Saturday, September 22, 2012

ವಿಜಯ ಕರ್ನಾಟಕದಲ್ಲಿ ’ಈ ಪ್ರಪ೦ಚ’!

ನಾನು ಪವನ್ ಕುಮಾರ್ ರವರ ಚಲನಚಿತ್ರ ಕಾರ್ಯಾಗಾರದ ಬಗ್ಗೆ ಬರೆದಿದ್ದ ಲೇಖನ ೨೧ ಸೆಪ್ಟ೦ಬರ್ ೨೦೧೨ ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ.

Wednesday, September 19, 2012

ನಾನೂ ಚಲನ ಚಿತ್ರ ನಿರ್ದೇಶಕನಾಗಬಹುದೇ?

ಪವನ್ ಕುಮಾರ್ ರವರ ಚಲನಚಿತ್ರ ಶಿಬಿರಕ್ಕೆ ನಾನು ಹೊರಡುವ ಮುನ್ನ ನನ್ನಲ್ಲಿ ಕೆಲವು ನಿರೀಕ್ಷೆಗಳಿದ್ದವು. ಆದರೆ ಅವು ಕೆಲವೇ ಕೆಲವು. ಹಿ೦ದೆ ಬೇರೆ ಒ೦ದೆರಡು ಕಾರ್ಯಾಗಾರಗಳಲ್ಲಿ ಅನುಭವಿಸಿದ ನಿರಾಸೆ ನನ್ನ ದೊಡ್ಡ ಮಟ್ಟದ ಆಕಾ೦ಕ್ಷೆಗಳಿಗೆ ಕಡಿವಾಣ ಹಾಕಿತ್ತು. ಆದರೆ ಕಾರ್ಯಾಗಾರದ ಮೊದಲ ದಿನದ(ಸೆಪ್ಟ೦ಬರ್ ೧೫) ಕೆಲವೇ ನಿಮಿಷಗಳಲ್ಲಿ ನನ್ನ ಈ ಧೋರಣೆ ಬದಲಾಗುತ್ತಲಿತ್ತು.

ನಾವೇಕೆ ಚಲನಚಿತ್ರ ನಿರ್ಮಿಸಬೇಕು : ಈ ಪ್ರಶ್ನೆಗೆ ಉತ್ತರಗಳನ್ನು ಹುಡುಕುತ್ತಾ ಕಾರ್ಯಾಗಾರ ಆರ೦ಭವಾಗುತ್ತದೆ. ಅದಕ್ಕಿ೦ತಲೂ ಈ ಪ್ರಶ್ನೆಗೆ ಮೂಲವಾದ ನಾವೇಕೆ ಕಥೆಯೊ೦ದನ್ನು ಎಲ್ಲರೆದುರು ನಿರೂಪಿಸ ಬಯಸುತ್ತೇವೆ? ಅದು ಅನನ್ಯವಾದುದೆ೦ದೇ? ಅಥವಾ ಅದು ಭಾವತೀವ್ರತೆಯಿ೦ದ, ಹಾಸ್ಯದಿ೦ದ ಕೂಡಿದೆಯೆ೦ದೇ? ನೈಜ ಅಥವಾ ಕಾಲ್ಪನಿಕವಾಗಬಹುದಾದ ಕಥಾ ಪ್ರಕಾರದಲ್ಲಿ ವೈಯಕ್ತಿಕ ಜೀವನದ ತುಣುಕಗಳು ಇಣುಕುವುದಿಲ್ಲವೆ? ಹೀಗೆ ಹಲವು ದೃಷ್ಟಿ ಕೋನಗಳಲ್ಲಿ ವಿಚಾರ ಮ೦ಥನ ನಡೆಯುತ್ತದೆ.  

ಹೇಗೆ ಚಲನಚಿತ್ರವೊ೦ದು ರೂಪುಗೊಳ್ಳುತ್ತದೆ : ಮನವನ್ನು ಕಾಡುವ ವಿಚಾರವೇ ತಿರುಳಾಗಿ ಮು೦ದೆ ಕಥಾ ರೂಪದಲ್ಲಿ ಬ೦ದು ನ೦ತರ ದೃಶ್ಯಗಳಾಗಿ, ಚಿತ್ರಕಥೆಯಾಗಿ  ದೃಶ್ಯ ಮಾಧ್ಯಮಕ್ಕೆ ರೂಪಾ೦ತರಗೊಳ್ಳುವ ಪ್ರಕ್ರಿಯೆ ನಿಜಕ್ಕೂ ಅದ್ಭುತ. ಬೆರಗುಗೊಳಿಸುವ ಈ ಕಾರ್ಯವಿಧಾನವನ್ನು ಪವನ್ ಪ್ರಸ್ತುತ ಪಡಿಸುವ ರೀತಿ ಶ್ಲಾಘನೀಯ. ಇಲ್ಲಿ ಸ೦ವಹನ ಏಕಮುಖವಲ್ಲ. ಪ್ರತಿಯೊ೦ದು ಹ೦ತದಲ್ಲೂ ಶಿಬಿರಾರ್ಥಿಗಳು ತಮ್ಮನ್ನು ತಾವು ಚರ್ಚೆಯಲ್ಲಿ ಹಾಗೂ ತಮ್ಮ ವೈಯಕ್ತಿಕ ಅನುಭವವನ್ನು ದೃಶ್ಯ-ಶ್ರಾವ್ಯ ಮಾಧ್ಯಮದಲ್ಲಿ ತರುವ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುತ್ತಾರೆ. 

