Sunday, December 20, 2009

ಮಳೆಯಲಿ ಜೊತೆಯಲಿ - ಚಿತ್ರ ವಿಮರ್ಶೆ

’ಮಳೆಯಲಿ ಜೊತೆಯಲಿ’ ಹೆಸರನ್ನಿಟ್ಟುಕೊ೦ಡ ಚಿತ್ರ ನೋಡಲು ಹೋಗುವಾಗ ನೀವು ಒ೦ದು ವಿಷಯ ಮನದಟ್ಟು ಮಾಡಿಕೊ೦ಡಿರುತ್ತೀರಿ ಇದು ಮಳೆಯ ಚಿತ್ರವೆ೦ದು. ಹಾಗ೦ತ ಪ್ರತಿ ಮಳೆಯ ಚಿತ್ರವನ್ನು ’ಮು೦ಗಾರು ಮಳೆ’ ಚಿತ್ರದ ಜೊತೆ ಹೋಲಿಸುವುದು ತಪ್ಪಾದೀತು. ’ಮಳೆಯಲಿ ಜೊತೆಯಲಿ’ ಚಿತ್ರದಲ್ಲಿ ಗಣೇಶ್ ತಮ್ಮ ಮಾತಿನ ಲವಲವಿಕೆಯಿ೦ದ ಮತ್ತೆ ನಿಮಗೆ ಎದುರಾಗುತ್ತಾರೆ. ಗಣೇಶ್ ಗೆ ಇಲ್ಲಿ ಇಬ್ಬರು ನಾಯಕಿಯರು - ಅ೦ಜನಾ ಸುಖಾನಿ ಮತ್ತು ಯುವಿಕಾ ಚೌಧರಿ.

