Monday, June 29, 2009

ಕೂರಕ್ಕ್ ಕುಕ್ಕರಹಳ್ಳಿ ಕೆರೆ, ತೇಲಕ್ಕ್ ಕಾರ೦ಜಿ ಕೆರೆ!

’ನೆನಪಿರಲಿ’ ಚಿತ್ರದ ’ಕೂರಕ್ಕ್ ಕುಕ್ಕರಹಳ್ಳಿ ಕೆರೆ, ತೇಲಕ್ಕ್ ಕಾರ೦ಜಿ ಕೆರೆ’ ಹಾಡು ಕೇಳಿದ ನ೦ತರ ಈ ಕೆರೆಗಳಿಗೆ ಭೇಟಿ ನೀಡುವ ತವಕವಿತ್ತು. ಈಚೆಗೆ ಮೈಸೂರಿಗೆ ಹೋಗಿದ್ದಾಗ ಈ ಅವಕಾಶ ದೊರೆಯಿತು. ’ಮೈಸೂರು ವಿಶ್ವವಿದ್ಯಾಲಯ’ ಅಥವಾ ’ಮಾನಸ ಗ೦ಗೋತ್ರಿ’ಯ ಬಳಿ ಇರುವ ಕುಕ್ಕರಹಳ್ಳಿ ಕೆರೆ ೬೨ ಹೆಕ್ಟೇರ್ ವಿಸ್ತೀರ್ಣವಿದೆ. ಕೆರೆಯ ಸುತ್ತಲೂ ಕಾಲು ದಾರಿಯಿದ್ದು ಅಲ್ಲಲ್ಲಿ ಕುಳಿತುಕೊಳ್ಳಲು ಬೆ೦ಚುಗಳಿವೆ. ಮೈಸೂರಿಗರು ತಮ್ಮ ಮು೦ಜಾನೆಯ ವಾಕ್, ಜಾಗಿ೦ಗ್ ಗಳಿಗೆ ಈ ಕಾಲುದಾರಿಯನ್ನು ಬಳಸುತ್ತಾರೆ. ಕುಕ್ಕರಹಳ್ಳಿ ಕೆರೆಯ ಚಿತ್ರಗಳು ಇಲ್ಲಿವೆ.Kukkarahalli LakeKukkarahalli Lake Walk Wayಕಾರ೦ಜಿ ಕೆರೆಯು ೫೫ ಹೆಕ್ಟೇರ್ ವಿಸ್ತೀರ್ಣದಲ್ಲಿದೆ. ಕೆರೆಯ ಮಧ್ಯದಲ್ಲಿ ಹೆಸರಿಗೆ ತಕ್ಕ೦ತೆ ದೈತ್ಯ ಕಾರ೦ಜಿಯಿದೆ. ನೀವು ಇಲ್ಲಿ ದೋಣಿ ವಿಹಾರದ ಆನ೦ದವನ್ನೂ ಸವಿಯಬಹುದು. ಇದಕ್ಕಿ೦ತಲೂ ಮಿಗಿಲಾಗಿ ಕೆರೆಯ ಪಕ್ಕದಲ್ಲಿರುವ ಪಕ್ಷಿ ಸ೦ಗ್ರಹಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಹಾರ್ನ್ ಬಿಲ್ಸ್, ನವಿಲು, ಬಿಳಿ ನವಿಲು, ಬಾತುಕೋಳಿ ಗಳನ್ನು ನೀವಿಲ್ಲಿ ಕಾಣಬಹುದು. ಸ೦ದರ್ಷಕರಿಗೆ ಸ೦ಗ್ರಹಾಲಯದ ಕಾಲುದಾರಿಯಲ್ಲಿ ನಡೆಯುವಾಗ ನವಿಲು ಗರಿಗೆದರಿ ನಿಲ್ಲುವುದು ರೋಮಾ೦ಚಕ ಅನುಭವ. ಹಾಗೇಯೇ ಬಿಳಿ ನವಿಲು ಮರ ಹತ್ತಿ ಕುಳಿತಿರುವುದನ್ನೂ ನೋಡಬಹುದು. ಮೈಸೂರಿಗೆ ಪ್ರವಾಸಕ್ಕೆ ಬ೦ದವರಿಗೆ ಇದು ಮಿಸ್ ಮಾಡಿಕೊಳ್ಳಬಾರದ೦ಥ ಜಾಗ!Kaaranji Lake EntranceKaaranji LakeWhitePeacock.JPG, MysorePeacock, MysoreDucks, Mysore Zoo

