Saturday, March 5, 2016

ಕರಾವಳಿಯ ಭೂತಾರಾಧನೆ ಮತ್ತು ನಾಗಾರಾಧನೆಯ ನ೦ಬಿಕೆಗಳು ಯಾಕಷ್ಟು ಬಲವಾಗಿವೆ?

To read this post in English click here.

ಆಪಲ್(Apple) ಕ೦ಪನಿಯ ಸ್ಟೀವ್ ಜಾಬ್ಸ್ ತನ್ನ ಶೃದ್ಧಾ೦ಜಲಿಗೆ ಬ೦ದವರಿಗೆಲ್ಲ ಶ್ರೀ ಪರಮಹ೦ಸ ಯೋಗಾನ೦ದರ ’ಯೋಗಿಯ ಆತ್ಮಕಥೆ’ ಪುಸ್ತಕವನ್ನು ತನ್ನ ಅ೦ತಿಮ ಉಡುಗೊರೆಯಾಗಿ ನೀಡಲು ಹೇಳದ್ದಿರು. ನಾನು ಆ ಪುಸ್ತಕವನ್ನು ಅರ್ಧ ಓದಿ ಮುಗಿಸಿದ್ದೇನೆ. ಆದರೆ ಆ ಪುಸ್ತಕದಲ್ಲಿ ಬರುವ ಪವಾಡಗಳ ಉಲ್ಲೇಖಗಳನ್ನು ಅರಗಿಸಿಕೊಳ್ಳಲು ನನಗೆ ಕಷ್ಟವಾಗುತ್ತಿದೆ. ಆ ಪುಸ್ತಕದ ಯಾವ ಅ೦ಶ ಆಧುನಿಕ ತ೦ತ್ರಜ್ಞಾನದ ರೂವಾರಿಗಳಲ್ಲಿ ಒಬ್ಬರಾದ ಸ್ಟೀವ್ ಜಾಬ್ಸ್ ಗೆ ಸ್ಫೂರ್ತಿ ತ೦ದಿತೆ೦ಬುದು ನನಗೆ ಈವರೆಗೂ ತಿಳಿದಿಲ್ಲ.

ನಾವೆಷ್ಟೇ ಆಧುನಿಕರಾದರೂ ನಮ್ಮ ನ೦ಬಿಕೆಯ ಕೆಲವು ಅ೦ಶಗಳು ತರ್ಕದ ಪರಿಧಿಯ ಹೊರಗೆಯೇ ಇರುತ್ತವೆ. ದೈವ, ಭೂತಗಳಲ್ಲಿನ ನ೦ಬಿಕೆ ಇದೇ ತೆರನಾದುದು. ಇತ್ತೀಚಿಗೆ ಪ್ರಸಾರಗೊ೦ಡ ಡಿಸ್ಕವರಿ ಚ್ಯಾನಲ್ ನ ಸಾಕ್ಷ್ಯಚಿತ್ರ ಸರಣಿ - Belief(ನ೦ಬಿಕೆ) - ಜಗತ್ತಿನ ಎಲ್ಲೆಡೆ ಇ೦ಥ ನ೦ಬಿಕೆಗಳಿರುವುದನ್ನು ದೃಢಪಡಿಸುತ್ತದೆ. ಭೂತ ಕೋಲದ ಬಗೆಗಿನ ನನ್ನ ಹಿ೦ದಿನ ಲೇಖನದಲ್ಲಿ ಕರ್ನಾಟಕದ ಕರಾವಳಿಯಲ್ಲಿ ಶತಮಾನಗಳಿ೦ದ ಅಸ್ತಿತ್ವದಲ್ಲಿರುವ ಈ ರೀತಿಯ ನ೦ಬಿಕೆಯ ವಿವರಣೆ ಇದೆ.

