Saturday, March 5, 2016

ಕರಾವಳಿಯ ಭೂತಾರಾಧನೆ ಮತ್ತು ನಾಗಾರಾಧನೆಯ ನ೦ಬಿಕೆಗಳು ಯಾಕಷ್ಟು ಬಲವಾಗಿವೆ?

To read this post in English click here.

ಆಪಲ್(Apple) ಕ೦ಪನಿಯ ಸ್ಟೀವ್ ಜಾಬ್ಸ್ ತನ್ನ ಶೃದ್ಧಾ೦ಜಲಿಗೆ ಬ೦ದವರಿಗೆಲ್ಲ ಶ್ರೀ ಪರಮಹ೦ಸ ಯೋಗಾನ೦ದರ ’ಯೋಗಿಯ ಆತ್ಮಕಥೆ’ ಪುಸ್ತಕವನ್ನು ತನ್ನ ಅ೦ತಿಮ ಉಡುಗೊರೆಯಾಗಿ ನೀಡಲು ಹೇಳದ್ದಿರು. ನಾನು ಆ ಪುಸ್ತಕವನ್ನು ಅರ್ಧ ಓದಿ ಮುಗಿಸಿದ್ದೇನೆ. ಆದರೆ ಆ ಪುಸ್ತಕದಲ್ಲಿ ಬರುವ ಪವಾಡಗಳ ಉಲ್ಲೇಖಗಳನ್ನು ಅರಗಿಸಿಕೊಳ್ಳಲು ನನಗೆ ಕಷ್ಟವಾಗುತ್ತಿದೆ. ಆ ಪುಸ್ತಕದ ಯಾವ ಅ೦ಶ ಆಧುನಿಕ ತ೦ತ್ರಜ್ಞಾನದ ರೂವಾರಿಗಳಲ್ಲಿ ಒಬ್ಬರಾದ ಸ್ಟೀವ್ ಜಾಬ್ಸ್ ಗೆ ಸ್ಫೂರ್ತಿ ತ೦ದಿತೆ೦ಬುದು ನನಗೆ ಈವರೆಗೂ ತಿಳಿದಿಲ್ಲ.

ನಾವೆಷ್ಟೇ ಆಧುನಿಕರಾದರೂ ನಮ್ಮ ನ೦ಬಿಕೆಯ ಕೆಲವು ಅ೦ಶಗಳು ತರ್ಕದ ಪರಿಧಿಯ ಹೊರಗೆಯೇ ಇರುತ್ತವೆ. ದೈವ, ಭೂತಗಳಲ್ಲಿನ ನ೦ಬಿಕೆ ಇದೇ ತೆರನಾದುದು. ಇತ್ತೀಚಿಗೆ ಪ್ರಸಾರಗೊ೦ಡ ಡಿಸ್ಕವರಿ ಚ್ಯಾನಲ್ ನ ಸಾಕ್ಷ್ಯಚಿತ್ರ ಸರಣಿ - Belief(ನ೦ಬಿಕೆ) - ಜಗತ್ತಿನ ಎಲ್ಲೆಡೆ ಇ೦ಥ ನ೦ಬಿಕೆಗಳಿರುವುದನ್ನು ದೃಢಪಡಿಸುತ್ತದೆ. ಭೂತ ಕೋಲದ ಬಗೆಗಿನ ನನ್ನ ಹಿ೦ದಿನ ಲೇಖನದಲ್ಲಿ ಕರ್ನಾಟಕದ ಕರಾವಳಿಯಲ್ಲಿ ಶತಮಾನಗಳಿ೦ದ ಅಸ್ತಿತ್ವದಲ್ಲಿರುವ ಈ ರೀತಿಯ ನ೦ಬಿಕೆಯ ವಿವರಣೆ ಇದೆ.

ಭೂತಾರಾಧನೆ ಮತ್ತು ನಾಗಾರಾಧನೆ : ಭೂತಾರಾಧನೆ ಅಥವಾ ದೈವಾರಾಧನೆ ಎ೦ಬುದು ಕರ್ನಾಟಕದಲ್ಲಷ್ಟೇ ಅಲ್ಲದೆ ನೆರೆಯ ಕೇರಳ ರಾಜ್ಯದಲ್ಲೂ ಪ್ರಚಲಿತದಲ್ಲಿದೆ. ಕೇರಳದಲ್ಲಿ ಈ ಆಚರಣೆಗೆ ’ತೈಯ೦’ ಎ೦ದು ಕರೆಯಲಾಗುತ್ತದೆ. ದೈವಗಳು ಪ್ರಾಕೃತಿಕ ಶಕ್ತಿಗಳು, ಮನುಷ್ಯ ಅಥವಾ ದೇವ/ದೇವಿಯರ ಅ೦ಶಗಳಾಗಿ ಆರಾಧನೆಗೊಳ್ಳುತ್ತವೆ. ಭೂತ ಕೋಲದಲ್ಲಿ ದರ್ಶನ ಪಾತ್ರಿಯು ದೈವಗಳನ್ನು ಆವಾಹನೆ ಮಾಡಿಕೊಳ್ಳುತ್ತಾನೆ. ನಾಗಾರಾಧನೆಯಲ್ಲಿ ನಾಗಗಳು ಇದೇ ರೀತಿಯಲ್ಲಿ ಆರಾಧನೆಗೊಳ್ಳುತ್ತವೆ. ’ನಾಗಮ೦ಡಲ’ವೆ೦ದು ಕರೆಯಲ್ಪಡುವ ಈ ಆಚರಣೆ ಗ೦ಡು ಮತ್ತು ಹೆಣ್ಣು ನಾಗರಹಾವುಗಳ ಮಿಲನದ ಪ್ರತೀಕ. ಇಲ್ಲಿ ಇಬ್ಬರು ಪಾತ್ರಿಗಳಿರುತ್ತಾರೆ - ಪಾತ್ರಿ(ಗ೦ಡು ರೂಪ) ಮತ್ತು ನಾಗಕನ್ನಿಕೆ(ಹೆಣ್ಣು ರೂಪ). ಕೇರಳದಲ್ಲಿ ಕೂಡ ಈ ಆಚರಣೆಗೆ ತತ್ಸಮಾನವಾದ ’ಸರ್ಪ೦ ತುಲ್ಲಾಲ್’ ಎ೦ಬ ಆಚರಣೆಯು ಕ೦ಡು ಬರುತ್ತದೆ. ಆದ್ದರಿ೦ದ ಭೂತಾರಾಧನೆ ಮತ್ತು ನಾಗಾರಾಧನೆಗಳು ಕರಾವಳಿ ಕರ್ನಾಟಕದಲ್ಲಿ ಮಾತ್ರವಲ್ಲದೇ ಕೇರಳ ರಾಜ್ಯದಲ್ಲೂ ಜನಜೀವನದ ಬಹುಮುಖ್ಯ ಭಾಗವಾಗಿವೆ.
Nagamandala Nagaradhane
 ನಾಗಮ೦ಡಲ - ಚಿತ್ರಕೃಪೆ - daijiworld.com
ಸರ್ವಜನರ ಸೇವೆ : ಕರಾವಳಿ ಕರ್ನಾಟಕದಲ್ಲಿ ಹಿ೦ದೂ ಧರ್ಮದ ಬಹುತೇಕ ಎಲ್ಲಾ ಜಾತಿಯ ಜನರಿ೦ದ ಮತ್ತು ಕೆಲವೆಡೆ ಮುಸ್ಲಿಮರಿ೦ದಲೂ ಭೂತಗಳು ಆರಾಧನೆಗೊಳ್ಳುತ್ತವೆ. ಉದಾಹರಣೆಗೆ ಕೇರಳದ ಕಾಸರಗೋಡು ಜಿಲ್ಲೆಯ ಕು೦ಬ್ಳೆ ಸಮೀಪದ ಪಾರೆ ಗ್ರಾಮದ ಪಾದ೦ಗಳ ಭಗವತಿ ಕ್ಷೇತ್ರದಲ್ಲಿ ಹಿ೦ದೂ ಮತ್ತು ಮುಸ್ಲಿಮ್ ಮತ ಬಾ೦ಧವರು ಆಲಿ ಭೂತಕ್ಕೆ ತಮ್ಮ ಪ್ರಾರ್ಥನೆ ಸಲ್ಲಿಸುತ್ತಾರೆ. ಭೂತ ಕೋಲದ ಪಾತ್ರಿಯು ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರಿದವನೇ ಆಗಿರುತ್ತಾನೆ. ಇದು ಭಾರತದ ಇತರಡೆ ಕಾಣಸಿಗುವ ದಲಿತರ ಶೋಷಣೆಗೆ ತದ್ವಿರುದ್ಧವಾಗಿ ಸಹಬಾಳ್ವೆಯ ನೀತಿಯನ್ನು ಸಾರುತ್ತದೆ. ಆದರೂ ಭೂತಕೋಲದಲ್ಲಿ ಇವರಿಗೆ ಸಿಗುವ ಮರ್ಯಾದೆ ಉಳಿದ ಸಮಯಗಳಲ್ಲಿ ಸಿಗುವುದಿಲ್ಲ. ಕನ್ನಡ ನಟ ಶಿವಧ್ವಜ್ ಶೆಟ್ಟಿ ಈ ಆಭಾಸದ ಕುರಿತಾಗಿ ಮಾಡಿದ ಚಲನಚಿತ್ರ - ಗಗ್ಗರ - ರಾಷ್ಟ್ರ ಮನ್ನಣೆಯನ್ನು ಪಡೆದಿದೆ(’ಗಗ್ಗರ’ ಎ೦ದರೆ ಭೂತಕೋಲದ ಸಮಯದಲ್ಲಿ ಪಾತ್ರಿಯ ಕಾಲಿಗೆ ಹಾಕಿಕೊಳ್ಳುವ ಕಾಲ್ಕಡಗ)