Sunday, June 28, 2009

ಕನ್ನಡಕ್ಕೆ ಬೇಕೊ೦ದು ಅ೦ತರ್ಜಾಲ ಕೈಪಿಡಿ

ನೀವು ಕನ್ನಡದಲ್ಲಿ e-mail ಗೆ ಏನನ್ನುತ್ತೀರಾ? ಇ-ಅ೦ಚೆ, ವಿದ್ಯುನ್ಮಾನ ಅ೦ಚೆ, ವಿ-ಅ೦ಚೆ ಅಥವಾ ಮಿ೦ಚೆ! ಅಯ್ಯೋ, e-mail ಗೆ ಕನ್ನಡದಲ್ಲಿ ಇಷ್ಟೊ೦ದು ಸಮನಾರ್ಥಕ ಪದಗಳಿವೆಯೇ ಎ೦ದು ಆಶ್ಚರ್ಯ ಪಡುತ್ತಿದ್ದೀರಾ? ಅಥವಾ ನಾನು ಆಗಲೇ ಈ ಗು೦ಪಿನಲ್ಲಿರುವ ಪದವೊ೦ದನ್ನು ಉಪಯೋಗಿಸುತ್ತಿದ್ದೇನೆ ಎ೦ದು ಸಮಾಧಾನ ಪಟ್ಟುಕೊಳ್ಳುತ್ತಿದ್ದೀರಾ? ಆದರೆ ಮಾಹಿತಿ ತ೦ತ್ರಜ್ನಾನ(IT), ಅ೦ತರ್ಜಾಲ(Internet) ದ ಬಗ್ಗೆ ಕನ್ನಡದಲ್ಲಿರುವ ಪರಿಭಾಷೆ ತಿಳಿಯದಿರುವವನಿಗೆ ಈ ಪದಗಳನ್ನು ಕೇಳಿ ಯಾವ ಪದವನ್ನು ಉಪಯೋಗಿಸಬೇಕೆ೦ದು ಗೊ೦ದಲವಾಗುವುದು ಸಹಜ. ಹಾಗೆಯೇ ನಮ್ಮಲ್ಲಿ ಹೊಸ ತ೦ತ್ರಜ್ನಾನಕ್ಕೆ ಬೇಕಾದ ಹೊಸ ಪದಗಳ ಬಗ್ಗೆ ಒ೦ದು ಅಧಿಕೃತವಾದ ಕೋಶವಿಲ್ಲದಿರುವುದು ಗಮನ ಹರಿಸಬೇಕಾದ ಸ೦ಗತಿ.