ವಸ್ತುನಿಷ್ಠತೆ : ಬಹುಶ: ಯಾವುದೇ ಸೃಜನಶೀಲ ಕ್ಷೇತ್ರದಲ್ಲಿ ನಡೆಯುವ ಕಲಿಕೆಯ ತರಗತಿಗಳಲ್ಲಿ ಬರುವ ಬಹುಮುಖ್ಯ ಪ್ರಶ್ನೆ - ನಮ್ಮ ಕೃತಿಯ ಗುಣಮಟ್ಟವನ್ನು ಅಳೆಯುವುದು ಹೇಗೆ ಎ೦ಬುದು. ಪವನ್ ಈ ಸಮಸ್ಯೆಯನ್ನು ಸಮರ್ಪಕವಾಗಿ ನಿವಾರಿಸುತ್ತಾರೆ. ಶಿಬಿರಾರ್ಥಿಗಳು ತಮ್ಮ ಸೃಜನಶೀಲ ಕೃತಿಯನ್ನು ಒರೆಗೆ ಹಚ್ಚಿ ನೋಡಲು ಕೆಲವು ಪ್ರಶ್ನೆಗಳನ್ನು ಸಿದ್ಧಪಡಿಸಿದ್ದಾರೆ. ಇವುಗಳಿಗೆ ಸಮ೦ಜಸವಾದ ಉತ್ತರಗಳು ದೊರೆತರೆ ಮೊದಲ ಪರೀಕ್ಷೆಯಲ್ಲಿ ಗೆದ್ದ೦ತೆ. ಯಾವುದೇ  ನಿರೂಪಣಾ ಸಾಹಿತ್ಯದ ಪ್ರಕಾರಕ್ಕೆ ಒಗ್ಗಬಹುದಾದ ಈ ಸವಾಲುಗಳು ಖ೦ಡಿತವಾಗಿ ಒ೦ದು ಒಳ್ಳೆಯ ಕೃತಿಯ ಮಾನದ೦ಡ. ಉದಾಹರಣೆಗೆ ಒ೦ದು ಉತ್ತಮ ಸಾಕ್ಶ್ಯ ಚಿತ್ರ(documentary) ಕೂಡಾ ಕಥೆಗಳಲ್ಲಿರುವ೦ತೆ ತಿರುವುಗಳನ್ನು ಹೊ೦ದಿರುತ್ತದೆ. ಇನ್ನೊ೦ದು ಮುಖ್ಯವಾದ ಸಮಸ್ಯೆ - ಯಾವುದೇ ಒ೦ದು ಸೃಜನಶೀಲ ಕೃತಿಯ ಬಗ್ಗೆ ಒಬ್ಬೊಬ್ಬರದು ಒ೦ದು ದೃಷ್ಟಿಕೋನವಿರುವುದರಿ೦ದ ಚರ್ಚೆಗಳು ಮೂಲ ಉದ್ದೇಶದಿ೦ದ ಹೊರ ಸರಿಯುವುದು ಸರ್ವೇ ಸಾಮಾನ್ಯ. ಆದರೆ ಪವನ್ ರವರು ಇದಾಗದ೦ತೆ ಗಮನವಿರಿಸಿದ್ದರಿ೦ದ ಒ೦ದೆರಡು ಬಾರಿ ಅ೦ಥ ಸನ್ನಿವೇಶಗಳು ಬ೦ದರೂ ಚರ್ಚೆಗಳು ವಿಷಯ ಕೇ೦ದ್ರಿತವಾಗಿದ್ದವು. ಮತ್ತೆ ಕೆಲವೊಮ್ಮೆ ಸ೦ಘಟಕರು ತಮ್ಮ ಸಿದ್ಧ ಸೂತ್ರಗಳಿಗೆ ಬದ್ಧವಾಗಿದ್ದು ಅವನ್ನು ವಿದ್ಯಾರ್ಥಿಗಳ ಮೇಲೆ ಹೇರುವುದೂ ಉ೦ಟು. ಈ ಸಮಸ್ಯೆಯೂ ಇಲ್ಲಿ ಕಾಡಲಿಲ್ಲ. ಇನ್ನು ಸಿನಿಮಾದ ಒ೦ದು ದೃಶ್ಯವನ್ನು ಸವಿವರವಾಗಿ ತಿಳಿಸಲು ಬ೦ದರೆ ಪವನ್ ಬಳಿ ನೈಜವಾದ ಉದಾಹರಣೆಗಳಿವೆ. ತಾವು ಹಿ೦ದೆ ಮಾಡಿದ ನಾಕೈದು ನಿಮಿಷಗಳ ಕಿರುಚಿತ್ರಗಳಿ೦ದ ಮತ್ತು ತಾವು ಕೆಲಸ ಮಾಡಿದ ಚಲನ ಚಿತ್ರಗಳಿ೦ದ ನಿದರ್ಶನಗಳನ್ನು ಹುಡುಕಿ ತರುತ್ತಾರೆ. 
Participants in Pawan Kumar's Film Workshop
ಶಿಬಿರಾರ್ಥಿಗಳ ಜೊತೆಗೆ ಪವನ್ 
ಒ೦ದು ದೃಶ್ಯದ ಚಿತ್ರೀಕರಣ : ನನಗೆ ಬಹಳ ಇಷ್ಟವಾಗಿದ್ದು ಪವನ್ ಒ೦ದು ದೃಶ್ಯವನ್ನು ಎಳೆ ಎಳೆಯಾಗಿ ಬಿಡಿಸಿ ಚಿತ್ರೀಕರಿಸುವ ವಿಧಾನವನ್ನು ಹೇಳಿಕೊಟ್ಟ ರೀತಿ. ಇಲ್ಲಿ ಮಾತನಾಡ ಹೊರಟರೆ ಒ೦ದು ಉಪನ್ಯಾಸವನ್ನೇ ನೀಡಬಹುದು. ಆದರೆ ಪವನ್ ಗೆ ವಿದ್ಯಾರ್ಥಿಗಳ ಈಗಿನ ಸಾಮರ್ಥ್ಯಗಳ ಅರಿವಿದೆ. ಹಾಗಾಗಿ ಎಷ್ಟು ಅಗತ್ಯವೋ ಅಷ್ಟನ್ನು ತಿಳಿಸಿದರು. ಚಿತ್ರೀಕರಣದಲ್ಲಿ ಬರುವ ತಾ೦ತ್ರಿಕ ಮತ್ತು ತಾರ್ಕಿಕ ಅ೦ಶಗಳು ನಮಗೆ ಪರಿಚಯವಾದವು.  ಇದು ಎಷ್ಟು ಪರಿಣಾಮಕಾರಿಯಾಗಿತ್ತೆ೦ದರೆ ನಾವು ಚಿತ್ರೀಕರಣ ನಡೆಸುವಾಗ ಎರಡು ಭಾವನೆಗಳು ಬ೦ದವು - ಒ೦ದು ಅಯ್ಯೋ, ಕೆಲವೇ ಸೆಕೆ೦ಡುಗಳಿರುವ ದೃಶ್ಯಕ್ಕೆ ಇಷ್ಟೊ೦ದು ತಯಾರಿ ಬೇಕೆ ಎ೦ಬುದು ಮತ್ತು ಇನ್ನೊ೦ದು ಹೌದು, ಅಷ್ಟೊ೦ದು ತಯಾರಿ ಬೇಕು ಹಾಗೂ ನಾವು ಅವುಗಳನ್ನು ಗಮನದಲ್ಲಿಟ್ಟುಕೊ೦ಡು ಯಶಸ್ವಿಯಾಗಿ ಚಿತ್ರೀಕರಣ ನಡೆಸಿದೆವು ಎ೦ಬ ತೃಪ್ತಿ. 

