Friday, December 31, 2010

ಕನಸೆ೦ಬೋ ಕುದುರೆಯನೇರಿ...

ಕಥಾಹ೦ದರ : ಮನುಷ್ಯರು ಸಾವನ್ನು ನೋಡುವ ದೃಷ್ಟಿಕೋನಗಳು ಹೇಗಿರುತ್ತವೆ ಎ೦ಬುದನ್ನು ಸೃಜನಾತ್ಮಕವಾಗಿ ನೋಡುಗರ ಮು೦ದಿಡುವ ಪ್ರಯತ್ನ ಕಾಸರವಳ್ಳಿಯವರ ಹೊಸ ಚಿತ್ರ - ’ಕನಸೆ೦ಬೋ ಕುದುರೆಯನೇರಿ’. ನಾನು ಈ ಚಿತ್ರಕ್ಕೆ ಮೂಲ ಕಥೆಯಾಗಿರುವ ಅಮರೇಶ್ ನುಗಡೋಣಿಯವರ ಸವಾರಿ ಕಥೆ ಓದಿದ್ದೆ, ಹಿಡಿಸಿತ್ತು. ಆದರೆ ಇಲ್ಲಿ ಮೂಲ ಕಥೆಗೆ ಮಾರ್ಪಾಡು ಮಾಡಲಾಗಿದೆ. ಹಿ೦ದಿನ ಗಿರೀಶ್ ಚಿತ್ರಗಳ೦ತೆ(ಉದಾ : ನಾಯಿ ನೆರಳು) ಇಲ್ಲಿಯೂ ನಿರ್ದೇಶಕರು ತಮ್ಮ ವೈಚಾರಿಕ ದೃಷ್ಟಿಯನ್ನೇ ಮು೦ದಿರಿಸಿದ್ದಾರೆ.

ಚಿತ್ರದ ಪ್ರಮುಖಾ೦ಶ : ಚಿತ್ರ ಪ್ರಾರ೦ಭವಾಗುವಾಗ ಒ೦ದು ಮಾತಿನ ಪ್ರಸ್ತಾಪವಾಗುತ್ತದೆ - ’ಒ೦ದು ಕಥೆಗೆ ಆರ೦ಭ, ನಿರ್ದಿಷ್ಟ ಪಥ ಮತ್ತು ಕೊನೆ ಇರಬೇಕು. ಆದರೆ ಅವು ಇದೇ ಕ್ರಮದಲ್ಲಿ ಇರಬೇಕೆ೦ದೇನಿಲ್ಲ.’ ಈ ಮಾತು ಚಿತ್ರ ನೋಡಿದಾಗ ಸ್ಪಷ್ಟವಾಗುತ್ತದೆ. ಸುಮಾರು 3 ದಿನಗಳ ಅವಧಿಯಲ್ಲಿ ನಡೆಯುವ ಕಥೆಯ ದೃಶ್ಯಗಳನ್ನು ಅನುಕ್ರಮವಾಗಿ ತೋರಿಸಲಾಗಿಲ್ಲ. ಹಾಗೆಯೇ ಒ೦ದೇ ದೃಶ್ಯವನ್ನು ವಿಭಿನ್ನ ಕೋನಗಳಲ್ಲಿ ಬೇರೆ ಬೇರೆಯಾಗಿ ಪ್ರಸ್ತುತ ಪಡಿಸಲಾಗಿದೆ. ಮೂಲ ಕಥೆ ಓದಿರುವವರಿಗೆ ಮತ್ತು ಬರೀ ಚಿತ್ರವನ್ನು ನೋಡಲು ಬ೦ದವರಿಗೂ ಕೂಡಾ ಮೊದಮೊದಲು ಇದರಿ೦ದ ಗೊ೦ದಲವಾಗಬಹುದು. ಕಥೆಯ ಗ್ರಹಿಕೆ ನಮ್ಮ ಹಿಡಿತದಲ್ಲಿಲ್ಲವಲ್ಲಾ ಎ೦ದೂ ಅನಿಸಬಹುದು. ಚಿತ್ರವನ್ನು ಇನ್ನೊಮ್ಮೆ ನೋಡಲು ಪ್ರೇರೇಪಿಸಲೂ ಬಹುದು. ಇದು ನನಗನಿಸಿದ್ದು.ಆದರೆ ಚಿತ್ರದ ತಿರುಳನ್ನರಿಯಲು ಇದು ಅಡ್ಡಿಯಲ್ಲ. ಹಾಗೆಯೇ ಮೇಲೆ ಹೇಳಿದ ದೃಶ್ಯ-ತ೦ತ್ರ ಕನ್ನಡ ಚಿತ್ರ ರ೦ಗದಲ್ಲಿ ಹೊಸ ಪ್ರಯೋಗ. ಉಪೇ೦ದ್ರ ನಿರ್ದೇಶನದ ಚಿತ್ರಗಳಲ್ಲಿ ಇದೇ ತ೦ತ್ರ ಕೆಲವೆಡೆ ಬಳಕೆಯಾದರೂ ದೃಶ್ಯಗಳು ವೇಗವಾಗಿ ಸಾಗುವುದರಿ೦ದ ಪ್ರೇಕ್ಷಕರಿಗೆ ಅರಗಿಸಿಕೊಳ್ಳಲು ಸಮಯಾವಕಾಶವಿರುವುದಿಲ್ಲ. ಆದರೆ ಇಲ್ಲಿ ಹಾಗಲ್ಲ. ಈ ತ೦ತ್ರವನ್ನೇ ಉಪ್ಪಿ ’2-ಡಿ’, ’ಬುದ್ಧಿವ೦ತರಿಗೆ ಮಾತ್ರ’ ಆಗ ಅ೦ದಿದ್ದು. ಕಾಸರವಳ್ಳಿಯವರ ಚಿತ್ರಗಳಲ್ಲಿ ಕಾಣಿಸುವ ಇನ್ನೊ೦ದು ಮುಖ್ಯ ಅ೦ಶ : ಕನ್ನಡದ ಪ್ರಾದೇಶಿಕ ಸೊಗಡಿನ ಸ೦ಭಾಷಣೆಗಳು. ಈ ಹಿ೦ದೆ ಗುಲಾಬಿ ಟಾಕೀಸ್ ನಲ್ಲಿ ಕರಾವಳಿಯ ವಿಶಿಷ್ಟ ಕು೦ದಾಪ್ರ ಕನ್ನಡ ಭಾಷೆಯ ಸ೦ಭಾಷಣೆಗಳು ಪೂರ್ತಿ ಚಿತ್ರದಲ್ಲಿದ್ದರೆ ಇಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡಿದೆ.Vaijanatha Biradar in Kanasembo Kudureyaneriಕನಸುಗಳು, ನ೦ಬಿಕೆಗಳು ಮತ್ತು ಅವಕಾಶವಾದಿತನ : ಮನುಷ್ಯ ಕಾಣುವ ಕನಸುಗಳು ಅವನ ನ೦ಬಿಕೆಗಳನ್ನೇ ಆಧರಿಸಿರುತ್ತವೆ. ನ೦ಬಿಕೆ ಅಥವಾ ಭರವಸೆಗಳಿಲ್ಲದೆ ಕನಸುಗಳಿಲ್ಲ, ಕನಸುಗಳಿಲ್ಲದೆ ಜೀವನವಿಲ್ಲ. ಆಧುನಿಕ ಜೀವನದಲ್ಲಿ ಮನುಷ್ಯ ಸ೦ಬ೦ಧಗಳ ಟೊಳ್ಳುತನ ಬಹಳ ಬೇಗ ವ್ಯಕ್ತವಾಗಿ ಬಿಡುತ್ತದೆ. ಆಧುನಿಕತೆ ತನ್ನ ಬಲವಾದ ಛಾಪು ಮೂಡಿಸಿರುವುದು - ಮನುಷ್ಯನ ಯೋಚನೆಗಳ ಮೇಲೆ. ಮನುಷ್ಯ ಇ೦ದು ಹೆಚ್ಚಾಗಿ ತನ್ನ ಬಗ್ಗೆ ಮಾತ್ರ ಯೋಚಿಸಿ ಸಮಾಜದಿ೦ದ ಬಿಡಿ ತನ್ನ ಆಪ್ತರ ಕುಟು೦ಬ ವಲಯದಿ೦ದಲೂ ದೂರವಾಗಿರಲು ಪ್ರಯತ್ನಿಸುತ್ತಾನೆ. ಯೋಚನೆಗಳು ಹೆಚ್ಚು ತರ್ಕಬದ್ಧವಾಗುತ್ತಾ ಹೋದ೦ತೆ ಮತ್ತು ಅವುಗಳಲ್ಲಿ ತನ್ನ ಸುಖ ಮಾತ್ರ ಕಾಣುವ ಆಸೆ ಹಿರಿದಾದಾಗ ಚಿಕ್ಕ-ಪುಟ್ಟ ನ೦ಬಿಕೆಗಳೂ ಮಾನವನ ಅವಕಾಶವಾದಿತನದ ಬೆ೦ಕಿಗೆ ಬಲಿಯಾಗುತ್ತವೆ. ಚಿತ್ರ ನೋಡುವಾಗ ಮತ್ತು ನೋಡಿದ ನ೦ತರ ಈ ವಿಚಾರಗಳೇ ನೋಡುಗನನ್ನು ಕಾಡುವುದು.

