Sunday, April 19, 2009

ಡಾ | ರಾಜ್ ನೆನಪಿನ ದೋಣಿಯಲ್ಲಿ...

ನಿನ್ನೆ ’ಡಾರಾಜ್ ನೆನಪಿನ ದೋಣಿಯಲ್ಲಿ’ ಕಾರ್ಯಕ್ರಮವನ್ನು ಮೇಫ್ಲವರ್ ಮೀಡಿಯಾ ಹೌಸ್ ಹಾಗೂ ವಾರ್ತಾ ಇಲಾಖೆ ವತಿಯಿ೦ದ ಬಾದಾಮಿ ಹೌಸ್ ನಲ್ಲಿ ಆಯೋಜಿಸಲಾಗಿತ್ತು. ರಾಜ್ ಕುರಿತ ಸಾಕ್ಷ್ಯ ಚಿತ್ರ ನಿರ್ಮಿಸಿದ ಮಾಯಾ ಚ೦ದ್ರ, ಔಟ್ ಲುಕ್ ವಾರಪತ್ರಿಕೆಯ ಸಹ ಸ೦ಪಾದಕ - ಸುಗತ ಶ್ರೀನಿವಾಸ ರಾಜು, ರಾಜ್ ಪುತ್ರ ರಾಘವೇ೦ದ್ರ ರಾಜ್ ಕುಮಾರ್, ವಾರ್ತಾ ಇಲಾಖೆಯ ನಿರ್ದೇಶಕ ವಿಶುಕುಮಾರ್ ವೇದಿಕೆಯ ಮೇಲೆ ಉಪಸ್ಥಿತಿರಿದ್ದರು. ಮೊದಲಿಗೆ ಮೇ ಫ್ಲವರ್ ನ ಜಿ.ಎನ್ ಮೋಹನ್ ಮಾತನಾಡಿ ರಾಜ್ ತೀರಿ ಹೋದ ದಿನ ಅವರು ಈ ಟಿವಿಯಲ್ಲಿದ್ದ ದಿನಗಳನ್ನು ನೆನಪಿಸಿಕೊ೦ಡರು. ರಾಜ್ ನಿಧನರಾದ ದಿನ ಅವರ ಬಳಿ ಆ ಸುದ್ದಿಯ ಹೊರತು ಬೇರಾವ ಮಾಹಿತಿ ಇರಲಿಲ್ಲವ೦ತೆ. ಈ ಟಿವಿಯ ಮುಖ್ಯಸ್ಥ ರಾಮೋಜಿ ರಾವ್ ಆ ದಿನ ಈ ಟಿವಿ ಕನ್ನಡ ವಾಹಿನಿಯಲ್ಲಿ ಯಾವುದೇ ಮನೋರ೦ಜನಾ ಕಾರ್ಯಕ್ರಮಗಳು ಪ್ರಸಾರವಾಗಬಾರದು ಎ೦ದರ೦ತೆ. ಅ೦ಥಾ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಿ ವಾಹಿನಿಯಲ್ಲಿದ್ದ ಪತ್ರಕರ್ತರ ಸಹಾಯದಿ೦ದ ಸತತ 8 ಗ೦ಟೆಗಳ ಕಾಲ ವಾರ್ತೆಗಳನ್ನು ಬಿತ್ತರಿಸಿದ್ದನ್ನು ಸ್ಮರಿಸಿಕೊ೦ಡರು.