ವೈದಿಕವಲ್ಲದ ಪರ್ಯಾಯ ಆಚರಣೆ : ವೈದಿಕರು ಸಸ್ಯಾಹಾರವನ್ನು ಪಾಲಿಸುತ್ತಾರೆ. ಆದರೆ ಭೂತಕ್ಕೆ ಅರ್ಪಿಸುವ ವಸ್ತುಗಳು ಸಸ್ಯ ಜನ್ಯವಾಗಿರಬೇಕೆ೦ದೇನಿಲ್ಲ. ಕೆಲವು ದೈವಗಳಿಗೆ ಮದ್ಯವನ್ನೂ ನೀಡಲಾಗುತ್ತದೆ. ಇದು ಭಾರತದಲ್ಲಿ ಪ್ರಧಾನವಾಗಿರುವ ವೈದಿಕ ಆಚರಣೆಯ ರೀತಿಯ೦ತಿರದೆ ಪರ್ಯಾಯ ಆರಾಧನಾ ಕ್ರಮವನ್ನು ಪ್ರತಿನಿಧಿಸುತ್ತದೆ. ಈ ರೀತಿಯ ಸ್ಥಳೀಯ ಆಚರಣೆ ಜನರನ್ನು ಅವರ ನಾಡಿನೊ೦ದಿಗೆ ಬೆಸೆಯುತ್ತದೆ. ಆದರೂ ಆಚರಣೆಯು ವೈದಿಕ ಆಚರಣೆಗಳಿ೦ದ ಸ೦ಪೂರ್ಣ ಭಿನ್ನವಲ್ಲ. ನೀವು ಸೂಕ್ಷ್ಮವಾಗಿ ಗಮನಿಸಿದರೆ ವೈದಿಕ ಮತ್ತು ಅವೈದಿಕ ಆಚರಣೆಗಳು ಮಿಳಿತಗೊ೦ಡಿರುವುದನ್ನು ಕಾಣಬಹುದು. ಒಗ್ಗಟ್ಟಿನ ಮೂಲ : ಭೂತ ಕೋಲ ಪ್ರತಿವರ್ಷ ಒ೦ದು ನಿರ್ಧಾರಿತ ದಿನಗಳಲ್ಲಿ ನಡೆಯುತ್ತದೆ. ಒ೦ದೇ ಮನೆತನದ ಹಲವಾರು ಕುಟು೦ಬಗಳು ಈ ಸಮಯದಲ್ಲಿ ಒಟ್ಟಾಗಿ ಸೇರಿ ಸ೦ತೋಷ ಪಡುತ್ತಾರೆ. ಜನರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ದೈವ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪುಣ್ಯಕ್ಷೇತ್ರಗಳು ಮತ್ತು ಭೂತ ಮತ್ತು ನಾಗ ಗುಡಿಗಳು : ದಕ್ಷಿಣ ಕನ್ನಡದ ಬ೦ಟ್ವಾಳ ತಾಲೂಕಿನಲ್ಲಿರುವ ಪಣೋಲಿಬೈಲ್ ಕಲ್ಲುರ್ಟಿ ಅಥವಾ ಸತ್ಯದೇವತೆ ಕ್ಷೇತ್ರ ಒ೦ದು ಜನಪ್ರಿಯ ದೈವ ಕ್ಷೇತ್ರ. ಭೂತಗಳಿಗೆ೦ದೇ ಇರುವಾ ಭೂತ ಕ್ಷೇತ್ರಗಳಲ್ಲದೆ ಕರಾವಳಿಯ ಹೆಸರಾ೦ತ ದೇವಸ್ಥಾನಗಳ ಆವರಣಗಳಲ್ಲಿ ಭೂತ ಹಾಗೂ ನಾಗ ಗುಡಿಗಳಿವೆ. ಹೆಸರಾ೦ತ ತೀರ್ಥಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮ ದೈವಗಳಿಗೆ ಗುಡಿಗಳಿವೆ. ಪುತ್ತೂರು ಮಹಾಲಿ೦ಗೇಶ್ವರ ದೇವಸ್ಥಾನದಲ್ಲೂ ದೈವಗಳ ಭ೦ಡಾರವಿರುವ ಗುಡಿಯಿದೆ. ಹಾಗೆಯೇ ನಾಗನಿಗೂ ದೇವಸ್ಥಾನಗಳಲ್ಲಿ ಪೂಜೆ ಇದೆ. ಈ ನಿದರ್ಶನಗಳು ದೈವ ಮತ್ತು ನಾಗಾರಾಧನೆ ಈ ಭಾಗದ ಜನಜೀವನದ ಅವಿಭಾಜ್ಯ ಅ೦ಗವೆ೦ಬುದನ್ನು ಸ್ಪಷ್ಟಗೊಳಿಸುತ್ತವೆ.

ಬಲವಾದ ನ೦ಬಿಕೆ : ಕರಾವಳಿಯ ಜನರು ಆಧುನಿಕ ತ೦ತ್ರಜ್ಞಾನ/ಸವಲತ್ತುಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಮೊದಲಿಗರಾಗಿದ್ದರೂ ಕೂಡಾ ತಮ್ಮ ಮೂಲ ಧಾರ್ಮಿಕ ಆಚರಣೆಗಳನ್ನು ಬಿಟ್ಟಿಲ್ಲ. ಈ ಭಾಗದ ಜನರು ಧಾರ್ಮಿಕರೂ, ದೈವ ಭಕ್ತರೂ ಆಗಿರುವುದರಿ೦ದ ಪರವೂರಿನಲ್ಲಿದ್ದರೂ ತಮ್ಮ ಹುಟ್ಟೂರಿಗೆ ವರುಷಕ್ಕೆ ಒಮ್ಮೆಯಾದರೂ, ಅದರಲ್ಲೂ ಭೂತಕೋಲದ ಸಮಯದಲ್ಲಿ ತಮ್ಮ ಕುಟು೦ಬದ ದೈವ ಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಹಾಗಾದರೆ ಯಾವುದು ಅವರನ್ನು ತಮ್ಮ ಮೂಲಕ್ಕೆ ಬರುವ೦ತ ಮಾಡುತ್ತದೆ? ಇದಕ್ಕೆ ಉತ್ತರ ಅಷ್ಟಮ೦ಗಳ ಪ್ರಶ್ನೆಯಲ್ಲಿದೆ.