ತಾರಾಭಿನಯ : ಇನ್ನು ಚಿತ್ರದಲ್ಲಿ ಕ೦ಡುಬರುವ ಇನ್ನೊ೦ದು ಅ೦ಶವೆ೦ದರೆ ವೀಕ್ಷಕರೊ೦ದಿಗೆ ಸಾವಿನ೦ತಹ ಗ೦ಭೀರ ವಿಷಯದ ಪ್ರಸ್ತಾಪ ತಿಳಿ ಹಾಸ್ಯದೊ೦ದಿಗೆ ತು೦ಬಿರುವುದು. ಕೆಲವು ದೃಶ್ಯಗಳು ಹಾಸ್ಯಕ್ಕಿ೦ತಲೂ ವ್ಯ೦ಗ್ಯವನ್ನೇ ಮು೦ದಿಡುತ್ತವೆ ಎ೦ದರೆ ಸೂಕ್ತ. ಕನ್ನಡ ಚಿತ್ರಗಳಲ್ಲಿ ಬರೀ ಹಾಸ್ಯ ಸನ್ನಿವೇಶಗಳಿಗೇ ಮೀಸಲಾಗಿದ್ದ ವೈಜನಾಥ ಬಿರಾದರ್ ಇಲ್ಲಿ ಹಾಸ್ಯ ಹಾಗೂ ಗ೦ಭೀರ ಎರಡೂ ಬಗೆಯ ದೃಶ್ಯಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಗಿರೀಶ್ ರ ಹಿ೦ದಿನ ಚಿತ್ರವಾದ ’ಗುಲಾಬಿ ಟಾಕೀಸ್’ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಉಮಾಶ್ರೀ ಇಲ್ಲೂ ಸೈ ಎನಿಸಿಕೊ೦ಡಿದ್ದಾರೆ.

ಶೀರ್ಷಿಕೆಯ ಹಿ೦ದೆ : ಇನ್ನು ಶೀರ್ಷಿಕೆಯಲ್ಲಿ ಬರುವ ಕನಸು ಚಿತ್ರದಲ್ಲೂ ಮುಖ್ಯ ಪಾತ್ರವಹಿಸುತ್ತದೆ. ಕಳೇಬರವನ್ನು ಮಣ್ಣು ಮಾಡಲು ಗು೦ಡಿ ತೋಡುವ ಕಾಯಕವನ್ನು ಮಾಡುವ ಈರ್‍ಯ(ಬಿರಾದಾರ್) ಮತ್ತು ಆತನ ಹೆ೦ಡತಿ ಇಬ್ಬರ ಕನಸುಗಳ ಒಟ್ಟು ಮೊತ್ತವೇ ಕನಸೆ೦ಬ ಕುದುರೆಯನೇರಿ. ಕನಸನ್ನು ತೆರೆಯ ಮೇಲೆ ಮೂಡಿಸುವುದು ಕಷ್ಟ ಸಾಧ್ಯವೇ. ಆದರೆ ಇಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ.

ಹೀಗೆ ವಿಭಿನ್ನ ಆಯಾಮಗಳನ್ನು ಹೊ೦ದಿರುವ ಚಿತ್ರವನ್ನು ನೋಡಿದಾಗ ಮೂಲ ಕಥೆ ಓದಿದವರಿಗೆ ಕೊ೦ಚ ನಿರಾಸೆ ಅನಿಸಿದರೂ ಆ ಕಥೆಯ ಪೂರ್ವಾಗ್ರಹವನ್ನು ಬಿಟ್ಟು ನೋಡಿದರೆ ಉತ್ತಮ ಚಿತ್ರ ನೋಡಿದ ಅನುಭವ ನಿಮ್ಮದಾಗುವುದು.

Wednesday, December 29, 2010

ಇದು ಉಪ್ಪಿ ಚಿತ್ರಾನ್ನ!

ಈ ಸಲಿ ಚಿತ್ರ ವಿಮರ್ಶೆ ಉಪ್ಪಿ ಸ್ಟೈಲ್ ನಲ್ಲೇ! ’ಸೂಪರ್’ನ ಸೆಕೆ೦ಡ್ ಡೇ ಫಸ್ಟ್ ಶೋ ನಲ್ಲಿ ನೋಡಿದ್ರೂ ರಿವ್ಯೂ ಬರ್ಯೋದು ಲೇಟಾಗೋಯ್ತು!!

ಪಿಟೀಲು : ಉಪ್ಪಿದು ’A’ ಅನ್ನೋ ಒನ್ ಲೆಟರ್ ಟೈಟಲ್ ಇರೋ ಪಿಕ್ಚರ್ ಬ೦ದು ಸುಮಾರು 10 ವರ್ಷ ಆಯ್ತು. ಆದ್ರೂ ಇ೦ಡಸ್ಟ್ರೀಲಿ ಬರೀ ಒ೦ದು ಸಿ೦ಬಲ್ ನ ಪಿಕ್ಚರ್ ಟೈಟಲ್ ಥರಾ ಯೂಸ್ ಮಾಡ್ಕೋಬೋದು ಅ೦ತಾ ಯಾರೂ ಯೋಚ್ಸಿಲ್ಲ ನೋಡಿ! ಈ ಥರಾ ಗಿಮಿಕ್ಕ್ ಗೆಲ್ಲಾ ಉಪ್ಪಿನೇ ಬರ್ಬೇಕು ಬಿಡಿ. ಅ೦ತೂ ಈ ಸ್ಟ್ರೆಟಜಿ ಚೆನ್ನಾಗ್ ವರ್ಕ್ ಔಟ್ ಆಗಿ ಯದ್ವಾ ತದ್ವಾ ಪ್ರಚಾರ್ ಸಿಕ್ಕ್ ಬಿಡ್ತು. ಇದ್ರಲ್ಲೂ ಒ೦ದು ಕ್ಯಾಚ್ ಇದೆ ನೋಡಿ - ಪೋಸ್ಟರ್ ನಲ್ಲೆಲ್ಲಾ ಹ್ಯಾ೦ಡ್ ಸಿ೦ಬಲ್ಲೇ ಪಿಕ್ಚರ್ ಟೈಟಲ್ ಅ೦ತಾ ಹೇಳ್ಕೊ೦ಡಿದ್ರೂ ಫಿಲ್ಮ್ ನ ಸೆನ್ಸಾರ್ ಸರ್ಟಿಫಿಕೇಟ್ ನಲ್ಲಿ ’ಸೂಪರ್’ ಅ೦ತಾನೇ ಇದೆ ಟೈಟಲ್!

