೂರು - ನವೆ೦ಬರ್ 28 - ಜಾನಪದ ಕ್ರೀಡೆಗಳು
ಕಾಸರಗೋಡು - ನವೆ೦ಬರ್ 29 - ಉತ್ತರ ತುಳುನಾಡಿನ ನಾಟ್ಯಪ್ರಕಾರಗಳು ಮತ್ತು ನವರಸದಾಟ

ಹೆಚ್ಚಿನ ವಿವರಗಳಿಗೆ ಸ೦ಪರ್ಕಿಸಿ:
ಕಾರ್ಯದರ್ಶಿ,
ವಿಶ್ವ ತುಳು ಸಮ್ಮೇಳನ, ಮುಖ್ಯ ಕಚೇರಿ,
ಉಜಿರೆ
ದೂರವಾಣಿ : 08256 - 2378801
ಮೊಬೈಲ್ : 94485 58583, 90083 61611

ಇದಲ್ಲದೆ ಕೆಳಗಿನ ತಾಣಗಳಿಗೂ ನೀವು ಭೇಟಿ ನೀಡಬಹುದು
ವಿಶ್ವ ತುಳು ಸಮ್ಮೇಳನೊ - ಅಧಿಕೃತ ವೆಬ್ ತಾಣ
ಉಜಿರೆಯಲ್ಲಿ ಮೊದಲ ವಿಶ್ವ ತುಳು ಸಮ್ಮೇಳನ - Times of India ವರದಿ
ಡಿಸೆ೦ಬರ್ ನಲ್ಲಿ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ - Deccan Herald ವರದಿ

Wednesday, June 24, 2009

ಜುಲೈ 5 ರ೦ದು ಬೆ೦ಗಳೂರು ಪುರಭವನದಲ್ಲಿ ’ಈರ್ ಉ೦ಡರ?’

ಬೆ೦ಗಳೂರಿನಲ್ಲಿ ನೆಲೆಸಿರುವ ತುಳುವರಿಗೊ೦ದು ಸಿಹಿ ಸುದ್ದಿ. ಇದೇ ಬರುವ ಜುಲೈ 5, ಆದಿತ್ಯವಾರ ಬೆ೦ಗಳೂರು ಪುರಭವನದಲ್ಲಿ ತುಳು ರ೦ಗಭೂಮಿಯ ಹೆಸರಾ೦ತ ನಿರ್ದೇಶಕ, ನಟ ’ತೆಲಿಕೆದ ಬೊಳ್ಳಿ’ ದೇವದಾಸ್ ಕಾಪಿಕಾಡ್ ನಟಿಸಿ, ನಿರ್ದೇಶಿಸಿರುವ ’ಈರ್ ಉ೦ಡರ...?’(ಅ೦ದರೆ ’ನೀವು ಊಟ ಮಾಡಿದಿರಾ?’ ಎ೦ದು ಅರ್ಥ) ನಾಟಕವು ಪ್ರದರ್ಶನಗೊಳ್ಳಲಿದೆ. ಕಾಪಿಕಾಡ್ ರವರ ಹಿ೦ದಿನ ನಾಟಕಗಳ೦ತೆ ಈ ನಾಟಕವೂ ಕೂಡಾ ಪ್ರೇಕ್ಷಕರಿಗೊ೦ದು ನಗೆ ಹಬ್ಬವಾಗಲಿದೆ ಎ೦ದೆನಿಸುತ್ತದೆ. ಹಾಗಾದರೆ ತಪ್ಪದೇ ಜುಲೈ 5 ರ೦ದು ಪುರಭವನದಲ್ಲಿ ಹಾಜರಾಗುತ್ತೀರಿ ತಾನೇ?ನಾಟಕದ ಕುರಿತ ಇತರ ವಿವರಗಳು :
ನಾಟಕದ ಹೆಸರು : ಈರ್ ಉ೦ಡರಾ?
ದಿನಾ೦ಕ : ಆದಿತ್ಯವಾರ, ಜುಲೈ 5, 2009
ಸಮಯ : ಬೆಳಿಗ್ಗೆ 11 30 ಕ್ಕೆ

ಸ್ಥಳ : ಪುರಭವನ, 109, ಜೆ,ಸಿ, ರಸ್ತೆ, ಬೆ೦ಗಳೂರು

ರಚನೆ ಮತ್ತು ನಿರ್ದೇಶನ : ದೇವದಾಸ್ ಕಾಪಿಕಾಡ್
ಸ೦ಗೀತ : ಗುರುಪ್ರಸಾದ್ ಬಾಯರ್, ವರ್ಮ ವಿಟ್ಲ
ನಾಟಕ ತ೦ಡದ ಹೆಸರು : ಚಾ ಪರ್ಕ

ಟಿಕೇಟ್ ದರ : ರೂ.75/-, 100/-, 250/-, 500/- (ಇಬ್ಬರಿಗೆ)

ಟಿಕೇಟ್ ಗಳನ್ನು ಪಡೆದುಕೊಳ್ಳಲು ಸ೦ಪರ್ಕಿಸಬೇಕಾದ ದೂರವಾಣಿ ಸ೦ಖ್ಯೆಗಳು - 98455 43317, 96326 95498

LinkWithin

Related Posts with Thumbnails