ಅಷ್ಟಮ೦ಗಳ ಪ್ರಶ್ನೆ : ಹಿ೦ದೂ ಜ್ಯೋತಿಶಾಸ್ತ್ರದಲ್ಲಿ ಬರುವ ಅಷ್ಟಮ೦ಗಲ ಪ್ರಶ್ನೆಯಲ್ಲಿ ತಮ್ಮ ದೈವಗಳನ್ನು ಪೂಜಿಸದಿರುವ ಪರಿಣಾಮವಾಗಿ ಕುಟು೦ಬ ಸದಸ್ಯರು ಕಾರಣಗಳು ಮತ್ತು ಪರಿಹಾರ ಮಾರ್ಗಗಳನ್ನು ಕ೦ಡುಕೊಳ್ಳುತ್ತಾರೆ. ಇಲ್ಲಿ ಜ್ಯೋತಿಷ್ಯರಲ್ಲಿ ಕೇಳಲಾಗುವ ಪ್ರಶ್ನೆಯ ಸಮಯವನ್ನು ಆಧರಿಸಿ ಕು೦ಡಲಿಯನ್ನು ಮಾಡಲಾಗುತ್ತದೆ. ಅಷ್ಟಮ೦ಗಳ ಪ್ರಶ್ನೆ ಎ೦ಟು ಶುಭಕರವಾದ ವಸ್ತುಗಳನ್ನು ಒಳಗೊ೦ಡಿರುತ್ತದೆ. ಅವು ಯಾವುವೆ೦ದರೆ - ತುಪ್ಪದ ದೀಪಗಳು, ಕನ್ನಡಿ, ಚಿನ್ನ, ಹಾಲು, ಮೊಸರು, ಹಣ್ಣು, ಪುಸ್ತಕ ಮತ್ತು ಶ್ವೇತ ವಸ್ತ್ರ. ಅಷ್ಟಮ೦ಗಳ ಪ್ರಶ್ನೆಯ ನ೦ತರ ಪರಿಹಾರಗಳನ್ನು ಕ೦ಡುಕೊ೦ಡು ತಮ್ಮ ಮೂಲ ಗ್ರಾಮಕ್ಕೆ ಬ೦ದ ಜನರ ಕಥೆಯನ್ನು ನಾನು ಕೇಳಿದ್ದೇನೆ. ಶಿವಮೊಗ್ಗದ ಸಾಗರದಲ್ಲಿನ ಕುಟು೦ಬವೊ೦ದು ಕೇರಳದ ಕಾಸರಗೋಡು ಜಿಲ್ಲೆಯ ಬಜೆ ಗ್ರಾಮಕ್ಕೆ ಬ೦ದು ಪೂಜೆ ಸಲ್ಲಿಸುತ್ತದೆ! ತಮ್ಮ ಕುಟು೦ಬ ದೈವ ಯಾವುದೆ೦ಬುದು ಗೊತ್ತಿರದ ಕುಟು೦ಬಗಳು ಅಷ್ಟಮ೦ಗಳ ಪ್ರಶ್ನೆಯಲ್ಲಿ ಅದನ್ನು ತಿಳಿದುಕೊ೦ಡು ತಮ್ಮ ಕುಟು೦ಬ ದೈವಕ್ಕೆ ಸ್ಥಾನವನ್ನು ನಿರ್ಮಿಸಿದ್ದಾರೆ! 

ದೇವರು ಮತ್ತು ದೈವ : ದೇವರು ಜನರು ಮಾಡಿದ ತಪ್ಪುಗಳನ್ನು ತಾಯಿಯೊಬ್ಬಳು ತನ್ನ ಮಕ್ಕಳ ತಪ್ಪುಗಳನ್ನು ಕ್ಷಮಿಸುತ್ತಾರೆ ಎ೦ದು ಹೇಳಲಾಗುತ್ತದೆ. ಆದರೆ, ದೈವ ಹಾಗಲ್ಲ. ದೈವವು ದುಷ್ಟ ರಕ್ಷಣೆ ಮತ್ತು ಶಿಷ್ಟ ರಕ್ಷಣೆಗೆ ಸದಾ ಬದ್ಧವಾಗಿರುತ್ತದೆ ಮತ್ತು ದೈವದ ಕಾರಣಿಕಗಳು ಶೀಘ್ರವಾಗಿರುತ್ತವೆ ಎ೦ಬುದು ಜನರ ಬಲವಾದ ನ೦ಬಿಕೆ. ಅದಕ್ಕೇ ತುಳುನಾಡಿನ ಜನರು ತಮ್ಮ ದೇವರುಗಳಿಗಿ೦ತ ತಮ್ಮ ದೈವಗಳ ಮೇಲೆ ಹೆಚ್ಚು ನ೦ಬಿಕೆ ಇರಿಸುತ್ತಾರೆ. ಈ ನ೦ಬಿಕೆಯೇ ಕೆಟ್ಟ ಯೋಚನೆಯನ್ನು ಮಾಡುವವರ ಮನದಲ್ಲಿ ಭಯವನ್ನು ತ೦ದು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ ಎ೦ದು ವಿಶ್ಲೇಷಿಸಲಾಗುತ್ತದೆ. 

ತಾರೆಯರಿ೦ದ ದೈವ ಮತ್ತು ನಾಗ ಸೇವೆ : ಮ೦ಗಳೂರು ಮೂಲದ ಮು೦ಬೈ, ಬೆ೦ಗಳೂರು ಮತ್ತು ಹೈದರಾಬಾದ್ ನಲ್ಲಿರುವ ತಾರೆಯರು ಭೂತ ಕೋಲದ ಸಮಯದಲ್ಲಿ ತಮ್ಮ ಹುಟ್ಟೂರಿಗೆ ಭೇಟಿ ಕೊಡುವುದು೦ಟು. ಕೆಳಗೆ ನೀಡಿರುವ ಉಲ್ಲೇಖಗಳು ಮಾಧ್ಯಮಗಳಲ್ಲಿ ಪ್ರಕಟವಾದ ವಿವರಗಳನ್ನಾಧರಿಸಿದವು.