ಸ್ಫೂರ್ತಿದಾಯಕ ಮತ್ತು ಅನುಭವದ ಮಾತುಗಳು : ಒಬ್ಬ ಶ್ರದ್ಧಾವ೦ತ ವಿದ್ಯಾರ್ಥಿ ತನ್ನ ಗುರುಗಳಿ೦ದ ನಿರೀಕ್ಷಿಸುವುದು ಸ್ಪೂರ್ಥಿಯನ್ನು. ತಾನು ಇದನ್ನು ಮಾಡಬಲ್ಲೆ ಎ೦ಬ ಆತ್ಮಬಲವನ್ನು. ಈ ನಿಟ್ಟಿನಲ್ಲಿ ಈ ಕಾರ್ಯಗಾರ ಬಹಳ ಪ್ರಸ್ತುತವೆನಿಸುತ್ತದೆ. ಪವನ್ ತಮ್ಮ ಮಾತುಗಳಲ್ಲಿ ವಿಶ್ವದ ಉತ್ತಮ ಚಿತ್ರಗಳನ್ನು, ನಿರ್ದೇಶಕರನ್ನು ಉಲ್ಲೇಖಿಸುತ್ತಾರೆ. ಅವೇಕೆ ಉತ್ತಮ ಚಿತ್ರಗಳಾದವು ಎ೦ಬುದನ್ನು ತಿಳಿಸುತ್ತಾರೆ. ಬಹುಶ: ಇಷ್ಟು ಸಾಕು ಮುಕ್ತ ಮನಸ್ಸಿನ ಒಬ್ಬನಿಗೆ ತನ್ನ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಲು. ಇದರ ಜೊತೆಗೆ ತಾವು ಹಿ೦ದಿನ ದಶಕದಲ್ಲಿ ಕಷ್ಟಪಟ್ಟ ದಿನಗಳನ್ನು ಪವನ್ ನೆನಪಿಸಿಕೊಳ್ಳುತ್ತಾರೆ. ಇದರಿ೦ದ ಚಿತ್ರ ಮಾಧ್ಯಮದಲ್ಲಿ ಸುಲಭವಾಗಿ ಮಿ೦ಚಬಹುದೆ೦ದು ಹಗಲುಗನಸು ಕಾಣುವವರಿಗೆ ವಾಸ್ತವದ ಪರಿಚಯವಾಗುತ್ತದೆ. ಚಲನಚಿತ್ರ ಕ್ಷೇತ್ರದ ಬಗ್ಗೆ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳುವ ಯಾರಿಗೇ ಆಗಲಿ, ಅದರ ಬಗ್ಗೆ ಇರುವ ತಪ್ಪು ಕಲ್ಪನೆಗಳು ಈ ಮಾತುಗಳಿ೦ದ ಮಾಯವಾಗುತ್ತವೆ. ಹಾಗೇಯೆ ಇಷ್ಟವಿದ್ದರೂ ನಾನು ಈ ಬಗ್ಗೆ ಪ್ರಯತ್ನ ಪಡಲಿಲ್ಲವೆ೦ಬ ಕೊರಗು ಮಾಸುತ್ತದೆ. ಯಾಕೆ೦ದರೆ ಒ೦ದು ಸಲ ಇಲ್ಲಿ ಕಾರ್ಯವಿಧಾನಗಳ ಪರಿಚಯವಾದರೆ ತಾವು ಈ ಕ್ಷೇತ್ರದಲ್ಲಿ ಸಲ್ಲುವವರೇ ಎ೦ಬುದನ್ನು ಅವಲೋಕಿಸುತ್ತಾರೆ. ಹಾಗೇಯೇ ನಾವೀಗ ಮಾಡುವ ಕೆಲಸವೇ ಸುಲಭ, ಉತ್ತಮ ಎ೦ಬ ಭಾವನೆಯೂ ಬರಬಹುದು. ಇದನ್ನೇ ಪವನ್ ಒತ್ತಿ ಹೇಳುತ್ತಾರೆ. ಇಲ್ಲಿ ನನಗೆ ಶಿವರಾಮ ಕಾರ೦ತರ ’ಹುಚ್ಚು ಮನಸ್ಸಿನ ಹತ್ತು ಮುಖಗಳು’ ನೆನಪಾಗುತ್ತದೆ. ಅವರೂ ಕೂಡಾ ನನಗಾವ ಕ್ಷೇತ್ರಗಳ ಒಪ್ಪುವವು ಎ೦ದು ಅರಿಯುವುದಕ್ಕೆಯೇ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊ೦ಡರು. ನಮಗೆ ಬರುವ ಆಯ್ಕೆಯ ಗೊ೦ದಲಗಳು ಅವರಿಗೂ ಬ೦ದಿದ್ದವು.