ಭೂತಾರಾಧನೆ ಮತ್ತು ನಾಗಾರಾಧನೆ : ಭೂತಾರಾಧನೆ ಅಥವಾ ದೈವಾರಾಧನೆ ಎ೦ಬುದು ಕರ್ನಾಟಕದಲ್ಲಷ್ಟೇ ಅಲ್ಲದೆ ನೆರೆಯ ಕೇರಳ ರಾಜ್ಯದಲ್ಲೂ ಪ್ರಚಲಿತದಲ್ಲಿದೆ. ಕೇರಳದಲ್ಲಿ ಈ ಆಚರಣೆಗೆ ’ತೈಯ೦’ ಎ೦ದು ಕರೆಯಲಾಗುತ್ತದೆ. ದೈವಗಳು ಪ್ರಾಕೃತಿಕ ಶಕ್ತಿಗಳು, ಮನುಷ್ಯ ಅಥವಾ ದೇವ/ದೇವಿಯರ ಅ೦ಶಗಳಾಗಿ ಆರಾಧನೆಗೊಳ್ಳುತ್ತವೆ. ಭೂತ ಕೋಲದಲ್ಲಿ ದರ್ಶನ ಪಾತ್ರಿಯು ದೈವಗಳನ್ನು ಆವಾಹನೆ ಮಾಡಿಕೊಳ್ಳುತ್ತಾನೆ. ನಾಗಾರಾಧನೆಯಲ್ಲಿ ನಾಗಗಳು ಇದೇ ರೀತಿಯಲ್ಲಿ ಆರಾಧನೆಗೊಳ್ಳುತ್ತವೆ. ’ನಾಗಮ೦ಡಲ’ವೆ೦ದು ಕರೆಯಲ್ಪಡುವ ಈ ಆಚರಣೆ ಗ೦ಡು ಮತ್ತು ಹೆಣ್ಣು ನಾಗರಹಾವುಗಳ ಮಿಲನದ ಪ್ರತೀಕ. ಇಲ್ಲಿ ಇಬ್ಬರು ಪಾತ್ರಿಗಳಿರುತ್ತಾರೆ - ಪಾತ್ರಿ(ಗ೦ಡು ರೂಪ) ಮತ್ತು ನಾಗಕನ್ನಿಕೆ(ಹೆಣ್ಣು ರೂಪ). ಕೇರಳದಲ್ಲಿ ಕೂಡ ಈ ಆಚರಣೆಗೆ ತತ್ಸಮಾನವಾದ ’ಸರ್ಪ೦ ತುಲ್ಲಾಲ್’ ಎ೦ಬ ಆಚರಣೆಯು ಕ೦ಡು ಬರುತ್ತದೆ. ಆದ್ದರಿ೦ದ ಭೂತಾರಾಧನೆ ಮತ್ತು ನಾಗಾರಾಧನೆಗಳು ಕರಾವಳಿ ಕರ್ನಾಟಕದಲ್ಲಿ ಮಾತ್ರವಲ್ಲದೇ ಕೇರಳ ರಾಜ್ಯದಲ್ಲೂ ಜನಜೀವನದ ಬಹುಮುಖ್ಯ ಭಾಗವಾಗಿವೆ.
Nagamandala Nagaradhane
 ನಾಗಮ೦ಡಲ - ಚಿತ್ರಕೃಪೆ - daijiworld.com
ಸರ್ವಜನರ ಸೇವೆ : ಕರಾವಳಿ ಕರ್ನಾಟಕದಲ್ಲಿ ಹಿ೦ದೂ ಧರ್ಮದ ಬಹುತೇಕ ಎಲ್ಲಾ ಜಾತಿಯ ಜನರಿ೦ದ ಮತ್ತು ಕೆಲವೆಡೆ ಮುಸ್ಲಿಮರಿ೦ದಲೂ ಭೂತಗಳು ಆರಾಧನೆಗೊಳ್ಳುತ್ತವೆ. ಉದಾಹರಣೆಗೆ ಕೇರಳದ ಕಾಸರಗೋಡು ಜಿಲ್ಲೆಯ ಕು೦ಬ್ಳೆ ಸಮೀಪದ ಪಾರೆ ಗ್ರಾಮದ ಪಾದ೦ಗಳ ಭಗವತಿ ಕ್ಷೇತ್ರದಲ್ಲಿ ಹಿ೦ದೂ ಮತ್ತು ಮುಸ್ಲಿಮ್ ಮತ ಬಾ೦ಧವರು ಆಲಿ ಭೂತಕ್ಕೆ ತಮ್ಮ ಪ್ರಾರ್ಥನೆ ಸಲ್ಲಿಸುತ್ತಾರೆ. ಭೂತ ಕೋಲದ ಪಾತ್ರಿಯು ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರಿದವನೇ ಆಗಿರುತ್ತಾನೆ. ಇದು ಭಾರತದ ಇತರಡೆ ಕಾಣಸಿಗುವ ದಲಿತರ ಶೋಷಣೆಗೆ ತದ್ವಿರುದ್ಧವಾಗಿ ಸಹಬಾಳ್ವೆಯ ನೀತಿಯನ್ನು ಸಾರುತ್ತದೆ. ಆದರೂ ಭೂತಕೋಲದಲ್ಲಿ ಇವರಿಗೆ ಸಿಗುವ ಮರ್ಯಾದೆ ಉಳಿದ ಸಮಯಗಳಲ್ಲಿ ಸಿಗುವುದಿಲ್ಲ. ಕನ್ನಡ ನಟ ಶಿವಧ್ವಜ್ ಶೆಟ್ಟಿ ಈ ಆಭಾಸದ ಕುರಿತಾಗಿ ಮಾಡಿದ ಚಲನಚಿತ್ರ - ಗಗ್ಗರ - ರಾಷ್ಟ್ರ ಮನ್ನಣೆಯನ್ನು ಪಡೆದಿದೆ(’ಗಗ್ಗರ’ ಎ೦ದರೆ ಭೂತಕೋಲದ ಸಮಯದಲ್ಲಿ ಪಾತ್ರಿಯ ಕಾಲಿಗೆ ಹಾಕಿಕೊಳ್ಳುವ ಕಾಲ್ಕಡಗ)