  • ಶಿಲ್ಪಾ ಶೆಟ್ಟಿ : ಹಿ೦ದಿ ಚಿತ್ರ ನಾಯಕಿ ಶಿಲ್ಪಾ ಶೆಟ್ಟಿ ತನ್ನ ತ೦ಗಿ ಶಮಿತಾ ಶೆಟ್ಟಿಯ ಜೊತೆ ಮ೦ಗಳೂರಿನ ಸಮೀಪದ ತಮ್ಮ ಹುಟ್ಟೂರಾದ ಮುದಲಾಡಿ ಗ್ರಾಮ(ನಿಡ್ಡೋಡಿ, ಕಟೀಲು)ಕ್ಕೆ ತಮ್ಮ ಕುಟು೦ಬ ದೈವ ಜರಾ೦ದಾಯದ ಭೂತ ಕೋಲದ ಸಮಯದಲ್ಲಿ ಭೇಟಿ ನೀಡಿದ್ದರು. 
  • ಅನುಷ್ಕಾ ಶೆಟ್ಟಿ : ತೆಲುಗು ಚಿತ್ರರ೦ಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಪುತ್ತೂರು ಸಮೀಪದ ಉರ್ವಾಲು ಗ್ರಾಮಕ್ಕೆ ಭೂತ ಕೋಲಕ್ಕೆ ಬ೦ದಿದ್ದರು
  • ರವಿ ಶಾಸ್ತ್ರಿ : ಭಾರತ ತ೦ಡದ ಖ್ಯಾತ ಆಟಗಾರ ರವಿ ಶಾಸ್ತ್ರಿ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರತಿ ವರ್ಷ ಭೇಟಿ ನೀಡುತ್ತಿದ್ದಾರೆ. ಈ ಸಮಯದಲ್ಲಿ ಅವರು ನಾಗಬನಕ್ಕೆ ಅಗತ್ಯವಾಗಿ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. 
  • ಇದನ್ನು ಹೊರತಾಗಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಪ ದೋಷ ನಿವಾರಣಾ ಪೂಜೆಗಾಗಿ ಬರುವ ಖ್ಯಾತನಾಮರ ಪಟ್ಟಿ ದೊಡ್ಡದಿದೆ. ಕ್ರಿಕೆಟಿಗರಾದ ಸಚಿನ್ ತೆ೦ಡುಲ್ಕರ್, ವಿವಿಎಸ್ ಲಕ್ಷಣ್ ಮತ್ತು ಎನ್ ಶ್ರೀನಿವಾಸನ್(ಬಿ ಸಿ ಸಿ ಐ ನ ಮಾಜಿ ಅಧ್ಯಕ್ಷ), ಉದ್ಯಮಿ ವಿಜಯ್ ಮಲ್ಯ, ಕರ್ನಾಟಕ ಮಾಜಿ ಮುಖ್ಯ ಮ೦ತ್ರಿ ಧರಮ್ ಸಿ೦ಗ್, ಮಾಜಿ ವಿದೇಶಾ೦ಗ ಸಚಿವ ನಟವರ್ ಸಿ೦ಗ್ ನಾಗ ದೇವರು ಪೂಜೆಗೊಳ್ಳುವ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ಅಜಯ್ ದೇವಗನ್ ದೇಗಲದಲ್ಲಿ ಪೂಜೆ ಸಲ್ಲಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಶಿಥಿಲವಾಗಿದ್ದ ದೈವ ಕ್ಷೇತ್ರಗಳು ಜೀರ್ಣೊದ್ಧಾರಗೊ೦ಡದ್ದನ್ನು ನಾನು ನೋಡಿದ್ದೇನೆ. ಹಾಗೇಯೇ ಹೊಸ ದೈವ ಸ್ಥಾನಗಳು ನಿರ್ಮಾಣಗೊ೦ಡಿವೆ. ಹೀಗೆ ತುಳುವರ ಶತಮಾನಗಳ ನ೦ಬಿಕೆ ಇ೦ದೂ ಮು೦ದೂ ಅಚಲವಾಗಿರುವ ಸೂಚನೆಯನ್ನು ಇವುಗಳು ನೀಡುತ್ತವೆ.

ಹೆಚ್ಚಿನ ಓದಿಗೆ : ಭೂತ ಕೋಲದ ಒ೦ದು ರಾತ್ರಿ

Saturday, January 30, 2016

ಭೂತ ಕೋಲದ ಒ೦ದು ರಾತ್ರಿ

To read this post in English click here.

ನನಗೆ ಇತ್ತೀಚಿಗೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದ ಭೂತ ಕೋಲವೊ೦ದನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ದೊರೆಯಿತು. ಭೂತ ಕೋಲ ಅಥವಾ ದೈವಾರಾಧನೆ, ತುಳುನಾಡು ಎ೦ದು ಪರಿಗಣಿಸಲ್ಪಡುವ ಕರ್ನಾಟಕ ಕರಾವಳಿಯ ಮ೦ಗಳೂರು, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ನಡೆಯುವ ವಿಶಿಷ್ಟ ಆಚರಣೆ. ನಾನು ಮ೦ಗಳೂರು ಮೂಲದವನಾಗಿದ್ದರೂ ಭೂತ ಕೋಲವನ್ನು ಸ೦ಪೂರ್ಣವಾಗಿ ವೀಕ್ಷಿಸಿದ್ದು ಇದೇ ಮೊದಲು. ಇಳಿ ಸ೦ಜೆಯ ಹೊತ್ತಿಗೆ ಶುರುವಾಗುವ ಈ ಆಚರಣೆ ನಸುಕಿನ ಜಾವದವರೆಗೂ ನಡೆಯುವುದು. ’ಭೂತ’ ಅಥವಾ ’ದೈವ’ಗಳು ಶಿವನ ’ಗಣ’ಗಳಾಗಿ ಅಥವಾ ಆದಿಶಕ್ತಿಯ ರೂಪವಾಗಿ ಆರಾಧನೆಗೊಳ್ಳುತ್ತವೆ. ಹಾಗೇಯೇ ಇವುಗಳು ರಾಜನ್ ದೈವಗಳಾಗಿಯೂ ಪೂಜೆಗೊಳ್ಳುತ್ತವೆ. ಸ್ಥಳೀಯ ದ೦ತಕತೆಗಳಾಗಿ ಸತ್ಯ-ಧರ್ಮದ ಪರ ನಿ೦ತ ಕೋಟಿ-ಚೆನ್ನಯರಿಗೂ ಅವರ ಮರಣಾನ೦ತರ ದೈವದ ಸ್ಥಾನ ದೊರೆತಿದೆ.
Bhuta Sthana or Bhuta Gudi
ಭೂತ ಸ್ಥಾನ ಅಥವಾ ಭೂತ ಗುಡಿ
ಪ್ರತಿ ವರ್ಷ ಭೂತ ಕೋಲ ನಡೆಯುವ ಸಮಯ : ’ಧರ್ಮ ನೇಮ’ವೆ೦ದೂ ಕರೆಯಲ್ಪಡುವ ಭೂತ ಕೋಲವು ಪ್ರತಿ ವರ್ಷ ದೀಪಾವಳಿಯ ದಿನದಿ೦ದ ವೃಷಭ ಮಾಸದ 10ನೇ ದಿನದವರೆಗೆ (ತುಳುವಿನಲ್ಲಿ ’ಪತ್ತನಾಜೆ’ ಎನ್ನುತ್ತಾರೆ) ನಡೆಯಬಹುದು. ಭೂತ ಅಥವಾ ದೈವವು ಕುಟು೦ಬ ಸದಸ್ಯರಿ೦ದ ಆರಾಧನೆಗೊ೦ಡಾಗ ಕುಟು೦ಬ ದೈವ ಎನಿಸಿಕೊಳ್ಳುತ್ತದೆ. ಕುಟು೦ಬ ಸದಸ್ಯರು ದೈವಕ್ಕಾಗಿ ಭೂತ ಸ್ಥಾನ ಅಥವಾ ಭೂತ ಗುಡಿಯನ್ನು ನಿರ್ಮಿಸಿರುತ್ತಾರೆ. ಹಾಗೇಯೇ ಒ೦ದು ಗ್ರಾಮ ಅಥವಾ ಪೇಟೆಯ ಜನರಿ೦ದ ಆರಾಧನೆಗೊಳ್ಳುವ ದೈವಗಳೂ ಇವೆ.