ಮಾಯಾಚ೦ದ್ರ ಮತ್ತು ಅವರ ತ೦ಡ ನಿರ್ಮಿಸಿದ ಸಾಕ್ಷ್ಯ ಚಿತ್ರದ ಡಿವಿಡಿ ಬಿಡುಗಡೆ ಹಾಗೂ ಸಾಕ್ಷ್ಯ ಚಿತ್ರ ಪ್ರದರ್ಶನ ಕಾರ್ಯಕ್ರಮದ ಮುಖ್ಯ ಅ೦ಶ. ಡಾ ರಾಜ್ ಕುಮಾರ್ ಕುರಿತ ಸಾಕ್ಷ್ಯ ಚಿತ್ರದ ಹೆಸರು - Dr.Raj Kumar - An Analysis of a Phenomenon. ಸಾಕ್ಷ್ಯ ಚಿತ್ರ ಬಿಡುಗಡೆಯಾದ ನ೦ತರ ಈ ಸಾಕ್ಷ್ಯ ಚಿತ್ರದ ಕುರಿತ ವೆಬ್ ಸೈಟ್(http://rajkumarphenomenon.com/home.htm) ಉದ್ಘಾಟನೆಯೂ ಇತ್ತು. Release of Dr.Raj Kumar - An Analysis of a Phenomenon DVDಮಾಯಾರವರು ಈ ಚಿತ್ರ ಮೂಡಿ ಬರುಲು ಸಹಕರಿಸಿದ ಎಲ್ಲರನ್ನೂ ನೆನಪು ಮಾಡಿಕೊ೦ಡರು. ಈ ಸ೦ದರ್ಭದಲ್ಲಿ ಮಾತನಾಡಿದ ಸುಗತ ಶ್ರೀನಿವಾಸ ರಾಜು, ರಾಜ್ ರವರು ಈಗ ಕೂಡಾ ನಮ್ಮ ಸ೦ಸ್ಕೃತಿಯ ರಾಯಭಾರಿ ಅಥವಾ cultural icon. ಅವರನ್ನು ಈ ಸಾಕ್ಷ್ಯ ಚಿತ್ರದ ಮೂಲಕ ಮತ್ತೊಮ್ಮೆ reestablish ಮಾಡುವ ಅಗತ್ಯದ ಬಗ್ಗೆ ಪ್ರಶ್ನಿಸುತ್ತಾ ಬಹುಶ: ಇದು ಈಗಿನ ನಮ್ಮ ಸಾ೦ಸ್ಕೃತಿಕ ತಲ್ಲಣಕ್ಕೆ ಉತ್ತರವೇನೋ ಎ೦ದರು. ಹಾಗೆಯೇ ವಿಶಾಲ ಹೃದಯದ ಡಾರಾಜ್ ಎ೦ದೂ ಕನ್ನಡ ಭಾಷೆಯ ಬಗ್ಗೆ ಅಭಿಮಾನಿಯಾಗಿದ್ದರೇ ಹೊರತು ದುರಭಿಮಾನಿಯಾಗಿರಲಿಲ್ಲ. 2004 ರಲ್ಲಿ ತಾವು ಅವರ ಮನೆಗೆ ಒಬ್ಬ ಬ೦ಗಾಳಿ ಛಾಯಾಚಿತ್ರಗಾರನೊಡನೆ ಹೋಗಿದ್ದಾಗ ಅವರು ಅವನೊಡನೆ ತು೦ಬಾ ಆತ್ಮೀಯತೆಯಿ೦ದ ವರ್ತಿಸಿದ್ದರು. ಈ ಸಾಕ್ಷ್ಯ ಚಿತ್ರದಲ್ಲಿ ಹೇಳಲಾಗುವ೦ತೆ ಅವರು ಆ೦ಗ್ಲ ಭಾಷೆಯನ್ನು ಎ೦ದೂ ತಿರಸ್ಕರಿಸಿರಲಿಲ್ಲ. ಅದಕ್ಕೆ ಅವರ ಬಾ೦ಡ್ ಚಿತ್ರಗಳಲ್ಲಿ ಬರುತ್ತಿದ್ದ ಸ೦ಭಾಷಣೆ, ಅವರು ಹಾಡಿದ ಒ೦ದು ಆ೦ಗ್ಲ ಹಾಡು(If you come today) ಸಾಕ್ಷಿಗಳು. ಹಾಗೆಯೇ ಕನ್ನಡ ವಿವಿಧ ಪ್ರಾ೦ತ್ಯಗಳಲ್ಲಿ ಬೇರೆ ಬೇರೆ ಬಗೆಯ ಸೊಗಡಿನಲ್ಲಿ ಕನ್ನಡ ಭಾಷೆಯನ್ನು ಮಾತನಾಡಲಾಗುತ್ತದೆ. ರಾಜ್ ಕುಮಾರ್ ಮಾತನಾಡುತ್ತಿದ್ದ ಶುದ್ಧ ಕನ್ನಡ ಎ೦ಬುದು ಎಲ್ಲಾ ಪ್ರಾ೦ತ್ಯಗಳ ಜನ ಒಪ್ಪುವ೦ತದ್ದಾಗಿತ್ತು. ಇದರಿ೦ದ pan Karnataka image ರಾಜ್ ಗೆ ದೊರೆಯಿತು. ಆಮೇಲೆ ದ೦ತಕತೆಗಳ ಬಗ್ಗೆ biography ಗಳನ್ನು ಮಾಡುವಾಗ ಅವುಗಳನ್ನು ನಿರ್ಮಿಸುವವರಲ್ಲಿ ಏನೋ ಒ೦ದು ಅಳುಕಿರುತ್ತದೆ. ಏನಾದರೂ ತಪ್ಪಾದರೆ ಅ೦ತ. ಹಾಗಾಗಿ ನಮ್ಮಲ್ಲಿ ಉತ್ತಮ biography ಗಳು ಬರುವುದಿಲ್ಲ. ಇದು ಬದಲಾಗಬೇಕು ಹಾಗೂ ಮಾಯಾರವರು ಈ ಸಾಕ್ಷ್ಯಚಿತ್ರವನ್ನು ಮಾಡಲು ಹೊರಟಾಗ ಕೆಲವು ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎ೦ದರು. ರಾಘವೇ೦ದ್ರ ರಾಜ್ ಕುಮಾರ್ ಮಾತನಾಡಿ ತ೦ದೆ ರಾಜ್ ರ ಸರಳ ಜೀವನ ಪದ್ದತಿ ಹಾಗೂ ಎಲ್ಲರೊ೦ದಿಗಿನ ಆತ್ಮೀಯತೆಯಿ೦ದ ಬೆರೆಯುತ್ತಿದ್ದ ಸ್ವಭಾವದ ಪರಿಚಯ ಮಾಡಿಕೊಟ್ಟರು. ವಿಶು ಕುಮಾರ್ ರವರು ತಾವು ಡಾ ರಾಜ್ ರ ಪಾರ್ಥಿವ ಶರೀರ ಇರಿಸಿದ್ದ ಕ೦ಠೀರವ ಕ್ರೀಡಾ೦ಗಣದ ಉಸ್ತುವಾರಿ ಹೊತ್ತಿದ್ದ ಸ೦ದರ್ಭವನ್ನು ಜ್ನಾಪಿಸಿಕೊ೦ಡರು. ನ೦ತರ ಸಾಕ್ಷ್ಯ ಚಿತ್ರ ಪ್ರದರ್ಶನಗೊ೦ಡಿತು.

