Saturday, August 6, 2011

ಬೆಟ್ಟದ ಜೀವ - ಚಿತ್ರ ವಿಮರ್ಶೆ

ಹಚ್ಚ ಹಸಿರಿನಿಂದ ಕೂಡಿದ ಪುತ್ತೂರು, ಕಾಸರಗೋಡು ಸೀಮೆಯ ಕಡೆಗೆ ಪ್ರತಿ ಬಾರಿ ನಾನು ಹೋದಾಗಲು ಆಗುವ ಆಹ್ಲಾದಕರ ಅನುಭವವೇ 'ಬೆಟ್ಟದ ಜೀವ' ವನ್ನು ಎರಡು ಬಾರಿ ನೋಡಿದಾಗಲೂ ಆಗಿದ್ದು. ಆ ಅನುಭವ ಬರೀ ರಮಣೀಯ ಪ್ರಕೃತಿಯಿಂದ ಆಗಿದ್ದಲ್ಲ. ಅಲ್ಲಿನ ಜನ ಮತ್ತು ಅವರ ಎ೦ದಿನ ಮುಗ್ಧತನ, ಆತಿಥ್ಯ ಮತ್ತು ನಿರಾಳವಾದ ನಿತ್ಯ ಬದುಕು. ಅದನ್ನ ತೆರೆಯ ಮೇಲೆ ದೃಶ್ಯ ಕಾವ್ಯವಾಗಿ ಕ೦ಡಾಗ ಮತ್ತು ಅದರೊಂದಿಗೆ ಗುರುತಿಸಿಕೊಳ್ಳುವ ಅವಕಾಶ ದೊರಕಿದಾಗ ಚಲನಚಿತ್ರ ಮನಸಿಗೆ ಇನ್ನಷ್ಟು ಹತ್ತಿರವಾಗುತ್ತದೆ. ಬಹುಶಃ ಇದು ಸಾಹಿತ್ಯದ ಯಾವುದೇ ಪ್ರಕಾರಕ್ಕೆ ಇರುವ ಶಕ್ತಿ. ಇನ್ನು ಸಿನಿಮಾ ಸಾಹಿತ್ಯದ ಇನ್ನೊಂದು ಮಜಲು ಅಲ್ಲವೇ.

