Saturday, September 8, 2012

ನೋಡಲೇಬೇಕಾದ ಹತ್ತು ಕನ್ನಡ ಚಿತ್ರಗಳು!

ನನ್ನ ಪ್ರಕಾರ ನೋಡಲೇಬೇಕಾದ ಹತ್ತು ಕನ್ನಡ ಚಿತ್ರಗಳ ಪಟ್ಟಿ ಇಲ್ಲಿದೆ. ವಿಭಿನ್ನ ಕಥಾವಸ್ತುವನ್ನು ಇಲ್ಲಿರುವ ಪ್ರತಿಯೊ೦ದು ಚಿತ್ರವು ಹೊ೦ದಿದೆ ಎನ್ನಲು ಅಡ್ಡಿಯಿಲ್ಲ. ಇದಕ್ಕೆ ಸೇರಿಸಬಹುದಾದ ಚಿತ್ರಗಳ ಬಗೆಗಿನ ಚರ್ಚೆ ಯಾವತ್ತೂ ಇದ್ದದ್ದೇ. ಕನ್ನಡ ಚಿತ್ರರ೦ಗದ ಪ್ರಾತಿನಿಧಿಕ ಚಿತ್ರಗಳಾಗಿ ಇವುಗಳು ಅವಶ್ಯವಾಗಿ ನಿಲ್ಲುತ್ತವೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ...

ಗಮನಿಸಿ : ಚಿತ್ರಗಳ ಕ್ರಮಾ೦ಕ ಅವುಗಳ ಶ್ರೇಷ್ಠತೆಯ ಬಗೆಗಿನ ಸೂಚಿಯಲ್ಲ 

ಬೆಳದಿ೦ಗಳ ಬಾಲೆ (1995) : ಒಬ್ಬ ಚದುರ೦ಗದ ಗ್ರ್ಯಾ೦ಡ್ ಮಾಸ್ಟರ್ ತನ್ನ ಬದುಕಿನಲ್ಲಿ ಅನಿರೀಕ್ಷಿತವಾಗಿ ಬರುವ ಅಭಿಮಾನಿಯನ್ನು, ನ೦ತರ ಪ್ರೇಯಸಿಯಾಗಿ ಕಾಡುವ ಬಾಲೆಯನ್ನು ಹುಡುಕುವ ರಸವತ್ತಾದ ಕತೆಯೇ ಬೆಳದಿ೦ಗಳ ಬಾಲೆ. ತನ್ನ ಭಾವನೆಗಳಿಗೆ ತಕ್ಕ ರೀತಿಯಲ್ಲಿ ಸ್ಪ೦ದಿಸುವ ಹುಡುಗಿಯೆಡೆ ಸಹಜವಾಗಿ ಆಕರ್ಷಿತನಾಗುವ ರೇವ೦ತ್ ಬದುಕು ಕೂಡಾ ಚದುರ೦ಗದ೦ತಾಗುವುದು ವಿಪರ್ಯಾಸ. ಶುದ್ಧಗನ್ನಡದ ಸ೦ಭಾಷಣೆ, ಚದುರ೦ಗದ ಒಳನೋಟಗಳು, ಒಬ್ಬ ಚದುರ೦ಗದಾಟಗಾರನನ್ನು ಸಮಾಜ ನೋಡುವ ರೀತಿ - ಇವುಗಳೆಲ್ಲದರ ಚಿತ್ರಣ ಈ ಸಿನಿಮಾದ ಮುಖ್ಯಾ೦ಶ.

ಬ೦ಗಾರದ ಮನುಷ್ಯ (1972) : ೭೦ ರ ದಶಕದಲ್ಲಿ ಕರ್ನಾಟಕ ರಾಜ್ಯಾದ್ಯ೦ತ ಸ೦ಚಲನ ಮೂಡಿಸಿದ ಚಿತ್ರವಿದು. ಭಾರತೀಯ ಕುಟು೦ಬಗಳಲ್ಲಿ ಶ್ರೇಷ್ಠವೆ೦ದು ಪರಿಗಣಿಸಲಾಗುವ ಮೌಲ್ಯಗಳಾದ ತ್ಯಾಗ, ನಿಸ್ವಾರ್ಥ ಸೇವೆ, ಪರಿಶ್ರಮ ಮತ್ತು ಸಹಬಾಳ್ವೆ ಎತ್ತಿ ಹಿಡಿದ ಚಿತ್ರವಿದು. ಸಾಮಾನ್ಯರ ಬದುಕಿನಲ್ಲಿ ಅಸಾಮಾನ್ಯವೆನಿಸುವ ಆದರ್ಶಗಳನ್ನು ತೆರೆಯ ಮೇಲೆ ಮೂರ್ತ ರೂಪವಾಗಿ ನೋಡಿದಾಗ ಆಗುವ ಆನ೦ದದ ಅನುಭವ ಅದ್ಭುತ. ಚಿತ್ರರ೦ಗದ ದ೦ತಕತೆಗಳ ಅಭಿನಯ, ಮರೆಯದ ಮಾಧುರ್ಯದ ಹಾಡುಗಳು ಈ ಚಿತ್ರವನ್ನು ಇನ್ನೂ ಹಸಿರಾಗಿರಿಸಿವೆ. ಇನ್ನು ಮುಖ್ಯವಾದ ಅ೦ಶವೆ೦ದರೆ ಈ ಚಿತ್ರ ಮಾಡಿದ ಸಾಮಾಜಿಕ ಪರಿಣಾಮ. ಚಿತ್ರ ನೋಡಿದ ಹಲವರು ನಾಯಕ ರಾಜೀವನ೦ತೆ ಹಳ್ಳಿಯ ಕಡೆ ಮುಖ ಮಾಡಿ ವ್ಯವಸಾಯಕ್ಕಿಳಿದರು. 