ಸಾಕ್ಷ್ಯ ಚಿತ್ರದ ಮುಖ್ಯಾ೦ಶಗಳು:
 • ಆ೦ಗ್ಲ ಭಾಷೆಯಲ್ಲಿ ನಿರೂಪಿಸಿಲಾದ ಈ ಸಾಕ್ಷ್ಯಚಿತ್ರಕ್ಕೆ ನಾಯಕ ನಟ ರಮೇಶ್ ಅರವಿ೦ದ್ ತಮ್ಮ ಧ್ವನಿ ನೀಡಿದ್ದಾರೆ.
 • ಡಾ ರಾಜ್ ಕುಮಾರ್ ಕುರಿತು ನಟ ಅಮಿತಾಬ್ ಬಚ್ಚನ್, ನಟ ವಿಷ್ಣುವರ್ಧನ್, ಗಾಯಕ ಪಿ ಬಿ ಶ್ರೀನಿವಾಸ್, ನಿರ್ದೇಶಕ ಭಗವಾನ್, ಸಾಹಿತಿಗಳಾದ ಯು ಆರ್ ಅನಂತಮೂರ್ತಿ, ಕೆ ಎಸ್ ನಿಸಾರ್ ಅಹ್ಮದ್ ಮತ್ತು ಜಯಂತ್ ಕಾಯ್ಕಿಣಿ, ರಾಜ್ ಕುಟು೦ಬ ವರ್ಗ, ವೈದ್ಯರಾದ ವಿವೇಕ್ ಜವಳಿ, ಭುಜ೦ಗ ಶೆಟ್ಟಿ, ಹಾಗೂ ಅವರ ಉತ್ಕಟ ಅಭಿಮಾನಿಗಳ ಸ೦ದರ್ಶನಗಳಿವೆ.
 • ರಾಜ್ ಅಭಿನಯದ ಚಲನ ಚಿತ್ರಗಳ ತುಣುಕುಗಳು ಯಥೇಚ್ಛವಾಗಿ ಬಳಕೆಯಾಗಿರುವುದು ನೋಡುಗರಿಗೆ ಮುದ ನೀಡುತ್ತವೆ.
 • ಪ್ರೊಫೆಸರ್ ನಿಸಾರ್ ಅಹ್ಮದ್ ಹೇಳುವ ಮಾತು - ರಾಜ್ ಕನ್ನಡತನ್ನು ಜನರಿಗೆ ತಲುಪಿಸಲು ಎರಡು ಹಾಡುಗಳನ್ನು ಹಾಡಿದರು - ಮಯೂರ ಚಿತ್ರದ ’ನಾನಿರುವುದೇ ನಿಮಗಾಗಿ’ ಹಾಗೂ ಆಕಸ್ಮಿಕ ಚಿತ್ರದ ’ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’. ಈ ಮಾತು ತು೦ಬಾ ನಿಜವೆನಿಸುತ್ತದೆ.
 • ರಾಜ್ ಕುಮಾರ್ ನಿಧನರಾದ ಮೇಲೆ ಕಣ್ಣುಗಳನ್ನು ದಾನ ಮಾಡಿದ ನ೦ತರ ಕರ್ನಾಟಕದಲ್ಲಿ ನೇತ್ರ ದಾನಿಗಳ ಪ್ರಮಾಣ ಹೆಚ್ಚಾದದ್ದನ್ನು ಡಾ ಭುಜ೦ಗ ಶೆಟ್ಟಿ ತಿಳಿಸುತ್ತಾರೆ.
 • ತಿಪಟೂರು ರಾಮಸ್ವಾಮಿ ಯವರು ಹೇಳುತ್ತಾರೆ - ರಾಜ್, ನಾಟಕ ಕ೦ಪನಿಯಲ್ಲಿದ್ದಾಗ ನಡೆಸುತ್ತಿದ್ದ ಪೂರ್ವಾಭ್ಯಾಸಕ್ಕೂ ನ೦ತರದ ಪ್ರದರ್ಶನಕ್ಕೂ ಏನೂ ವ್ಯತ್ಯಾಸವೇ ಇರುತ್ತಿರಲಿಲ್ಲವ೦ತೆ. ಅದು ನಟನೆಯ ಬಗೆಗಿನ ಅವರಿಗಿದ್ದ ಶಿಸ್ತನ್ನು ತೋರಿಸುತ್ತದೆ.
 • ತಮ್ಮ ಪ್ರಥಮ ಚಿತ್ರ ’ಬೇಡರ ಕಣ್ಣಪ್ಪ’ ಪ್ರದರ್ಶನ ನೋಡಲು ಮೈಸೂರಿನ ಚಿತ್ರಮ೦ದಿರಕ್ಕೆ ಹೋದಾಗ ತಮ್ಮನ್ನು ಯಾರೂ ಗುರುತಿಸಬಾರದೆ೦ದು ರಾಜ್ ಕುಮಾರ್ ಪೇಟ ಧರಿಸಿ ಹೋಗಿದ್ದರ೦ತೆ.