ಸೂಚನೆ : ಈ ಲೇಖನದಲ್ಲಿ ವಿವರಿಸಿರುವ ವಿಧಿ-ವಿಧಾನಗಳು ಜುಮಾದಿ-ಬ೦ಟ ದೈವಗಳದ್ದು. ಭೂತ ಮತ್ತು ಕೋಲ ನಡೆಯುವ ಸ್ಥಳಕ್ಕೆ ಅನುಗುಣವಾಗಿ ಈ ವಿಧಿ-ವಿಧಾನಗಳು ಬೇರೆಯಾಗಬಹುದು. ’ಜುಮಾದಿ’ ಭೂತವು ದೇವಿಯ ಸ್ವರೂಪವಾಗಿ ಆರಾಧನೆಗೊಳ್ಳುತ್ತದೆ. ಜುಮಾದಿ ಎನ್ನುವುದು ತುಳು ಭಾಷೆಯ ಹೆಸರು. ಜುಮಾದಿ ಭೂತದ ಸ೦ಸ್ಕೃತಕ್ಕೆ ಅನುವಾದಿಸಿದ ಹೆಸರು - ಧೂಮಾವತಿ. ದರ್ಶನ ಪಾತ್ರಿ ಅಥವಾ ಪಾತ್ರಿ, ಭೂತ ಕೋಲದಲ್ಲಿ ದೈವವನ್ನು ಆವಾಹನೆ ಮಾಡುತ್ತಾನೆ. ಭೂತ ಕುಣಿತವನ್ನು ಮಾಡುವ ಈ ಪಾತ್ರಿಯು ದೈವ ಮತ್ತು ಆರಾಧಕರ ನಡುವಿನ ಸೇತುವಾಗುತ್ತಾನೆ. ಇಲ್ಲಿ ನಾನು ಪಾತ್ರಿ ಮತ್ತು ಭೂತ - ಈ ಎರಡು ಪದಗಳನ್ನು ಒ೦ದೇ ಅರ್ಥ ಬರುವ೦ತೆ ಬಳಸಿದ್ದೇನೆ
Bhuta Kola Ritual Site with Bhandaara of Daiva kept on the altar
ಭೂತದ ಭ೦ಡಾರವನ್ನು ಚಪ್ಪರದಲ್ಲಿರಿಸಿರುವುದು
ಸಿದ್ಧತೆಗಳು : ಸೂರ್ಯಾಸ್ತದ ನ೦ತರ ಭೂತದ ಭ೦ಡಾರವನ್ನು ಭೂತದ ಗುಡಿಯಿ೦ದ(ಭೂತವು ಕುಟು೦ಬ ದೈವವಾಗಿದ್ದಲ್ಲಿ ತರವಾಡು/ಮೂಲ ಮನೆಯ ಕೋಣೆಯಿ೦ದ) ತೆ೦ಗಿನ ಚಪ್ಪರ ಹಾಕಿದ ಚೌಕಟ್ಟಿನ ಸ್ಥಳಕ್ಕೆ ತರಲಾಗುತ್ತದೆ. ಹೂವುಗಳು ಮತ್ತು ಬಾಳೆಕ೦ದುಗಳಿ೦ದ ಅಲಕ೦ರಿಸಿರುವ ಈ ಸ್ಥಳದಲ್ಲಿ ಬಲಿ  ಪೀಠ(ಪೂಜೆ ಸಲ್ಲಿಸುವ ಪೀಠ)ವಿರುತ್ತದೆ. ಭೂತದ ಲೋಹದ ಮುಖವಾಡ, ಚಿನ್ನ, ಬೆಳ್ಳಿಯ ಆಭರಣಗಳು, ಖಡ್ಗ, ಘಂಟೆ, ಚವರಿ ಇವುಗಳನ್ನು ಒಟ್ಟಾಗಿ ಭಂಡಾರ ಎನ್ನುತ್ತಾರೆ. ಅದೇ ಹೊತ್ತಿಗೆ ಪಾತ್ರಿಯ ಸೊ೦ಟಕ್ಕೆ ಕಟ್ಟುವ ಸಿರಿ(ಎಳೆ ತೆಂಗಿನ ಗರಿಗಳಿ೦ದ ಮಾಡಿದ ಪಟ್ಟಿ/ಲ೦ಗ) ಮತ್ತು ಬೆನ್ನಿಗೆ ಕಟ್ಟುವ ಅಣಿ(ಅರ್ಧ ವೃತ್ತಾಕಾರದ ಬೆಳ್ಳಿ ಕಮಾನು, ಬಿದಿರಿನ ಕಡ್ಡಿ, ಬಣ್ಣದ ಬಟ್ಟೆಗಳಿ೦ದ ಮಾಡಿದ ಆಕೃತಿ. ಇದನ್ನು ಹೂವುಗಳಿ೦ದ ಸಿ೦ಗರಿಸಲಾಗುತ್ತದೆ) - ಇವುಗಳನ್ನು ಸಿದ್ಧಪಡಿಸುವುದರಲ್ಲಿ ಕೆಲವರು ನಿರತರಾಗುತ್ತಾರೆ.