ಪರಿಣಾಮಗಳು : ಶಿಬಿರ ಮುಗಿದ ದಿನದ ರಾತ್ರಿ ನಾನು ಟಿ.ವಿ ನೋಡುವಾಗ ನಾನು ದೃಶ್ಯಗಳನ್ನು ನೋಡುವ ರೀತಿಯೇ ಬೇರೆಯಾಗಿತ್ತು. ರಾತ್ರಿ  Star Movies ನಲ್ಲಿ The Social Network ಚಿತ್ರ ಪ್ರಸಾರವಾಗುತ್ತಿತ್ತು. ಅದು ಸ೦ಕಲನ(editing)ನಲ್ಲಿ Oscar  ಗೆದ್ದ ಚಿತ್ರ. ಯಾಕೆ ಗೆದ್ದಿರಬಹುದೆ೦ಬ ಅರಿವಾಯಿತು. ಇನ್ನು ಧಾರಾವಾಹಿ, ಕಿರುಚಿತ್ರಗಳು ಅಷ್ಟೇನೂ ಜಾಹೀರಾತುಗಳನ್ನು ಕೂಡಾ ಹೇಗೆ ಮಾಡಿರಬಹುದೆ೦ಬ ಚಿ೦ತನೆಯಲ್ಲಿ ತೊಡಗಿದೆ. ಮು೦ದೆ ಚಿತ್ರಗಳಲ್ಲಿ ನಾನು ನೋಡಲಿರುವ ದೃಷ್ಟಿಕೋನವೇ ಬದಲಾಗಿದೆ. ಪವನ್, ನೀವು ನನ್ನ ತಲೆ ಕೆಡಿಸಿಬಿಟ್ಟಿರಿ ಈ ವಿಚಾರದಲ್ಲಿ! ಒ೦ಥರಾ ನಾನೀಗ ಹೆಚ್ಚು ಬಲ್ಲೆಯೆ೦ಬ ಭಾವನೆ ಮನೆ ಮಾಡಲು ತೊಡಗಿದೆ! 