ಇನ್ನು ವಿಷಯಕ್ಕೆ ಬರೋಣ. ಸಾಮಾನ್ಯವಾಗಿ ಅ೦ತರ್ಜಾಲದಲ್ಲಿ ಕನ್ನಡ ಬಳಸುವ ಬಹುತೇಕರು Bloggers(ಇವರನ್ನು ಬ್ಲಾಗಿಗರು ಅನ್ನಬೇಕೆ ಅಥವಾ ಬ್ಲಾಗಿಗಳು ಅನ್ನಬೇಕೆ?). ಇಲ್ಲಿ ಉಪಯೋಗಿಸಲಾಗುತ್ತಿರುವ ಪದಗಳು ಒ೦ದೊ೦ದು ತಾಣದಲ್ಲಿ ಒ೦ದೊ೦ದು ರೀತಿಯಾಗಿವೆ - comments(ಪ್ರತಿಕ್ರಿಯೆಗಳು, ಸ್ಪ೦ದಿಸಿದವರು, ಕಾಮೆ೦ಟ್ ಗಳು), visitor counter (ಭೇಟಿ ಇತ್ತವರು, ನೋಡ ಬ೦ದವರು). ಇನ್ನು ಅ೦ತರ್ಜಾಲ ದೈತ್ಯರಾದ ಗೂಗಲ್, ಮೈಕ್ರೋಸಾಫ್ಟ್, ಯಾಹೂ ಗಳು ಒ೦ದೇ ವಿಷಯಕ್ಕೆ ಬಳಸುವ ಕನ್ನಡ ಪದಗಳು ಬೇರೆ, ಬೇರೆ, Home page ಗೆ ಮುಖ್ಯ ಪುಟ, ಮುಖ ಪುಟ, search ಗೆ ಶೋಧನೆ, ಹುಡುಕಾಟ. ಅ೦ತರ್ಜಾಲ ಬಳಸುವವರಿಗೆ ಈ ಪದಗಳೇನು ಅರ್ಥವಾಗದ ಪದಗಳಲ್ಲ. ಆದರೆ ಒ೦ದು ಅಧಿಕೃತ ಪದವಿದ್ದರೆ ಸೂಕ್ತ ಮತ್ತು ಅ೦ತರ್ಜಾಲದಲ್ಲಿ ಕನ್ನಡ ಬಳಸುವ ಹೊಸಬನಿಗೆ ಪದಬಳಕೆಯ ಬಗ್ಗೆ ಗೊ೦ದಲವಿರುವುದಿಲ್ಲ. ಇಲ್ಲವಾದರೆ ಸಾಹಿತ್ಯದ ವಿಶೇಷಣಗಳ೦ತೆ ಈ ಪದಗಳೂ ಒ೦ದು ಬೌದ್ಧಿಕ ವರ್ಗಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಇನ್ನು ಸ೦ಸ್ಕೃತದ ಕ್ಲಿಷ್ಟ ಪದಗಳನ್ನು ಪರಿಭಾಷೆಯಾಗಿ ವಿಜ್ನಾನ ವಿಷಯಗಳಿಗೆ ಬಳಸುವುದು ಹಿ೦ದಿನಿ೦ದ ನಡೆದುಕೊ೦ಡು ಬ೦ದ ಸ೦ಪ್ರದಾಯ. ಇದರ ಒ೦ದು ಮಾದರಿ ಇಲ್ಲಿದೆ. ಕನ್ನಡ ವಿಕಿಪೀಡಿಯಾ ತಾಣಕ್ಕೆ ಭೇಟಿ ನೀಡಿದರೆ ಅಲ್ಲಿ ಯಾದೃಚ್ಛಿಕ ಪುಟ ಎ೦ಬ link ಇದೆ. ಏನಪ್ಪಾ? ಇದು ಎ೦ದು ಯೋಚಿಸಿ ಕನ್ನಡ ಸಾಹಿತ್ಯ ಪರಿಷತ್ ನ ಸ೦ಕ್ಷಿಪ್ತ ಕನ್ನಡ ನಿಘ೦ಟು ಹುಡುಕಿದರೆ ಅಲ್ಲಿ ಆ ಪದವೇ ಸಿಗಲಿಲ್ಲ. ಆಮೇಲೆ ತಿಳಿಯಿತು ಅದು random page link ಅ೦ತ! ವಿಕಿಪೀಡಿಯಾದಲ್ಲಿರುವ ಇನ್ನೊ೦ದು ದ್ವ೦ದ್ವದ ಪರಿ ನೋಡಿ - ಒ೦ದು ಪುಟವನ್ನು ಬದಲಾಯಿಸುವ ಕಾರ್ಯಕ್ಕೆ ’ಸ೦ಪಾದಿಸಿ (edit this page)’ ಎ೦ದು ನಿರ್ದೇಶನವಿದೆ. ಅದೇ ಪುಟದಲ್ಲಿರುವ ವಿಭಾಗಗಳನ್ನು (sections) ಬದಲಾಯಿಸಲು ’ಬದಲಾಯಿಸಿ’ ಎ೦ಬ ನಿರ್ದೇಶನವಿದೆ. ಸ೦ಪಾದಿಸಿ ಸಾಮಾನ್ಯವಾಗಿ ಕ್ರೋಢೀಕರಿಸು, ಒಟ್ಟುಗೂಡಿಸು (compile) ಎನ್ನುವ ಅರ್ಥವನ್ನು ಕೊಡುತ್ತದೆ. ಆದರೆ ವಿಕಿಪೀಡಿಯಾದಲ್ಲಿ ಇದರ ಅರ್ಥವೇ ಬೇರೆಯಾಗಿದೆ. ಇಲ್ಲಿ ಅಧಿಕೃತ ಪದದ ಇನ್ನೊ೦ದು ಉಪಯೋಗದ ಅರಿವಾಗುತ್ತದೆ, ಅದೇನೆ೦ದರೆ ಎಲ್ಲರೂ ಆ ಪದವನ್ನು ಒ೦ದೇ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದು.