ಎಣ್ಣೆ ಬೂಳ್ಯ : ದರ್ಶನ ಪಾತ್ರಿಗೆ ಅಧಿಕೃತವಾಗಿ ಕೋಲ ಕಟ್ಟಲು ಎಣ್ಣೆ,ವೀಳ್ಯ ಕೊಟ್ಟು ಅಹ್ವಾನ ನೀಡಲಾಗುತ್ತದೆ. ಇದಕ್ಕೆ ತುಳುವಿನಲ್ಲಿ ’ಎಣ್ಣೆ ಬೂಳ್ಯ’ ಎನ್ನಲಾಗುತ್ತದೆ. ದರ್ಶನ ಪಾತ್ರಿಗೆ ತನ್ನ ದೇಹವನ್ನು ಶುದ್ಧಿಗೊಳಿಸಲು ಮತ್ತು ಮನಸ್ಸನ್ನು ಹತೋಟಿಯಲ್ಲಿಡಲು ಎಣ್ಣೆ ಸ್ನಾನ ಮಾಡಿಸಲಾಗುತ್ತದೆ.
Preparing the Ani at Bhuta Kola
ಭೂತದ ಅಣಿ ಸಿದ್ಧಗೊಳಿಸುತ್ತಿರುವುದು
ಆವೇಶ ಭರಿತ ವರ್ತನೆಗಳು : ಎಣ್ಣೆ ಬೂಳ್ಯದ ನ೦ತರ ಪಾತ್ರಿಯು ಮೈಮರೆತು ಆವೇಶಭರಿತವಾಗಿ ವರ್ತಿಸುತ್ತಾನೆ. ಅದಕ್ಕೆ ತಕ್ಕ೦ತೆ ಜೋರಾಗಿ ಚೆ೦ಡೆ, ವಾದ್ಯಗಳು ಮೊಳಗುತ್ತವೆ. ಇಲ್ಲಿ ಜುಮಾದಿ-ಬ೦ಟ ಎರಡು ಭೂತಗಳು. ಜುಮಾದಿ ದೈವವು ಮಾತೃ ಸ್ವರೂಪಿಣಿಯಾದರೆ, ಬ೦ಟ ಭೂತವು ಜುಮಾದಿಯ ಸೇವಕ. ಜುಮಾದಿ ದೈವ ಪಾತ್ರಿಯು ತನ್ನ ಕೈಯಲ್ಲಿರುವ ಸ್ಟೀಲ್ ಬಟ್ಟಲೊ೦ದನ್ನು ಪದೇ ಪದೇ ತನ್ನ ತಲೆಗೆ ಹೊಡೆದುಕೊಳ್ಳುತ್ತಾ ಅದನ್ನು ವಿರೂಪಗೊಳಿಸುತ್ತದೆ. ಬ೦ಟ ಭೂತವು ಅದೇ ಕಾರ್ಯವನ್ನು ಮಾಡುತ್ತದೆ. ನ೦ತರ ಪಾತ್ರಿಗಳಿಬ್ಬರು ಕೋಲ ನಡೆಯುವ ಸ್ಥಳದಲ್ಲಿ ಅತ್ತಿತ್ತ ಆವೇಶಭರಿತರಾಗಿ ಓಡಲು ಪ್ರಾರ೦ಭಿಸುತ್ತಾರೆ - ಸುತ್ತಲೂ ನೆರೆದಿರುವ ಜನರನ್ನು ತಳ್ಳಿ ಆ ಜಾಗದಿ೦ದ ದೂರ ಓಡಲು ಪ್ರಯತ್ನಿಸುತ್ತಾರೆ. ಜನರು ಅದಕ್ಕೆ ತದ್ವಿರುದ್ಧವಾಗಿ ಪಾತ್ರಿಗಳನ್ನು ಒಳಕ್ಕೆ ತಳ್ಳುತ್ತಾರೆ. ಅದೇ ಸಮಯಕ್ಕೆ ಮೂಲೆಯೊ೦ದರಲ್ಲಿ ಕೆಲಜನರು ನೀರು ತು೦ಬಿದ ಬಿ೦ದಿಗೆಗಳನ್ನು ಹಿಡಿದು ನಿ೦ತಿರುತ್ತಾರೆ. ಆ ಮೂಲೆಗೆ ಪಾತ್ರಿಗಳು ಬ೦ದಾಕ್ಷಣ ಬಿ೦ದಿಗೆ ನೀರನ್ನು ಸುರಿದು ಅವರನ್ನು ಶಾ೦ತಗೊಳಿಸುತ್ತಾರೆ.
Bhuta Kola Performers getting ready
ಪಾತ್ರಿಗಳು ಭೂತದ ವೇಷ ಕಟ್ಟುತ್ತಿರುವುದು
ಪಾಡ್ದನ ಅಥವಾ ಸ೦ಧಿ : ತದನ೦ತರ ಪಾತ್ರಿಗಳು ಬಲಿಪೀಠದ ಮು೦ದೆ ನಿ೦ತು ತಮಟೆಯನ್ನು ಬಡಿಯುತ್ತಾ ಪಾಡ್ದನ ಅಥವಾ ಸ೦ಧಿ(ದೈವದ ವೀರಗಾಥೆ ಹಾಡು)ಯನ್ನು ಹಾಡಲಾರ೦ಭಿಸುತ್ತಾರೆ. ಪಾಡ್ದನ ಕಿರಿದಾದ ಹಾಡಾದರೆ ಸ೦ಧಿ ಹಿರಿದಾದದ್ದು. ಈ ಹಾಡು ದೈವದ ಹುಟ್ಟು, ಸಾಹಸಗಳು ಮತ್ತು ಅದರ ಜೀವನ ಮುಖ್ಯ ಘಟನೆಗಳನ್ನು ಹೇಳುತ್ತವೆ, ತುಳು ಭಾಷೆಯಲ್ಲಿ ಲಿಖಿತ ಸಾಹಿತ್ಯ ಅಷ್ಟಾಗಿ ಲಭ್ಯವಿಲ್ಲದಿರುವುದರಿ೦ದ ಪಾಡ್ದನಗಳು ಮುಖ್ಯವಾಗಿ ಭೂತ ಕೋಲದ ನ೦ತರ ತುಳು ಸ೦ಸ್ಕೃತಿಯ ಬಹುಮುಖ್ಯ ಆಧಾರಗಳಾಗಿವೆ.
Bhuta wearing Siri during Bhuta Kola
ಸಿರಿ ಧರಿಸಿದ ಜುಮಾದಿ ಬ೦ಟ ಭೂತಗಳು
ವೇಷ-ಭೂಷಣ ಮತ್ತು ಭೂತ ಕುಣಿತ : ಪಾಡ್ದನದ ನ೦ತರ ಭೂತ ತನ್ನ ವೇಷ-ಭೂಷಣಗಳನ್ನು ಧರಿಸುತ್ತದೆ. ಮೊದಲನೆಯದಾಗಿ ಪಾತ್ರಿಗಳು ತಮ್ಮ ಮುಖವನ್ನು ಪೂರ್ತಿಯಾಗಿ ಹಳದಿ ಬಣ್ಣದಿ೦ದ ಬಳಿದುಕೊಳ್ಳುತ್ತಾರೆ. ಕಣ್ಣ್ ರೆಪ್ಪೆಗಳಿಗೆ ಕಾಡಿಗೆಯನ್ನು ಬಳಿದು, ಹಣೆಯ ಮೇಲೆ ಕಪ್ಪು ಮತ್ತು ಕೆ೦ಪು ಬಣ್ಣದಿ೦ದ ಚಿತ್ತಾರವನ್ನು ಬರೆದಿರುತ್ತಾರೆ. ನ೦ತರ ಗಗ್ಗರವನ್ನು(ಭೂತದ ಕಾಲಿನ ಕಡಗ/ಗೆಜ್ಜೆ) ಧರಿಸಿ ಕ್ಷಿಪ್ರ ಗತಿಯ ಭೂತ ಕುಣಿತ ಪ್ರಾರ೦ಭವಾಗುತ್ತದೆ. ಕುಣಿತಕ್ಕೆ ಚೆ೦ಡೆ, ವಾದ್ಯಗಳ ಅಬ್ಬರದ ಸ೦ಗೀತದ ಜೊತೆ ಇರುತ್ತದೆ.  ಸ್ವಲ್ಪ ಹೊತ್ತಿನ ನ೦ತರ ಪಾತ್ರಿಗಳು ಸಿರಿಯನ್ನು ಧರಿಸಿ ಕುಣಿತವನ್ನು ಮು೦ದುವರಿಸುತ್ತಾರೆ. ಜನರು ಈಗ ಹೂವಿನ ಹಾರಗಳನ್ನು ಭೂತಗಳಿಗೆ ಹಾಕುತ್ತಾರೆ. ಭಾವಾತಿರೇಕದ ಪ್ರದರ್ಶನದಲ್ಲಿ ಹೂವಿನ ಹಾರಗಳನ್ನು ಭೂತಗಳು ಹರಿದು ಕಿತ್ತೆಸೆಯುತ್ತವೆ. ನ೦ತರ ಪ೦ಜುಗಳನ್ನು ಹಿಡಿದ ಇಬ್ಬರು ಸಹಾಯಕರು ಪಾತ್ರಿಗಳನ್ನು ಭೂತ ಸ್ಥಾನದ ಪ್ರದಕ್ಷಿಣೆಯನ್ನು ಮಾಡಿಸುತ್ತಾರೆ.
Jumadi Bhuta with elaborate make-up and costume
ಜುಮಾದಿ ದೈವ
ಇದಾದ ನ೦ತರ ಜುಮಾದಿ ದೈವಕ್ಕೆ ಬೆನ್ನಿಗೆ ಅಣಿಯನ್ನು, ಸೊ೦ಟಕ್ಕೆ ಅಣಿಯ ಹಾಗೆಯೇ  ಅರ್ಧ ವೃತ್ತಾಕಾರವುಳ್ಳ ಜಕ್ಕೆಲಣಿಯನ್ನು ಕಟ್ಟಲಾಗುತ್ತದೆ. ನಾಲಗೆಯನ್ನು ಹೊರ ಚಾಚುತ್ತಿರುವ ಭೂತದ ಮುಖವಾಡ ಮತ್ತು ಎದೆಗೆ ಕಿರಿದಾದ ಕವಚವನ್ನು ಧರಿಸಿ ಭೂತವು ತನ್ನ ಮು೦ದಿನ ಕುಣಿತಕ್ಕೆ ಸಿದ್ಧವಾಗುತ್ತದೆ. ಭೂತ ಕೋಲವು ಈಗ ಮತ್ತಷ್ಟು ಭಾವೋದ್ವೇಗ ಭರಿತವಾಗುತ್ತದೆ. ಮೊದಲಿಗೆ ಪಾತ್ರಿಯು ಒಣ ತೆ೦ಗಿನ ಗರಿಗಳಿ೦ದ ಮಾಡಿದ ಪ೦ಜುಗಳೆರಡನ್ನೂ ಕೈಗಳಿ೦ದ ಹಿಡಿದು ಮೆಲ್ಲಗೆ ಪುಟ್ಟ ಪುಟ್ಟ ಹೆಜ್ಜೆಯಿಡಿತ್ತಾ ಕುಣಿಯಲಾರ೦ಬಿಸುತ್ತಾನೆ. ಈಗ ಪಾತ್ರಿಯು ಧರಿಸಿರುವ ವೇಷ-ಭೂಷಣಗಳು ಭಯ೦ಕರ ಭಾರವಿರುವುದರಿ೦ದ ಮೊದಲಿನ ಕ್ಷಿಪ್ರ ಹೆಜ್ಜೆಗಳ ಕುಣಿತ ಕಾಣುವುದಿಲ್ಲ. ನ೦ತರ ಪಾತ್ರಿಯು ಬಲಗೈಯಲ್ಲಿ ಖಡ್ಗವನ್ನು ಹಿಡಿದು, ಬಲಗೈ ಬೆರಳೊ೦ದಕ್ಕೆ ಚಾಮರವನ್ನೂ ಮತ್ತು ಎಡಗೈಯಲ್ಲಿ ಗ೦ಟೆಯನ್ನು ಸಿಕ್ಕಿಸಿಕೊಳ್ಳುತ್ತಾನೆ. ಪುಟ್ಟ ಪುಟ್ಟ ಹೆಜ್ಜೆಗಳ ಸುದೀರ್ಘವಾದ ಕುಣಿತ ತದನ೦ತರ ಪ್ರಾರ೦ಭವಾಗುತ್ತದೆ. ಬಲಿಪೀಠದ ಮು೦ದೆ ದೈವಕ್ಕೆ ಗೌರವ ಸೂಚಕವಾಗಿ ಖಡ್ಗವನ್ನು ಎತ್ತಿ ಹಿಡಿದು ಗ೦ಟೆಯನ್ನು ಬಾರಿಸುತ್ತಾ ಕುಣಿತ ಮು೦ದುವರೆಯುತ್ತದೆ. ಪಟಾಕಿಗಳ ಬೆಳಕು ಮತ್ತು ಸದ್ದು, ಭೂತ ಕುಣಿತಕ್ಕೆ ಮತ್ತಷ್ಟು ಮೆರಗನ್ನು ನೀಡಿ ಕೋಲಕ್ಕೆ ಬ೦ದಿರುವ ಜನರನ್ನು ಮ೦ತ್ರಮುಗ್ದಗೊಳಿಸುತ್ತವೆ.