ಹಾಗೇ ಹೀಗೇ : ಪವನ್ workshop ಗೆ ಮು೦ಚೆ ಬರೆದ ತಮ್ಮ ಈ-ಮೇಲ್ ನಲ್ಲಿ ಮೊದಲ ದಿನ  theory ಜಾಸ್ತಿ ಇರುತ್ತೆ ಅ೦ದಿದ್ರು. ಆದ್ರೆ ನನಗೆಲ್ಲೂ ಇದು boring ಅ೦ಥ ಅನಿಸಲಿಲ್ಲ. ನ೦ತರದ ದಿನ ನಾವು shooting ಮಾಡಲು ಹೊರಡುತ್ತೇವೆ ಅ೦ದಿದ್ರು. ಇದರ ಬಗ್ಗೆ ನನಗೆ ಅನುಮಾನ ಇತ್ತು - ಅಷ್ಟು ಬೇಗ ನಮ್ಮಿ೦ದ shoot ಮಾಡಲು ಸಾಧ್ಯವಾ? ಎ೦ದು. ಆದರೆ ನಾವೇ ಅಚ್ಚರಿ ಪಡುವ೦ತೆ ಮಾರನೇ ದಿನ ಬೆಳಿಗ್ಗೆ ನಾವು shooting location ನಲ್ಲಿ ಹಾಜರ್. ಈ ಕಾರಣಕ್ಕೆ ಪವನ್ ನಿಮ್ಮನ್ನು ಅಭಿನ೦ದಿಸಲೇಬೇಕು. ಮೊದಲಿಗೆ "ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್" ಅ೦ತಿದ್ದ ನಮಗೆ ಪವನ್ ಅವರನ್ನು ನೋಡಿ "ಇವ್ರಿಗ್ ಹೇಳ್ ಬಿಡೋಣ ನಮ್ಮ ಪ್ರಾಬ್ಲಮ್" ಅ೦ಥ ಅನಿಸಿದ್ದು ನಿಜ!

ಆಸಕ್ತರು ಅಕ್ಟೋಬರ್ 27 ಮತ್ತು 28 ರ೦ದು ನಡೆಯಲಿರುವ  ಮು೦ದಿನ workshop ಗೆ ನೊ೦ದಾಯಿಸಲು ಈ ಲಿಂಕ್ ಗೆ ಹೋಗಿ. All the best. 

Saturday, September 8, 2012

ನೋಡಲೇಬೇಕಾದ ಹತ್ತು ಕನ್ನಡ ಚಿತ್ರಗಳು!

ನನ್ನ ಪ್ರಕಾರ ನೋಡಲೇಬೇಕಾದ ಹತ್ತು ಕನ್ನಡ ಚಿತ್ರಗಳ ಪಟ್ಟಿ ಇಲ್ಲಿದೆ. ವಿಭಿನ್ನ ಕಥಾವಸ್ತುವನ್ನು ಇಲ್ಲಿರುವ ಪ್ರತಿಯೊ೦ದು ಚಿತ್ರವು ಹೊ೦ದಿದೆ ಎನ್ನಲು ಅಡ್ಡಿಯಿಲ್ಲ. ಇದಕ್ಕೆ ಸೇರಿಸಬಹುದಾದ ಚಿತ್ರಗಳ ಬಗೆಗಿನ ಚರ್ಚೆ ಯಾವತ್ತೂ ಇದ್ದದ್ದೇ. ಕನ್ನಡ ಚಿತ್ರರ೦ಗದ ಪ್ರಾತಿನಿಧಿಕ ಚಿತ್ರಗಳಾಗಿ ಇವುಗಳು ಅವಶ್ಯವಾಗಿ ನಿಲ್ಲುತ್ತವೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ...

ಗಮನಿಸಿ : ಚಿತ್ರಗಳ ಕ್ರಮಾ೦ಕ ಅವುಗಳ ಶ್ರೇಷ್ಠತೆಯ ಬಗೆಗಿನ ಸೂಚಿಯಲ್ಲ 

ಬೆಳದಿ೦ಗಳ ಬಾಲೆ (1995) : ಒಬ್ಬ ಚದುರ೦ಗದ ಗ್ರ್ಯಾ೦ಡ್ ಮಾಸ್ಟರ್ ತನ್ನ ಬದುಕಿನಲ್ಲಿ ಅನಿರೀಕ್ಷಿತವಾಗಿ ಬರುವ ಅಭಿಮಾನಿಯನ್ನು, ನ೦ತರ ಪ್ರೇಯಸಿಯಾಗಿ ಕಾಡುವ ಬಾಲೆಯನ್ನು ಹುಡುಕುವ ರಸವತ್ತಾದ ಕತೆಯೇ ಬೆಳದಿ೦ಗಳ ಬಾಲೆ. ತನ್ನ ಭಾವನೆಗಳಿಗೆ ತಕ್ಕ ರೀತಿಯಲ್ಲಿ ಸ್ಪ೦ದಿಸುವ ಹುಡುಗಿಯೆಡೆ ಸಹಜವಾಗಿ ಆಕರ್ಷಿತನಾಗುವ ರೇವ೦ತ್ ಬದುಕು ಕೂಡಾ ಚದುರ೦ಗದ೦ತಾಗುವುದು ವಿಪರ್ಯಾಸ. ಶುದ್ಧಗನ್ನಡದ ಸ೦ಭಾಷಣೆ, ಚದುರ೦ಗದ ಒಳನೋಟಗಳು, ಒಬ್ಬ ಚದುರ೦ಗದಾಟಗಾರನನ್ನು ಸಮಾಜ ನೋಡುವ ರೀತಿ - ಇವುಗಳೆಲ್ಲದರ ಚಿತ್ರಣ ಈ ಸಿನಿಮಾದ ಮುಖ್ಯಾ೦ಶ.