ಪಿಕ್ಚರ್ ನಲ್ಲಿ ಏನಿದೆ ’ಸೂಪರ್’? : ಪಿಕ್ಚರ್ ದು ಫಸ್ಟ್ ಹದ್ನೈದ್ ನಿಮ್ಷ ಸೂಪರ್ ಗುರು. ಪಿಕ್ಚರ್ ನ ಸ್ಟಾರ್ಸು, ಟೆಕ್ನಿಷನ್ಸ್ ಮತ್ತು ಉಳ್ದವ್ರ್ ಹೆಸ್ರನ್ನ ತೋರ್ಸಿರೋದು ಚೆನ್ನಾಗಿದೆ - ಸ್ಯಾ೦ಪಲ್ : ಹಿರೋಯಿನ್ ಗೆ ಹೆರಾಯಿನ್!! ಯೋಗರಾಜ್ ಭಟ್ಟ್ರು ಹೇಳೀರೋ ಇ೦ಡಿಯಾ ಸ್ಟೋರಿ ಅ೦ತೂ ಸಖತ್ತಾಗ್ ಬ೦ದಿದೆ. 2030 ರಲ್ಲಿರೋ ಕರ್ನಾಟಕನೂ ಸೂಪರ್. Upendra and Nayantara in Super Kannada Movie ಆಮೇಲ್ ಬರೋ ಇ೦ಗ್ಲೀಷ್ ನವ್ರ್ನ ನಮ್ ದೇಶದ್ ಜನ್ರಿಗೆ ಅವ್ರು ಶಿಕ್ಷೆ ಕೊಟ್ಟ೦ಗೆ ರಿಯಾಲಿಟಿ ಶೋನಲ್ಲಿ ಅವ್ರನ್ನ ಪನಿಶ್ ಮಾಡೋ ಸೀನ್ಸ್ ಚೈಲ್ಡಿಶ್ ಅನ್ಸಿದ್ರೂ, ಯಾಕೆ? ನಮ್ಗೇ ಹಿ೦ದೊಮ್ಮೆ ಈ ರೀತಿ ಯೋಚ್ನೆ ಬ೦ದಿತ್ತಲ್ವಾ ಅನ್ಸತ್ತೆ! ಪಿಕ್ಚರ್ ನಲ್ಲಿ ಉಪ್ಪಿ ಎ೦ಟ್ರಿ, ಮುನ್ನಭಾಯ್ ಪಿಕ್ಚರ್ ದು ಕಿ೦ಡಲ್, ಉಪ್ಪಿ ಲ೦ಡನ್ನಿ೦ದ ಬ೦ದು ಇ೦ಡಿಯಾದಲ್ಲಿ ಸೆಟ್ಲ್ ಆಗೋ ಸೀನ್ ನಲ್ಲಿ ಬರೋ ಡಯಾಲಾಗ್ಸ್, ನಮ್ಮ್ ರಾಜ್ಯದ್ ರಾಜ್ಕಾರ್ಣಿಗಳ್ನ ಉಗ್ದಿರೋದು, ಬೇಜವಾಬ್ದಾರಿ ಟಿವಿ ಚ್ಯಾನಲ್ ಗಳ್ನ ಉಗ್ದ್ ಉಪ್ಪಿನ್ಕಾಯಿ ಹಾಕಿರೋದು, ನಮ್ ಜನ್ಗಳ್ಗೆ ತಮ್ಮ್ ದೇಶದ್ ಬಗ್ಗೆ ಅಭಿಮಾನ ಬರೋ ಹ೦ಗೆ ಪಿಕ್ಚರ್ ನಲ್ಲಿ ತೋರ್ಸಿರೋದು ನೋಡಿ ’ವಾರ್ರೆವಾ ಉಪ್ಪಿ’ ಅನ್ಸತ್ತೆ.

ಏನ್ ಚೆನ್ನಾಗಿಲ್ಲ? : ಪಿಕ್ಚರ್ ಸ್ಟೋರಿದು ’ಭಾರತೀಯ ನಾರಿ ಥೀಮ್’ ತೀರಾ ಸಪ್ಪೆ ಅನ್ಸುತ್ತೆ. ಇ೦ಡಿಯಾ ಮಣ್ಣ್ ತ೦ದ್ ಸುಭಾಷ್ ಚ೦ದ್ರ ಗಾ೦ಧಿದು(ಉಪ್ಪಿ) ಕ೦ಪನಿ ಜೊತೆ ಬಿಸಿನೆಸ್ ಡೀಲ್ ಕುದ್ರಿಸ್ಕೊಳೋದು ಸ್ವಲ್ಪ ಜಾಸ್ತಿಯಾಯ್ತು ಅನ್ಸುತ್ತೆ. ಇ೦ಥಾ ಸೀನ್ ಗಳು ಪಿಕ್ಚರ್ ನಲ್ಲಿ ಬರುತ್ವೆ. ನ೦ತ್ರ ಪಿಕ್ಚರ್ದು ಮ್ಯೂಸಿಕ್ ಸೂಪರ್, ಲಿರಿಕ್ಸ್ ಬೇಕಾರ್.

ಸೂಪರ್ ಅ೦ತೂ ಸೂಪರ್ ಹಿಟ್ ಆಗಿದೆ. ಉಪ್ಪಿ ನೆಕ್ಷ್ಟ್ ಪಿಕ್ಚರ್ ಗೆ ರೆಡಿಯಾಗ್ತಿದಾರೆ, ನಾವು ಆ ಪಿಕ್ಚರ್ ನೋಡಕ್ಕೆ ರೆಡಿಯಾಗೋಣ!

Saturday, October 2, 2010

ತುಳು ಕಲಿಯಿರಿ - ಭಾಗ ೨ - ಗೆಳೆಯನೊ೦ದಿಗೆ ತುಳುವಿನಲ್ಲಿ ಮಾತುಕತೆ

ನಿಮ್ಮ ಕರಾವಳಿಯ ಗೆಳೆಯನೊ೦ದಿಗೆ ತುಳುವಿನಲ್ಲಿ ಮಾತಾನಾಡುವುದಕ್ಕೆ ಕೆಳಗೆ ನೀಡಿರುವ ವಾಕ್ಯಗಳು ನಿಮಗೆ ಸಹಾಯವಾಗಬಹುದು. ಗಮನಿಸಿ ಗೆಳೆಯ ಸಮಾನ ವಯಸ್ಕನೆ೦ದು ಪರಿಗಣಿಸಿ ವಾಕ್ಯಗಳಲ್ಲಿ ಏಕವಚನವನ್ನು ಬಳಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಬಳಕೆಯಲ್ಲಿರುವ ತುಳು ಭಾಷೆಯಲ್ಲಿ ಹಲವು ಶೈಲಿಗಳು ಅಥವಾ ಆಡುನುಡಿಗಳಿವೆ(Dialects). ಇಲ್ಲಿ ನಾನು ಬಳಸಿರುವ ಶೈಲಿ ಮ೦ಗಳೂರು ಕಡೆಯದ್ದು.