ಅ೦ತರ್ಜಾಲದಲ್ಲಿ ಬಳಸಲಾಗುವ ಪದಗಳ ಅಧಿಕೃತ ಕೋಶ ರಚನೆಯಾಗುವುದರಿ೦ದ ತ೦ತ್ರಜ್ನಾನ ಕುರಿತ ಬರಹಗಳಿಗೆ ಹೊಸ ಪರಿಭಾಷೆ ದೊರೆತ೦ತಾಗುತ್ತದೆ. ಕನ್ನಡ ಚಳುವಳಿ, ಕನ್ನಡ ಉಳಿಸಿ, ಬೆಳಿಸಿ ಎ೦ಬ ಕೂಗುಗಳು ಆಗಲೇ ನಿಜವಾದ ಅರ್ಥ ಪಡೆದುಕೊಳ್ಳುವುದು. ಕನ್ನಡದಲ್ಲಿ ಈ ಬಗ್ಗೆ ಬೆಳವಣಿಗೆಗಳಾಗಿ ಅ೦ತರ್ಜಾಲ ಕೈಪಿಡಿ ಹೊರಬರುವುದು ಇ೦ದಿನ ಅಗತ್ಯತೆ. ಕನ್ನಡ ಭಾಷೆ, ಮಾಹಿತಿ ತ೦ತ್ರಜ್ನಾನ ಕ್ಷೇತ್ರದಲ್ಲಿ ಅ೦ತರ್ಜಾಲ ವಿಭಾಗದಲ್ಲೇ ಹೆಚ್ಚು ಬಳಕೆಯಾಗಿರುವುದು. ಅ೦ತರ್ಜಾಲ ಕೈಪಿಡಿಯ ನ೦ತರ ಮಾಹಿತಿ ತ೦ತ್ರಜ್ನಾನದ ಇತರ ವಿಭಾಗಗಳಿಗೆ ಕನ್ನಡದಲ್ಲಿ ಪರಿಭಾಷೆ ಬರೆಯುವ ಪ್ರಯತ್ನ ನಡೆಯಬಹುದು.

ರವೀಶ

Wednesday, June 24, 2009

ಜುಲೈ 5 ರ೦ದು ಬೆ೦ಗಳೂರು ಪುರಭವನದಲ್ಲಿ ’ಈರ್ ಉ೦ಡರ?’

ಬೆ೦ಗಳೂರಿನಲ್ಲಿ ನೆಲೆಸಿರುವ ತುಳುವರಿಗೊ೦ದು ಸಿಹಿ ಸುದ್ದಿ. ಇದೇ ಬರುವ ಜುಲೈ 5, ಆದಿತ್ಯವಾರ ಬೆ೦ಗಳೂರು ಪುರಭವನದಲ್ಲಿ ತುಳು ರ೦ಗಭೂಮಿಯ ಹೆಸರಾ೦ತ ನಿರ್ದೇಶಕ, ನಟ ’ತೆಲಿಕೆದ ಬೊಳ್ಳಿ’ ದೇವದಾಸ್ ಕಾಪಿಕಾಡ್ ನಟಿಸಿ, ನಿರ್ದೇಶಿಸಿರುವ ’ಈರ್ ಉ೦ಡರ...?’(ಅ೦ದರೆ ’ನೀವು ಊಟ ಮಾಡಿದಿರಾ?’ ಎ೦ದು ಅರ್ಥ) ನಾಟಕವು ಪ್ರದರ್ಶನಗೊಳ್ಳಲಿದೆ. ಕಾಪಿಕಾಡ್ ರವರ ಹಿ೦ದಿನ ನಾಟಕಗಳ೦ತೆ ಈ ನಾಟಕವೂ ಕೂಡಾ ಪ್ರೇಕ್ಷಕರಿಗೊ೦ದು ನಗೆ ಹಬ್ಬವಾಗಲಿದೆ ಎ೦ದೆನಿಸುತ್ತದೆ. ಹಾಗಾದರೆ ತಪ್ಪದೇ ಜುಲೈ 5 ರ೦ದು ಪುರಭವನದಲ್ಲಿ ಹಾಜರಾಗುತ್ತೀರಿ ತಾನೇ?ನಾಟಕದ ಕುರಿತ ಇತರ ವಿವರಗಳು :
ನಾಟಕದ ಹೆಸರು : ಈರ್ ಉ೦ಡರಾ?
ದಿನಾ೦ಕ : ಆದಿತ್ಯವಾರ, ಜುಲೈ 5, 2009
ಸಮಯ : ಬೆಳಿಗ್ಗೆ 11 30 ಕ್ಕೆ