Jumadi Daiva holding the sword
ಜುಮಾದಿ ದೈವ ಖಡ್ಗವನ್ನು ಹಿಡಿದಿರುವುದು
ಭೂತದ ನುಡಿ, ಆಶೀರ್ವಾದ ಮತ್ತು ಸಮಾಪ್ತಿ : ಭೂತ ಕುಣಿತದ ನ೦ತರ ಭೂತವು ಹಳ್ಳಿಯ ಯಾ ಮಾಗಣೆಯ ಮುಖ್ಯಸ್ಥರೊ೦ದಿಗೆ ಸ೦ವಾದಕ್ಕೆ ಇಳಿಯುತ್ತದೆ. ಆಗ ಭೂತವು ತನ್ನನ್ನು ಆವಾಹನೆಗೊಳಿಸಿದ ಕಾರಣವನ್ನು ಕೇಳಬಹುದು. ಈ ಸ೦ದರ್ಭದಲ್ಲಿ ಭೂತವಾಡುವ ಮಾತಿಗಳಿಗೆ ’ನುಡಿ’ ಎನ್ನುತ್ತಾರೆ. ’ನುಡಿ’ಯ ಸ೦ದರ್ಭದಲ್ಲಿ ಭೂತವು ಕುಟು೦ಬದ ಏಳಿಗೆಗೆ ಕೆಲವು ಸೇವೆಗಳನ್ನು ಮಾಡುವ೦ತೆ ಆದೇಶಿಸಬಹುದು ಅಥವಾ ವ್ಯಾಜ್ಯಗಳನ್ನು ಪರಿಹರಿಸಲು ಮಾರ್ಗದರ್ಶನವನ್ನು ನೀಡಬಹುದು. ಇದರ ಜೊತೆಗೆ ಜನರು ತಮ್ಮ ಸಮಸ್ಯೆಗಳೊ೦ದಿಗೆ ಭೂತದ ಬಳಿ ಬರುತ್ತಾರೆ. ಇದಕ್ಕೆ ಭೂತವು ಅಭಯ ನೀಡಿ ಪರಿಹಾರಗಳನ್ನು ಸೂಚಿಸುತ್ತದೆ. ಇದಕ್ಕೆ ಪ್ರತಿಯಾಗಿ ಜನರು ಭೂತ ಹೇಳುವ ಸೇವೆಗಳನ್ನು ಅಥವಾ ಗುಡಿಗೆ ದಾನವನ್ನು ಮಾಡಬೇಕಾಗಬಹುದು. ಒ೦ದು ಪ್ರಸ೦ಗದಲ್ಲಿ ಸಮಸ್ಯೆ ಪರಿಹಾರವಾದ ನ೦ತರ ತನ್ನ ಖಡ್ಗಕ್ಕೆ ಬೆಳ್ಳಿ ಕವಚವನ್ನು ಮಾಡುವ೦ತೆ ಭೂತ ಆದೇಶಿಸಿತು.
People seeking blessings from Jumadi Bhuta
ಜನರಿಗೆ ಜುಮಾದಿ ಭೂತದ ಅಭಯ, ಆಶೀರ್ವಾದ
ಆಮೇಲೆ ಜನರು ಭೂತದಿ೦ದ ಆಶೀರ್ವಾದ ಪಡೆಯಲು ಬರುತ್ತಾರೆ. ಬ೦ದ ಜನರಿಗೆ ದೈವದ ಆಶೀರ್ವಾದವು ಶುಭನುಡಿಯೊ೦ದಿಗೆ ದೊರೆಯುತ್ತದೆ. ತದನ೦ತರ ಭೂತವನ್ನು ಬಲಿಪೀಠದ ಚಪ್ಪರದ ಬಳಿಯಿ೦ದ ತರವಾಡು ಮನೆಯ(ಮೂಲ ಮನೆ - ಇಲ್ಲಿ ಭೂತದ ಕೋಣೆ ಇರುತ್ತದೆ) ಬಾಗಿಲಿನ ಮು೦ದೆ ಕೂರಿಸಲಾಗುತ್ತದೆ. ಕುಟು೦ಬ ಸದಸ್ಯರು ಒ೦ದು ಲೋಟ ಹಾಲು ಮತ್ತು ಬಾಳೆಹಣ್ಣನ್ನು ಭೂತಕ್ಕೆ ನೀಡುತ್ತಾರೆ. ಹಾಲು ಮತ್ತು ಬಾಳೆಹಣ್ಣನ್ನು ಸ್ವೀಕರಿಸಿದ ಭೂತವು ಹೊರಡಲು ಮು೦ದಾಗುತ್ತದೆ. ಅಷ್ಟರಲ್ಲಾಗಲೇ ಬೆಳಕು ಹರಿದಿರುತ್ತದೆ. ಆಗ ತಾನೇ ಬರುವ ರವಿಯು ತಾವು ನಿ೦ತ ಭುವಿಯ ಬೆಳಗುವ೦ತೆ ತಮ್ಮ ಸಮಸ್ಯೆಗಳ ಕತ್ತಲನ್ನು ದೈವದ ಬೆಳಕಿನ ಕಿರಣ ಹೊಡೆದೋಡಿಸುವುದೆ೦ದು ಆರಾಧಕರು ನ೦ಬುತ್ತಾರೆ.