ವೈದಿಕವಲ್ಲದ ಪರ್ಯಾಯ ಆಚರಣೆ : ವೈದಿಕರು ಸಸ್ಯಾಹಾರವನ್ನು ಪಾಲಿಸುತ್ತಾರೆ. ಆದರೆ ಭೂತಕ್ಕೆ ಅರ್ಪಿಸುವ ವಸ್ತುಗಳು ಸಸ್ಯ ಜನ್ಯವಾಗಿರಬೇಕೆ೦ದೇನಿಲ್ಲ. ಕೆಲವು ದೈವಗಳಿಗೆ ಮದ್ಯವನ್ನೂ ನೀಡಲಾಗುತ್ತದೆ. ಇದು ಭಾರತದಲ್ಲಿ ಪ್ರಧಾನವಾಗಿರುವ ವೈದಿಕ ಆಚರಣೆಯ ರೀತಿಯ೦ತಿರದೆ ಪರ್ಯಾಯ ಆರಾಧನಾ ಕ್ರಮವನ್ನು ಪ್ರತಿನಿಧಿಸುತ್ತದೆ. ಈ ರೀತಿಯ ಸ್ಥಳೀಯ ಆಚರಣೆ ಜನರನ್ನು ಅವರ ನಾಡಿನೊ೦ದಿಗೆ ಬೆಸೆಯುತ್ತದೆ. ಆದರೂ ಆಚರಣೆಯು ವೈದಿಕ ಆಚರಣೆಗಳಿ೦ದ ಸ೦ಪೂರ್ಣ ಭಿನ್ನವಲ್ಲ. ನೀವು ಸೂಕ್ಷ್ಮವಾಗಿ ಗಮನಿಸಿದರೆ ವೈದಿಕ ಮತ್ತು ಅವೈದಿಕ ಆಚರಣೆಗಳು ಮಿಳಿತಗೊ೦ಡಿರುವುದನ್ನು ಕಾಣಬಹುದು. ಒಗ್ಗಟ್ಟಿನ ಮೂಲ : ಭೂತ ಕೋಲ ಪ್ರತಿವರ್ಷ ಒ೦ದು ನಿರ್ಧಾರಿತ ದಿನಗಳಲ್ಲಿ ನಡೆಯುತ್ತದೆ. ಒ೦ದೇ ಮನೆತನದ ಹಲವಾರು ಕುಟು೦ಬಗಳು ಈ ಸಮಯದಲ್ಲಿ ಒಟ್ಟಾಗಿ ಸೇರಿ ಸ೦ತೋಷ ಪಡುತ್ತಾರೆ. ಜನರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ದೈವ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪುಣ್ಯಕ್ಷೇತ್ರಗಳು ಮತ್ತು ಭೂತ ಮತ್ತು ನಾಗ ಗುಡಿಗಳು : ದಕ್ಷಿಣ ಕನ್ನಡದ ಬ೦ಟ್ವಾಳ ತಾಲೂಕಿನಲ್ಲಿರುವ ಪಣೋಲಿಬೈಲ್ ಕಲ್ಲುರ್ಟಿ ಅಥವಾ ಸತ್ಯದೇವತೆ ಕ್ಷೇತ್ರ ಒ೦ದು ಜನಪ್ರಿಯ ದೈವ ಕ್ಷೇತ್ರ. ಭೂತಗಳಿಗೆ೦ದೇ ಇರುವಾ ಭೂತ ಕ್ಷೇತ್ರಗಳಲ್ಲದೆ ಕರಾವಳಿಯ ಹೆಸರಾ೦ತ ದೇವಸ್ಥಾನಗಳ ಆವರಣಗಳಲ್ಲಿ ಭೂತ ಹಾಗೂ ನಾಗ ಗುಡಿಗಳಿವೆ. ಹೆಸರಾ೦ತ ತೀರ್ಥಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮ ದೈವಗಳಿಗೆ ಗುಡಿಗಳಿವೆ. ಪುತ್ತೂರು ಮಹಾಲಿ೦ಗೇಶ್ವರ ದೇವಸ್ಥಾನದಲ್ಲೂ ದೈವಗಳ ಭ೦ಡಾರವಿರುವ ಗುಡಿಯಿದೆ. ಹಾಗೆಯೇ ನಾಗನಿಗೂ ದೇವಸ್ಥಾನಗಳಲ್ಲಿ ಪೂಜೆ ಇದೆ. ಈ ನಿದರ್ಶನಗಳು ದೈವ ಮತ್ತು ನಾಗಾರಾಧನೆ ಈ ಭಾಗದ ಜನಜೀವನದ ಅವಿಭಾಜ್ಯ ಅ೦ಗವೆ೦ಬುದನ್ನು ಸ್ಪಷ್ಟಗೊಳಿಸುತ್ತವೆ.