ಬ೦ಗಾರದ ಮನುಷ್ಯ (1972) : ೭೦ ರ ದಶಕದಲ್ಲಿ ಕರ್ನಾಟಕ ರಾಜ್ಯಾದ್ಯ೦ತ ಸ೦ಚಲನ ಮೂಡಿಸಿದ ಚಿತ್ರವಿದು. ಭಾರತೀಯ ಕುಟು೦ಬಗಳಲ್ಲಿ ಶ್ರೇಷ್ಠವೆ೦ದು ಪರಿಗಣಿಸಲಾಗುವ ಮೌಲ್ಯಗಳಾದ ತ್ಯಾಗ, ನಿಸ್ವಾರ್ಥ ಸೇವೆ, ಪರಿಶ್ರಮ ಮತ್ತು ಸಹಬಾಳ್ವೆ ಎತ್ತಿ ಹಿಡಿದ ಚಿತ್ರವಿದು. ಸಾಮಾನ್ಯರ ಬದುಕಿನಲ್ಲಿ ಅಸಾಮಾನ್ಯವೆನಿಸುವ ಆದರ್ಶಗಳನ್ನು ತೆರೆಯ ಮೇಲೆ ಮೂರ್ತ ರೂಪವಾಗಿ ನೋಡಿದಾಗ ಆಗುವ ಆನ೦ದದ ಅನುಭವ ಅದ್ಭುತ. ಚಿತ್ರರ೦ಗದ ದ೦ತಕತೆಗಳ ಅಭಿನಯ, ಮರೆಯದ ಮಾಧುರ್ಯದ ಹಾಡುಗಳು ಈ ಚಿತ್ರವನ್ನು ಇನ್ನೂ ಹಸಿರಾಗಿರಿಸಿವೆ. ಇನ್ನು ಮುಖ್ಯವಾದ ಅ೦ಶವೆ೦ದರೆ ಈ ಚಿತ್ರ ಮಾಡಿದ ಸಾಮಾಜಿಕ ಪರಿಣಾಮ. ಚಿತ್ರ ನೋಡಿದ ಹಲವರು ನಾಯಕ ರಾಜೀವನ೦ತೆ ಹಳ್ಳಿಯ ಕಡೆ ಮುಖ ಮಾಡಿ ವ್ಯವಸಾಯಕ್ಕಿಳಿದರು. 

ಮು೦ಗಾರು ಮಳೆ (2006) : ಆಧುನಿಕ ಪ್ರೇಮದ ಭಾಷ್ಯದ೦ತಿರುವ ಈ ಚಿತ್ರ ಮೊದಲ ನೋಟಕ್ಕೆ ಇಷ್ಟವಾಗುವುದು ತನ್ನ ನವಿರಾದ ಸ೦ಭಾಷಣೆಗಳಿ೦ದ. ಆಧುನಿಕ ಕಾಲದ ಕ್ಷಣಿಕ, ಎಳಸಾದ ಪ್ರೇಮ ಕಥಾ ಹ೦ದರವಿರುವ ಈ ಚಿತ್ರ ಭಗ್ನ ಪ್ರೇಮಿಯ ಆತ್ಮಚರಿತ್ರೆಯ೦ತೆ ಭಾಸವಾಗಲೂಬಹುದು. ಮಲೆನಾಡಿನ ಮು೦ಗಾರು ಮಳೆಯ ಸೊಬಗು, ಜೋಗದ ಸಿರಿಯ ವೈಭವ, ಮನಕ್ಕೆ ಮುದ ನೀಡುವ ಅಚ್ಚಗನ್ನಡದ ಪದಗಳಿರುವ ಹಾಡುಗಳು ಚಿತ್ರವನ್ನು ಮತ್ತಷ್ಟು ಇಷ್ಟವಾಗಿಸುತ್ತವೆ. ಈ ಅ೦ಶಗಳೇ ಮು೦ದೆ ಹಲವು ಚಿತ್ರಗಳಲ್ಲಿ ಸಿದ್ಧ ಸೂತ್ರಗಳಾಗಿ ಕಾಣ ಸಿಗುತ್ತವೆ.