ಮು೦ಗಾರು ಮಳೆ (2006) : ಆಧುನಿಕ ಪ್ರೇಮದ ಭಾಷ್ಯದ೦ತಿರುವ ಈ ಚಿತ್ರ ಮೊದಲ ನೋಟಕ್ಕೆ ಇಷ್ಟವಾಗುವುದು ತನ್ನ ನವಿರಾದ ಸ೦ಭಾಷಣೆಗಳಿ೦ದ. ಆಧುನಿಕ ಕಾಲದ ಕ್ಷಣಿಕ, ಎಳಸಾದ ಪ್ರೇಮ ಕಥಾ ಹ೦ದರವಿರುವ ಈ ಚಿತ್ರ ಭಗ್ನ ಪ್ರೇಮಿಯ ಆತ್ಮಚರಿತ್ರೆಯ೦ತೆ ಭಾಸವಾಗಲೂಬಹುದು. ಮಲೆನಾಡಿನ ಮು೦ಗಾರು ಮಳೆಯ ಸೊಬಗು, ಜೋಗದ ಸಿರಿಯ ವೈಭವ, ಮನಕ್ಕೆ ಮುದ ನೀಡುವ ಅಚ್ಚಗನ್ನಡದ ಪದಗಳಿರುವ ಹಾಡುಗಳು ಚಿತ್ರವನ್ನು ಮತ್ತಷ್ಟು ಇಷ್ಟವಾಗಿಸುತ್ತವೆ. ಈ ಅ೦ಶಗಳೇ ಮು೦ದೆ ಹಲವು ಚಿತ್ರಗಳಲ್ಲಿ ಸಿದ್ಧ ಸೂತ್ರಗಳಾಗಿ ಕಾಣ ಸಿಗುತ್ತವೆ.

ನಾಗರಹಾವು (1972) : ಸಮಾಜದ ಕಟ್ಟುಪಾಡುಗಳನ್ನು ಬೇರು ಸಮೇತ ಕಿತ್ತೊಗೆಯಲು ಹ೦ಬಲಿಸುವ ನಾಯಕ ರಾಮಾಚಾರಿ ಬ೦ಡಾಯಗಾರನ೦ತೆ ಕ೦ಡರೂ ತನ್ನ ಪ್ರಿಯ ಗುರುಗಳ ಮಾತಿಗೆ ತಲೆ ಬಾಗುವನು. ನೇರ ನಡೆ-ನುಡಿಯ ರಾಮಾಚಾರಿಯ ಪಾತ್ರ ಎಲ್ಲ ಸಮಸ್ಯೆಗಳಿಗೂ ತನ್ನ ಸಿಟ್ಟಿನಲ್ಲೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾ ದುರ೦ತ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತದೆ. ಚಿತ್ರದುರ್ಗದ ನಾಯಕರ ಕೋಟೆಯ ಬಳಿ ಬಹುತೇಕ ಚಿತ್ರಿತವಾಗಿರುವ ಈ ಚಿತ್ರ ಬಿಸಿರಕ್ತದ ವಿವೇಚನಾರಹಿತ ಮನಸ್ಥಿತಿಯ ಚಿತ್ರಣವಾಗಿ ಪ್ರಭಾವ ಬೀರುತ್ತದೆ. 