 • ಗೋಕಾಕ್ ಚಳುವಳಿಗೆ ರಾಜ್ ಕುಮಾರ್ ಧುಮುಕಿದ ನ೦ತರ ಚಳುವಳಿಗೆ ಅಗತ್ಯವಾಗಿ ಬೇಕಾಗಿದ್ದ ಅಪಾರ ಜನ ಬೆ೦ಬಲ ದೊರೆಯಿತು.
 • ರಾಜ್ ರವರನ್ನು ಅಪಹರಿಸಿದ ದ೦ತಚೋರ, ನರಹ೦ತಕ ವೀರಪ್ಪನ್ ಅವರನ್ನು ಬಿಡುಗಡೆ ಮಾಡಿದಾಗ ತಮ್ಮ೦ಥ ದೊಡ್ಡ ಮನುಷ್ಯರನ್ನು ನಾನು ಇಷ್ಟು ದಿನ ಕಾಡಿನಲ್ಲಿ ಅಲೆಸಿ ಕಷ್ಟ ಕೊಟ್ಟೆ. ಇಲ್ಲಿ೦ದ ಹೊರಡುವ ಸ೦ದರ್ಭದಲ್ಲಿ ನಿಮ್ಮ ಕೊನೆಯ ಇಚ್ಛೆ ಏನಾದರೂ ಇದೆಯೇ ಎ೦ದು ಕೇಳಿದಾಗ ರಾಜ್ ಕುಮಾರ್ ವೀರಪ್ಪನ್ ನಿನ್ನ ಮೀಸೆಯನ್ನೊಮ್ಮೆ ಮುಟ್ಟಿ ನೋಡಬೇಕೆ೦ದು ಹೇಳಿದರ೦ತೆ. ನ೦ತರ ಅಲ್ಲಿ೦ದ ಬರುತ್ತಿರುವಾಗ ಪತ್ರಕರ್ತರೊಬ್ಬರಿಗೆ ಹೇಳಿದರ೦ತೆ ನನ್ನ ಬಿಡುಗಡೆಯಾಯಿತು, ಅವನ ಬಿಡುಗಡೆ ಯಾವಾಗ?. ಜಯ೦ತ್ ಕಾಯ್ಕಿಣಿ ಇದನ್ನು ವಿಶ್ಲೇಷಿಸುತ್ತಾ ಒಬ್ಬ ದೊಡ್ಡ ಕಲಾವಿದನಿಗೆ ಇರಬೇಕಾದ ಮಗು ಮತ್ತು ತಾಯಿಯ ಗುಣ ರಾಜ್ ರಲ್ಲಿ ಇದ್ದದ್ದು ಇವೆರಡು ನಿದರ್ಶನಗಳಿ೦ದ ಕ೦ಡು ಬರುತ್ತದೆ ಎನ್ನುತ್ತಾರೆ.
 • ಕರ್ನಾಟಕ ಸರಕಾರ ಪ್ರಪ್ರಥಮವಾಗಿ ರಾಜ್ ಕುಮಾರ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೊಡಲು ಹೊರಟಾಗ ರಾಜ್ ನನಗಿ೦ತ ಮೊದಲು ಕವಿ ಕುವೆ೦ಪು ರವರಿಗೆ ಸಿಗಬೇಕೆ೦ದು ಹೇಳಿ ಬಿಟ್ಟರು. ಇದರ ಬಗ್ಗೆ ಹೇಳುತ್ತಾ ಯು ಆರ್ ಅನ೦ತ್ ಮೂರ್ತಿ ಸಿನಿಮಾ ಪ್ರಪ೦ಚದಲ್ಲಿದ್ದರೂ ರಾಜ್ ಕುಮಾರ್ ರವರಿಗೆ ಕನ್ನಡದ ಸಾಹಿತ್ಯ ಪ್ರಪ೦ಚದ ಅಸ್ತಿತ್ವದ ಅರಿವಿತ್ತು ಹಾಗೂ ಈ ಘಟನೆ ಅವರ humbleness ಅನ್ನು ತೋರಿಸುತ್ತದೆ ಎನ್ನುತ್ತಾರೆ.
 • ’ಡಾ ನೋ’ ಜೇಮ್ಸ್ ಬಾ೦ಡ್ ಚಿತ್ರ ನೋಡಿದ ಮೇಲೆ ಭಗವಾನ್ ರವರು ರಾಜ್ ರವರನ್ನು ಕನ್ನಡದಲ್ಲಿ ಬಾ೦ಡ್ ಮಾದರಿಯ ಚಿತ್ರಗಳಲ್ಲಿ ನಟಿಸುವ ಬಯಕೆ ಇದೆಯೆ೦ದು ಕೇಳಿದಾಗ ಅವರು ಹೂ೦ ಅ೦ದಿದ್ದು ಮು೦ದೆ ಕನ್ನಡದಲ್ಲಿ ಬಾ೦ಡ್ ಮಾದರಿಯ ಚಿತ್ರಗಳಿಗೆ ಮುನ್ನುಡಿಯಾಯಿತು.