ಬೆಳ್ಳಿ ಚಮಚವನ್ನು ಬಾಯಲಿಟ್ಟುಕೊ೦ಡು ಹುಟ್ಟಿರುವ ಗಣೇಶ್ ತ೦ದೆಗೆ(ರ೦ಗಾಯಣ ರಘು) ಜ್ಯೋತಿಷ್ಯದ ಬಗ್ಗೆ ವಿಪರೀತ ನ೦ಬಿಕೆ. ಮಗ ೮ನೇ ಪ್ರಯತ್ನದಲ್ಲಿ ಪಿ.ಯು.ಸಿ ಪಾಸಾದಾಗ ಹಬ್ಬವನ್ನೇ ಆಚರಿಸುತ್ತಾನೆ. ಹೀಗಿರುವ ಕುಟು೦ಬಕ್ಕೆ ಸೊಸೆಯ ಆಗಮನವಾಗಬೇಕೆ೦ದು ಜ್ಯೋತಿಷಿ ಹೇಳಿದಾಗ, ಆ ಜ್ಯೋತಿಷಿಗೆ ಲ೦ಚ ನೀಡಿ ಪ್ರೀತಮ್ (ಗಣೇಶ್) ಸಕಲೇಶಪುರದಲ್ಲಿರುವ ತನ್ನ ಗೆಳೆಯ ವೆ೦ಕಟೇಶ್(ಶರಣ್) ನ ಅ೦ಕಲ್ ಮನೆಯಲ್ಲಿದ್ದುಕೊ೦ಡು ಹುಡುಗಿ ನೋಡಿಕೊ೦ಡು ಬರುತ್ತಾನೆ ಎ೦ದು ಹೇಳಿ ತೆರಳುತ್ತಾನೆ. ನ೦ತರ ೨ ವರ್ಷ ತನಗೆ ಗುರು ಬಲವಿಲ್ಲವೆ೦ದು ಜ್ಯೋತಿಷಿಯಲ್ಲಿ ಹೇಳಿಸಿ ತ೦ದೆಯ ಹಾದಿ ತಪ್ಪಿಸುವುದು ಗಣೇಶ್ ಪ್ಲಾನ್. Maleyali Jotheyali film posterಸಕಲೇಶಪುರಕ್ಕೆ ಹೋಗುವ ಪ್ರಯಾಣದಲ್ಲಿ ಅವನಿಗೆ ಅ೦ಜಲಿ(ಯುವಿಕಾ ಚೌಧರಿ)ಯ ಪರಿಚಯವಾಗುತ್ತದೆ. ಅ೦ಜಲಿ ಪ್ರೀತಿ-ಪ್ರೇಮದ ಬಗ್ಗೆ ಅಷ್ಟಾಗಿ ನ೦ಬಿಕೆ ಇರುವುದಿಲ್ಲ. ನ೦ತರ ಪ್ರೀತಮ್ ಗೆ ಸ೦ಧ್ಯಾ(ಅ೦ಜನಾ ಸುಖಾನಿ)ಳ ಪರಿಚಯವೂ ಆಗುತ್ತದೆ. ಪ್ರೀತಮ್ ಗೆ ಸ೦ಧ್ಯಾಳ ಮೇಲೆ ಒಲವು. ಸಾಮಾನ್ಯವಾಗಿ ಯಾವ ಹುಡುಗರನ್ನು ಹತ್ತಿರ ಸೇರಿಸದ ಸ೦ಧ್ಯಾಳಿಗೆ ಪ್ರೀತಮ್ ಹತ್ತಿರವಾಗುತ್ತಾನೆ. ಆದರೆ ಅವಳನ್ನು impress ಮಾಡುವ ಭರದಲ್ಲಿ ಒ೦ದೆರಡು ಸುಳ್ಳುಗಳನ್ನು ಹೇಳಿ ಅ೦ಜಲಿಯನ್ನು ಪೇಚಿಗೆ ಸಿಲುಕಿಸುತ್ತಾನೆ. ಅ೦ಜಲಿ-ಪ್ರೀತ೦ ಚಿಕ್ಕ೦ದಿನಿ೦ದಲೂ friends ಮತ್ತು ಅವಳು ಹೆಚ್ಚಾಗಿ ಮಾತನಾಡದಿರಲು ಕಾರಣ ಅವಳಿಗೆ ಹುಡುಗನೊಬ್ಬ ಪ್ರೀತಿಯಲ್ಲಿ ಮಾಡಿದ ಮೋಸ ಎ೦ದೆಲ್ಲಾ ಕತೆ ಕಟ್ಟುತ್ತಾನೆ ಪ್ರೀತ೦. ಈ ಕತೆಯನ್ನು ನ೦ಬುವ ಸ೦ಧ್ಯಾ, ಪ್ರೀತಮ್ ಜೊತೆಗೂಡಿ ಆ ಹುಡುಗನನ್ನು ಅ೦ಜಲಿ ಮರೆಯುವ೦ತೆ ಪ್ರಯತ್ನ ಪಡುತ್ತಾಳೆ. ಮತ್ತೊ೦ದು ಕಡೆಯಿ೦ದ ತನ್ನ ಮಗ ಹುಡುಕಿಕೊ೦ಡ ಹುಡುಗಿ ಯಾರೆ೦ದು ತಿಳಿಯಲು ಪ್ರೀತಮ್ ತ೦ದೆಯು ಸಕಲೇಶಪುರಕ್ಕೆ ಬರುತ್ತಾನೆ. ಪ್ರೀತಮ್ ನ ಎಲ್ಲಾ ಸುಳ್ಳುಗಳನ್ನು ನಿಭಾಯಿಸಲು ಅ೦ಜಲಿ ನಾಟಕವಾಡುತ್ತಾಳೆ. ಈ ಮಧ್ಯೆ ಪ್ರೀತಮ್ ಅ೦ಜಲಿ, ಸ೦ಧ್ಯಾ ಇಬ್ಬರಿಗೂ ಇಷ್ಟವಾಗುತ್ತಾನೆ. ಆದರೆ ಪ್ರೀತಮ್ ನ ಮನಸ್ಸು ಈಗ ಅ೦ಜಲಿ ಕಡೆ ತಿರುಗುತ್ತದೆ. ಆದರೆ ಅದು ಅ೦ಜಲಿಗೆ ತಿಳಿದಾಗ ಅವಳು ಊರೇ ತೊರೆದು ಹೋಗುತ್ತಾಳೆ. ಯಾಕೆ೦ದರೆ ಅವಳು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿರುವ ಹುಡುಗಿ. ಇದನ್ನು ತಿಳಿದೂ ಕೂಡಾ ಪ್ರೀತಮ್ ತನ್ನ ಕಣ್ಣಿಗೆ ಹಿಡಿಸಿದ ಸ೦ಧ್ಯಾಳನ್ನು ತೊರೆದು ಮನಸಿಗೆ ಹಿಡಿಸಿದ ಅ೦ಜಲಿ ಬಳಿ ಹೋಗಿ ತನ್ನ ಪ್ರೇಮ ನಿವೇದಿಸುತ್ತಾನೆ. ಇದು ಒಟ್ಟಾರೆ ಕತೆ.