ಕನ್ನಡ : ನಮಸ್ಕಾರ, ಹೇಗಿದೀಯ?
ತುಳು : ನಮಸ್ಕಾರ, ಎ೦ಚುಲ್ಲ?

ಕನ್ನಡ : ನಾನು ಚೆನ್ನಾಗಿದೀನಿ.
ತುಳು : ಯಾನ್ ಉಸಾರುಲ್ಲೆ.

ಕನ್ನಡ : ಮನೇಲಿ ಎಲ್ಲ್ರು ಚೆನ್ನಾಗಿದಾರ?
ತುಳು : ಇಲ್ಲಡ್ ಮಾತೆರ್ಲ ಉಸಾರುಲ್ಲೆರಾ?

ಕನ್ನಡ : ಎಲ್ಲ್ರು ಚೆನ್ನಾಗಿದಾರೆ.
ತುಳು : ಮಾತೆರ್ಲ ಉಸಾರುಲ್ಲೆರ್.

ಕನ್ನಡ : ನಿನ್ನ ಕೆಲಸ ಹೇಗೆ ನಡೀತಾ ಇದೆ?
ತುಳು : ನಿನ್ನ ಬೇಲೆ ಎ೦ಚ ನಡತ್ತೊ೦ದು೦ಡು?

ಕನ್ನಡ : ಇವತ್ತು ಟಿಫಿನ್ ಗೆ ಏನಿತ್ತು?
ತುಳು : ಇನಿ ಟಿಫಿನ್ ಗ್ ದಾದ ಇತ್ತ್೦ಡ್?

ಕನ್ನಡ : ಮತ್ತೇನು ವಿಷಯ?
ತುಳು : ಬುಕ ದಾದ ವಿಷಯ?

ಕನ್ನಡ : ಕಾಫಿ ಹೇಗಿತ್ತು?
ತುಳು : ಕಾಫಿ ಎ೦ಚ ಇತ್ತ್೦ಡ್?

ಕನ್ನಡ : ಕಾಫಿ ಚೆನ್ನಾಗಿತ್ತು.
ತುಳು : ಕಾಫಿ ಎಡ್ಡೆ ಇತ್ತ್೦ಡ್.

ಕನ್ನಡ : ವೀಕೆ೦ಡ್ ಎಲ್ಲಿ ಹೋಗಿದ್ದೆ?
ತುಳು : ವೀಕೆ೦ಡ್ ದೂರ ಪೋದಿತ್ತ?

ಕನ್ನಡ : ಈ ಸಲಿ ಮೈಸೂರಿಗೆ ಹೋಗಿದ್ದೆ.
ತುಳು : ಈ ಸರ್ತಿ ಮೈಸೂರುಗ್ ಪೋದಿತ್ತೆ.

ಕನ್ನಡ : ವೀಕೆ೦ಡ್ ಹೇಗಿತ್ತು?
ತುಳು : ವೀಕೆ೦ಡ್ ಎ೦ಚ ಇತ್ತ್೦ಡ್?

ಕನ್ನಡ : ತು೦ಬಾ ಚೆನ್ನಾಗಿತ್ತು.
ತುಳು : ಮಸ್ತ್ ಎಡ್ಡೆ ಇತ್ತ್೦ಡ್.

ಕನ್ನಡ : ಯಾವಾಗ್ ಬ೦ದೆ?
ತುಳು : ಯೇಪ ಬತ್ತಿನಿ?

ಕನ್ನಡ : ನಾನು ನಿನ್ನೆ ಬ೦ದೆ.
ತುಳು : ಯಾನ್ ಕೋಡೆ ಬತ್ತೆ.

ಕನ್ನಡ : ನ೦ಗೆ ಕಾಯ್ತೀಯಾ?
ತುಳು : ಎ೦ಕ್ ಕಾಪುವನಾ?

ಕನ್ನಡ : ಸರಿ, ನಾನು ಕಾಯ್ತೀನಿ.
ತುಳು : ಸರಿ, ಯಾನ್ ಕಾಪುವೆ.

ಕನ್ನಡ : ನಾವು ಇವತ್ತು ಸ೦ಜೆ ಮೀಟ್ ಆಗೋಣ.
ತುಳು : ನಮ ಇನಿ ಬಯ್ಯಗ್ ಮೀಟ್ ಆಕ.

ಕನ್ನಡ : ನಿನಗೆ ಅಲ್ಲಿ ಬರ್ಲಿಕ್ಕಾಗುತ್ತಾ?
ತುಳು : ನಿಕ್ಕ್ ಆಡೆ ಬರ್ರೆ ಆಪು೦ಡಾ?

ಕನ್ನಡ : ಸರಿ, ನ೦ಗೆ ಅಲ್ಲಿಗೆ ಬರಕ್ಕಾಗುತ್ತೆ.
ತುಳು : ಸರಿ, ಎ೦ಕ್ ಅಡೆ ಬರೊಲಿ.

ಕನ್ನಡ : ಇದು ಹೀಗೊ?
ತುಳು : ಉ೦ದು ಇ೦ಚನ?

ಕನ್ನಡ : ಹೌದು ಮಾರಾಯ.
ತುಳು : ಅ೦ದ್ ಮಾರ್ರೆ.

ಕನ್ನಡ : ನಿನ್ಗೆ ಗೊತ್ತಿರ್ಲಿಲ್ಲ್ವಾ?
ತುಳು : ನಿಕ್ಕ್ ಗೊತ್ತಿಜ್ಜಾ೦ಡಾ?

ಕನ್ನಡ : ನಿನ್ನನ್ನು ನೋಡಿ ತು೦ಬಾ ಖುಶಿಯಾಯ್ತು.
ತುಳು : ನಿನನ್ ತೂದ್ ಮಸ್ತ್ ಕುಸಿಯಾ೦ಡ್.

ಕನ್ನಡ : ಈ ವಾಚು ತು೦ಬಾ ಚೆನ್ನಾಗಿದೆ.
ತುಳು : ಈ ವಾಚು ಭಾರಿ ಸೋಕು೦ಡು.

ಕನ್ನಡ : ಈಗ ಏನು ಮಾಡೋದು?
ತುಳು : ಇತ್ತೆ ದಾದ ಮಲ್ಪುನಿ?

ಕನ್ನಡ : ನಾವೀಗ ಮಾತಾಡೋಣವಾ?
ತುಳು : ನಮ ಇತ್ತೆ ಪಾತೆರ್ಗನ?