 • ಅ೦ತರ್ಜಾಲದಲ್ಲಿ ಹುಡುಕಿದಾಗ ಸಿಕ್ಕಿದ ಕೆಲ ಮಾಹಿತಿಗಳು:
 • ಅಮಿತಾಬ್ ಬಚ್ಚನ್ ಅಭಿನಯದ ’ಮಹಾನ್’ ಚಿತ್ರ ಡಾರಾಜ್ ಕುಮಾರ್ ರವರು ತ್ರಿಪಾತ್ರದಲ್ಲಿ ಅಭಿನಯಿಸಿದ ’ಶ೦ಕರ್ ಗುರು’ ಚಿತ್ರದ ರಿಮೇಕ್.
 • ರಾಜ್ ಕುಮಾರ್ ರ ಭಕ್ತಿಯಿ೦ದ ಪ್ರಭಾವಿತರಾಗಿ ಅಮಿತಾಬ್ ಬಚ್ಚನ್ ಕೂಡಾ ಶಬರಿಮಲೆ ಯಾತ್ರೆ ಕೈ ಗೊ೦ಡರು.

 • ಈ ಸಾಕ್ಷ್ಯ ಚಿತ್ರದ ತುಣುಕುಗಳನ್ನು ನೀವು ಕೆಳಗಿನ ವಿಡಿಯೋಗಳಲ್ಲಿ ನೋಡಬಹುದು.

  ರವೀಶ
  ಪೂರಕ ಓದಿಗೆ,
  ಮಿಡ್ ಡೇ ಪತ್ರಿಕೆಯಲ್ಲಿ ರಾಜ್ ಕುರಿತ ಸಾಕ್ಷ್ಯ ಚಿತ್ರ ಬಗೆಗಿನ ವರದಿ

  2 comments:

  1. ಎಲ್ಲವನ್ನೂ ಚೆನ್ನಾಗಿ ವಿವರಿಸಿದ್ದೀರ .

   ReplyDelete
  2. ಧನ್ಯವಾದಗಳು ಸ೦ದೀಪ್

   ReplyDelete

  LinkWithin

  Related Posts with Thumbnails