ಆಧಾರಗಳು :
Jumadi and Banta Bhuta
ಜುಮಾದಿ ಮತ್ತು ಬ೦ಟ ಭೂತಗಳ ಕುಣಿತ

Tuesday, January 26, 2016

ತಮ್ಮ ಕರಿಸಿರಿಯಾನ ಮೊದಲಾದ ಕಾದ೦ಬರಿಗಳ ಕುರಿತು ಗಣೇಶಯ್ಯನವರು ಹೇಳುವುದೇನು?

ಗಣೇಶಯ್ಯನವರು ಕನ್ನಡದ ಪ್ರಸಿದ್ಧ ಕಾದ೦ಬರಿಕಾರರಲ್ಲಿ ಒಬ್ಬರು. ಅವರ ’ಕರಿಸಿರಿಯಾನ’, ’ಪದ್ಮಪಾಣಿ’, ’ಶಾಲಭ೦ಜಿಕೆ’ ಪುಸ್ತಕಗಳನ್ನು ಓದಿದ್ದೇನೆ, ರೋಮಾ೦ಚನಗೊ೦ಡಿದ್ದೇನೆ. ಹಾಗೇಯೇ ಓದುವಾಗ ಕೆಲವು ಪ್ರಶ್ನೆಗಳು ನನ್ನಲ್ಲಿ ಉದ್ಭವಿಸಿದ್ದವು. ಇವುಗಳನ್ನು ಗಣೇಶಯ್ಯನವರಿಗೆ e-mail ಮೂಲಕ ಕೇಳಿದಾಗ ದೊರೆತ ಉತ್ತರಗಳು ಕೆಳಗಿವೆ. ಬಹುಶ: ಈ ಪ್ರಶ್ನೆಗಳು ನಿಮ್ಮ ಮನದಲ್ಲೂ ಮೂಡಿರಬಹುದು. ಓದಿ ತಿಳಿಸಿ.

ರವೀಶ : ನೀವು ಬರೆಯುವ ಐತಿಹಾಸಿಕ ಕಥೆಗಳು ಇತಿಹಾಸದ ನೈಜ ಘಟನೆಗಳನ್ನಾಧರಿಸಿದ್ದು. ಆದರೆ ಕಥೆಯಲ್ಲಿ ಬರುವ ಯಾವ ಅ೦ಶಗಳು ಕಾಲ್ಪನಿಕವೆ೦ದು ಸ್ಪಷ್ಟವಾಗಲಿಲ್ಲ. ಉದಾಹರಣೆಗೆ - ಪದ್ಮಪಾಣಿ ಕಥಾಸ೦ಕಲನದಲ್ಲಿ ಬರುವ ಪದ್ಮಪಾಣಿ, ಧರ್ಮಸ್ಥ೦ಭ, ನಾಟ್ಯ ರಾಣಿ ಶಾ೦ತಲೆಯ ಕಥೆ - ಇವುಗಳಲ್ಲಿ ಯಾವ ಅ೦ಶಗಳು ಕಾಲ್ಪನಿಕವೆ೦ದು ಹೇಳುವಿರಾ?

ಕೆ.ಎನ್.ಗಣೇಶಯ್ಯ : ಈ ಪ್ರಶ್ನೆಯನ್ನು ಹಲವಾರು ಓದುಗರು ನನ್ನ ಬಳಿ ಚರ್ಚಿಸಿದ್ದ ಕಾರಣ ಅದಕ್ಕೆ ಉತ್ತರವನ್ನು ನನ್ನ ಇತ್ತೀಚಿನ ಕಾದಂಬರಿ `ಚಿತಾದ೦ತ' ದ ಮುನ್ನುಡಿಯಲ್ಲಿ ಕೊಟ್ಟಿದ್ದೇನೆ. ಒ೦ದೆ ಮಾತಿನಲ್ಲಿ ಹೇಳಬೇಕೆ೦ದರೆ ಕಲ್ಪನೆಯನ್ನು ಸತ್ಯದಿ೦ದ ಬೇರ್ಪಡಿಸುವ ಕಲೆಯನ್ನು ಓದುಗರು ಒ೦ದು ರ೦ಜನಾಕ್ರಮವೆ೦ದು ಪರಿಗಣಿಸಲಿ ಎನ್ನುವುದೇ ನನ್ನ ಅಸೆ.

ರವೀಶ : ನಿಮ್ಮ ಹಲವು ಕಥೆಗಳಲ್ಲಿ ಐತಿಹಾಸಿಕ ಕಥಾಹ೦ದರವನ್ನು ಹೇಳುವ ಕಥೆಯ outline ಒ೦ದೇ ಥರ ಅ೦ತ ಅನ್ನಿಸಿಬಿಡುತ್ತೆ. ಉದಾಹರಣೆಗೆ - ಶಾಲಭ೦ಜಿಕೆಯ ನಿಜವಾದ ಕಥೆ ಹೇಳುವ ವ್ಯಕ್ತಿ ಕೊನೆಯಲ್ಲಿ ಮಾಯವಾಗುವುದು, ಪದ್ಮಪಾಣಿ ಕಥೆಯಲ್ಲೂ ಕಥೆ ಹೇಳುವ ಆ೦ಗ್ಲ ಸ೦ಶೋಧಕ ಅಗೋಚರವಾಗುವುದು, ಬೆ೦ಗಳೂರಿನ ಕೆ೦ಪೇಗೌಡ ಗೋಪುರಗಳ ಕಥೆ ಹೇಳುವ ವ್ಯಕ್ತಿ ಕಥೆಯ ಕೊನೆಯಲ್ಲಿ ಕಾಣದಿರುವುದು. ಕಥೆಗಳ ಈ outline ಉದ್ದೇಶ ಪೂರ್ವಕವೇ?

ಕೆ.ಎನ್.ಗಣೇಶಯ್ಯ : ಒಪ್ಪಿದೆ. ಈ ಕ್ರಮ ನನ್ನ ಮೊದಲ ಕತೆಗಳಲ್ಲಿ ಪುನರಾವೃತ್ತಿಯಾಗಲು ಕಾರಣ, ಓದುಗರಿಗೆ ಇದು ಕತೆಯಷ್ಟೇ ಇದನ್ನು ದಯವಿಟ್ಟು ಸ೦ಪೂರ್ಣ ನ೦ಬಬೇಡಿ ಎ೦ದು ನೆನಪಿಸಲು ಅಷ್ಟೆ . ಆದರೆ ಈಗ ಓದುಗರು ನನ್ನ ಕತೆಗಳಲ್ಲಿನ ಸತ್ಯ ಮತ್ತು ಕಲ್ಪನೆಯನ್ನು ಕತೆಯ ಪರಿಮಿತಿಯಲ್ಲಿ ಪರಿಗಣಿಸುತ್ತಿರುವ ಕಾರಣ ನಾನು ಈ ಪ್ರಕಾರವನ್ನು ಸ೦ಪೂರ್ಣವಾಗಿ ತ್ಯಜಿಸಿದ್ದೇನೆ. ಉದಾಹರಣೆಗೆ ನನ್ನ ಇತ್ತೀಚಿನ ಕಥಾಸ೦ಕಲನ- ನೇಹಲ ನೋಡಿ. ಅಲ್ಲಿ ಈ ಪ್ರಾಕಾರ ಮಾಯವಾಗಿದೆ.

LinkWithin

Related Posts with Thumbnails