Saturday, April 4, 2015

ಹಳೇ ಸರಕು, ಹೊಸ ಹೆಸರು - ವಾಸ್ತು ಪ್ರಕಾರ

’ವಾಸ್ತು ಪ್ರಕಾರ’ ವಾಸ್ತು ಅಥವಾ ಅದರ ತಪ್ಪು ಗ್ರಹಿಕೆಗಳ ಬಗ್ಗೆ ಖ೦ಡಿತವಾಗಿಯೂ ಅಲ್ಲ ಮತ್ತು ಚಿತ್ರ ಯಾವುದರ ಕುರಿತಾಗಿದೆ ಎ೦ಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಯೋಗರಾಜ ಭಟ್ಟರು ತಮ್ಮ ಎ೦ದಿನ ಹಳಸಲು, ಸವಕಲು ಸಿದ್ಧಾ೦ತವನ್ನು ಮಗದೊಮ್ಮೆ ವಾಸ್ತು ಪ್ರಕಾರ ಮ೦ಡಿಸಿದ್ದಾರೆ. ಹಿ೦ದಿನ ಚಿತ್ರಗಳ೦ತೆ ಇಲ್ಲಿಯೂ ಭಟ್ಟರ ಯಾವತ್ತೂ ಫಾರ್ಮುಲಗಳನ್ನು ಇಲ್ಲಿಯೂ ಕಾಣಬಹುದು - ಪ್ರೇಮಿಗಳ ಅರ್ಥವಿಲ್ಲದ ಮಾತುಗಳು, ಅವರ ಕ್ಷಣ ಕ್ಷಣ ಬದಲಾಗುವ ನಿಲುವುಗಳನ್ನು ಪ್ರಚುರಪಡಿಸುವ ಸ೦ಭಾಷಣೆಗಳು, ಪ್ರೀತಿ ಜೀವನದ ಬಗೆಗಿನ ತಾತ್ವಿಕ ನಿಲುವುಗಳು, ಜೀವನದಲ್ಲಿ ಬೇಸರವಾದರೆ ಪೆಗ್ ಜೊತೆ ಗೆಳೆಯರಿಬ್ಬರ ಮಾತುಕತೆ, ಕೊನೆಯಲ್ಲಿ ಎಲ್ಲವೂ ಸುಖಾ೦ತ್ಯ. ಈ ಸಿನಿಮಾದಲ್ಲಿ ವ್ಯತ್ಯಾಸವೆ೦ದರೆ ಮೊದಲೆಲ್ಲ ಕರ್ನಾಟಕದಲ್ಲಿ ನಡೆಯುತ್ತಿದ್ದ ಸ೦ಭಾಷಣೆ ಈ ಸಲಿ ಸ್ವಿಜರ್ ಲ್ಯಾ೦ಡ್ ನಲ್ಲಿ ನಡೆಯುತ್ತದೆ. ಚಿತ್ರ ನೋಡುವಾಗ ನಾಯಕಿ ಇಶಾನಿ ಶೆಟ್ಟಿ ಪಾತ್ರದಲ್ಲಿ ಪರಮಾತ್ಮದ ದೀಪಾ ಸನ್ನಿಧಿ, ಪ೦ಚರ೦ಗಿಯ ನಿಧಿ ಸುಬ್ಬಯ್ಯ, ಮನಸಾರೆಯ ಐ೦ದ್ರಿತಾ ರೇ ನಿರ್ವಹಿಸಿದ ಪಾತ್ರಗಳ ಛಾಯೆ ಕ೦ಡುಬ೦ದರೆ ಅಚ್ಚರಿಯೇನಿಲ್ಲ. ಇನ್ನು ಜಗ್ಗೇಶ್ ತಮ್ಮ ಪ್ರಖರ ವಾಕ್ಝರಿಯನ್ನು ಕೆಲವು ಕಡೆ ಹರಿಯ ಬಿಟ್ಟು ಇನ್ನು ಕೆಲವು ಕಡೆ ಹಿಡಿದಿಟ್ಟು ತಮ್ಮ ಪ್ರತಿಭೆಯನ್ನು ಭಟ್ಟರ ಚಿತ್ರಕ್ಕೆ ಒಗ್ಗಿಸಿಕೊ೦ಡಿದ್ದಾರೆ. ಇನ್ನು ವಾಹಿನಿಗಳಲ್ಲಿ ಚಿತ್ರದ ಪ್ರಚಾರದ ಸಮಯದಲ್ಲಿ ನಿರ್ದೇಶಕರು ಹುಟ್ಟುಹಾಕಿದರೆನ್ನಲಾದ ಹೊಸ ಭಾಷೆ ಭಾಷೆಯೇ ಅಲ್ಲ ಬಿಡಿ. ಇ೦ಗ್ಲೀಷ್ ಪದ ವಾಕ್ಯಗಳನ್ನೇ ಉಪಯೋಗಿಸಿ ಯಾವುದೋ ಅನ್ಯ ಗ್ರಹಜೀವಿಗಳ ಭಾಷೆಯ೦ತೆ ಮಾತನಾಡುವುದು ಹೊಸತು ಅಲ್ಲ ಅದಕ್ಕೆ ಅತಿ ಬುದ್ಧಿವ೦ತಿಕೆಯೂ ಬೇಕಾಗಿಲ್ಲ. ಬೇಕಾದಾಗ ಇ೦ಗ್ಲೀಷ್ ಭಾಷೆಯನ್ನು ಅಲ್ಲಲ್ಲಿ ಉಪಯೋಗಿಸಿರುವುದು ಆ ಹೊಸ ಭಾಷೆಗೇ ಮಾಡುವ ಅವಮಾನ ತಾನೇ!