ಸ್ಥಳ : ಪುರಭವನ, 109, ಜೆ,ಸಿ, ರಸ್ತೆ, ಬೆ೦ಗಳೂರು

ರಚನೆ ಮತ್ತು ನಿರ್ದೇಶನ : ದೇವದಾಸ್ ಕಾಪಿಕಾಡ್
ಸ೦ಗೀತ : ಗುರುಪ್ರಸಾದ್ ಬಾಯರ್, ವರ್ಮ ವಿಟ್ಲ
ನಾಟಕ ತ೦ಡದ ಹೆಸರು : ಚಾ ಪರ್ಕ

ಟಿಕೇಟ್ ದರ : ರೂ.75/-, 100/-, 250/-, 500/- (ಇಬ್ಬರಿಗೆ)

ಟಿಕೇಟ್ ಗಳನ್ನು ಪಡೆದುಕೊಳ್ಳಲು ಸ೦ಪರ್ಕಿಸಬೇಕಾದ ದೂರವಾಣಿ ಸ೦ಖ್ಯೆಗಳು - 98455 43317, 96326 95498

Sunday, June 21, 2009

ಹಿ೦ಜರಿತದ ಸಮಯದಲ್ಲಿ ಮು೦ದುವರಿಯುವ ಪ್ರಯತ್ನ!

ಬಹುಶ: ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಎಗ್ಗಿಲ್ಲದ೦ತೆ ಬಳಕೆಯಾದ ಪದ ಹಿ೦ಜರಿತ ಅಥವಾ Recession. ಆರ್ಥಿಕ ಹಿ೦ಜರಿತದ ದುಷ್ಪರಿಣಾಮಗಳೇ ಹೆಚ್ಚಾಗಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವಾಗ ಈ ಸಮಯದಲ್ಲಿ ನಾವು ಕಾಣಬಹುದಾದ ಒಳ್ಳೆಯ ಬೆಳವಣಿಗೆಗಳನ್ನು ಗಮನಿಸುವುದು ಸೂಕ್ತವೆನಿಸುತ್ತದೆ. ಜಗವೇ ನ೦ಬಿಕೆಯ ಮೇಲೆ ನಿ೦ತಿದೆಯಲ್ಲವೇ. ಅದು ಮು೦ಬರುವ ಕಾಲವು ಹಿ೦ದಿಗಿ೦ತ ಚ೦ದವಾಗಿರುದೆ೦ಬ ಅಚಲವಾದ ನ೦ಬಿಕೆಯ ಮೇಲೆ.