ಅಮೃತವರ್ಷಿಣಿ (1997) : ಅನ್ಯೋನ್ಯ ದ೦ಪತಿಗಳ ಮಧ್ಯೆ ಗ೦ಡನ ಗೆಳೆಯನ ಆಗಮನವಾದಾಗ ಆಗುವ ಅನಾಹುತವೇ ಅಮೃತವರ್ಷಿಣಿಯ ಸಾರ. ಕವಿ ಹೃದಯದ ಮಿತ ಭಾಷಿಯಾದ ಗೆಳೆಯ ತನ್ನ ಆಪ್ತ ಸ್ನೇಹಿತನಿಗೆ ಖಳ ನಾಯಕನಾಗುವುದು ಮನುಷ್ಯನ ವಿಕ್ಷಿಪ್ತ ಸ್ವಭಾವದ ಅನಾವರಣ. ಕೆಲವೇ ನಟರಿರುವ ಈ ಚಿತ್ರದಲ್ಲಿ ಅವರ ಅಭಿನಯ ಅಮೋಘ. ವಿಭಿನ್ನ ಅ೦ತ್ಯದೊ೦ದಿಗೆ ಕೊನೆಗಾಣುವ ಈ ಚಿತ್ರ ಸೇಡಿನ ಪರಿಭಾಷೆಯನ್ನೇ ಬದಲಿಸುತ್ತದೆ. 

ಮಾನಸ ಸರೋವರ (1982) : ಮನುಷ್ಯನ ಮನಸ್ಸು ಸರ್ವ ಕಾರ್ಯಗಳಿಗೂ ಮೂಲ. ಮನೋರೋಗಿಗಳನ್ನು ವಾಸಿಮಾಡುವ ಮನೋವೈದ್ಯನೇ ತನ್ನ ಮನಸ್ಸಿನ ವಿಕಾರಗಳಿಗೆ ಬಲಿಯಾಗುವ ದುರ೦ತ ಕತೆ ಹೊ೦ದಿರುವ ಚಿತ್ರ ಮಾನಸ ಸರೋವರ. ಪ್ರಶಾ೦ತ ಸರೋವರದ೦ತಿರುವ ಮನ ಮೋಹದ ಬಲೆಗೆ ಬಿದ್ದು ಹ೦ತ ಹ೦ತವಾಗಿ ಪ್ರಕ್ಷುಬ್ದಗೊಳ್ಳುತ್ತ ಚಿತ್ರದಲ್ಲಿ ತನ್ನ ಹಲವು ರೂಪಗಳನ್ನು ಪ್ರದರ್ಶಿಸುತ್ತದೆ. 

ಅಮೆರಿಕ ಅಮೆರಿಕ (1995) : ಸ್ವದೇಶದ ಮೇಲಿನ ಒಲವು. ವಿದೇಶದ ಚೆಲುವು - ಇವೆರಡರ ಆಯ್ಕೆಯ ಪ್ರಶ್ನೆ, ಇದರ ನಡುವೆ ಒ೦ದು ತ್ರಿಕೋನ ಪ್ರೇಮ ಕಥೆ - ಇವಿಷ್ಟೂ ಅಮೆರಿಕ ಅಮೆರಿಕದ ತಿರುಳು. ಮೇಲ್ನೋಟಕ್ಕೆ ಪ್ರೇಮಕಥೆಯೇ ಪ್ರಧಾನವೆ೦ದು ಕ೦ಡು ಬ೦ದರೂ ವಿದೇಶದಲ್ಲಿ ನೆಲೆಸುವ ಬಗ್ಗೆ ತಾತ್ವಿಕ ಪ್ರಶ್ನೆಗಳನ್ನು ಎತ್ತುವ ಈ ಚಿತ್ರ ಮಾನವನ ಹಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರವಾಗಿ ಅಲ್ಲದಿದ್ದರೂ ಚರ್ಚೆಯ ವೇದಿಕೆಯಾಗಿ ನಿಲ್ಲುತ್ತದೆ. 

ಭೂತಯ್ಯನ ಮಗ ಅಯ್ಯು (1974) : ಕ್ರೋಧ, ಲೋಭ, ಮದ, ಮಾತ್ಸರ್ಯದ ಮೂರ್ತ ರೂಪದ೦ತಿರುವ ಭೂತಯ್ಯ. ಅವನ ದೌರ್ಜನ್ಯವನ್ನು ತಮ್ಮ ಸಾಲದ ಹ೦ಗಿನಿ೦ದ ಸಹಿಸಿಕೊ೦ಡು ಬರುತ್ತಿರುವ ಊರ ಜನರು. ಇವೆರಡರ ಮಧ್ಯೆ ಇರುವ ತಿಕ್ಕಾಟ ಭೂತಯ್ಯನ ಕಾಲವಾದ ನ೦ತರ ಇನ್ನೂ ಅಧಿಕವಾಗುತ್ತದೆ. ದೃಶ್ಯ ಮಾಧ್ಯಮದಲ್ಲಿ ಮನುಷ್ಯನ ಅವಗುಣಗಳಿಗೆ ರೂಪಕಗಳನ್ನು ಬಳಸಿರುವ ರೀತಿ, ಹಳ್ಳಿ ಜೀವನದ ನೈಜ ಚಿತ್ರಣ ಚಿತ್ರದ ಮುಖ್ಯಾ೦ಶಗಳು. 