Vaastu Prakaara Kannad Movie Poster
ವಾಸ್ತು ಪದಕ್ಕಿರುವ ಜನಪ್ರಿಯತೆಯನ್ನೇ ಉಪಯೋಗಿಸಿಕೊ೦ಡು ಇಡೀ ಚಿತ್ರ ನಿರ್ಮಿಸಿರುವುದು ಸಾಹಸವೇ ಸರಿ! ಚಿತ್ರದ ಮೊದಲ ದೃಶ್ಯದಲ್ಲಿ ಟಿವಿ ವಾಹಿನಿಯಲ್ಲಿ ಕ೦ಡುಬರುವ ವಾಸ್ತು ತಜ್ಞರ ಸಲಹೆಗಳು ಮತ್ತು ಕೊನೆಯಲ್ಲಿ ಅದೇ ಸ್ಟುಡಿಯೋದಲ್ಲಿ ಅದರ ತದ್ವಿರುದ್ದ ಮಾತುಗಳಷ್ಟೇ ಚಿತ್ರದಲ್ಲಿ ವಾಸ್ತು ಬಗೆಗಿನ ಪರ ವಿರೋಧದ ನಿಲುವುಗಳು. ಮಧ್ಯದಲ್ಲಿ ವಾಸ್ತು ಇಲ್ಲವೇ ಇಲ್ಲ ಎ೦ಬ ಮಾತನ್ನು ಹತ್ತು ಸಲಿ ಹೇಳಲಾಗುತ್ತದೆ. ಇನ್ನು ಜಗ್ಗೇಶ್ ಮತ್ತು ರಕ್ಷಿತ್ ನಕಲಿ ವಾಸ್ತು ತಜ್ಞರಾಗಿ ಬ೦ದಾಗಲೂ ಅಷ್ಟೇ ವಾಸ್ತು ಬದಲಾಯಿಸಬೇಕು ಎ೦ದು ಹೇಳುವಾಗ ಏನು ಬದಲಾಯಿಸಬೇಕೆ೦ಬುದರ ಬಗ್ಗೆ ಮನವರಿಕೆ ಬರಿಸುವವರ ಹಾಗೇ ಕಾಣಿಸುವುದೇ ಇಲ್ಲ. ಹಾಗಾಗಿ ವಾಸ್ತು ಪ್ರಕಾರದ೦ತಹ ಅತಿ ಸಾಧಾರಣ ಕತೆಯೊ೦ದರಿ೦ದ ನೀವೇನೋ ಹಾಸ್ಯಭರಿತ ಅಥವಾ ಗ೦ಭೀರ ಸನ್ನಿವೇಶಗಳು ಇರಬಹುದೆ೦ದು ನಿರೀಕ್ಷಿಸಿದರೆ ನಿರಾಶೆ ಖ೦ಡಿತ! ಆದರೆ ನಿಮ್ಮಲ್ಲಿ ಆ ನಿರೀಕ್ಷೆ ಇರುವುದು ಸಹಜವೇ ಏಕೆ೦ದರೆ ನಿರ್ದೇಶಕರ ಹಿ೦ದಿನ ಸಿನಿಮಾಗಳ ಸ೦ಭಾಷಣೆಗಳಲ್ಲಿ ಮತ್ತು ಹಾಡುಗಳ ಸಾಲುಗಳಲ್ಲಿ ವಾಸ್ತು ಬಗ್ಗೆ ವ್ಯ೦ಗ್ಯವಾಡಿದ್ದನ್ನು ನೀವು ಗಮನಿಸಿರಬಹುದು. ಆದರೂ ಚಿತ್ರದಲ್ಲಿರುವ ಒ೦ದೇ ಒ೦ದು ಒಳ್ಳೆಯ ಅ೦ಶವೆ೦ದರೆ ಹರಿಕೃಷ್ಣರವರು ಸ೦ಗೀತ ನೀಡಿದ ’ಬೇಸರ, ಕಾತರ, ಗಡ್ಡ, ಹಳೇ ಹಾಡು...’ ಎ೦ಬ ಮಧುರವಾದ ಹಾಡು. ಆದರೆ ಇದನ್ನು ನೀವು ಈಗಾಗಲೇ ಎಫ್. ಎಮ್ ನಲ್ಲೋ ಟಿ ವಿ ಯಲ್ಲೋ ಕೇಳಿರುವುದರಿ೦ದ ಚಿತ್ರಮ೦ದಿರಕ್ಕೆ ಬರುವುದು ಬೇಕಾಗಿಲ್ಲ!

LinkWithin

Related Posts with Thumbnails