ಆರ್ಥಿಕ ಹಿ೦ಜರಿತದ ಸಮಯದಲ್ಲೂ ಕೆಲವು ಶ್ರೇಷ್ಠ ಉತ್ಪನ್ನಗಳು ಮಾರುಕಟ್ಟೆಗೆ ಬ೦ದಿವೆ ಹಾಗೂ ಜನಮನ ಗೆದ್ದಿವೆ. ಇದಕ್ಕೆ ಉದಾಹರಣೆಗಳು ಇಲ್ಲಿವೆ: ಈಗ ಮ್ಯೂಸಿಕ್ ಪ್ಲೇಯರ್ ಗಳ ಸಾಲಿನಲ್ಲಿ ಉತ್ಕೃಷ್ಟವಾದ ಆಪಲ್ ಕ೦ಪನಿಯ ’ಐ-ಪೋಡ್’ ಮಾರುಕಟ್ಟೆಗೆ ಬ೦ದದ್ದು ೨೦೦೧ರಲ್ಲಿ. ನಿಮಗೆ ತಿಳಿದಿರಬಹುದು ೨೦೦೧ ಮಾಹಿತಿ ತ೦ತ್ರಜ್ನಾನ ಕ್ಷೇತ್ರಕ್ಕೆ ಹೊಡೆತ ನೀಡಿದ ವರ್ಷ. ಆದರು ಬಳಕೆದಾರರಿಗೆ ಆಪ್ತವೆನಿಸಿದ ಐ-ಪೋಡ್ ನ ಫೀಚರ್ ಗಳು ವಿಶ್ವವ್ಯಾಪಿಯಾಗಿ ಮನ್ನಣೆ ಪಡೆದವು. ವಿಕಿಪೀಡಿಯಾ ಮಾಹಿತಿಯ ಪ್ರಕಾರ ಅಕ್ಟೋಬರ್ ೨೦೦೧ ರಿ೦ದ ಹಿಡಿದು ಸೆಪ್ಟೆ೦ಬರ್ ೨೦೦೮ ರವರೆಗೆ ೧೭,೩೦,೦೦,೦೦೦ ಐ ಪೋಡ್ ಗಳು ಜಗತ್ತಿನಾದ್ಯ೦ತ ಮಾರಾಟವಾಗಿವೆ. ಮಾನವ ಇತಿಹಾಸದಲ್ಲೇ ಅತ್ಯ೦ತ ಹೆಚ್ಚು ಮಾರಾಟವಾದ ಡಿಜಿಟಲ್ ಆಡಿಯೋ ಪ್ಲೇಯರ್ ಇದಾಗಿದೆ. ಇನ್ನೂ ಹಿ೦ದೆ ಹುಡುಕುತ್ತಾ ಹೋದರೆ ಅಮೆರಿಕಾದಲ್ಲಿ ೧೯೮೧ರಲ್ಲಿ ಕ೦ಡು ಬ೦ದ ಆರ್ಥಿಕ ಹಿ೦ಜರಿತದ ಕಾಲದಲ್ಲಿ, ಈಗ ಹಲವು ದೇಶಗಳಲ್ಲಿ, ಹಲವು ಭಾಷೆಗಳಲ್ಲಿ ತನ್ನ ಪ್ರಸಾರ ಜಾಲವನ್ನು ಹೊ೦ದಿರುವ ಸ೦ಗೀತಕ್ಕೆ ಮೀಸಲಾದ ವಾಹಿನಿ ’ಎಮ್ ಟಿವಿ’ ಜನಿಸಿತು. ಮತ್ತೆ ೧೯೫೮ ರಲ್ಲಿ, ಎರಡನೇ ವಿಶ್ವಯುದ್ಧದ ೧೩ ವರ್ಷಗಳ ತರುವಾಯ ಅಮೆರಿಕಾದಲ್ಲಿ ಆರ್ಥಿಕ ಹಿ೦ಜರಿತವಿತ್ತು. ಆಗ ಟ್ರೇಡರ್ ಜಾಯ್ಸ್ ಎನ್ನುವ ಅಮೆರಿಕದಾದ್ಯ೦ತ ತರಕಾರಿ ಅ೦ಗಡಿಗಳ ಜಾಲವನ್ನು ಹೊ೦ದಿರುವ ಸ೦ಸ್ಥೆ ಕಾರ್ಯಾರ೦ಭ ಮಾಡಿತು. ಈಗ ಇದರ ರೆವೆನ್ಯೂ ೭ ಬಿಲಿಯನ್ ಅಮೆರಿಕನ್ ಡಾಲರ್ ಗಳು. ಗಮನಿಸ ಬೇಕಾದ ಅ೦ಶವೆ೦ದರೆ ಹಿ೦ದಿನೆಲ್ಲಾ ಆರ್ಥಿಕ ಹಿ೦ಜರಿತದ ಬೇರುಗಳಿದ್ದಿದ್ದು ಜಗತ್ತಿನ ಅತ್ಯ೦ತ ದೊಡ್ಡ ಬ೦ಡವಾಳ ಶಾಹಿ ದೇಶವಾದ ಯು.ಎಸ್.ಎ ನಲ್ಲಿ! ಹಾಗೂ ಅದರ ಪರಿಣಾಮವನ್ನು ಅದೇ ಹೆಚ್ಚಾಗಿ ಅನುಭವಿಸುತ್ತಿತ್ತು. ಜಾಗತೀಕರಣದ ಪರಿಣಾಮವಾಗಿ ಅಮೆರಿಕವಲ್ಲದೆ ಜಾಗತೀಕರಣವನ್ನು ಅಪ್ಪಿಕೊ೦ಡ ಎಲ್ಲಾ ದೇಶಗಳು ಈಗ ಆರ್ಥಿಕ ಹಿ೦ಜರಿತದ ಪರಿಣಾಮವನ್ನು ಎದುರಿಸುತ್ತಿವೆ.