ಒ೦ದು ಘಟನೆ ನಾಲ್ಕು ಆವೃತ್ತಿ : ಚಿತ್ರದಲ್ಲಿ ಬರುವ ಭಟ್ಟರ ಮಗ ಮನೆ ಬಿಟ್ಟು ಓಡಿ ಹೋಗಿರುವುದಕ್ಕೆ ಅತಿಥಿಯಾಗಿ ಆಗಮಿಸುವ ಶಿವರಾಮುವಿಗೆ ನಾಲ್ಕು ಭಿನ್ನ ಕಾರಣಗಳು ದೊರಕುತ್ತವೆ. ಜೊತೆಗೆ ಮನುಷ್ಯ ಸಂಬಂಧಗಳ ಗಟ್ಟಿತನ ಮತ್ತು ಟೊಳ್ಳುತನ ಎರಡು ಚಿತ್ರದ ಹಲವು ದೃಶ್ಯಗಳಲ್ಲಿ ವ್ಯಕ್ತವಾಗುತ್ತವೆ. ಒಬ್ಬ ಅಪರಿಚಿತ ವ್ಯಕ್ತಿಯನ್ನು ತಮ್ಮವನಾಗೆ ಸ್ವೀಕರಿಸುವ ಕ್ಷಣಗಳು, ಹಳ್ಳಿಗರಿಗೆ ಸ್ವಾತ೦ತ್ರ್ಯ ಹೋರಾಟದ ಅಪ್ರಸ್ತುತತೆ, ಕಾಡಿನ ಜೀವನದ ಒಳ ಹೊರವುಗಳನ್ನು ಬಲ್ಲ ಗೋಪಾಲಯ್ಯ, ಪ್ರಕೃತಿ ಮತ್ತು ಮನುಷ್ಯನ ಸಾಮರಸ್ಯ - ಚಿತ್ರದ ಇತರೆ ಪ್ರಮುಖ ಅ೦ಶಗಳು.Dattatreya and Rameshwari Varma in Bettada Jeevaದೃಶ್ಯಗಳು ಮತ್ತು ನಟನೆ: ಕುಮಾರ ಪರ್ವತದ ರಮಣೀಯ ನೋಟಗಳು ಒ೦ದೆಡೆಯಾದರೆ ಕ೦ಗಿನ(ಅಡಿಕೆ) ತೋಟಗಳ, ಹೊಲ ಗದ್ದೆಗಳ ಹಸಿರು ವೈಭವ ಮತ್ತೊ೦ದೆಡೆ - ಹೀಗೆ ಹಲವು ದೃಶ್ಯಗಳು ಗಮನ ಸೆಳೆಯುತ್ತವೆ. ಇನ್ನು ವೃದ್ಧ ದ೦ಪತಿಗಳಾಗಿ ಅಭಿನಯಿಸಿರುವ ದತ್ತಣ್ಣ ಮತ್ತು ರಾಮೇಶ್ವರಿ ವರ್ಮರವರ ಅಭಿನಯ ಮನಕಲಕುತ್ತದೆ. ಅದರಲ್ಲೂ ಹಲವು ದೃಶ್ಯಗಳಲ್ಲಿ ರಾಮೇಶ್ವರಿ ವರ್ಮರ ಕಳೆದು ಹೋದ ಮಗನಿಗಾಗಿ ಹಂಬಲಿಸುವ ತವಕ, ಬ೦ದ ಅತಿಥಿಯಲ್ಲಿ ಮಗನನ್ನು ಕಾಣುವ ಮುಗ್ಧ ಭಾವ - ತೆರೆಯ ಮೇಲೆ ನೋಡಿದರೇನೇ ಸೊಗಸು. ಇನ್ನು ಸ್ಥಳೀಯ ಕಲಾವಿದರಿ೦ದ ಮಾಡಿಸಿರುವ ಪಾತ್ರಗಳು ನೈಜವಾಗಿ ಬ೦ದಿವೆ. ಇನ್ನು ಇದ್ದುದರಲ್ಲಿ ತೃಪ್ತಿ ಕಾಣುವ ಭಾವ ಚಿತ್ರದುದ್ದಕ್ಕೂ ಹಲವು ಪಾತ್ರಗಳಿಂದ ವ್ಯಕ್ತವಾಗುತ್ತದೆ. ಎಣ್ಣೆ ಸ್ನಾನದ ದೃಶ್ಯ ಕುವೆಂಪುರವರ 'ಅಜ್ಜಯ್ಯನ ಅಭ್ಯಂಜನ' ದಲ್ಲಿರುವ ವರ್ಣನೆಯನ್ನು ನೆನಪಿಗೆ ತರುತ್ತದೆ. ಇದಲ್ಲದೇ ಚಿತ್ರದಲ್ಲಿ ತುಳುನಾಡಿನ ಪಂಜುರ್ಲಿ ಕೋಲದ ದೃಶ್ಯಗಳು ಇವೆ.