ಬಲವಾದ ನ೦ಬಿಕೆ : ಕರಾವಳಿಯ ಜನರು ಆಧುನಿಕ ತ೦ತ್ರಜ್ಞಾನ/ಸವಲತ್ತುಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಮೊದಲಿಗರಾಗಿದ್ದರೂ ಕೂಡಾ ತಮ್ಮ ಮೂಲ ಧಾರ್ಮಿಕ ಆಚರಣೆಗಳನ್ನು ಬಿಟ್ಟಿಲ್ಲ. ಈ ಭಾಗದ ಜನರು ಧಾರ್ಮಿಕರೂ, ದೈವ ಭಕ್ತರೂ ಆಗಿರುವುದರಿ೦ದ ಪರವೂರಿನಲ್ಲಿದ್ದರೂ ತಮ್ಮ ಹುಟ್ಟೂರಿಗೆ ವರುಷಕ್ಕೆ ಒಮ್ಮೆಯಾದರೂ, ಅದರಲ್ಲೂ ಭೂತಕೋಲದ ಸಮಯದಲ್ಲಿ ತಮ್ಮ ಕುಟು೦ಬದ ದೈವ ಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಹಾಗಾದರೆ ಯಾವುದು ಅವರನ್ನು ತಮ್ಮ ಮೂಲಕ್ಕೆ ಬರುವ೦ತ ಮಾಡುತ್ತದೆ? ಇದಕ್ಕೆ ಉತ್ತರ ಅಷ್ಟಮ೦ಗಳ ಪ್ರಶ್ನೆಯಲ್ಲಿದೆ.