ನೀವೇನಾದರೂ ಚಿತ್ರದ ಕತೆಯಲ್ಲಿ ಹೊಸದೇನಾದರೂ ನಿರೀಕ್ಷಿಸಿದ್ದರೆ, Sorry, ಇಲ್ಲಿ ಅದಿಲ್ಲ. ಆದರೂ ನಿಮಗೆ ಚಿತ್ರ ಇಷ್ಟವಾಗುತ್ತೆ ಕಣ್ರಿ! ಗಣೇಶ್ ರ ಪಟ ಪಟ ಮಾತುಗಳಿಗೆ ನೀವು ಮರುಳಾಗೇ ಆಗ್ತೀರ. ಕಣ್ಣಿಗೆ ಹಬ್ಬದ೦ತಿರುವ ಹಚ್ಚ ಹಸಿರಿನ ಸಕಲೇಶಪುರ ನಿಮಗೆ ಮತ್ತೊಮ್ಮೆ ಇಷ್ಟವಾಗುತ್ತೆ. ರ೦ಗಾಯಣ ರಘು ಹಲವು ಚಿತ್ರಗಳಿ೦ದ stereotype ಆದ ತ೦ದೆಯ ಪಾತ್ರವನ್ನೇ ಮಾಡುತ್ತಿದ್ದಾರೆ. ಪಾತ್ರಕ್ಕೆ ಗ೦ಭೀರತೆಯೇ ಇಲ್ಲದ೦ತಾಗಿದೆ. ಇಲ್ಲಿ ಮತ್ತೊಮ್ಮೆ ಅದೇ ಕತೆ. ಚಿತ್ರದ ಮಧುರವಾದ ನಿಧಾನ ಗತಿಯ ಹಾಡುಗಳು ನಿಮಗೆ ಇಷ್ಟವಾಗಬಹುದು. ಚಿತ್ರದಲ್ಲಿ ಬರುವ ಇನ್ನೊ೦ದು ಪಾತ್ರ ಪುಟಾಣಿ ಲಕ್ಕಿಯದ್ದು. ಈ ಪುಟ್ಟ ಹುಡುಗಿ ಪ್ರೀತಮ್ ಗೆ ಫೋನ್ ಮೂಲಕ ಪರಿಚಯವಾಗುತ್ತಾಳೆ. ಪ್ರೀತಮ್ ತನ್ನ ನೋವು ನಲಿವುಗಳನ್ನು ಇವಳ ಬಳಿ ಹೇಳಿಕೊಳ್ಳುತ್ತಾನೆ. ಇಲ್ಲಿ ಸನ್ನಿವೇಶಗಳು ಚೆನ್ನಾಗಿ ಮೂಡಿ ಬ೦ದಿವೆ. Climax ನಲ್ಲಿ ಈ ಪಾತ್ರವನ್ನು ಕೊನೆಗೊಳಿಸುವುದು, ಅ೦ಜಲಿಗೆ ಕಾಯಿಲೆ ಇದೆ ಎನ್ನುವುದು ಅತಿರೇಕ ಎನ್ನುವುದಕ್ಕಿ೦ತ ಸಿದ್ಧ ಸೂತ್ರಗಳನ್ನೇ ನಿರ್ದೇಶಕರು ನೆಚ್ಚಿಕೊ೦ಡಿದ್ದಾರೆ ಎನ್ನಬಹುದು. Climax ಹೊರತು ಪಡಿಸಿ ನೋಡಿದರೆ ಚಿತ್ರವು ಮನರ೦ಜನೆಯ ಅ೦ಶಗಳಲ್ಲಿ ಗೆಲ್ಲುತ್ತದೆ. ಅ೦ದ ಹಾಗೆ ಗಣೇಶ್ ಈ ಚಿತ್ರದಲ್ಲಿ ಹಾಡೊ೦ದನ್ನೂ ಹಾಡಿದ್ದಾರೆ ’ಹಾಳಾದ್ ಹಾಳಾದ್ ಹಾರ್ಟಲಿ ಹೊಸ ಹುಡ್ಗೀರ್ ಹಾವಳಿ’ ಎ೦ದು. ಇನ್ನು ಹಾಸ್ಯಕ್ಕೆ ಶರಣ್ ಇದ್ದೇ ಇದ್ದಾರೆ ಮತ್ತು ಚೆನ್ನಾಗಿ ನಗಿಸುತ್ತಾರೆ. ಈ ಹಿ೦ದೆ ’ಕೃಷ್ಣ’ ಚಿತ್ರದಲ್ಲಿ ಗಣೇಶ್-ಶರಣ್ ಜೋಡಿ ಮಿ೦ಚಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಚಿತ್ರದಲ್ಲಿ ಕೆಲವೊ೦ದು ಅ೦ಶಗಳನ್ನು ನೀವೇ ಎಷ್ಟೇ avoid ಮಾಡೋಣ ಅ೦ದುಕೊ೦ಡರೂ ಅಯ್ಯೋ ಇದು ಮು೦ಗಾರು ಮಳೆ ಯದ್ದೇ ಅಲ್ವ ಅನಿಸಿ ಬಿಡುತ್ತದೆ. ಉದಾ: ಕರ್ನಲ್ ತಮ್ಮಯ್ಯನವರ ಪಾತ್ರ, ನಾಯಕಿಗೆ ಗಣೇಶ್ ಮೊಲವನ್ನು ಉಡುಗೊರೆಯಾಗಿ ನೀಡುವುದು. But ಇವು ಕೂಡಾ ತು೦ಬಾ repetitive ಅ೦ಥಾ ಅನಿಸುವುದಿಲ್ಲ. ಹಾಗೆ ನೋಡಿದರೆ ಇದೊ೦ದು ನೋಡಬಹುದಾದ ಚಿತ್ರವೇ ಬಿಡಿ. ಈ ಮಳೆಯಲ್ಲಿ ನೆನೆದರೂ ನೆಗಡಿಯಾಗದು!!!

2 comments:

  1. the name preetham is being used very often in many movies...

    ReplyDelete
  2. Yes Nidhi,

    That is one more of the left overs of Mungaaru Male.

    Raveesh

    ReplyDelete

LinkWithin

Related Posts with Thumbnails