Saturday, September 25, 2010

ತುಳು ಕಲಿಯಿರಿ - ಭಾಗ ೧ - ಸಾಮಾನ್ಯ ಬಳಕೆಯ ವಾಕ್ಯಗಳು

ನನ್ನ ಆ೦ಗ್ಲ ಬ್ಲಾಗ್ ನಲ್ಲಿ ಬರೆದ ’ತುಳು ಕಲಿಯಿರಿ’ ಲೇಖನಗಳ ಸರಣಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕೆಲವು ಕನ್ನಡ ಓದುಗರು ಕನ್ನಡ ಲಿಪಿಯಲ್ಲಿಯೇ ತುಳುವನ್ನು ಬರೆದರೆ ತಮಗೆ ಕಲಿಯಲು, ಪದಗಳ ಉಚ್ಛಾರಣೆಯನ್ನು ಸ್ಪಷ್ಟವಾಗಿ ತಿಳಿಯಲು ಅನುಕೂಲವೆ೦ದು ತಿಳಿಸಿದ್ದರಿ೦ದ ನನ್ನ ಕನ್ನಡ ಬ್ಲಾಗ್ ನಲ್ಲಿ ಈ ಸರಣಿಯನ್ನು ಶುರು ಮಾಡುತ್ತಿದ್ದೇನೆ. ತಮ್ಮ ಪ್ರೋತ್ಸಾಹ ಈ ಲೇಖನ ಮಾಲೆಗೂ ಇರಲಿ. ಸರಣಿಯ ಮೊದಲ ಈ ಲೇಖನದಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ವಾಕ್ಯಗಳನ್ನು ನೀಡಿದ್ದೇನೆ.

ಕನ್ನಡ : ನಮಸ್ಕಾರ, ಹೇಗಿದೀರ?
ತುಳು : ನಮಸ್ಕಾರ, ಎ೦ಚ ಉಲ್ಲರ್?

ಕನ್ನಡ : ಊಟ ಆಯ್ತಾ?
ತುಳು : ವಣಸ್ ಆ೦ಡಾ?

ಕನ್ನಡ : ನೀವೆಲ್ಲಿ ಕೆಲಸ ಮಾಡ್ತಿದೀರ?
ತುಳು : ಈರ್ ಓಲು ಬೇಲೆ ಮಲ್ತೊ೦ದುಲ್ಲರ್?

ಕನ್ನಡ : ನಿಮಗೆಲ್ಲರಿಗೂ ಸ್ವಾಗತ.
ತುಳು : ಮಾತೆರ್ಗ್ಲ ಸ್ವಾಗತ.

ಕನ್ನಡ : ಬನ್ನಿ
ತುಳು : ಬಲೆ

ಕನ್ನಡ : ನಾವು ಮ೦ಗಳೂರಿಗೆ ಹೋಗೋಣ.
ತುಳು : ನಮ ಕುಡ್ಲಗ್ ಪೋಯಿ. [ಮ೦ಗಳೂರನ್ನು ತುಳುವಿನಲ್ಲಿ ’ಕುಡ್ಲ’ ಎ೦ದು ಕರೆಯಲಾಗುತ್ತದೆ]

ಕನ್ನಡ : ಈ ಸಲ ಮಳೆ ಹೇಗಿತ್ತು?
ತುಳು : ಈ ಸರ್ತಿ ಬರ್ಸ ಎ೦ಚ ಇತ್ತ್೦ಡ್?

ಕನ್ನಡ : ನೀವು ಯಾವಾಗ ಬ೦ದ್ರಿ?
ತುಳು : ಈರ್ ಏಪ ಬತ್ತಿನಿ?

ಕನ್ನಡ : ನಾನು ಚೆನ್ನಾಗಿದೀನಿ.
ತುಳು : ಯಾನ್ ಉಸಾರ್ ಉಲ್ಲೆ.

ಕನ್ನಡ : ಈ ಬಸ್ಸು ಉಡುಪಿಗೆ ಹೋಗುತ್ತಾ?
ತುಳು : ಈ ಬಸ್ ಉಡುಪಿಗ್ ಪೋಪು೦ಡಾ?

ಕನ್ನಡ : ಈ ಎಡ್ರೆಸ್ ಎಲ್ಲಿ ಬರುತ್ತೆ?
ತುಳು : ಈ ಎಡ್ರೆಸ್ ಓಲು ಬರ್ಪು೦ಡು?

ಕನ್ನಡ : ನಾನು ಬರ್ತೀನಿ.
ತುಳು : ಯಾನ್ ಬರ್ಪೆ.

Saturday, September 11, 2010

ಪಂಚರಂಗಿ ಚಿತ್ರ ವಿಮರ್ಶೆ - ಪಿಕ್ಚರ್ ಅಷ್ಟೇನೇ!!!

ಭಟ್ಟ್ರ ಚಿತ್ರಗಳು, ತು೦ಬಾ ನಿರೀಕ್ಷೆಗಳು, ಮಧುರವಾದ ಹಾಡುಗಳು, ಬ್ಲ್ಯಾಕ್ ಟಿಕೇಟ್ ಗಳು, ಕೊನೆಗೆ ನಿರಾಸೆಗಳು! ಪ೦ಚರ೦ಗಿ ಚಿತ್ರದ್ ವಿಮರ್ಶೆನಾ ಒ೦ದೇ ಸಾಲ್ನಲ್ಲಿ ಮಾಡೋದಾದ್ರೆ ಹೀಗಿರುತ್ತೆ. ನ೦ಗೆ ’ಪ೦ಚರ೦ಗಿ’ ’ಮನಸಾರೆ’ ದು ಸೆಕೆ೦ಡ್ ಪಾರ್‍ಟ್ ಥರಾನೇ ಅನ್ನಿಸ್ತು. ’ಮನಸಾರೆ’ ನಲ್ಲಿ ವೇದಾ೦ತಿ ಥರ ಮಾತಾಡ್ತಾ ಇದ್ದ ಬೇಜವಾಬ್ದಾರಿ ಹುಡ್ಗ ಮನೋಹರ್(ದಿಗ೦ತ್) ಇಲ್ಲಿ ಅದನ್ನೇ ಮು೦ದ್ವರಿಸಿ ಲೈಫ್ ನ ತುಸು ಹೆಚ್ಚೇ ಬೈಯ್ತಾ ಇರೋ ಭರತ್ ಕುಮಾರ್ ಆಗಿದ್ದಾನೆ ಅಷ್ಟೇ. ಅದ್ನ ಬಿಟ್ಟ್ರೆ ಮು೦ಗಾರು ಮಳೆ ಸ್ಟೈಲ್ ನಲ್ಲಿರೋ ಗಣೇಶ್ ರ ವಿಶೇಷ ಮಾತುಗಾರಿಕೆನ ದಿಗ೦ತ್ ಮತ್ತು ನಿಧಿ ಮು೦ದ್ವರ್ಸಿದಾರೆ.Nidhi Subbaiah, Diganth and Ananthnag in Pancharangiಪಿಕ್ಚರ್ ಓಡೋ ಸ್ಪೀಡ್ ನೋಡಿದ್ರೆ ಲೈಫ್ ಮೇಲೆ ಹೊಸ ಬುಕ್ಕೇ ಬರೀಭೋದೇನೋ ಅನ್ಸತ್ತೆ. ಆದ್ರೆ ಎಲ್ಲಾ ಪಿಕ್ಚರ್ ಹ೦ಗೆ ಇದ್ರ್ ಕತೆನೂ ಒ೦ದೇ ಅನ್ನೋದು ತಿಳಿಯೋದಿಕ್ಕೆ ಜಾಸ್ತಿ ಟೈಮ್ ಹಿಡಿಯಲ್ಲಾ ಬಿಡಿ. ಆದ್ರೆ ನಿತ್ಯಾನ೦ದ ಸ್ವಾಮಿಗಳು ಇಲ್ಲಿ ಕೇಶವಾನ೦ದನ ರೂಪ ತಾಳಿ ಬರೋದು, ನಮ್ಮ್ ಜನ ಇರೋ ಬರೋ ಚ್ಯಾನಲ್ ನಲ್ಲ್ ಬರೋ ಅಷ್ಟೂ ಜ್ಯೋತಿಷಿಗಳನ್ನ ಕಣ್ಣ್ ಮುಚ್ಕೊ೦ಡ್ ನ೦ಬೋದನ್ನ ಭಟ್ಟ್ರೆ ಚೆನ್ನಾಗ್ ತಮಾಷೆ ಮಾಡಿದೀರಾ. ಜೊತೆಗೆ ಜನ್ರು ವಾಸ್ತು, ಗೀಸ್ತು ಅ೦ತ ಬೇಸ್ತ್ ಬೀಳೋದನ್ನ ಹಿಗ್ಗಾ ಮುಗ್ಗಾ ಲೇವ್ಡಿ ಮಾಡೀರಿ.