ಪ್ರಾದೇಶಿಕ ಸೊಗಡು:
ನಿರ್ದೇಶಕ ಶೇಷಾದ್ರಿಯವರು ಕುಕ್ಕೆ ಸುಬ್ರಮಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ ಹಾಗೆ ಅಲ್ಲಿನ ಸ್ಥಳೀಯ ಭಾಷೆಯಾದ ತುಳುವನ್ನು ಸ೦ಭಾಷಣೆಯಲ್ಲಿ ಅಳವಡಿಸಿಕೊಂಡ ರೀತಿ ಚೆನ್ನಾಗಿದೆ. ತುಳು ಪಾಡ್ದನಗಳು ಕೂಡಾ ಬ೦ದು ಹೋಗುತ್ತವೆ. ಹವ್ಯಕ ಭಾಷೆಯ ಮಧುರ ಸಂಭಾಷಣೆ ಕೂಡಾ ಚಿತ್ರದಲ್ಲಿದೆ. ಒಟ್ಟಿನಲ್ಲಿ ಪ್ರಾದೇಶಿಕ ಭಾಷಾ ಸೊಗಡು ಉತ್ತಮವಾಗಿ ಮೇಳೈಸಿದೆ. ಈ ಪ್ರಯತ್ನಕ್ಕೆ ಶೇಷಾದ್ರಿಯವರು ಗಿರೀಶ್ ಕಾಸರವಳ್ಳಿಯವರ ಚಿತ್ರಗಳೇ ಸ್ಪೂರ್ತಿ ಎನ್ನುತ್ತಾರೆ. ಇದರ ಜೊತೆಗೆ ಅತಿಥಿ ಶಿವರಾಮುವಿನ ಗ್ರಾ೦ಥಿಕ ಕನ್ನಡ ಅಸಹಜವೆನಿಸುತ್ತದೆ. ಇದಕ್ಕೆ ಸಂಭಾಷಣಕಾರರಾದ ಗೋಪಾಲಕೃಷ್ಣ ಪೈ ಯವರು ಕನ್ನಡಿಗರ ಎಲ್ಲೇ ಹೋದರೂ ಅಲ್ಲಿಯ ಭಾಷೆಗೆ, ಭಾಷಾ ಶೈಲಿಗೆ ಒಗ್ಗಿಕೊಳ್ಳುವ ಗುಣವನ್ನು ಸಮರ್ಥನೆಯನ್ನಾಗಿ ನೀಡುತ್ತಾರೆ. ಇದು ನನಗೇನೋ ಸಮರ್ಪಕವೆನಿಸಲಿಲ್ಲ.

ಚಿತ್ರದ ನಿಧಾನ ಗತಿಯ ಓಟಕ್ಕೆ ಹಠಾತ್ತನೆ ಬರುವ ಕೊನೆಯ ದೃಶ್ಯ ನನಗೆ ಅಸಮ೦ಜಸವೆನಿಸಿತು. ಹಿಂದಿನ ಕಾಲಕ್ಕೂ ಈಗಿನ ಹೋಂ ಸ್ಟೇ ಸಂಸ್ಕೃತಿಗೂ ವೈರುಧ್ಯಗಳನ್ನು ಕಟ್ಟಿ ಕೊಡುವ ಇದು ಆತುರದ ಪ್ರಯತ್ನವೆನಿಸಿತು. ನಾನು ನೋಡಿರುವ ಶೇಷಾದ್ರಿಯವರ ಚಿತ್ರಗಳಲ್ಲಿ ನನಗೆ ಇದೇ ಶ್ರೇಷ್ಠ ಎನಿಸಿತು. ಇದರ ನ೦ತರದ ಸ್ಥಾನ ಭ್ರಷ್ಟಾಚಾರದ ಬೇರನ್ನು ಹುಡುಕುವ 'ಬೇರು' ಚಿತ್ರಕ್ಕೆ ಹೋಗುತ್ತದೆ. ಒಟ್ಟಿನಲ್ಲಿ ಕಥೆಗೆ ಅಷ್ಟಾಗಿ ಒತ್ತು ಕೊಡದೆ ದೃಶ್ಯ ಮಾಧ್ಯಮದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಚಿತ್ರ 'ಬೆಟ್ಟದ ಜೀವ 'ಎ೦ಬುದರಲ್ಲಿ ಸ೦ಶಯವೇ ಇಲ್ಲ.

4 comments:

  1. wonderful review.. I liked the way u have divided the topics.. :) aadre, kadambari yalli astu tulu basheya upayoga villa hagagi e chitradalli, adara avashya kathe ithe? nimge adhu chanda endu annisidaru, nammantavarige a basheya upayoga astagi ista vagadira bahudhu.. nimma basha premmake nanna addi illa adare namanthavarige adhu kasta vagabahudhu...