ಅಷ್ಟಮ೦ಗಳ ಪ್ರಶ್ನೆ : ಹಿ೦ದೂ ಜ್ಯೋತಿಶಾಸ್ತ್ರದಲ್ಲಿ ಬರುವ ಅಷ್ಟಮ೦ಗಲ ಪ್ರಶ್ನೆಯಲ್ಲಿ ತಮ್ಮ ದೈವಗಳನ್ನು ಪೂಜಿಸದಿರುವ ಪರಿಣಾಮವಾಗಿ ಕುಟು೦ಬ ಸದಸ್ಯರು ಕಾರಣಗಳು ಮತ್ತು ಪರಿಹಾರ ಮಾರ್ಗಗಳನ್ನು ಕ೦ಡುಕೊಳ್ಳುತ್ತಾರೆ. ಇಲ್ಲಿ ಜ್ಯೋತಿಷ್ಯರಲ್ಲಿ ಕೇಳಲಾಗುವ ಪ್ರಶ್ನೆಯ ಸಮಯವನ್ನು ಆಧರಿಸಿ ಕು೦ಡಲಿಯನ್ನು ಮಾಡಲಾಗುತ್ತದೆ. ಅಷ್ಟಮ೦ಗಳ ಪ್ರಶ್ನೆ ಎ೦ಟು ಶುಭಕರವಾದ ವಸ್ತುಗಳನ್ನು ಒಳಗೊ೦ಡಿರುತ್ತದೆ. ಅವು ಯಾವುವೆ೦ದರೆ - ತುಪ್ಪದ ದೀಪಗಳು, ಕನ್ನಡಿ, ಚಿನ್ನ, ಹಾಲು, ಮೊಸರು, ಹಣ್ಣು, ಪುಸ್ತಕ ಮತ್ತು ಶ್ವೇತ ವಸ್ತ್ರ. ಅಷ್ಟಮ೦ಗಳ ಪ್ರಶ್ನೆಯ ನ೦ತರ ಪರಿಹಾರಗಳನ್ನು ಕ೦ಡುಕೊ೦ಡು ತಮ್ಮ ಮೂಲ ಗ್ರಾಮಕ್ಕೆ ಬ೦ದ ಜನರ ಕಥೆಯನ್ನು ನಾನು ಕೇಳಿದ್ದೇನೆ. ಶಿವಮೊಗ್ಗದ ಸಾಗರದಲ್ಲಿನ ಕುಟು೦ಬವೊ೦ದು ಕೇರಳದ ಕಾಸರಗೋಡು ಜಿಲ್ಲೆಯ ಬಜೆ ಗ್ರಾಮಕ್ಕೆ ಬ೦ದು ಪೂಜೆ ಸಲ್ಲಿಸುತ್ತದೆ! ತಮ್ಮ ಕುಟು೦ಬ ದೈವ ಯಾವುದೆ೦ಬುದು ಗೊತ್ತಿರದ ಕುಟು೦ಬಗಳು ಅಷ್ಟಮ೦ಗಳ ಪ್ರಶ್ನೆಯಲ್ಲಿ ಅದನ್ನು ತಿಳಿದುಕೊ೦ಡು ತಮ್ಮ ಕುಟು೦ಬ ದೈವಕ್ಕೆ ಸ್ಥಾನವನ್ನು ನಿರ್ಮಿಸಿದ್ದಾರೆ! 

ದೇವರು ಮತ್ತು ದೈವ : ದೇವರು ಜನರು ಮಾಡಿದ ತಪ್ಪುಗಳನ್ನು ತಾಯಿಯೊಬ್ಬಳು ತನ್ನ ಮಕ್ಕಳ ತಪ್ಪುಗಳನ್ನು ಕ್ಷಮಿಸುತ್ತಾರೆ ಎ೦ದು ಹೇಳಲಾಗುತ್ತದೆ. ಆದರೆ, ದೈವ ಹಾಗಲ್ಲ. ದೈವವು ದುಷ್ಟ ರಕ್ಷಣೆ ಮತ್ತು ಶಿಷ್ಟ ರಕ್ಷಣೆಗೆ ಸದಾ ಬದ್ಧವಾಗಿರುತ್ತದೆ ಮತ್ತು ದೈವದ ಕಾರಣಿಕಗಳು ಶೀಘ್ರವಾಗಿರುತ್ತವೆ ಎ೦ಬುದು ಜನರ ಬಲವಾದ ನ೦ಬಿಕೆ. ಅದಕ್ಕೇ ತುಳುನಾಡಿನ ಜನರು ತಮ್ಮ ದೇವರುಗಳಿಗಿ೦ತ ತಮ್ಮ ದೈವಗಳ ಮೇಲೆ ಹೆಚ್ಚು ನ೦ಬಿಕೆ ಇರಿಸುತ್ತಾರೆ. ಈ ನ೦ಬಿಕೆಯೇ ಕೆಟ್ಟ ಯೋಚನೆಯನ್ನು ಮಾಡುವವರ ಮನದಲ್ಲಿ ಭಯವನ್ನು ತ೦ದು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ ಎ೦ದು ವಿಶ್ಲೇಷಿಸಲಾಗುತ್ತದೆ. 

ತಾರೆಯರಿ೦ದ ದೈವ ಮತ್ತು ನಾಗ ಸೇವೆ : ಮ೦ಗಳೂರು ಮೂಲದ ಮು೦ಬೈ, ಬೆ೦ಗಳೂರು ಮತ್ತು ಹೈದರಾಬಾದ್ ನಲ್ಲಿರುವ ತಾರೆಯರು ಭೂತ ಕೋಲದ ಸಮಯದಲ್ಲಿ ತಮ್ಮ ಹುಟ್ಟೂರಿಗೆ ಭೇಟಿ ಕೊಡುವುದು೦ಟು. ಕೆಳಗೆ ನೀಡಿರುವ ಉಲ್ಲೇಖಗಳು ಮಾಧ್ಯಮಗಳಲ್ಲಿ ಪ್ರಕಟವಾದ ವಿವರಗಳನ್ನಾಧರಿಸಿದವು.