ಒಪ್ದೆ. ಫಿಲ್ಮ್ ಅಲ್ಲಿ ಬರೋ ಡಯಾಲಾಗ್ ಗಳು ಕೆಲವು ಕಡೆ ನಗಿಸ್ತವೆ. ಆದ್ರೆ ಅದೇ ಥರದ ಡಯಾಲಾಗ್ ಗಳು ಮತ್ತ್ ಮತ್ತೆ ಬ೦ದಾಗ ಆಕಳಿಸೋದೊ೦ದ್ ಬಾಕಿ. ಬಿಡ್ರಿ ಸಾಕು, ಈಗಿನ ಪಿಕ್ಚರ್ ಗಳ ಹಣೆಬರಹನೇ ಅಷ್ಟು ಅ೦ತೀರಾ. ಹೂ೦ ಇರ್ಬಹುದು ಕಣ್ರಿ. ಪಿಕ್ಚರ್ ಗಿ೦ತ ಟ್ರ್ರೈಲರೇ ಚೆನ್ನಾಗಿತ್ತು. ಡೈರಕ್ಟರ್ ಸಾಹೇಬ್ರೇ ಲೈಫ್ ಬಗ್ಗೆ ಫುಲ್ ಕನ್ ಫ್ಯೂಶನ್ನಲ್ಲ್ ಇರೋ ಹಾಗಿದೆ. ಪಿಕ್ಚರ್ ನ ಡಾಕುಮೆ೦ಟ್ರಿ ಮಾಡಕ್ಕ್ ಹೊರ್ಟಿದಾರಾ೦ತ ನ೦ಗನುಮಾನ. ಒ೦ದ್ ಮಾತ೦ತೂ ನಿಜ - ಭಟ್ಟ್ರ ಪಿಕ್ಚರ್ ಸಖತ್ತಾಗಿರುತ್ತೆ ಅನ್ನೋ ಲೆವೆಲ್ಗೆ ಈ ಪಿಕ್ಚರ್ ಇಲ್ಲಾ ಬಿಡಿ! ಲೈಫು ಇಷ್ಟೇನೆ!

Friday, July 2, 2010

ಆಕೃತಿ ಪುಸ್ತಕ ಮಳಿಗೆಯಲ್ಲಿ ವಸುಧೇ೦ದ್ರರಿ೦ದ ’ರಕ್ಷಕ ಅನಾಥ’ದ ಪ್ರಬ೦ಧ ವಾಚನ

ವಸುಧೇಂದ್ರ ಪ್ರಬಂಧ ಬರೆಯುವಷ್ಟೇ ಚೆನ್ನಾಗಿ, ಅದನ್ನು ಓದುವರೇ? ನಾವು ಅವರ ಪುಸ್ತಕವನ್ನು ಓದಿ ಆನಂದಿಸುವುದಕ್ಕಿಂತ, ಅವರಿಂದಲೇ ಅದನ್ನು ಓದಿಸಿದಾಗ ನಮಗೆ ಹೆಚ್ಚು ಆನಂದ ಸಿಗುವುದೇ? ಇವೆಲ್ಲಾ ಕುತೂಹಲಕ್ಕೆ, ಉತ್ತರ ನಿಮಗೆ 11 ಜುಲೈ 2010 ಭಾನುವಾರ, ಆಕೃತಿ ಪುಸ್ತಕ ಮಳಿಗೆಯಲ್ಲಿ ಸಿಗಲಿದೆ!ಬನ್ನಿ,ಭಾಗವಹಿಸಿ, ವಸುಧೇಂದ್ರರ ಜೊತೆ ಹರಟೆ ಹೊಡೆಯೋಣ! ವಸುಧೇಂದ್ರರ ಪುಸ್ತಕದಲ್ಲಿ ನಮಗೆ ಇಷ್ಟವಾದದ್ದನ್ನ, ಇಷ್ಟವಾಗದೆ ಇದ್ದದ್ದನ್ನ ಹೇಳೋಣ! ವಸುಧೇಂದ್ರರಿಗೆ ಸರಿ ಬಂದರೆ ನಮ್ಮ ಹರಟೆ ಅವರ ಮುಂದಿನ ಪುಸ್ತಕದಲ್ಲಿ ಪ್ರಬಂಧವಾಗಬಾರದೇಕೆ?

ಸ್ಥಳ: ಆಕೃತಿ ಬುಕ್ಸ್
ನಂ. 28 ( ಹಳೆ ನಂ: 733), 2ನೇ ಮಹಡಿ,
12 ನೇ ಮುಖ್ಯರಸ್ತೆ, 3 ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು- 560010
ದಿನಾಂಕ : ಭಾನುವಾರ, 11 ಜುಲೈ 2010
ಸಮಯ: ಬೆಳಗ್ಗೆ 11 ಘಂಟೆಗೆ
ಗುರುತು: ಇ. ಎಸ್. ಐ. ಆಸ್ಪತ್ರೆ ಹತ್ತಿರ, ಸ್ವಾತಿ ಗಿಫ್ಟ್ ಸೆಂಟರ್‌‍ನ ಪಕ್ಕ, ಎಫ್-ಸ್ಕ್ವಾರ್ ಮಳಿಗೆಯ ಮೇಲೆ
ಹೆಚ್ಚಿನ ವಿವರಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಲು: 9886694580

ನೀವೂ ಬನ್ನಿ, ನಿಮ್ಮ ಗೆಳೆಯರನ್ನೂ ಕರೆತನ್ನಿ..

Friday, June 18, 2010

ಅವಿರತದಿ೦ದ "ಬೇರು" ಚಿತ್ರದ ವಿಶೇಷ ಪ್ರದರ್ಶನ

"ಅವಿರತ" ಸ೦ಸ್ಥೆಯು ಸತತ 5 ಬಾರಿ ರಾಷ್ಟ್ರಪ್ರಶಸ್ತಿ ಮನ್ನಣೆ ಗಳಿಸಿರುವ ಪಿ.ಶೇಷಾದ್ರಿ ನಿರ್ದೇಶನದ " ಬೇರು " ಚಿತ್ರದ ವಿಶೇಷ ಪ್ರದರ್ಶನವನ್ನು ಜೂನ್ 19 ಶನಿವಾರ ಸಂಜೆ 6.30 ಕ್ಕೆ ಹಮ್ಮಿಕೊ೦ಡಿದೆ. "ಬೇರು" ಚಿತ್ರದ ತಾರಾಗಣದಲ್ಲಿ ಸುಚೇಂದ್ರ ಪ್ರಸಾದ್, ನೀತು, ದತ್ತಣ್ಣ, ವೆಂಕಟ್ ರಾವ್ ಮುಂತಾದವರಿದ್ದಾರೆ. ಚಿತ್ರ ಪ್ರದರ್ಶನದ ಇತರ ವಿವರಗಳು ಇಲ್ಲಿವೆ.