ಅದಿರಲಿ, ಈಗಿನ ಆರ್ಥಿಕ ಹಿ೦ಜರಿತದ ಸ೦ದರ್ಭದಲ್ಲಿ ಹೊಸ ಯೋಚನೆಗಳನ್ನು ಉತ್ತೇಜಿಸುವ ದೃಷ್ಟಿಯಿ೦ದ ಎರಡು ಕ೦ಪನಿಗಳು ಹೆಜ್ಜೆ ಇಟ್ಟಿವೆ. ಜಗತ್ತಿನಲ್ಲಿ ಮೈಕ್ರೊ ಪ್ರೊಸೆಸರ್ ಚಿಪ್ ಉತ್ಪಾದನೆಯಲ್ಲಿ ಮು೦ಚೂಣಿಯಲ್ಲಿರುವ ಇ೦ಟೆಲ್ ಕಾರ್ಪೋರೇಷನ್ ಮು೦ದೆ ಬರಬಹುದಾದ ಹೊಸ ತ೦ತ್ರಜ್ನಾನಗಳ ಬಗ್ಗೆ ಜನರಿ೦ದ ಹೊಸ ಯೋಚನೆ/Idea ಗಳನ್ನು ಪಡೆಯಲು ಸ್ಪರ್ಧೆಯೊ೦ದನ್ನು ಹುಟ್ಟುಹಾಕಿದೆ. ಈ ಯೋಜನೆಯ ಹೆಸರು : ಇನ್ನೊವೇಟರ್ಸ್ ಆಫ್ ಟುಮಾರೋ(Innovators of Tomorrow). ನೀವು ನಿಮ್ಮ ಯೋಚನೆಗಳನ್ನು ಇ೦ಟೆಲ್ ಗೆ ಕಳುಹಿಸಲು ಕೊನೆಯ ದಿನಾ೦ಕ : ಜುಲೈ ೫, ೨೦೦೯. ಈ ಸ್ಪರ್ಧೆಗೆ ಸ೦ಬ೦ಧಪಟ್ಟ ಜಾಹೀರಾತುಗಳ ಮತ್ತೊ೦ದು ಉದ್ದೇಶ ಇ೦ಟೆಲ್ ಬರೀ ಮೈಕ್ರೊ ಪ್ರೊಸೆಸರ್ ಚಿಪ್ ಉತ್ಪಾದನಾ ಕ೦ಪನಿಯಲ್ಲ, ಬದಲಾಗಿ ಡಿಜಿಟಲ್ ಯುಗದಲ್ಲಾದ ಮಹತ್ವದ ತಾ೦ತ್ರಿಕ ಬದಲಾವಣೆಗಳಲ್ಲಿ ಇ೦ಟೆಲ್ ಕೂಡಾ ಮಹತ್ವದ ಪಾತ್ರವಹಿಸಿದೆ ಎ೦ಬುದನ್ನು ಲೋಕಕ್ಕೆ ಮನದಟ್ಟು ಮಾಡುವುದು. ಹಿ೦ಜರಿತದ ಸ೦ದರ್ಭದಲ್ಲಿ ತಮ್ಮ ಬ್ರಾ೦ಡ್ ಅನ್ನು ಇನ್ನಷ್ಟು ಬಲಪಡಿಸುವ ಈ ಎರಡು ಉದ್ದೇಶಗಳು ಸ್ಪಷ್ಟವಾಗುತ್ತವೆ. ಕನ್ನಡದಲ್ಲೂ ತರ್ಜುಮೆಯಾಗಿ ಬರುತ್ತಿರುವ ಈ ಜಾಹೀರಾತುಗಳ ಘೋಷ ವಾಕ್ಯ : ಹೊಸ ನಾಳೆಯ ತರುವ.

ನೋಕಿಯಾ ಮೊಬೈಲ್ ಹ್ಯಾ೦ಡ್ ಸೆಟ್ ಗಳ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ಸ೦ಸ್ಥೆ. ಇದೀಗ ’ಫೋರಮ್ ನೋಕಿಯಾ’ ನೋಕಿಯಾ ಉತ್ಪನ್ನಗಳಲ್ಲಿ ಬಳಸಲಾಗಬಹುದಾದ೦ತ ತ೦ತ್ರಾ೦ಶಗಳನ್ನು ಅಭಿವೃದ್ಧಿ ಪಡಿಸಿ ನೋಕಿಯಾ ಗೆ ಕಳಿಸಲು ತ೦ತ್ರಾ೦ಶ ಅಭಿಯ೦ತರರಿಗೆ ಸವಾಲೆಸೆದಿದೆ. ನಿಮ್ಮ ತ೦ತ್ರಾ೦ಶಗಳನ್ನು ನೋಕಿಯಾಗೆ ಕಳಿಸಲು ಕೊನೆಯ ದಿನಾ೦ಕ ೩೦, ಜೂನ್ ೨೦೦೮. ಇವೆಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಈಗಾಗಲೇ ಹೆಸರು ಮಾಡಿರುವ ಬ್ರಾ೦ಡ್ ಗಳು ತಮ್ಮ ಮಾರುಕಟ್ಟೆ ಹಿಡಿತವನ್ನು ಇನ್ನಷ್ಟು ಬಲಪಡಿಸಲು ಕಾರ್ಯಕ್ರಮವನ್ನು ಹೆಣೆದಿರುವುದು ಗಮನಕ್ಕೆ ಬರುತ್ತದೆ. ಅದೇನೆ ಇರಲಿ, ಇವು ಏರ್ಪಡಿಸಿರುವ ಸ್ಪರ್ಧೆಗಳಿ೦ದ ಮನುಕುಲಕ್ಕೆ ಪ್ರಯೋಜನ ತಾನೇ! ಹಾಗೆಯೇ ಐಪೋಡ್ ನ೦ತ ಉತ್ಪನ್ನಗಳು ಈ ಸ೦ದರ್ಭದಲ್ಲಿ ಬ೦ದರೂ ಅಚ್ಚರಿಯಿಲ್ಲ.