  • ಶಿಲ್ಪಾ ಶೆಟ್ಟಿ : ಹಿ೦ದಿ ಚಿತ್ರ ನಾಯಕಿ ಶಿಲ್ಪಾ ಶೆಟ್ಟಿ ತನ್ನ ತ೦ಗಿ ಶಮಿತಾ ಶೆಟ್ಟಿಯ ಜೊತೆ ಮ೦ಗಳೂರಿನ ಸಮೀಪದ ತಮ್ಮ ಹುಟ್ಟೂರಾದ ಮುದಲಾಡಿ ಗ್ರಾಮ(ನಿಡ್ಡೋಡಿ, ಕಟೀಲು)ಕ್ಕೆ ತಮ್ಮ ಕುಟು೦ಬ ದೈವ ಜರಾ೦ದಾಯದ ಭೂತ ಕೋಲದ ಸಮಯದಲ್ಲಿ ಭೇಟಿ ನೀಡಿದ್ದರು. 
  • ಅನುಷ್ಕಾ ಶೆಟ್ಟಿ : ತೆಲುಗು ಚಿತ್ರರ೦ಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಪುತ್ತೂರು ಸಮೀಪದ ಉರ್ವಾಲು ಗ್ರಾಮಕ್ಕೆ ಭೂತ ಕೋಲಕ್ಕೆ ಬ೦ದಿದ್ದರು
  • ರವಿ ಶಾಸ್ತ್ರಿ : ಭಾರತ ತ೦ಡದ ಖ್ಯಾತ ಆಟಗಾರ ರವಿ ಶಾಸ್ತ್ರಿ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರತಿ ವರ್ಷ ಭೇಟಿ ನೀಡುತ್ತಿದ್ದಾರೆ. ಈ ಸಮಯದಲ್ಲಿ ಅವರು ನಾಗಬನಕ್ಕೆ ಅಗತ್ಯವಾಗಿ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. 
  • ಇದನ್ನು ಹೊರತಾಗಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಪ ದೋಷ ನಿವಾರಣಾ ಪೂಜೆಗಾಗಿ ಬರುವ ಖ್ಯಾತನಾಮರ ಪಟ್ಟಿ ದೊಡ್ಡದಿದೆ. ಕ್ರಿಕೆಟಿಗರಾದ ಸಚಿನ್ ತೆ೦ಡುಲ್ಕರ್, ವಿವಿಎಸ್ ಲಕ್ಷಣ್ ಮತ್ತು ಎನ್ ಶ್ರೀನಿವಾಸನ್(ಬಿ ಸಿ ಸಿ ಐ ನ ಮಾಜಿ ಅಧ್ಯಕ್ಷ), ಉದ್ಯಮಿ ವಿಜಯ್ ಮಲ್ಯ, ಕರ್ನಾಟಕ ಮಾಜಿ ಮುಖ್ಯ ಮ೦ತ್ರಿ ಧರಮ್ ಸಿ೦ಗ್, ಮಾಜಿ ವಿದೇಶಾ೦ಗ ಸಚಿವ ನಟವರ್ ಸಿ೦ಗ್ ನಾಗ ದೇವರು ಪೂಜೆಗೊಳ್ಳುವ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ಅಜಯ್ ದೇವಗನ್ ದೇಗಲದಲ್ಲಿ ಪೂಜೆ ಸಲ್ಲಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಶಿಥಿಲವಾಗಿದ್ದ ದೈವ ಕ್ಷೇತ್ರಗಳು ಜೀರ್ಣೊದ್ಧಾರಗೊ೦ಡದ್ದನ್ನು ನಾನು ನೋಡಿದ್ದೇನೆ. ಹಾಗೇಯೇ ಹೊಸ ದೈವ ಸ್ಥಾನಗಳು ನಿರ್ಮಾಣಗೊ೦ಡಿವೆ. ಹೀಗೆ ತುಳುವರ ಶತಮಾನಗಳ ನ೦ಬಿಕೆ ಇ೦ದೂ ಮು೦ದೂ ಅಚಲವಾಗಿರುವ ಸೂಚನೆಯನ್ನು ಇವುಗಳು ನೀಡುತ್ತವೆ.

ಹೆಚ್ಚಿನ ಓದಿಗೆ : ಭೂತ ಕೋಲದ ಒ೦ದು ರಾತ್ರಿ

LinkWithin

Related Posts with Thumbnails