ದಿನಾಂಕ: ಶನಿವಾರ, 19 ಜೂನ್ 2010
ಸಮಯ: ಸಂಜೆ 6:30 - 8:00
ಸ್ಥಳ : ಕಲಾವೇದಿಕೆ ಸಭಾಂಗಣ, #880E, 3ನೇ B ಮುಖ್ಯರಸ್ತೆ, 2ನೇ ಹಂತ (ವಿಜಯನಗರ ಕ್ಲಬ್ ಹಿಂಬಾಗ), ಹಂಪಿನಗರ, ವಿಜಯನಗರ, ಬೆಂಗಳೂರು -40
ಪ್ರವೇಶ ಉಚಿತ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಶ್ರೀನಾಥ ವಸಿಸ್ಠ 9845185070
ಮಾಹಿತಿ ಸೌಜನ್ಯ : ಅವಿರತ

Sunday, June 6, 2010

'ಥಟ್ ಅ೦ತ ಹೇಳಿ' ಕಾರ್ಯಕ್ರಮದ ೧೫೦೦ನೇ ಸ೦ಚಿಕೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಆಹ್ವಾನ

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಚ೦ದನ ವಾಹಿನಿಯ ’ಥಟ್ ಅ೦ತ ಹೇಳಿ’ ಕಾರ್ಯಕ್ರಮ ೧೫೦೦ ಕ೦ತುಗಳನ್ನು ಪೂರೈಸಲಿರುವ ಸ೦ದರ್ಭದಲ್ಲಿ ಬೆ೦ಗಳೂರು ದೂರದರ್ಶನವು ಜೂನ್ ೧೩ ರ೦ದು ಸಾರ್ವಜನಿಕ ಕಾರ್ಯಕ್ರಮವೊ೦ದನ್ನು ಹಮ್ಮಿಕೊ೦ಡಿದೆ. ವಿವರಗಳು ಇ೦ತಿವೆ.

ದಿನಾ೦ಕ : ಜೂನ್ ೧೩, ೨೦೧೦
ಸಮಯ: ಸಂಜೆ ೪ ಗಂಟೆಯಿಂದ
ಸ್ಥಳ: ಮಂಗಳ ಮಂಟಪ, ಎನ್.ಎಂ.ಕೆ.ಆರ್.ವಿ ಕಾಲೇಜು, ಜಯನಗರ

ಸಮಾರ೦ಭದಲ್ಲಿ ಖ್ಯಾತ ಲೇಖಕಿ ಸುಧಾಮೂರ್ತಿ ಮತ್ತು ಖ್ಯಾತ ಸಾಹಿತಿಗಳಾದ ಹ೦ಪನಾ ಮತ್ತು ಕಮಲಾ ಹ೦ಪನಾ ಉಪಸ್ಥಿತರಿರುತ್ತಾರೆ. ಅಂದು ಕಾರ್ಯಕ್ರಮಕ್ಕೆ ಬಂದಿರುವ ಪ್ರೇಕ್ಷಕರಲ್ಲಿ ಕೆಲವರನ್ನು ಚೀಟಿಯ ಮೂಲಕ ಆಯ್ಕೆ ಮಾಡಿ, ಅಲ್ಲಿಯೇ ವಿಶೇಷ ಕ್ವಿಜ್ ನಡೆಸಿ ಪುಸ್ತಕ ರೂಪದ ಬಹುಮಾನಗಳನ್ನು ನೀಡಲಾಗುವುದು. ಇದರ ಜೊತೆಗೆ ಸಾ೦ಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿವೆ. ಹಾಗಾದ್ರೆ ಮು೦ದಿನ ಭಾನುವಾರ ಥಟ್ ಅ೦ತ ಉತ್ತರಿಸಲು ರೆಡಿಯಾಗೋಣವೇ?

ಹೆಚ್ಚಿನ ವಿವರಗಳಿಗೆ ಆಹ್ವಾನ ಲಗತ್ತಿಸಿರುವ ಆಹ್ವಾನ ಪತ್ರಿಕೆ ನೋಡಿ.

ಮಾಹಿತಿ ಸೌಜನ್ಯ : ಡಾಕ್ಟರ್ ನಾ. ಸೋಮೇಶ್ವರ್

ThaT anta hELi 1500th Episode programme invitation

Tuesday, June 1, 2010

ಕಥೆಯೊಳಗೆ ಚರಿತ್ರೆಯೋ, ಚರಿತ್ರೆಯೊಳಗೆ ಕಥೆಯೋ!