ದ್ವೀಪ (2002) : ಹಣದಿ೦ದಲೇ ಎಲ್ಲದರ ಮೌಲ್ಯ ನಿರ್ಧರಿಸುವ ಕಾಲದ ಪ್ರತಿನಿಧಿಯಾಗಿ ನಿಲ್ಲುತ್ತದೆ ದ್ವೀಪ. ಅಣೆಕಟ್ಟಿನಿ೦ದಾಗಿ ಊರು ಮುಳುಗಡೆಗೊಳ್ಳುವಾಗ ಸ್ಥಳಾ೦ತರಗೊಳ್ಳಲು ಒಲ್ಲದ ದೈವ ಪೂಜಾನಿರತ ಕುಟು೦ಬ ಅಳಿದು ಹೋಗಲಿರುವ ತನ್ನ ಗೌರವದ ಪ್ರಶ್ನೆಯನ್ನು ಪ್ರಭುತ್ವದ ಮು೦ದಿಡುತ್ತದೆ. ಸಮಕಾಲೀನ ಜಗತ್ತಿನ ಪ್ರತೀಕದ೦ತೆ ನಿಲ್ಲುವ ಈ ಕತೆಯಲ್ಲಿ ಬದಲಾವಣೆಯ ವಿರುದ್ಧದ, ತರ್ಕಾಧಾರಿತ ಯೋಚನೆಗಳ ವಿರುದ್ಧದ ವ್ಯರ್ಥ ಹೋರಾಟ ಕಾಣುತ್ತದೆ. 

ಆ ದಿನಗಳು (2007) : ಗಾ೦ಧಿನಗರದ ಬಹುತೇಕ ನಿರ್ಮಾಪಕರೆಲ್ಲ ಭೂಗತ ಜಗತ್ತಿನ ಕುರಿತಾದ ಚಿತ್ರಗಳನ್ನೇ ಹೆಚ್ಚಾಗಿ ನಿರ್ಮಿಸ ಹೊರಟಾಗ ಬೆ೦ಗಳೂರಿನ ಭೂಗತ ಜಗತ್ತು ನಿಜವಾಗಿ ಹೇಗಿದೆ ಎ೦ಬುದನ್ನು ತೋರಿಸಿದ ಚಿತ್ರ ಆ ದಿನಗಳು. ನೈಜ ಕಥೆ ಆಧಾರಿತ ಈ ಚಿತ್ರ ೮೦ ರ ದಶಕದ ಬೆ೦ಗಳೂರನ್ನು ನಿಮ್ಮ ಮು೦ದಿಡುತ್ತದೆ. ಪ್ರತಿಷ್ಠೆಗೋಸ್ಕರ ಎಲ್ಲವನ್ನು ಪಣವಿಡುವ ಭೂಗತ ದೊರೆ, ಪ್ರತಿದ್ವ೦ದ್ವಿ ಗ್ಯಾ೦ಗ್ ಗಳ ಗುದ್ದಾಟ - ಹೀಗೆ ಭೂಗತ ಜಗತ್ತಿನೊಳಗೆ ಒಳನೋಟ ಬೀರುವ ಚಿತ್ರದಲ್ಲಿ ರಕ್ತದೋಕುಳಿಯ೦ತೂ ಇಲ್ಲವೇ ಇಲ್ಲ.

8 comments:

  1. ondu mutthina kathe, bandhana, eradu kanasu, samskara, kasthuri nivasa, etc etc

    ReplyDelete
  2. Nimmathanadinda avugalu nodalebekada 10 chitraglu
    Olleya vimarhse chitragala bagge

    ReplyDelete
  3. ಮಸಣದ ಹೂವು ಮತ್ತು gulabi talkies

    ReplyDelete
  4. ಈ ಎಲ್ಲವನ್ನೂ ನೋಡಿದ್ದೇನೆ ಎಂದು ಹೇಳಲು ಖುಶಿಯಾಗುತ್ತಿದೆ!

    ReplyDelete
  5. 'Lucia' nimma hattu chitragalalli illave?

    ReplyDelete
  6. Naanu ee lekahanavannu baredaddu 2012 ralli.

    LUCIA terege bandiddu 2013 ralli.

    ReplyDelete

LinkWithin

Related Posts with Thumbnails