    ReplyDelete
  2. ನಾನು ಮೊದಲೇ ಹೇಳಿದ ಹಾಗೆ ಒಂದು ಪ್ರದೇಶದ ಜೀವನವನ್ನು ಚಿತ್ರಿಸುವಾಗ ಆ ಪ್ರದೇಶದ ನೈಜ ಚಿತ್ರಣಕ್ಕೆ ಸ್ಥಳೀಯ ಭಾಷೆಯ ಪ್ರಯೋಗ ತೀರ ಅವಶ್ಯಕ ಎನ್ನುವುದೇ ನನ್ನ ಅಭಿಪ್ರಾಯ. ಅದನ್ನೇ ಕಾಸರವಳ್ಳಿ ಚಿತ್ರಗಳಲ್ಲಿ ನಾವು ಕಾಣುವುದು. ಹಾಗಾಗಿ ನನ್ನ ತುಳು ಭಾಷಾ ಪ್ರೇಮವನ್ನು ಹೊರತು ಪಡಿಸಿ ನೋಡಿದರೂ ನನಗೆ ಇದೇ ಸರಿ ಎನಿಸಿತು. ಮತ್ತೊಂದು ವಿಷಯ ನೀವು ಪ್ರಾದೇಶಿಕ ಭಾಷೆಯ ಪ್ರಯೋಗ ಯಾಕೆ ಇಷ್ಟ ವಾಗಲಿಲ್ಲ ಎಂದು ಹೇಳಿಲ್ಲ. ಅದನ್ನು ಸ್ಪಷ್ಟ ಪಡಿಸಿದರೆ ಈ ಚರ್ಚೆ ಇನ್ನೂ ಉತ್ತಮವಾಗಬಹುದು. ಹಾಗೆಯೇ ನೀವು subtitles ಇರುವ ಚಿತ್ರ ಪ್ರತಿಯನ್ನು ನೋಡಿದಿರೋ ಎಂಬುದನ್ನು ತಿಳಿಸಿ. ಕನ್ನಡ ಮಾತೃ ಭಾಷೆಯಲ್ಲದ ನನಗೂ, ಕನ್ನಡವು ತಾಯ್ನುಡಿಯಾಗಿರುವ ಇತರರಿಗೂ ಕರ್ನಾಟಕದಲ್ಲಿ ಕನ್ನಡದ ಬೇರೆಯೇ dialect ಅನ್ನು ಮಾತಾಡುವ ಪ್ರದೇಶದ ಚಿತ್ರಣವೂ ಕೂಡಾ ಪೂರ್ತಿಯಾಗಿ ಅರ್ಥವಾಗದೆ ಇರಬಹುದು ಅಥವಾ ಕಸಿವಿಸಿಯೂ ಆಗಬಹುದು. ಮತ್ತು ನಾನು ಕಾರಂತರ ಕಾದಂಬರಿಯನ್ನು ಓದಿಲ್ಲ. ಅದರಿಂದ ಅದರ ಬಗ್ಗೆ ಪ್ರತಿಕ್ರಿಯಸಲಾರೆ. ಹಾಗೆಯೇ ಕಾದಂಬರಿಗೆ ಪೂರ್ತಿ ನಿಷ್ಠನಾಗಿರಬೇಕೆಂಬ ಅನಿವಾರ್ಯತೆ ಇಲ್ಲವೆ೦ಬುವುದೇ ನನ್ನ ಖಚಿತ ಅಭಿಪ್ರಾಯ. ಸಿನಿಮಾದ ವ್ಯಾಕರಣವನ್ನು ಇಲ್ಲಿ ಶೇಷಾದ್ರಿಯವರು ಚೆನ್ನಾಗಿ ಅಭ್ಯಸಿಸಿ ಕಾರ್ಯರೂಪಕ್ಕೆ ತಂದಿದ್ದಾರೆ ಎಂದರೆ ತಪ್ಪಿಲ್ಲ. ನಮ್ಮ ವಿಭಿನ್ನ ಸಂಸ್ಕೃತಿಯನ್ನು ಬಿಂಬಿಸುವ ನಿರ್ದೇಶಕರ ಪ್ರಯತ್ನ ಪ್ರಶಂಸನೀಯ.

    ReplyDelete
  3. Awesome and excellent review...Liked the way u explained part by part!!!
    Good job u have done...keep it up and keep going...wish you all the best...(y)

    ReplyDelete

LinkWithin

Related Posts with Thumbnails