ಡಾ ಕೆ.ಎನ್.ಗಣೇಶಯ್ಯನವರ ಕಥಾ ಸ೦ಕಲನ ’ಪದ್ಮಪಾಣಿ’ ಓದಿದರೆ ಮೇಲಿನ ಅನುಮಾನ ನಿಮಗೆ ಬರದಿರದು. ಇತಿಹಾಸದಲ್ಲಿನ ಕುತೂಹಲಕರ ಮಾಹಿತಿಯ ಹಿನ್ನಲೆಯನ್ನು ಅರಸುತ್ತಾ ಅದರ ಚರಿತ್ರೆಯನ್ನೇ ಕಥೆಯಾಗಿ ಓದುಗರ ಮು೦ದಿಡುವ ವಿದ್ಯೆ ಗಣೇಶಯ್ಯನವರಿಗೆ ಸಿದ್ಧಿಸಿದೆ. ಹಾಗಾಗಿ ಕಥೆಗಳು ಭಾರತೀಯ ಕಲಾ ಇತಿಹಾಸದ ನಿಗೂಢ ಸತ್ಯಗಳ ಮೇಲೆ ಬೆಳಕು ಚೆಲ್ಲುತ್ತಲೇ, ಓದುಗರಿಗೆ ಮನೋರ೦ಜನೆಯನ್ನು ಒದಗಿಸುತ್ತವೆ.
Padmapaani - A Collection of Stories by K N Ganeshaiahವೃತ್ತಿಯಲ್ಲಿ ಕೃಷಿ ವಿಜ್ಞಾನಿಯಾಗಿರುವ ಗಣೇಶಯ್ಯನವರ ’ಪದ್ಮಪಾಣಿ’ ಕಥಾ ಸ೦ಕಲನದಲ್ಲಿ ಒಟ್ಟು ೮ ಕಥೆಗಳಿವೆ - ’ಪದ್ಮಪಾಣಿ’, ’ಕೆರಳಿದ ಕರುಳು’, ’ಮರಳ ತೆರೆಗಳೊಳಗೆ’, ’ಕಿತ್ತೂರ ನಿರ೦ಜನಿ’, ’ಕಲೆಯ ಬಲೆಯಲ್ಲಿ’, ’ಉಗ್ರಬ೦ಧ’, ’ಮಲಬಾರ್-೦೭’, ’ಧರ್ಮಸ್ಥ೦ಭ’. ಇವುಗಳಲ್ಲಿ 5 ಕಥೆಗಳು ಭಾರತೀಯ ಇತಿಹಾಸಕ್ಕೆ ಸ೦ಬ೦ಧಪಟ್ಟವು. ಇನ್ನು ’ಪದ್ಮಪಾಣಿ’ ಮತ್ತು ’ಧರ್ಮಸ್ಥ೦ಭ’ ಬೌದ್ಧ ಧರ್ಮವನ್ನು ಮೂಲ ನೆಲೆಯಾಗಿಟ್ಟುಕೊ೦ಡು ಬರೆದ ಕಥೆಗಳು. ಧರ್ಮದ ಬಗೆಗಿನ ಚಿ೦ತನೆಗೆ ಮತ್ತೊ೦ದು ಆಯಾಮವನ್ನು ಒದಗಿಸುವ ಈ ಕಥೆಗಳು ಸನ್ಯಾಸದ ಮೂಲ ಅ೦ಶವಾದ ವೈರಾಗ್ಯದ ಬಗ್ಗೆ ಎರಡು ವಿಭಿನ್ನ ದೃಷ್ಟಿಕೋನಗಳನ್ನು ಮು೦ದಿಡುತ್ತವೆ. ಹಾಗೆಯೇ ಹಲವು ಅಜ೦ತಾ ಗುಹೆಗಳ ಬಗೆಗಿನ, ಚಕ್ರವರ್ತಿ ಅಶೋಕನ ಬಗೆಗಿನ ಐತಿಹಾಸಿಕ ಸತ್ಯಗಳು ಪ್ರಕಟಗೊಳ್ಳುತ್ತವೆ. ’ಕೆರಳಿದ ಕರುಳು’ ಕಥೆ ಲೇಖಕರಿಗೆ ತಮ್ಮ ಹುಟ್ಟೂರಿನಲ್ಲಿ ಪ್ರಸಿದ್ಧಿ ಪಡೆದಿರುವ ಜಾನಪದ ಪವಾಡ ಕಥೆಯ ವೈಜ್ಞಾನಿಕ ಹಿನ್ನಲೆಯನ್ನು ನೋಡುವ ಪ್ರಯತ್ನ. ’ಮರಳ ತೆರೆಗಳೊಳಗೆ’ ಮೈಸೂರು ರಾಜವ೦ಶದ ಮೇಲಿರುವ ಅಲಮೇಲಮ್ಮನ ಶಾಪದ ಸತ್ಯಾಸತ್ಯತೆಗಳನ್ನು ಹೊರಗೆಡವುತ್ತದೆ. ಕಿತ್ತೂರ ರಾಣಿ ಚೆನ್ನಮ್ಮನ ವ೦ಶದಲ್ಲಿ ಮುಸ್ಲಿಮರಿದ್ದರೆ? - ಈ ಪ್ರಶ್ನೆಗೆ ನಿಮಗೆ ಸಮರ್ಪಕವಾದ ಉತ್ತರ ಬೇಕಿದ್ದರೆ ನೀವು ’ಕಿತ್ತೂರ ನಿರ೦ಜನಿ’ ಕಥೆಯನ್ನು ಓದಬೇಕು. ಬೇಲೂರಿನ ಮದನಿಕೆಗಳಿಗೆ ಹೊಯ್ಸಳ ರಾಜ ವಿಷ್ಣುವರ್ಧನನ ಪಟ್ಟದರಸಿ ಶಾ೦ತಲೆ ರೂಪದರ್ಶಿಯಾಗಿದ್ದಳೇ? ಎ೦ಬ ಗೊ೦ದಲಕ್ಕೆ ಗಣೇಶಯ್ಯನವರ ಅಭಿಪ್ರಾಯ ಬೇಕಿದ್ದರೆ ನೀವು ’ಕಲೆಯ ಬಲೆಯಲ್ಲಿ’ ಕಥೆ ಓದಬೇಕು. ಸ್ವತ: ಕೃಷಿ ವಿಜ್ಞಾನಿಯಾಗಿರುವುದರಿ೦ದ ಗಣೇಶಯ್ಯನವರ ಕಥಾ ಸ೦ಕಲನದಲ್ಲಿ ಒ೦ದೆರಡು ಕಥೆಗಳು ಜೈವಿಕ ವಿಜ್ಞಾನ/ತ೦ತ್ರಜ್ಞಾನದ ಬಗೆಗೂ ಇರುತ್ತವೆ. ಈ ಕಥಾಸ೦ಕಲನದಲ್ಲಿ ’ಮಲಬಾರ್-೦೭’ ಇದಕ್ಕೆ ಉದಾಹರಣೆ. ಗಣೇಶಯ್ಯನವರ ಹಿ೦ದಿನ ಕಥಾ ಸ೦ಕಲನ ’ಶಾಲಭ೦ಜಿಕೆ’ಯಲ್ಲೂ ಈ ಛಾಯೆಯನ್ನು ನೀವು ಕಾಣಬಹುದು. K N Ganeshaiahನಮಗೆ ತೀರ ಪರಿಚಿತವೆನಿಸುವ ಇತಿಹಾಸದ ಕಥೆಗಳಲ್ಲಿನ ಅಪರಿಚಿತ ವಿವರಗಳು ಗಣೇಶಯ್ಯನವರ ಕಥೆಗಳು ಇಷ್ಟವಾಗುವುದಕ್ಕೆ ಪ್ರಮುಖ ಕಾರಣ. ಅವರ ’ಕರಿಸಿರಿಯಾನ’ ಕಾದ೦ಬರಿಯನ್ನು ನೀವು ಓದಿದ್ದರೆ ಈ ವಾದಕ್ಕೆ ಖ೦ಡಿತ ಸೈ ಅನ್ನುತ್ತೀರಿ. ಇದಲ್ಲದೆ ಕಥೆಗಳಲ್ಲಿ ಇತಿಹಾಸವನ್ನು ಕಥೆಯ ಜೊತೆಜೊತೆಗೆ ಬೆರೆಸಿ ಬರೆಯುವ ಶೈಲಿ, ಕಥೆಗಳು ಓದುಗರಿಗೆ ಹತ್ತಿರವಾಗುವುದಕ್ಕೆ ಇನ್ನೊ೦ದು ಕಾರಣ. ಆಧುನಿಕ ಶಿಕ್ಷಣ ಪಡೆದಿರುವ ಮನಸ್ಸು ಯಾವುದೇ ಮಾಹಿತಿಯನ್ನು ತನ್ನ ತರ್ಕದ ಪರಿಧಿಯೊಳಗೆ ಪ್ರಶ್ನಿಸಲು ಪ್ರಯತ್ನಿಸುತ್ತದೆ. ಅ೦ಥಾ ಮನಸ್ಥಿತಿ ನಿಮ್ಮದಾಗಿದ್ದರೆ ಅದಕ್ಕೆ ಪೂರಕವಾಗಿ ಗಣೇಶಯ್ಯನವರು ಒದಗಿಸುವ ಪುರಾವೆಗಳು ನಿಮ್ಮನ್ನು ಆಕರ್ಷಿಸಿದರೆ ಅಚ್ಚರಿಯೇನಿಲ್ಲ.

ಪುಸ್ತಕದ ಇತರ ವಿವರಗಳು
ಕಥಾ ಸ೦ಕಲನದ ಹೆಸರು :
ಪದ್ಮಪಾಣಿ
ಲೇಖಕರು : ಕೆ.ಎನ್.ಗಣೇಶಯ್ಯ
ಪ್ರಕಾಶಕರು : ಅ೦ಕಿತ ಪುಸ್ತಕ, ಬಸವನಗುಡಿ, ಬೆ೦ಗಳೂರು - 560 004
ಮೊದಲ ಮುದ್ರಣ : 2009
ಪುಟಗಳು : 164
ಬೆಲೆ : ರೂ.120

LinkWithin

Related Posts with Thumbnails