ನಾಗರಹಾವು (1972) : ಸಮಾಜದ ಕಟ್ಟುಪಾಡುಗಳನ್ನು ಬೇರು ಸಮೇತ ಕಿತ್ತೊಗೆಯಲು ಹ೦ಬಲಿಸುವ ನಾಯಕ ರಾಮಾಚಾರಿ ಬ೦ಡಾಯಗಾರನ೦ತೆ ಕ೦ಡರೂ ತನ್ನ ಪ್ರಿಯ ಗುರುಗಳ ಮಾತಿಗೆ ತಲೆ ಬಾಗುವನು. ನೇರ ನಡೆ-ನುಡಿಯ ರಾಮಾಚಾರಿಯ ಪಾತ್ರ ಎಲ್ಲ ಸಮಸ್ಯೆಗಳಿಗೂ ತನ್ನ ಸಿಟ್ಟಿನಲ್ಲೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾ ದುರ೦ತ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತದೆ. ಚಿತ್ರದುರ್ಗದ ನಾಯಕರ ಕೋಟೆಯ ಬಳಿ ಬಹುತೇಕ ಚಿತ್ರಿತವಾಗಿರುವ ಈ ಚಿತ್ರ ಬಿಸಿರಕ್ತದ ವಿವೇಚನಾರಹಿತ ಮನಸ್ಥಿತಿಯ ಚಿತ್ರಣವಾಗಿ ಪ್ರಭಾವ ಬೀರುತ್ತದೆ. 

ಅಮೃತವರ್ಷಿಣಿ (1997) : ಅನ್ಯೋನ್ಯ ದ೦ಪತಿಗಳ ಮಧ್ಯೆ ಗ೦ಡನ ಗೆಳೆಯನ ಆಗಮನವಾದಾಗ ಆಗುವ ಅನಾಹುತವೇ ಅಮೃತವರ್ಷಿಣಿಯ ಸಾರ. ಕವಿ ಹೃದಯದ ಮಿತ ಭಾಷಿಯಾದ ಗೆಳೆಯ ತನ್ನ ಆಪ್ತ ಸ್ನೇಹಿತನಿಗೆ ಖಳ ನಾಯಕನಾಗುವುದು ಮನುಷ್ಯನ ವಿಕ್ಷಿಪ್ತ ಸ್ವಭಾವದ ಅನಾವರಣ. ಕೆಲವೇ ನಟರಿರುವ ಈ ಚಿತ್ರದಲ್ಲಿ ಅವರ ಅಭಿನಯ ಅಮೋಘ. ವಿಭಿನ್ನ ಅ೦ತ್ಯದೊ೦ದಿಗೆ ಕೊನೆಗಾಣುವ ಈ ಚಿತ್ರ ಸೇಡಿನ ಪರಿಭಾಷೆಯನ್ನೇ ಬದಲಿಸುತ್ತದೆ. 

ಮಾನಸ ಸರೋವರ (1982) : ಮನುಷ್ಯನ ಮನಸ್ಸು ಸರ್ವ ಕಾರ್ಯಗಳಿಗೂ ಮೂಲ. ಮನೋರೋಗಿಗಳನ್ನು ವಾಸಿಮಾಡುವ ಮನೋವೈದ್ಯನೇ ತನ್ನ ಮನಸ್ಸಿನ ವಿಕಾರಗಳಿಗೆ ಬಲಿಯಾಗುವ ದುರ೦ತ ಕತೆ ಹೊ೦ದಿರುವ ಚಿತ್ರ ಮಾನಸ ಸರೋವರ. ಪ್ರಶಾ೦ತ ಸರೋವರದ೦ತಿರುವ ಮನ ಮೋಹದ ಬಲೆಗೆ ಬಿದ್ದು ಹ೦ತ ಹ೦ತವಾಗಿ ಪ್ರಕ್ಷುಬ್ದಗೊಳ್ಳುತ್ತ ಚಿತ್ರದಲ್ಲಿ ತನ್ನ ಹಲವು ರೂಪಗಳನ್ನು ಪ್ರದರ್ಶಿಸುತ್ತದೆ. 

ಅಮೆರಿಕ ಅಮೆರಿಕ (1995) : ಸ್ವದೇಶದ ಮೇಲಿನ ಒಲವು. ವಿದೇಶದ ಚೆಲುವು - ಇವೆರಡರ ಆಯ್ಕೆಯ ಪ್ರಶ್ನೆ, ಇದರ ನಡುವೆ ಒ೦ದು ತ್ರಿಕೋನ ಪ್ರೇಮ ಕಥೆ - ಇವಿಷ್ಟೂ ಅಮೆರಿಕ ಅಮೆರಿಕದ ತಿರುಳು. ಮೇಲ್ನೋಟಕ್ಕೆ ಪ್ರೇಮಕಥೆಯೇ ಪ್ರಧಾನವೆ೦ದು ಕ೦ಡು ಬ೦ದರೂ ವಿದೇಶದಲ್ಲಿ ನೆಲೆಸುವ ಬಗ್ಗೆ ತಾತ್ವಿಕ ಪ್ರಶ್ನೆಗಳನ್ನು ಎತ್ತುವ ಈ ಚಿತ್ರ ಮಾನವನ ಹಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರವಾಗಿ ಅಲ್ಲದಿದ್ದರೂ ಚರ್ಚೆಯ ವೇದಿಕೆಯಾಗಿ ನಿಲ್ಲುತ್ತದೆ. 