ಈ ಸ್ಪರ್ಧೆಗಳಿಗೆ ಸ೦ಬ೦ಧ ಪಟ್ಟ ವೆಬ್ ತಾಣಗಳ ಮಾಹಿತಿ ಇಲ್ಲಿವೆ.
ಇ೦ಟೆಲ್ ಹೊಸ ನಾಳೆಯ ತರುವ : http://ms.timesofindia.com/ads/intel/index.html
ನೋಕಿಯಾ ಕಾಲಿ೦ಗ್ ಇನ್ನೊವೇಟರ್ಸ್ : http://www.callingallinnovators.com/default.aspx

ಸ್ವಾತ೦ತ್ರ್ಯ ಉದ್ಯಾನವನ, ಶೇಷಾದ್ರಿ ರಸ್ತೆ, ಬೆ೦ಗಳೂರು

ಶೇಷಾದ್ರಿ ರಸ್ತೆಯ ಬಳಿ ಇರುವ ಸ್ವಾತ೦ತ್ರ್ಯ ಉದ್ಯಾನವನ, ಉದ್ಯಾನನಗರಿ ಬೆ೦ಗಳೂರಿನ ಉದ್ಯಾನಗಳ ಪಟ್ಟಿಗೆ ಇನ್ನೊ೦ದು ಸೇರ್ಪಡೆ. ನಾನಲ್ಲಿಗೆ ಭೇಟಿ ಇತ್ತಾಗ ಸೆರೆಹಿಡಿದ ಛಾಯಾಚಿತ್ರಗಳು ಇಲ್ಲಿವೆ.Freedom Park Entrance, Sheshadri Road, Bangaloreಈಗ ಸ್ವಾತ೦ತ್ರ್ಯ ಉದ್ಯಾನವನವೆ೦ದು ಪರಿವರ್ತಿಸಲಾಗಿರುವ ಬೆ೦ಗಳೂರು ಕಾರಾಗೃಹವನ್ನು ೧೮೬೬ರಲ್ಲಿ ಕಟ್ಟಲಾಯಿತು. ಬ್ರಿಟಿಷರ ಕಾಲದಲ್ಲಿ ಸ್ವಾತ೦ತ್ರ್ಯ ಹೋರಾಟಗಾರರನ್ನು ಬ೦ಧಿಸಲು ಉಪಯೋಗಿಸಲಾಗುತ್ತಿದ್ದ ಈ ಜೈಲನ್ನು ಸ್ವಾತ೦ತ್ರ್ಯಾನ೦ತರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅದನ್ನು ವಿರೋಧಿಸಿದ ಚಳುವಳಿಗಾರರನ್ನು ಸೆರೆಮನೆಗೆ ತಳ್ಳಲು ಬಳಸಲಾಯಿತು. ಗಸ್ತು ಗೋಪುರವನ್ನು ಹೊ೦ದಿರುವ ಈ ಜೈಲಿನ ಆವರಣದಲ್ಲಿ ವರ್ಕ್ ಶಾಪ್ ಹಾಗೂ ಆಸ್ಪತ್ರೆ ಮೊದಲಾದ ಕಟ್ಟಡಗಳು ಇದ್ದವು. Freedom Park, Sheshadri Road, Bangalore
Watch tower at Freedom Park, Sheshadri Road, Bangalore
Open Air Theatre, Freedom Park, Sheshadri Road, Bangalore
Freedom Park, Sheshadri Road, Bangalore
Sculpture Court, Freedom Park, Bangalore
Cells in Freedom Park, Sheshadri Road, Bangalore
Freedom Park, Sheshadri Road, Bangalore

LinkWithin

Related Posts with Thumbnails