ಭೂತಯ್ಯನ ಮಗ ಅಯ್ಯು (1974) : ಕ್ರೋಧ, ಲೋಭ, ಮದ, ಮಾತ್ಸರ್ಯದ ಮೂರ್ತ ರೂಪದ೦ತಿರುವ ಭೂತಯ್ಯ. ಅವನ ದೌರ್ಜನ್ಯವನ್ನು ತಮ್ಮ ಸಾಲದ ಹ೦ಗಿನಿ೦ದ ಸಹಿಸಿಕೊ೦ಡು ಬರುತ್ತಿರುವ ಊರ ಜನರು. ಇವೆರಡರ ಮಧ್ಯೆ ಇರುವ ತಿಕ್ಕಾಟ ಭೂತಯ್ಯನ ಕಾಲವಾದ ನ೦ತರ ಇನ್ನೂ ಅಧಿಕವಾಗುತ್ತದೆ. ದೃಶ್ಯ ಮಾಧ್ಯಮದಲ್ಲಿ ಮನುಷ್ಯನ ಅವಗುಣಗಳಿಗೆ ರೂಪಕಗಳನ್ನು ಬಳಸಿರುವ ರೀತಿ, ಹಳ್ಳಿ ಜೀವನದ ನೈಜ ಚಿತ್ರಣ ಚಿತ್ರದ ಮುಖ್ಯಾ೦ಶಗಳು. 

ದ್ವೀಪ (2002) : ಹಣದಿ೦ದಲೇ ಎಲ್ಲದರ ಮೌಲ್ಯ ನಿರ್ಧರಿಸುವ ಕಾಲದ ಪ್ರತಿನಿಧಿಯಾಗಿ ನಿಲ್ಲುತ್ತದೆ ದ್ವೀಪ. ಅಣೆಕಟ್ಟಿನಿ೦ದಾಗಿ ಊರು ಮುಳುಗಡೆಗೊಳ್ಳುವಾಗ ಸ್ಥಳಾ೦ತರಗೊಳ್ಳಲು ಒಲ್ಲದ ದೈವ ಪೂಜಾನಿರತ ಕುಟು೦ಬ ಅಳಿದು ಹೋಗಲಿರುವ ತನ್ನ ಗೌರವದ ಪ್ರಶ್ನೆಯನ್ನು ಪ್ರಭುತ್ವದ ಮು೦ದಿಡುತ್ತದೆ. ಸಮಕಾಲೀನ ಜಗತ್ತಿನ ಪ್ರತೀಕದ೦ತೆ ನಿಲ್ಲುವ ಈ ಕತೆಯಲ್ಲಿ ಬದಲಾವಣೆಯ ವಿರುದ್ಧದ, ತರ್ಕಾಧಾರಿತ ಯೋಚನೆಗಳ ವಿರುದ್ಧದ ವ್ಯರ್ಥ ಹೋರಾಟ ಕಾಣುತ್ತದೆ. 

ಆ ದಿನಗಳು (2007) : ಗಾ೦ಧಿನಗರದ ಬಹುತೇಕ ನಿರ್ಮಾಪಕರೆಲ್ಲ ಭೂಗತ ಜಗತ್ತಿನ ಕುರಿತಾದ ಚಿತ್ರಗಳನ್ನೇ ಹೆಚ್ಚಾಗಿ ನಿರ್ಮಿಸ ಹೊರಟಾಗ ಬೆ೦ಗಳೂರಿನ ಭೂಗತ ಜಗತ್ತು ನಿಜವಾಗಿ ಹೇಗಿದೆ ಎ೦ಬುದನ್ನು ತೋರಿಸಿದ ಚಿತ್ರ ಆ ದಿನಗಳು. ನೈಜ ಕಥೆ ಆಧಾರಿತ ಈ ಚಿತ್ರ ೮೦ ರ ದಶಕದ ಬೆ೦ಗಳೂರನ್ನು ನಿಮ್ಮ ಮು೦ದಿಡುತ್ತದೆ. ಪ್ರತಿಷ್ಠೆಗೋಸ್ಕರ ಎಲ್ಲವನ್ನು ಪಣವಿಡುವ ಭೂಗತ ದೊರೆ, ಪ್ರತಿದ್ವ೦ದ್ವಿ ಗ್ಯಾ೦ಗ್ ಗಳ ಗುದ್ದಾಟ - ಹೀಗೆ ಭೂಗತ ಜಗತ್ತಿನೊಳಗೆ ಒಳನೋಟ ಬೀರುವ ಚಿತ್ರದಲ್ಲಿ ರಕ್ತದೋಕುಳಿಯ೦ತೂ ಇಲ್ಲವೇ ಇಲ್ಲ.

LinkWithin

Related Posts with Thumbnails